ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರ್ದು ಅಕಾಡೆಮಿ ಪ್ರತ್ಯೇಕ ಕಾರ್ಯನಿರ್ವಹಣೆ

Last Updated 11 ಫೆಬ್ರುವರಿ 2011, 8:55 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: “ಇಲ್ಲಿಯವರೆಗೆ ಕನ್ನಡ ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿದ್ದ ಉರ್ದು ಅಕಾಡೆಮಿ ಬೇರ್ಪಟ್ಟು ಇನ್ಮುಂದೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದೆ. ಅದನ್ನು ಅಲ್ಪಸಂಖ್ಯಾತ ಇಲಾಖೆಯಡಿ ತರುವ ವಿಚಾರವೂ ಇದೆ” ಎಂದು ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಡಾ. ಮುಮ್ತಾಜ್ ಅಲಿಖಾನ್ ಪ್ರಕಟಿಸಿದರು.

ಸಮೀಪದ ಡೊಂಬರಕೊಪ್ಪ ನಿರೀಕ್ಷಣಾ ಮಂದಿರದಲ್ಲಿ ಭೇಟಿಯಾದ ಸುದ್ಧಿಗಾರರಿಗೆ ಈ ಮಾಹಿತಿ ನೀಡಿದ ಅವರು, ‘ಇದಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈಗಾಗಲೇ ಲಿಖಿತ ಒಪ್ಪಿಗೆ ನೀಡಿದ್ದಾರೆ’ ಎಂದು ತಿಳಿಸಿದರು.‘ಉರ್ದು ಭಾಷೆಯ ವಿಕಾಸ, ಸಾಹಿತ್ಯ ಹಾಗೂ ಕನ್ನಡದೊಂದಿಗಿನ ಅದರ ಬಾಂಧವ್ಯ ಕುರಿತು ಈ ಅಕಾಡೆಮಿ ಕೆಲಸ ಮಾಡಲಿದೆ’ ಎಂದರು.

ರೂ. 1ಲಕ್ಷ ಸೌಲಭ್ಯ
‘ಹೃದಯರೋಗ, ಕಾನ್ಸರ್, ಮೂತ್ರಪಿಂಡ ರೋಗದಿಂದ ಬಳಲುತ್ತಿರುವ ಅಲ್ಪಸಂಖ್ಯಾತ ಕುಟುಂಬದ ರೋಗಿಗಳಿಗೆ ಇಲ್ಲಿಯವರೆಗಿದ್ದ ರೂ. 25ಸಾವಿರ ವೈದ್ಯಕೀಯ ಸಹಾಯಧನವನ್ನು ಪ್ರಸಕ್ತ ವರ್ಷ ಏಪ್ರಿಲ್ ತಿಂಗಳಿನಿಂದ ರೂ. 1ಲಕ್ಷಕ್ಕೆ ಏರಿಸಲಾಗುವುದು’ ಎಂದು ಸಚಿವರು ವಾಗ್ದಾನ ಮಾಡಿದರು.

‘ಪ್ರತಿಭಾವಂತ ಅಲ್ಪಸಂಖ್ಯಾತ ಹದಿನೈದು ವಿದ್ಯಾರ್ಥಿಗಳನ್ನು ಐಎಎಸ್ ಹಾಗೂ ಐಪಿಎಸ್ ತರಬೇತಿಗಾಗಿ ದೆಹಲಿಗೆ ಕಳುಹಿಸಿ ಕೊಡಲಾಗಿದೆ. ಇದರಲ್ಲಿ ಒಬ್ಬ ವಿದ್ಯಾರ್ಥಿನಿಯೂ ಇದ್ದಾಳೆ. ಜಾಣ ವಿದ್ಯಾರ್ಥಿಗಳನ್ನು ಅಮೆರಿಕ ಹಾಗೂ ಇಂಗ್ಲಂಡ್ ದೇಶಗಳಿಗೆ ತರಬೇತಿಗಾಗಿ ಕಳುಹಿಸಿ ಕೊಡುವ ವಿಚಾರವಿದೆ’ ಎಂದು ಸಚಿವರು ಮಾಹಿತಿ ನೀಡಿದರು."

‘ಬೆಂಗಳೂರಿನಲ್ಲಿ ರೂ. 40ಕೋಟಿ ವೆಚ್ಚದಲ್ಲಿ ಹಜ್ ಭವನ ನಿರ್ಮಿಸಲಾಗುವುದು. ಇದಕ್ಕಾಗಿ ಸರಕಾರದಿಂದ ಈಗಾಗಲೇ ರೂ. 5ಕೋಟಿ ಬಿಡುಗಡೆಯಾಗಿದೆ. ಈ ಬೃಹತ್ ಕಟ್ಟಡ ನಿರ್ಮಾಣಕ್ಕೆ ವಕ್ಫ್ ಬೋರ್ಡ್ ಹಾಗೂ ದಾನಿಗಳ ಆರ್ಥಿಕ ನೆರವು ಪಡೆಯಲಾಗುವುದು’ ಎಂದು ಹೇಳಿದರು.

“ಬೆಂಗಳೂರಿನಲ್ಲಿರುವ ವಿಂಡರ್ಸ್‌ ಮ್ಯಾನರ್ ಹೋಟೆಲ್ ಜಾಗೆ ವಕ್ಫ್ ಬೋರ್ಡಿಗೆ ಸೇರಿದ್ದೆಂದು ನ್ಯಾಯಾಲಯ ಆದೇಶ ನೀಡಿದೆ. ಹೀಗಾಗಿ ಜಾಗೆ ನಮ್ಮದಾಗಿದೆ. ಕಟ್ಟಡ ಅವರದಾಗಿದೆ. ಹೋಟೆಲ್‌ನಲ್ಲಿ ಹಂದಿಮಾಂಸದ ಅಡುಗೆ ತಯಾರು ಮಾಡಬಾರದು ಹಾಗೂ ಆದಾಯ ಹಂಚಿಕೆ ಆಧಾರದ ಮೇಲೆ ಮತ್ತೆ ಹೋಟೆಲ್‌ನವರಿಗೆ ಜಾಗೆ ನೀಡುವ ಇಚ್ಛೆ ನನ್ನದಾಗಿದೆ” ಎಂದು ಹೇಳಿದರು.

ಸಿಬ್ಬಂದಿ ರಕ್ಷಣೆ
‘ರಾಜ್ಯದ ವಸತಿ ಶಾಲೆಗಳಿಗೆ ಬೋಧಕ ಸಿಬ್ಬಂದಿಯನ್ನು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಮೂಲಕ ಆಯ್ಕೆ ಮಾಡುವ ಬಗ್ಗೆ ಸರಕಾರಿ ಆದೇಶ ಪತ್ರ ಹೊರಬಿದ್ದಿದೆ. ಆದರೆ ಸುಮಾರು ಒಂದು ದಶಕದಿಂದ ವಸತಿ ಶಾಲೆಗಳಲ್ಲಿ ತಾತ್ಕಾಲಿಕ ಒಪ್ಪಂದದ ಮೇರೆಗೆ ಕೆಲಸ ನಿರ್ವಹಿಸುತ್ತಿರುವ ಅರ್ಹರ ರಕ್ಷಣೆಗೆ ಸರಕಾರ ಬದ್ಧವಿದೆ. ಅವರಿಗೆ ಕೃಪಾಂಕ ನೀಡುವ ವಿಚಾರ ಸರಕಾರದ ಮುಂದಿದೆ. ಪ್ರತಿಭಾವಂತ ಬೋಧಕರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳ ಲಾಗುವುದು’ ಎಂದು ಭರವಸೆ ನೀಡಿದರು.

ಪ್ರಾರ್ಥನಾ ಮಂದಿರ
‘ರಾಜ್ಯದ ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇನ್ಮುಂದೆ ವಾರದಲ್ಲಿ ಒಂದು ಬಾರಿ ಮಾಂಸದ ಊಟ ನೀಡಲಾಗುವುದು. ಇಷ್ಟಪಟ್ಟವರು ಅದನ್ನು ಆಸ್ವಾದಿಸಬಹುದಾಗಿದೆ. ಇಲ್ಲಿ ಜೈನ್ ಹಾಗೂ ಇತರ ಅಲ್ಪಸಂಖ್ಯಾತ ಧರ್ಮೀಯ ಮಕ್ಕಳು ಓದುತ್ತಿದ್ದಾರೆ. ಅವರಿಷ್ಟ ಪಟ್ಟರೆ ಅವರಿಗೆ ಮಾಂಸಾಹಾರಿ ಊಟ ದೊರಕುವುದಿಲ್ಲ.ಅವರ ಪಾಲಕರಿಂದ ಪರವಾನಿಗೆ ಪತ್ರ ತಂದರೆ ಮಾತ್ರ ಅಂತಹ ವಿದ್ಯಾರ್ಥಿಗಳಿಗೆ ಮಾಂಸಾಹಾರ ಸೇವಿಸಲು ಅನುಮತಿ ನೀಡಲಾಗುವುದು’ ಎಂದು ಸಚಿವರು ಹೇಳಿದರು.

‘ಮುರಾರ್ಜಿ ದೇಸಾಯಿಯಂತಹ ಅಲ್ಪಸಂಖ್ಯಾತರ ಮಕ್ಕಳ ವಸತಿ ಶಾಲೆಗಳಲ್ಲಿ ಪ್ರಾರ್ಥನಾ ಮಂದಿರ ನಿರ್ಮಿಸಲು ಉದ್ದೇಶಿಸಲಾಗಿದೆ. ಸರ್ವಧರ್ಮದ ಗುರುಗಳು ಇಲ್ಲಿಗೆ ಆಗಮಿಸಿ ಪ್ರತಿ ಭಾನುವಾರ ಪ್ರವಚನ ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದ ಅವರು, ಧಾರ್ಮಿಕ ಮೌಲ್ಯಗಳನ್ನು ಗಾಳಿಗೆ ತೂರಿದ್ದರಿಂದ ಸಮಾಜದಲ್ಲಿಯ ಇಂದಿನ ಅಶಾಂತಿಗೆ ಕಾರಣವಾಗಿದೆ. ಸರ್ವಧರ್ಮದಲ್ಲಿ ನಂಬಿಕೆ ಇಲ್ಲದಿದ್ದರೆ ನಾವು ಹಾಳಾಗುತ್ತೇವೆ’ ಎಂದು ಸಚಿವರು ಅಭಿಪ್ರಾಯಪಟ್ಟರು.

ಶಾಸಕ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಶಾಸಕ ಸುರೇಶ ಮಾರಿಹಾಳ, ಜಿ. ಪಂ. ಸದಸ್ಯ ಯಲ್ಲಪ್ಪ ವಕ್ಕುಂದ, ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಕೆ.ಜಿ. ತಿಮ್ಮಾರೆಡ್ಡಿ, ವಿಶೇಷ ತಹಸೀಲ್ದಾರ ಸಯ್ಯದ ಆಫ್ರೀನ್ ಬಳ್ಳಾರಿ, ಉಪತಹಸೀಲ್ದಾರ ಅಶೋಕ ಗುರಾನಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT