ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಭಯ ರಾಜ್ಯಗಳಿಗೆ 94.3 ಟಿಎಂಸಿ ಅಡಿ ನೀರು ಕೊರತೆ

ಕಾವೇರಿ ನಿರ್ವಹಣಾ ಸಮಿತಿ ಆದೇಶದಲ್ಲಿ ಬಹಿರಂಗ
Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಕಾವೇರಿ ನದಿ ಪಾತ್ರದಲ್ಲಿ ಒಟ್ಟು 94.3 ಟಿಎಂಸಿ ಅಡಿ ನೀರು ಮುಂದಿನ ಆರು ತಿಂಗಳ ಅವಧಿಗೆ ಅಗತ್ಯವಾಗಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಡಿ.ವಿ. ಸಿಂಗ್ ನೇತೃತ್ವದ ಕಾವೇರಿ ನಿರ್ವಹಣಾ ಸಮಿತಿ (ಸಿಎಂಸಿ) ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಎರಡೂ ರಾಜ್ಯಗಳು ಅನುಭವಿಸುತ್ತಿರುವ ನೀರಿನ ಈ ತೀವ್ರ ಕೊರತೆಯ ನಡುವೆಯೂ ತಮಿಳುನಾಡಿಗೆ ಕರ್ನಾಟಕ ಕಾವೇರಿ ನದಿಯಿಂದ 12 ಟಿಎಂಸಿ ನೀರು ಬಿಡಲು ಸಿಎಂಸಿ ಆದೇಶಿಸಿರುವುದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕರ್ನಾಟಕದ ನಾಲ್ಕೂ ಜಲಾಶಯಗಳಲ್ಲಿ ಈಗಿರುವ ಒಟ್ಟು ನೀರಿನ ಪ್ರಮಾಣ 36 ಟಿಎಂಸಿ ಮಾತ್ರ. ಆದರೆ ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರಿನ ಬೇಡಿಕೆ ಇರುವುದು 70.8 ಟಿಎಂಸಿ ಅಡಿ. ಹೀಗಾಗಿ ಕರ್ನಾಟಕ 34.8 ಟಿಎಂಸಿ ಅಡಿ ನೀರಿನ ಕೊರತೆ ಎದುರಿಸುತ್ತಿದೆ. ಕಾವೇರಿ ನದಿ ಪಾತ್ರದ ಸುಮಾರು 10.17 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆಗೆ ನೀರು ಅಗತ್ಯವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಕರ್ನಾಟಕದ ಸ್ಥಿತಿಯೇ ತಮಿಳುನಾಡಿನಲ್ಲೂ ಇದೆ. ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಈಗ ಲಭ್ಯ ಇರುವ ಒಟ್ಟು ನೀರಿನ ಪ್ರಮಾಣ 29.5 ಟಿಎಂಸಿ ಅಡಿ ನೀರು ಮಾತ್ರ. ಆದರೆ 89 ಟಿಎಂಸಿ ಅಡಿ ನೀರಿಗೆ ಬೇಡಿಕೆ ಇದ್ದು, ಕುಡಿಯುವ ನೀರು ಹಾಗೂ ಬೆಳೆದು ನಿಂತ ಬೆಳೆಗೆ ನೀರು ಬೇಕಾಗಿದೆ. ಹೀಗಾಗಿ ಈ ರಾಜ್ಯಕ್ಕೆ 59.5 ಟಿಎಂಸಿ ಅಡಿ ನೀರು ಅಗತ್ಯವಾಗಿದೆ. ತಮಿಳುನಾಡಿನಲ್ಲಿ ಬಿತ್ತನೆಯಾದ ಒಟ್ಟು ಕ್ಷೇತ್ರ 14.93 ಲಕ್ಷ ಎಕರೆ.

ಎರಡೂ ರಾಜ್ಯಗಳು ಮುಂದಿನ ಆರು ತಿಂಗಳ ಅವಧಿಯತನಕ ನೀರಿನ ತೀವ್ರ ಅಭಾವಕ್ಕೆ ತುತ್ತಾಗಿರುವುದರಿಂದ ಈ ಸಂಕಷ್ಟವನ್ನು ಉಭಯ ರಾಜ್ಯಗಳು ಹಂಚಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಿಎಂಸಿ ಅಭಿಪ್ರಾಯಪಟ್ಟಿದೆ.

ಎರಡೂ ರಾಜ್ಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಹಾಗೂ ಕೊರತೆಯ ಕುರಿತಾದ ಸಮಗ್ರ ಚಿತ್ರಣವನ್ನು ಸಿಎಂಸಿ ಸೋಮವಾರ ಸುಪ್ರೀಂಕೋರ್ಟ್ ಮುಂದೆ ಇಡಲಿದೆ. 52 ಟಿಎಂಸಿ ಬಾಕಿ ನೀರನ್ನು ಕರ್ನಾಟಕ ಬಿಡಬೇಕು ಎಂದು ತಮಿಳುನಾಡು ಮಾಡಿಕೊಂಡ ಮನವಿಯ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳಲ್ಲಿಯ ನೀರಿನ ಲಭ್ಯತೆ ಕುರಿತಾದ ಮಾಹಿತಿಯನ್ನು ತನಗೆ ನೀಡುವಂತೆ ಸಿಎಂಸಿಗೆ ಸುಪ್ರೀಂಕೋರ್ಟ್ ಈ ಮೊದಲು ತಿಳಿಸಿತ್ತು.

ಆದರೆ ನೀರು ಬಿಡುವಂತೆ ಕರ್ನಾಟಕಕ್ಕೆ ತಾನು ನಿರ್ದೇಶನ ನೀಡುವ ಬದಲು ಎರಡೂ ರಾಜ್ಯಗಳಲ್ಲಿಯ ನೀರಿನ ಲಭ್ಯತೆ ಹಾಗೂ ಉಂಟಾಗಿರುವ ಕೊರತೆಯ ಕುರಿತಾದ ಚಿತ್ರಣವನ್ನು ನೀಡುವುದಾಗಿ ಸಿಎಂಸಿ ಈ ಮೊದಲು ನೇರವಾಗಿ ತಿಳಿಸಿತ್ತು. ಹೀಗಾಗಿ ತಮಿಳುನಾಡಿನ ಬೇಡಿಕೆಯ ಕುರಿತಾಗಿ ಸುಪ್ರೀಂಕೋರ್ಟ್ ತನ್ನ ಆದೇಶ ನೀಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT