ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಳುರುಳಿ ಉರುಳಿಗುಂಡಿ

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಒಂದು ಗ್ರಾಮದ ಹೆಸರು `ಚೆಂಬು~. ಹೆಸರು ವಿಚಿತ್ರವಾಗಿದೆ ಎಂದಿರಾ? ಚೆಂಬು ಎನ್ನುವ ಪದಕ್ಕೆ ನೀರು ತುಂಬುವ ಪುಟ್ಟ ಪಾತ್ರೆ ಎನ್ನುವ ಅರ್ಥವಿದೆಯಾದರೂ, ಊರಾದ ಈ `ಚೆಂಬು~ವಿನಲ್ಲಿನ ಗಂಗಾವತರಣದ ಪರಿಯೇ ಬೇರೆ. ಹೆಸರು ಪುಟ್ಟದಾದರೂ, ಇಲ್ಲಿನ ಜಲಧಾರೆಯ ಕೀರ್ತಿ ದೊಡ್ಡದು. ಉರುಳಿಗುಂಡಿ ಎನ್ನುವ ಮುದ್ದಾದ ಹೆಸರಿನ ಜಲಪಾತ ಚೆಂಬುವಿನಲ್ಲಿದೆ. ಆ ಜಲಧಾರೆಯಿಂದಲೇ ಊರಿಗೂ ಒಂದು ಕೋಡು.

ಜಲಪಾತಗಳ ತವರು ಎನ್ನುವ ವಿಶೇಷಣ ಕೊಡಗು ಜಿಲ್ಲೆಗಿರುವುದು ಸರಿಯಷ್ಟೇ. ಇದು ಸಾಹಸ ಪ್ರಿಯರ, ಚಾರಣಿಗರ ಸ್ವರ್ಗವೂ ಹೌದು. ಉರುಳಿಗುಂಡಿ ಜಲಪಾತ ಸೌಂದರ್ಯೋಪಾಸಕರ ಜೊತೆಗೆ ಸಾಹಸಿಗರನ್ನೂ ಕೈಬೀಸಿ ಕರೆಯುವಂತಿದೆ. ನೋಡಲು ಪುಟ್ಟದಾದರೂ ಸೌಂದರ್ಯದಲ್ಲಿ ಕಮ್ಮಿ ಇಲ್ಲ.
 
ಹಸಿರು ವನರಾಶಿಯ ನಡುವೆ ಬಂಡೆಕಲ್ಲಿನಿಂದ ಉಕ್ಕುವ ಹಾಲ್ನೊರೆಯಂತೆ, ಮುತ್ತಿನ ಮಳೆಯಂತೆ ಉರುಳುರುಳಿ ಗುಂಡಿ ಸೇರುವ, ಹರಿಯುವ ಈ ಜಲಪಾತ ತನ್ನ ಮೋಹಕ ಚೆಲುವಿನಿಂದ ನೋಡುಗರ ಮನಸ್ಸನ್ನು ಒದ್ದೆಯಾಗಿಸುತ್ತದೆ. ಎಂಥ ಬಿರು ಬೇಸಿಗೆಯ ದಿನಗಳಲ್ಲೂ ನೀರಿರುವುದು ಇದರ ವಿಶೇಷ.

ಜಲಪಾತದ ನೀರು ಹರಿದು ಹೋಗುವ ಜಾಗದಲ್ಲಿ ಸಣ್ಣ ಕೆರೆಯ ಹಾಗೆ ಕಾಣುವ ನೀರಿನ ಸೆಳವು ಇರುವ ಒಂದು ಗುಂಡಿಯಿದೆ. ಈ ಗುಂಡಿಯ ಆಳವನ್ನು ಅಳೆದವರಿಲ್ಲ. ಇದರಿಂದಾಗಿ ಈ ಜಲಪಾತಕ್ಕೆ `ಉರುಳಿ ಗುಂಡಿ~ ಎಂಬ ಹೆಸರು ಬಂದಿದೆ.

`ಉರುಳಿಗುಂಡಿ~ ವೀಕ್ಷಣೆಗೆ ಈಗ ಸೂಕ್ತ ಕಾಲ. ಮಳೆಗಾಲದಲ್ಲಿ ಇಲ್ಲಿಗೆ ಹೋಗುವುದು ಕಷ್ಟ. ಮಳೆಯಿಂದಾಗಿ ಕಾಡು ದುರ್ಗಮವಾಗುತ್ತದೆ, ಪರಿಸರದ ಜಾಡು ಅಪಾಯಕಾರಿ ಎನಿಸುತ್ತದೆ. ಹಾಗಾಗಿ, ಚುರುಕು ಬಿಸಿಲಿನ ದಿನಗಳೇ ಈ ಜಲಪಾತ ನೋಡಲಿಕ್ಕೆ ಒಳ್ಳೆಯದು. ಅಂದಹಾಗೆ, ಆನೆಗಳು ಈ ಪರಿಸರದಲ್ಲಿ ಸಾಕಷ್ಟಿವೆ. ಹನ್ನೆರಡು ವರ್ಷಕ್ಕೊಮ್ಮೆ ಅರಳುವ, ಕೆಲವೇ ಪ್ರದೇಶಗಳಲ್ಲಿ ಕಾಣಸಿಗುವ ಅಪರೂಪದ ಕುರುಂಜಿ ಹೂವಿನ ಗಿಡಗಳೂ ಈ ಪರಿಸರದಲ್ಲಿವೆ.

ಚೆಂಬು ಊರಿಗೆ ವಿದ್ಯುತ್ ಸೌಲಭ್ಯ ಇಲ್ಲ. ಸ್ಥಳೀಯರು ಜಲಪಾತದ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಇಲ್ಲಿಗೆ ಬರಲು ಬಸ್ ಸೌಕರ್ಯವೂ ಇಲ್ಲ. ಮಡಿಕೇರಿ - ಸುಳ್ಯ ರಾಜ್ಯ ಹೆದ್ದಾರಿಯಲ್ಲಿ 25 ಕಿ.ಮೀ. ಕ್ರಮಿಸಿದರೆ ಕಲ್ಲುಗುಂಡಿ ಎಂಬ ಪುಟ್ಟ ಊರು ಸಿಗುತ್ತದೆ. ಇಲ್ಲಿಂದ ಜೀಪು ಮಾಡಿಕೊಂಡು ಎಡಗಡೆಗೆ ಆರು ಕಿ.ಮೀ. ದೂರ ಕಚ್ಚಾ ರಸ್ತೆಯಲ್ಲಿ ಸಾಗಿದರೆ ಅತ್ಯಾಡಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಒಂದು ಕಿ.ಮೀ. ಕಾಲ್ನಡಿಗೆಯಲ್ಲಿ ಪಯಣಿಸಿದರೆ ಜಲಪಾತ ಎದುರುಗೊಳ್ಳುತ್ತದೆ.
ಆಮೇಲೆ, ನೀವುಂಟು, ಜಲಪಾತವುಂಟು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT