ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಯಿಲು ಆಸ್ತಿ: ಸ್ತ್ರೀಗೆ ಪೂರ್ಣ ಹಕ್ಕು ಇಲ್ಲ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉಯಿಲಿನ ಮೂಲಕ ಪತಿಯಿಂದ ಆಸ್ತಿ ಪಡೆದರೂ ಅದರ ಸಂಪೂರ್ಣ ಹಕ್ಕು ಹಿಂದೂ ಮಹಿಳೆಗೆ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಹಿಂದೂ ವಿವಾಹ ಕಾಯ್ದೆ ಅನ್ವಯ ಮಹಿಳೆ, ತನ್ನ ಪತಿಯಿಂದ ಬಂದ ಆಸ್ತಿಗೆ ಸಂಪೂರ್ಣವಾಗಿ ಹಕ್ಕುದಾರಳು. ಆದರೆ ನಿರ್ಬಂಧಿತ ಕಲಂನಲ್ಲಿ ಆಕೆಯ ಹೆಸರಿಗೆ ಉಯಿಲು ಬರೆದಲ್ಲಿ ಆಸ್ತಿ ಮೇಲೆ ಆಕೆಗೆ ಸಂಪೂರ್ಣ ಹಕ್ಕು ಇರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಹಾಗೂ ಎಚ್.ಎಲ್.ಗೋಖಲೆ ಅವರನ್ನು ಒಳಗೊಂಡ ಪೀಠವು ತೀರ್ಪು ನೀಡಿದೆ.

ಈ ಸಂಬಂಧ ಜಗನ್ ಸಿಂಗ್ ಎಂಬುವವರು ಸಲ್ಲಿಸಿದ ಮೇಲ್ಮನವಿಯನ್ನು ಪೀಠವು ಎತ್ತಿ ಹಿಡಿದಿದೆ. ಜಗನ್ ಅವರ ವಿಧವೆ ನಾದಿನಿ ಧನ್ವಂತಿ ಅವರ ಹೆಸರಿಗೆ ಆಕೆಯ ಪತಿ ಉಮ್ರಾವ್ ಸಿಂಗ್ ನಿವೇಶನವನ್ನು ಉಯಿಲು ಬರೆದಿಟ್ಟಿದ್ದರು. ಈ ನಿವೇಶನವನ್ನು ಮಾರುವ ಧನ್ವಂತಿ ಅವರ ಹಕ್ಕನ್ನು ಪ್ರಶ್ನಿಸಿ ಜಗನ್ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರು.

ಈ ನಿವೇಶನಕ್ಕೆ ತಮ್ಮ ಪತ್ನಿ ಧನ್ವಂತಿ ಒಡೆತನ ಹೊಂದುತ್ತಾರೆ. ಆದರೆ ಇದನ್ನು ಮಾರಲು ಆಕೆಗೆ ಹಕ್ಕು ಇಲ್ಲ ಎಂದು ಉಮ್ರಾವ್ ಉಯಿಲು ಬರೆದಿದ್ದರು. ಆದರೆ ಉಮ್ರಾವ್ ನಿಧನದ ಬಳಿಕ ಧನ್ವಂತಿ ನಿವೇಶನವನ್ನು ಮಾರಲು ಹೊರಟಿದ್ದರು. ಇದನ್ನು ಪ್ರಶ್ನಿಸಿ ಜಗನ್ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣಾ ನ್ಯಾಯಾಲಯ ಹಾಗೂ ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದ್ದವು. ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ಈ ನಿವೇಶನವನ್ನು ಮಾರುವ ಅಥವಾ ಯಾರಿಗಾದರೂ ಉಡುಗೊರೆಯಾಗಿ ಕೊಡಲು ಧನ್ವಂತಿ ಅವರಿಗೆ ಹಕ್ಕು ಇದೆ ಎಂದು ಹೇಳಿದ್ದವು.

1956ರ ಹಿಂದೂ ಉತ್ತರದಾಯಿತ್ವ ಕಾಯ್ದೆಯ 14ನೇ ಪರಿಚ್ಛೇದದಲ್ಲಿ ಬರುವ ಉಪ ಪರಿಚ್ಛೇದದ (1) ಪ್ರಕಾರ ತನಗೆ ಸೇರಿದ ಆಸ್ತಿಯ ಮೇಲೆ ಹಿಂದೂ ಮಹಿಳೆ ಸಂಪೂರ್ಣ ಹಕ್ಕು ಹೊಂದಿರುತ್ತಾಳೆ. ಆದರೆ ಉಪ ಪರಿಚ್ಛೇದದ (2) ಪ್ರಕಾರ ಕೊಡುಗೆ ರೂಪದಲ್ಲಿ ಅಥವಾ ಉಯಿಲಿನ ಮೂಲಕ ಪಡೆದ ಆಸ್ತಿಗೆ ಇದು ಅನ್ವಯ ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಅದೂ ಅಲ್ಲದೆ ಆಸ್ತಿ ವರ್ಗಾವಣೆ ಕಾಯ್ದೆ 52ನೇ ಪರಿಚ್ಛೇದದ ಅಡಿಯಲ್ಲಿ ವಿವಾದಿತ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ ಎಂದೂ ಅದು ಹೇಳಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT