ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಉರುಳು ಸೇವೆಯಿಂದ ದೇವರ ಪ್ರಸಾದ ಅಪವಿತ್ರಗೊಳ್ಳದು'

Last Updated 27 ಡಿಸೆಂಬರ್ 2012, 7:19 IST
ಅಕ್ಷರ ಗಾತ್ರ

ಮಂಗಳೂರು: `ಉರುಳು ಸೇವೆ ನಡೆಸುವುದರಿಂದ ದೇವರ ಪ್ರಸಾದ ಅಪವಿತ್ರ ಆಗುವುದಿಲ್ಲ. ಈ ಬಗ್ಗೆ ಕೆಲವರು ವೃಥಾ ಅಪಪ್ರಚಾರ ನಡೆಸುತ್ತಿದ್ದಾರೆ' ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿನ ಮಲ್ಲಿಕಟ್ಟೆಯ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆ ಮಡೆಸ್ನಾನ ವಿವಾದದ ಹಿನ್ನೆಲೆಯಲ್ಲಿ ನಿಡುಮಾಮಿಡಿ ಸ್ವಾಮೀಜಿ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು.

`ನೈವೇದ್ಯದ ಮೇಲೆ ಉರುಳುವುದರಿಂದ ಅದು ಅಪವಿತ್ರವಾಗುವುದಾದರೆ, ನಾವು ನೈವೇದ್ಯ ಸ್ವೀಕರಿಸಿದಾಗಲೂ ಅದು ಅಪವಿತ್ರವಾಗುತ್ತದೆ ಎಂದರ್ಥ. ಇದು, ಭಕ್ತರು ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಆ ನದಿಯೂ ಅಪವಿತ್ರವಾಗುತ್ತದೆ ಎಂದು ವಾದಿಸಿದಂತೆ. ಈ ರೀತಿಯ ಟೀಕೆಯೇ ಹಾಸ್ಯಾಸ್ಪದ' ಎಂದು ವ್ಯಂಗ್ಯವಾಡಿದ ಸ್ವಾಮೀಜಿ, ಈ ಕುರಿತು ಬಹಿರಂಗ ಚರ್ಚೆಗೂ ಸಿದ್ಧ ಎಂದರು.

`ಬ್ರಾಹ್ಮಣರು ಊಟ ಮಾಡಿ ಬಿಟ್ಟ ಎಂಜಲೆಲೆ ಮೇಲೆ ಅನ್ಯ ಜಾತಿಯವರು ಉರುಳು ಸೇವೆ ನಡೆಸುವ ಬಗ್ಗೆ ವಿವಾದ ಸೃಷ್ಟಿಯಾದಾಗ ಈ ಪದ್ಧತಿಯನ್ನು ತಪ್ಪಿಸಲು ನಾನೇ ಮಾರ್ಗೋಪಾಯ ಸೂಚಿಸಿದ್ದೆ. ಎಂಜಲೆಲೆ ಮೇಲೆ ಭಕ್ತರು ಉರುಳುವ ಬದಲು, ದೇವರಿಗೆ ನೈವೇದ್ಯ ಅರ್ಪಿಸಿ ಅದರ ಮೇಲೆ ಉರುಳು ಸೇವೆ ನಡೆಸುವ ಎಡೆಸ್ನಾನ ಆಚರಿಸುವುದು ಸೂಕ್ತ ಎಂದು ಸಲಹೆ ನೀಡಿ ಹೋರಾಟಗಾರರಿಗೆ ನ್ಯಾಯ ಒದಗಿಸಲು ಯತ್ನಿಸಿದ್ದೆ. ಈ ಸಲಹೆಯನ್ನು ನಿಡುಮಾಮಿಡಿ ಸ್ವಾಮೀಜಿಯೂ ಒಪ್ಪಿಕೊಂಡು ನನಗೆ ಅಭಿನಂದನೆಯನ್ನೂ ಸಲ್ಲಿಸಿದ್ದರು. ಆದರೆ ಈಗ ಏಕಾಏಕಿ ನನ್ನನ್ನು ಬಹಿರಂಗವಾಗಿ ಟೀಕಿಸಲು ಆರಂಭಿಸಿದ್ದಾರೆ. ನನ್ನನ್ನೇ ಗೋಮುಖ ವ್ಯಾಘ್ರ ಎಂದು ಕರೆಯುತ್ತಿದ್ದಾರೆ' ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

`ಮಡೆ ಮಡೆಸ್ನಾನದ ಬದಲು ಎಡೆಸ್ನಾನ ನಡೆಸುವ  ನನ್ನ ಸಲಹೆಯನ್ನು ಜಾರಿಗೊಳಿಸಲು ಸರ್ಕಾರವೂ ಸಿದ್ಧತೆ ನಡೆಸಿತ್ತು. ಈ ಬಗ್ಗೆ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರಿಂದ ಈ ವಿವಾದ ಬಗೆಹರಿಸುವ ಪ್ರಕ್ರಿಯೆಗೆ ಹಿನ್ನಡೆ ಆಗಿದೆ. ವಿವಾದ ಶೀಘ್ರ ಬಗೆಹರಿಯುವ ವಿಶ್ವಾಸ ಇದೆ' ಎಂದರು.

ಉಡುಪಿ ಕೃಷ್ಣಮಠದ ಈಗಿನ ಪರ್ಯಾಯದ ಯತಿಗಳು ಭಜನೆಗೆ ಅಡ್ಡಿ ಪಡಿಸಿಲ್ಲ. ಅನ್ಯ ಕಾರ್ಯಕ್ರಮದ ಸಲುವಾಗಿ ಭಜನೆಯ ಅವಧಿಯನ್ನು ಮಾರ್ಪಾಡು ಮಾಡಿದ್ದಾರೆ. ಇದು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ ಎಂದು ಪೇಜಾವರ ಶ್ರೀ ಸ್ಪಷ್ಟಪಡಿಸಿದರು.

`ಲಾಭವೂ ಇಲ್ಲ ನಷ್ಟವೂ ಇಲ್ಲ': ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಮಡೆ ಮಡೆಸ್ನಾನ ವಿವಾದದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಪೇಜಾವರ ಶ್ರೀ, `ಈ ಆಚರಣೆಯಿಂದ ಹಿಂದೂ ಧರ್ಮಕ್ಕೆ ಪ್ರಯೋಜನವೂ ಇಲ್ಲ. ಇದನ್ನು ನಿಲ್ಲಿಸುವುದರಿಂದ ಯಾವ ಹಾನಿಯೂ ಇಲ್ಲ. ಮಡೆಮಡೆಸ್ನಾನದ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವೂ ಇಲ್ಲ. ಆದರೆ ಭಕ್ತರ ಭಾವನೆಗಳಿಗೆ ಯಾರೂ ಧಕ್ಕೆ ಉಂಟುಮಾಡಲಾಗದು. ಅದಕ್ಕಾಗಿಯೇ ನೈವೇದ್ಯದ ಮೇಲೆ ಉರುಳುವ ಮಾರ್ಗೋಪಾಯ ಸೂಚಿಸಿದ್ದೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT