ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರ್ದು ಶಾಲೆಗಳಲ್ಲೂ `ನಲಿ-ಕಲಿ'

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ:  ರಾಜ್ಯದ ಉರ್ದು ಶಾಲೆಗಳಲ್ಲಿ ಕಲಿಯುತ್ತಿರುವ 1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ `ನಲಿ-ಕಲಿ'ಯ ಮೂಲಕ ಕಲಿಯುವ ಭಾಗ್ಯ ದೊರೆಯಲಿದೆ.

ಉರ್ದು ಶಾಲೆಗಳ ಕಲಿಕಾ ಪರಿಕರ ಸಿದ್ಧಪಡಿಸುವುದು ವಿಳಂಬವಾದ ಕಾರಣಕ್ಕೆ ಯೋಜನೆ ಜಾರಿಗೊಂಡಿರಲಿಲ್ಲ. ರಾಜ್ಯದ ಕನ್ನಡ ಶಾಲೆಗಳಲ್ಲಿ `ನಲಿ-ಕಲಿ' ಶಿಕ್ಷಣ ಜಾರಿಯಾಗಿ ಕೆಲವು ವರ್ಷಗಳು ಕಳೆದ ಬಳಿಕ ಉರ್ದು ಶಾಲೆಗಳಿಗೂ ಅದನ್ನು ವಿಸ್ತರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ನು ಮುಂದೆ ಉರ್ದು ಶಾಲಾ ಮಕ್ಕಳೂ ಕೂಡ `ನಲಿಯುತಾ' ಕಲಿಯಬಹುದು.

ಶಿಕ್ಷಣ ಇಲಾಖೆ ಈಗಾಗಲೇ ಮಂಡ್ಯದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮೂರು ಹಂತದ ತರಬೇತಿ ನೀಡಿದೆ. ತರಬೇತಿಯಲ್ಲಿ ಡಯೆಟ್ ಉಪನ್ಯಾಸಕರು ಪಾಲ್ಗೊಂಡಿದ್ದರು.

ಮಕ್ಕಳಿಗೆ ಬೋಧನಾ ವಿಧಾನ, ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳುವುದು ಸೇರಿದಂತೆ ಇತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ.

`ನಲಿ-ಕಲಿ'ಯಲ್ಲಿ 1 ಹಾಗೂ 2ನೇ ತರಗತಿಯ ಶಾಲಾ ಮಕ್ಕಳಿಗೆ ಉರ್ದು, ಗಣಿತ ಹಾಗೂ ಪರಿಸರ ವಿಜ್ಞಾನ ವಿಷಯ ಅಳವಡಿಸಲಾಗಿದೆ. ಜತೆಗೆ, `ಭಾರದ' ಬ್ಯಾಗ್ ಹೊತ್ತು ಶಾಲೆಗೆ ಬರುವಂತಿಲ್ಲ. ಹೋಂ ವರ್ಕ್ ಸಹ ಇರುವುದಿಲ್ಲ. 

`ಹೊರಾಂಗಣ ಕಲಿಕೆಯೇ ಮಕ್ಕಳಿಗೆ ಹೆಚ್ಚು. ಅವರನ್ನು ಅಂಚೆ ಕಚೇರಿ, ಬಸ್ ನಿಲ್ದಾಣ, ಉದ್ಯಾನ, ಮಹನೀಯರ ಪ್ರತಿಮೆ, ಆಧುನಿಕ ವಿನ್ಯಾಸದ ಮನೆ, ಹೆಂಚಿನ ಮನೆ, ನದಿ, ಪಕ್ಷಿ ಹಾಗೂ ಅವುಗಳು ಕಟ್ಟಿದ ಗೂಡಿನ ಬಳಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ತೆರಳಿ ಕ್ಷೇತ್ರ ಕಾರ್ಯ ನಡೆಸುತ್ತಾರೆ. ಮಾರನೇ ದಿವಸಕಾರ್ಡ್ ತೋರಿಸಿದಾಗ ವಿದ್ಯಾರ್ಥಿ ಅದರ ಬಗ್ಗೆ ಮಾಹಿತಿ ನೀಡಬೇಕು' ಎಂದು ಹೇಳುತ್ತಾರೆ ಶಿಕ್ಷಕರೊಬ್ಬರು.

`ಶೈಕ್ಷಣಿಕ ಅವಧಿಯಲ್ಲಿ 1ನೇ ತರಗತಿ ವಿದ್ಯಾರ್ಥಿ 702 ಹಾಗೂ 2ನೇ ತರಗತಿ ವಿದ್ಯಾರ್ಥಿ 304 ಕಲಿಕಾ ಕಾರ್ಡ್ ಮೂಲಕ ಶಿಕ್ಷಣ ಪಡೆಯುತ್ತದೆ. ಮೂರು ಹಂತದಲ್ಲಿ ಅಭ್ಯಾಸ ಪುಸ್ತಕ, ಕಲಿಕಾ ಪರಿಕರ ಹಾಗೂ ವಾಚನಾ ವಿಧಾನದ ಮೂಲಕ ಬೋಧನೆ ಮಾಡಲಾಗುವುದು' ಎಂದು ಅವರು ತಿಳಿಸಿದರು.

`ಮಕ್ಕಳ ಕಲಿಕಾ ಪರಿಕರಗಳನ್ನು ಈಗಾಗಲೇ ಶಾಲೆಗಳಿಗೆ ವಿತರಣೆ ಮಾಡಲಾಗಿದೆ.ಆದರೆ, ಶಿಕ್ಷ   ಕರ ಬೋಧನಾ ಪರಿಕರಗಳು ಬಂದಿಲ್ಲ.

ಹೀಗಾಗಿ, `ನಲಿ-ಕಲಿ' ಶಿಕ್ಷಣ ಆರಂಭಕ್ಕೆ ಹಿನ್ನಡೆಯಾಗಿದೆ. ಪರಿಕರಗಳು ಬಾರದ ಕಾರಣ ರಾಜ್ಯದಲ್ಲಿ ಶಿಕ್ಷಕರಿಗೆ ತರಬೇತಿಯೂ ಸಹ ಪ್ರಾರಂಭವಾಗಿಲ್ಲ' ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT