ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಭಯ ಪೀಠಗಳ ವಿಲೀನಕ್ಕೆ ನಿರ್ಧಾರ

Last Updated 4 ಅಕ್ಟೋಬರ್ 2012, 7:50 IST
ಅಕ್ಷರ ಗಾತ್ರ

ವಿಜಾಪುರ: `ಪಂಚಮಸಾಲಿ ಸಮಾಜದ ಕೂಡಲಸಂಗಮ ಹಾಗೂ ಹರಿಹರ ಪೀಠಗಳು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಎರಡೂ ಪೀಠಗಳ ಮಧ್ಯೆ ಬಾಂಧವ್ಯ ಹೇಗಿರಬೇಕು ಎಂಬುದನ್ನು ಸಮಾಜದ ಮುಖಂಡರೆಲ್ಲ ಸಭೆ ಸೇರಿ ನಿರ್ಧರಿಸಲಿದ್ದಾರೆ~ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

`ಸಚಿವ ಮುರುಗೇಶ ನಿರಾಣಿ ಅವರ ಮಧ್ಯಸ್ಥಿಕೆಯಲ್ಲಿ ಹರಿಹರ ಪೀಠದ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿ ಹಾಗೂ ನಾವು ಮುಖಾಮುಖಿ ಚರ್ಚೆ ನಡೆಸಿದ್ದೇವೆ. ಉಭಯ ಪೀಠಗಳ ಸಂಘಟನೆಗಳ ಅಧ್ಯಕ್ಷರು- ಮುಖಂಡರೊಂದಿಗೆ ನಿರಾಣಿ ಅವರೂ ಚರ್ಚಿಸಿದ್ದು, ಎಲ್ಲರೂ ಸಹಮತಕ್ಕೆ ಬಂದಿದ್ದಾರೆ~ ಎಂದು ಸ್ವಾಮೀಜಿ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಪೀಠವನ್ನು ಎಲ್ಲಿ ಸ್ಥಾಪಿಸಬೇಕು ಎಂಬ ವಿಷಯದಲ್ಲಿ ಸಮಾಜದವರಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು.
ಆದರೆ, ಪೀಠಗಳ ಜಗದ್ಗುರುಗಳ ಮಧ್ಯೆ ಭಿನ್ನಾಭಿಪ್ರಾಯ ಇರಲಿಲ್ಲ. ಇಲ್ಲಿಯವರೆಗೆ ನಮ್ಮನ್ನು ಕೂಡಿಸು ವವರು ಇರಲಿಲ್ಲ. ಈಗ ಸಚಿವ ನಿರಾಣಿ ಆ ಜವಾಬ್ದಾರಿ ಹೊತ್ತಿದ್ದಾರೆ. ಉಭಯ ಪೀಠಗಳು ಒಂದಾಗುವ ಯತ್ನಕ್ಕೆ ನಮ್ಮ ಸಹಮತ ಇದೆ~ ಎಂದರು.

`ಇದು ಪೀಠಗಳ ವಿಲೀನ ಅಲ್ಲ. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಮಾಜವನ್ನು ಅಭಿವೃದ್ಧಿ ಪಡಿಸುವುದೇ ಎರಡೂ ಪೀಠಗಳ ಗುರಿ. ಹೀಗಾಗಿ ನಾವು ಒಗ್ಗೂಡಿ ಕೆಲಸ ಮಾಡುತ್ತೇವೆ~ ಎಂದು ಪ್ರತಿಕ್ರಿಯಿಸಿದರು.

`ಇದೇ 8ರಂದು ಬಬಲೇಶ್ವರದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರ ರಾಣಿ ಚನ್ನಮ್ಮ ವಿಜಯೋತ್ಸವ ಹಾಗೂ ಪಂಚಮಸಾಲಿ ಸಮಾಜದ ಸಮಾವೇಶವನ್ನು ಇದೇ 18ಕ್ಕೆ ಮುಂದೂಡಲಾಗಿದೆ. ಈ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಉಭಯ ಪೀಠಗಳ ಜಗದ್ಗುರುಗಳು ಒಟ್ಟಾಗಿ ಪಾಲ್ಗೊಳ್ಳುತ್ತಿದ್ದೇವೆ. ಈ ಸಮಾವೇಶ ಸಮಾಜದ ಪಾಲಿಗೆ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ~ ಎಂದು ಹೇಳಿದರು.

ಸಮಾಜದ ಪದಾಧಿಕಾರಿಗಳಾದ ಮಹಾದೇವಿ ಗೋಕಾಕ, ನೀಲಕಮಲ ಪಾಟೀಲ, ಸಿದ್ಧರಾಯ ಕನಮಡಿ, ಬಾಬಾಸಾಹೇಬಗೌಡ ಪಾಟೀಲ, ರವಿ ಖಾನಾಪೂರ, ಕಸಬೇಗೌಡ, ವಿದ್ಯಾರಾಣಿ ಪಾಟೀಲ  ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT