ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬ್ರಾಣಿ ಏತ ನೀರಾವರಿ ಲೋಕಾರ್ಪಣೆ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ರೂ 102 ಕೋಟಿ ವೆಚ್ಚದ ಉಬ್ರಾಣಿ-ಅಮೃತಾಪುರ ಏತನೀರಾವರಿ ಯೋಜನೆಯನ್ನು ಶನಿವಾರ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಲೋಕಾರ್ಪಣೆ ಮಾಡಿದರು.

ಚನ್ನಗಿರಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಅವರು ಮಾತನಾಡಿದರು.

ಏತನೀರಾವರಿ ಯೋಜನೆಯಿಂದಾಗಿ ಉಬ್ರಾಣಿ ಹಾಗೂ ಅಮೃತಾಪುರ ಹೋಬಳಿ ವ್ಯಾಪ್ತಿಯ 115 ಕೆರೆಗಳಿಗೆ ಭದ್ರಾ ನದಿಯ ನೀರು ಹರಿಯಲಿದ್ದು, 11,880 ಎಕರೆ ಪ್ರದೇಶಕ್ಕೆ ನೀರಿನ ಸೌಲಭ್ಯ ದೊರೆಯಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದನಂತರ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಬರಪೀಡಿತ ಪ್ರದೇಶಗಳಲ್ಲಿ ನೀರು ಹರಿಸುವ ಉದ್ದೇಶದಿಂದ ಹಲವು  ಯೋಜನೆಗಳನ್ನು ರೂಪಿಸಿದ್ದು,  ರೂ 1,700 ಕೋಟಿ ಬಳಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ ಎಂದು ಅವರು ಹೇಳಿದರು.

ಚನ್ನಗಿರಿ ಕ್ಷೇತ್ರಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೂ 426 ಕೋಟಿ ನೀಡಿದ್ದಾರೆ. ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಅಷ್ಟೊಂದು ಹಣ ಹೇಗೆ ನೀಡಿದರು ಎನ್ನುವುದೇ ಸೋಜಿಗ. ಆ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಅಷ್ಟೊಂದು ಹಣ ಪಡೆದು ಅಭಿವೃದ್ಧಿ ಸಾಧಿಸಿದ ಚನ್ನಗಿರಿ ಶಾಸಕರ ಬಗ್ಗೆ ಹೆಮ್ಮೆ ಇದೆ. ಆದರೆ, ಉಳಿದ ಶಾಸಕರು ಅಷ್ಟೇ ಹಣ ನೀಡುವಂತೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸಿದರೆ ಏನು ಮಾಡುವುದು ಎಂದು ಪ್ರಶ್ನಿಸಿದರು.

ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಂಜುಂಡಪ್ಪ ವರದಿಯಲ್ಲಿ ರಾಜ್ಯದ 61 ತಾಲ್ಲೂಕು ಮಾತ್ರ ಮುಂದುವರಿದಿವೆ ಎಂದು ಹೇಳಿಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ 40ಕ್ಕೂ ಹೆಚ್ಚು ತಾಲ್ಲೂಕುಗಳು ಹಿಂದುಳಿದ ಪಟ್ಟಿಯಿಂದ ಮುಕ್ತಿ ಪಡೆದಿವೆ. ಅಷ್ಟೊಂದು ಅಭಿವೃದ್ಧಿ ಕಾರ್ಯ ರಾಜ್ಯದಲ್ಲಿ ನಡೆದಿದೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT