ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಲ್ಲಾಸ - ಉತ್ಸಾಹದ ಉತ್ತುಂಗ

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಗ್ರೀಕರು ಮನುಕುಲಕ್ಕೆ ಕೊಟ್ಟ ದೊಡ್ಡ ಸಾಂಸ್ಕೃತಿಕ ಕಾಣಿಕೆಯೇ ಕ್ರೀಡೆ. ಒಲಿಂಪಿಕ್ ಕ್ರೀಡೆಗಳು ಮನುಕುಲದ ವಿಕಾಸದಲ್ಲಿ ಅತಿ ಮಹತ್ವದ ಪಾತ್ರ ವಹಿಸಿದ್ದು ಸುಳ್ಳೇನಲ್ಲ. `ಪ್ರಾಚೀನ ಕಾಲದ ಕ್ರೀಡೆಯ ಸಂಗತಿಗಳು ಇಂದಿಗೂ ಒಂದು ಸಾಮಾಜಿಕ ಅದ್ಭುತ. ಒಲಿಂಪಿಕ್ ಕ್ರೀಡೆಗಳನ್ನು ನಡೆಸುವ ದೇಶ ತನ್ನ ಸಾಂಸ್ಕೃತಿಕ, ಆರ್ಥಿಕ ಮೈಲಿಗಲ್ಲನ್ನು ಹಾಗೂ ನೆಲೆಗಟ್ಟನ್ನು ಜಗತ್ತಿಗೆ ತೋರಿಸುತ್ತದೆ~ ಎಂದು ಸಮಾಜ ಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ. ಇದೇ ಕ್ರೀಡಾ ಸಂಸ್ಕೃತಿಯ ನೆಲೆಗಟ್ಟು. 

ಆದಿಮಾನವ ಕಾಲದಿಂದಲೂ ಕ್ರೀಡೆ ಇತ್ತು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಅದಕ್ಕೇ ಮಾನವ ಕಂಡುಹಿಡಿದ ಮೊದಲ ಸಾಹಸ ಹಾಗೂ ರಂಜನೀಯ ಚಟುವಟಿಕೆ ಕ್ರೀಡೆಯೇ ಎಂದು ಹೇಳಲಾಗುತ್ತದೆ.
 
ಆಹಾರಕ್ಕಾಗಿ ಆಡಿದ ಬೇಟೆಯಲ್ಲಿ ಮನರಂಜನೆಯೂ ಇತ್ತು, ಸ್ಪರ್ಧೆಯೂ ಇತ್ತು. ಯುದ್ಧ ಕೌಶಲದಲ್ಲೂ ಆಟದ ಲಕ್ಷಣಗಳಿದ್ದವು. ಅದು ಕ್ರಮೇಣ ಕ್ರೀಡಾ ಸಂಸ್ಕೃತಿಗೆ ಅಡಿಪಾಯವಾಯಿತು. ಮನುಷ್ಯ ಅನುಭವದಿಂದಲೇ ಕಲಿತ. ಅದಕ್ಕೇ ಕ್ರೀಡೆಯನ್ನು ಶಿಕ್ಷಣದ ತಾಯಿ ಎಂದು ತಜ್ಞರು ಅಭಿಪ್ರಾಯಪಟ್ಟರು.

ಸಂಸ್ಕೃತಿಯ ಮೂಲ ಬೇರು ಕ್ರೀಡೆಯಲ್ಲೇ ಇತ್ತು. ಆದಿಮಾನವನ ಕಾಲದಲ್ಲಿ ಹಿಂಸೆ ಕ್ರೀಡೆಗೆ ಆಧಾರವಾಗಿತ್ತು. ಆದರೆ, ನಾಗರಿಕತೆ ಬೆಳೆದಂತೆ ಸ್ಪರ್ಧೆ ಎಂಬುದು ಸೋಲು-ಗೆಲುವಿಗೆ ಸೀಮಿತವಾಯಿತು. ಮನುಷ್ಯ ಕ್ರೀಡೆಯಲ್ಲಿದ್ದ ಹಿಂಸೆಯನ್ನು ತೊಡೆದುಹಾಕಿದ. ಪ್ರಾಚೀನ ಒಲಿಂಪಿಕ್ ಕ್ರೀಡೆಗಳು ಮಾನವನ ಶಿಕ್ಷಣದ ಗುರಿಗೆ ಭದ್ರ ಬುನಾದಿ ಹಾಕಿದವು.

ದಾರ್ಶನಿಕ ಪ್ಲೇಟೊ ಹೇಳಿದ ಮಾತು ಇಂದಿಗೂ ಪ್ರಸ್ತುತ. ಮಕ್ಕಳ ಶಿಕ್ಷಣಕ್ಕೆ ಕ್ರೀಡೆಯ ಅಡಿಪಾಯ ಇದ್ದಲ್ಲಿ, ಅವರೆಂದಿಗೂ ಜೀವನದ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದ್ದ ಅವರ ಮಾತಿನ ಅರ್ಥ ಇಷ್ಟೇ- ಕ್ರೀಡೆ ಉತ್ತಮ ಶಿಕ್ಷಣವನ್ನೇ ಕಲಿಸುತ್ತದೆ ಎಂಬುದು.

ಬೌದ್ಧಿಕ ಚಿಂತನೆಯೂ ಒಂದು ಚಟುವಟಿಕೆಯೇ ಆಗುವುದರಿಂದ, ಮನಸ್ಸಿನ ಆಟದಲ್ಲಿ ಒಳ್ಳೆಯ ವಿಚಾರಗಳು ಹುಟ್ಟಲು ಆರೋಗ್ಯಕರ ದೇಹದ ಅಗತ್ಯ ಇರುತ್ತದೆ. ಇದು ಕ್ರೀಡೆಯಿಂದ ಮಾತ್ರ ಸಾಧ್ಯ. ಈ ಕ್ರೀಡೆ ಅಥವಾ ಆಟದ ಸಂಘಟಿತ ರೂಪವೇ ಒಲಿಂಪಿಕ್ಸ್.
 
ಮನುಷ್ಯನ ಶಕ್ತಿ, ಶೌರ್ಯದ ಪ್ರತೀಕವಾಗಿದ್ದ ಯುದ್ಧದಂತೆಯೇ ಪ್ರಾಚೀನ ಒಲಿಂಪಿಕ್ ಕ್ರೀಡೆಯೂ ಅದೇ ಮಾದರಿಯ ಹೋರಾಟದ ಸ್ವರೂಪದಲ್ಲಿತ್ತು. ಸ್ಪರ್ಧಿಗಳು ಯಾವ ಉಡುಪೂ ಧರಿಸದೇ ಬತ್ತಲೆಯಾಗಿಯೇ ಓಡುತ್ತಿದ್ದರು. ರಾಜಮನೆತನದವರ ಜೊತೆ ಗುಲಾಮರಿಗೂ ಸ್ಪರ್ಧಿಸುವ ಅವಕಾಶ ಇತ್ತಾದರೂ ಗುಲಾಮ ರಾಜನನ್ನು ಸೋಲಿಸಿದ ದಾಖಲೆಗಳು ಸಿಗುವುದಿಲ್ಲ.

ಕ್ರಿಸ್ತಶಕ ಪೂರ್ವದ ಒಲಿಂಪಿಕ್ ಕ್ರೀಡೆಗಳಿಗೂ ಕ್ರಿಸ್ತಶಕದಲ್ಲಿ ನಡೆದ ಕ್ರೀಡೆಗಳಿಗೂ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ನಾಲ್ಕು ವರ್ಷಗಳಿಗೊಮ್ಮೆ ಒಲಿಂಪಿಯಾ ಕಣಿವೆಯಲ್ಲಿ ನಡೆಯುತ್ತಿದ್ದ ಕ್ರೀಡೆಗಳ ವಿಜೇತರಿಗೆ ಒಲಿವ್ ಎಲೆಗಳ ಕಿರೀಟವನ್ನು ಬಹುಮಾನವಾಗಿ ಕೊಡಲಾಗುತ್ತಿತ್ತು.

ಗೆದ್ದವನಿಗೆ ಬಂಗಾರದ ಪದಕ ದೊರೆಯದಿದ್ದರೂ, ಕ್ರೀಡೆಗೆ ಮೊದಲು ಹಾಗೂ ಪದಕ ಗೆದ್ದ ನಂತರ ಶ್ರೀಮಂತರು ಆತನನ್ನು ಪೋಷಿಸುತ್ತಿದ್ದರು. ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ತಪ್ಪದೇ ನಡೆದುಕೊಂಡು ಬಂದಿದ್ದ ಒಲಿಂಪಿಕ್ ಕ್ರೀಡೆಗಳು, ರೋಮನ್ ದೊರೆ ಥಿಯೊಡೊಸಿಯಸ್ ಕಾಲದಲ್ಲಿ, ಅಂದರೆ ಕ್ರಿಸ್ತಶಕ 393ರಲ್ಲಿ ನಿಂತುಹೋದವು ಎಂದು ದಾಖಲೆಗಳು ಹೇಳುತ್ತವೆ.
 
ಪ್ರಾಚೀನ ಒಲಿಂಪಿಕ್ ಕ್ರೀಡೆಗಳ ಮೊಟ್ಟಮೊದಲ ಚಾಂಪಿಯನ್ ಕೊರೊಇಬೊಸ್‌ನಿಂದ ಹಿಡಿದು ಕೊನೆಯ ಚಾಂಪಿಯನ್ ಅರ್ಮೇನಿಯ ರಾಜಕುಮಾರ ವರಾಸ್‌ಡೇಟ್ಸ್‌ವರೆಗೆ ಸಾವಿರಾರು ಕ್ರೀಡಾವೀರರನ್ನು ಕಂಡಿದ್ದ ಒಲಿಂಪಿಕ್ ಕ್ರೀಡಾರಂಗದ ಸಂಪೂರ್ಣ ಇತಿಹಾಸ ರೋಚಕವಾಗಿಯೇ ಇರಬೇಕು. ಅದರ ಆಧಾರದ ಮೇಲೆಯೇ ಒಲಿಂಪಿಕ್ ಕ್ರೀಡೆಗಳ ಪುನರುತ್ಥಾನಕ್ಕೆ ಪ್ರಯತ್ನಗಳು ನಡೆದೇ ಇದ್ದವು. ಆದರೆ ಅದಕ್ಕೆ 1,500 ವರ್ಷಗಳು ಬೇಕಾದವು.

ಪರಿವರ್ತನೆಯ ರೂಪಕ

ಹತ್ತೊಂಬತ್ತನೇ ಶತಮಾನದಲ್ಲಿ ಧರ್ಮಗುರುಗಳ ಅಧಿಕಾರ ಹೆಚ್ಚತೊಡಗಿದಂತೆ, ಇದರ ವಿರುದ್ಧ ಹೋರಾಡಲು ಕ್ರೀಡೆಗಳನ್ನು ಉಪಯೋಗಿಸಿಕೊಳ್ಳಲಾಯಿತು ಎಂದೂ ಹೇಳಲಾಗುತ್ತದೆ.
 
ಒಲಿಂಪಿಕ್ ಕ್ರೀಡೆಗಳ ಆದರ್ಶಗಳು ಸಾಮಾಜಿಕ ಪರಿವರ್ತನೆಗೆ ಸಹಾಯಕ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸುವ ಯತ್ನ ನಡೆದರೂ, ವೈಜ್ಞಾನಿಕವಾಗಿ ಬದಲಾಗುತ್ತಿದ್ದ ಜಗತ್ತಿನಲ್ಲಿ ಕ್ರೀಡೆಗೆ ಸ್ಥಾನ ಸಿಗಲು 19ನೇ ಶತಮಾನದ ಕೊನೆಯವರೆಗೂ ಕಾಯಬೇಕಾಯಿತು.
 
ಫ್ರಾನ್ಸ್‌ನ ಪಿಯರಿ ಡಿ ಕೊಬರ್ತಿ ಎಂಬ ಕ್ರೀಡಾಪ್ರೇಮಿಯ ಸತತ ಪ್ರಯತ್ನಗಳ ಫಲವಾಗಿ ಒಲಿಂಪಿಕ್ ಕ್ರೀಡೆಗಳು 1896ರಲ್ಲಿ ಅಥೆನ್ಸ್‌ನಲ್ಲಿ ಪುನರಾರಂಭವಾದವು. ಈ ಮೊಟ್ಟಮೊದಲ ಆಧುನಿಕ ಒಲಿಂಪಿಕ್ ಕ್ರೀಡೆಗಳಿಂದ ಹಿಡಿದು, ಈಗ ಇದೇ 22ರಿಂದ ಲಂಡನ್‌ನಲ್ಲಿ ನಡೆಯಲಿರುವ 30ನೇ ಒಲಿಂಪಿಕ್ ಕ್ರೀಡೆಗಳವರೆಗಿನ 116 ವರ್ಷಗಳಲ್ಲಿ ಜಗತ್ತು ಸಾಕಷ್ಟು ಬದಲಾಗಿ ಹೋಗಿದೆ.

ಕ್ರೀಡೆ ಬರೀ ಮನರಂಜನೆಯ ಸಾಧನವಾಗಿ ಉಳಿದಿಲ್ಲ. ಕ್ರೀಡಾಪಟು ತನ್ನ ಆಟದ ಸಾಮರ್ಥ್ಯವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು, ವೇಗದಿಂದ ತುಂಬಿರಲು ಹಾಗೂ ಶಕ್ತಿಯುತವಾಗಿರಲು ಯತ್ನಿಸುತ್ತಲೇ ಇದ್ದಾನೆ.
 
`ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಪದಕ ಗೆಲ್ಲುವುದಲ್ಲ~ ಎಂಬ ಒಲಿಂಪಿಕ್ ಧ್ಯೇಯ ಬದಲಾಗಿಹೋಗಿದೆ. ಇಂದಿನ ಆಧುನಿಕ ಪೈಪೋಟಿಯ ಯುಗದಲ್ಲಿ ಒಬ್ಬ ಕ್ರೀಡಾಪಟುವಿಗೆ ಚಿನ್ನದ ಪದಕದ ಬೆಲೆ ಗೊತ್ತಿದೆ. ಅದನ್ನು ಗೆಲ್ಲುವುದೇ ಆತನ ಪರಮಗುರಿ. ಅದೇ ಕ್ರೀಡಾಜಗತ್ತಿನ ಧ್ಯೇಯ.

ಹೀಗೆ ಆದಿಮಾನವ ಕಾಲದಿಂದಲೇ ರಕ್ತದಲ್ಲಿ ಸೇರಿಕೊಂಡ ಕ್ರೀಡೆಯೆಂಬ ಕಣಕ್ಕೆ ಸಾವೆಂಬುದು ಇಲ್ಲ. ಒಲಿಂಪಿಯ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಯೇ ಕ್ರೀಡೆಗಳು ಉತ್ಸವದ ರೂಪದಲ್ಲೇ ನಡೆದವು.

ಕ್ರೀಡಾಪೈಪೋಟಿಯ ಜೊತೆ ಒಲಿಂಪಿಕ್ ಉತ್ಸವದ ಸಂಭ್ರಮವೂ ಬಹಳ ಮುಖ್ಯವಾಗಿತ್ತು. ಇದರಿಂದಾಗಿಯೇ ಆರಂಭ ಮತ್ತು ಮುಕ್ತಾಯದ ಕಾರ್ಯಕ್ರಮಗಳು ಮನುಕುಲದ ಸಾಂಸ್ಕೃತಿಕ ಗೆಲುವಿನ ಸಂಕೇತವಾಗಿ ಹೊರಹೊಮ್ಮಿದವು.

ಇಂದು ಇಡೀ ಜಗತ್ತು ತನ್ಮಯವಾಗಿ ನೋಡುವ ಕಾರ್ಯಕ್ರಮವೇನಾದರೂ ಇದ್ದರೆ ಬಹುಶಃ ಅದು ಒಲಿಂಪಿಕ್ ಕ್ರೀಡೆಗಳ ಆರಂಭೋತ್ಸವ ಮತ್ತು ಮುಕ್ತಾಯ ಸಮಾರಂಭದ ವರ್ಣರಂಜಿತ ಕಾರ್ಯಕ್ರಮ. ಒಲಿಂಪಿಕ್ ಕ್ರೀಡೆಗಳು ಇತಿಹಾಸವನ್ನು ನೆನಪಿಸುವುದರ ಜೊತೆಗೆ ಉಜ್ವಲ ಭವಿಷ್ಯದ ಕನಸನ್ನೂ ಬಿತ್ತುತ್ತವೆ.

ಒಲಿಂಪಿಕ್ ಕ್ರೀಡೆಗಳನ್ನು ನಡೆಸುವುದು ಒಂದು ಸಾಮಾನ್ಯ ವಿಷಯವಲ್ಲ. ಈಗಂತೂ ಕೋಟಿಯಲ್ಲ ಶತಕೋಟಿ ಹಣ ಬೇಕು. 1896ರ ಅಥೆನ್ಸ್ ಒಲಿಂಪಿಕ್ಸ್ ನಡೆಸಲು ಗ್ರೀಕ್ ವ್ಯವಸ್ಥಾಪಕ ಸಮಿತಿಗೆ ಹಣದ ತೊಂದರೆ ಎದುರಾಗಿತ್ತು.

ಗ್ರೀಕ್ ಸರ್ಕಾರವೇ ಹಣ ಕೊಡಲು ಹಿಂದೇಟು ಹಾಕಿತ್ತು. ಜಾರ್ಜಿಯೊಸ್ ಅವೆರಾಫ್ ಎಂಬ ಶ್ರೀಮಂತ ವ್ಯಾಪಾರಿಯೊಬ್ಬ ಒಂದು ದಶಲಕ್ಷ `ಡ್ರಚ್ಮಾ~ ದೇಣಿಗೆಯಾಗಿ ಕೊಟ್ಟ. ಈ ಹಣದಿಂದಲೇ, ಕ್ರಿಸ್ತಶಕ ಪೂರ್ವ 330ರಲ್ಲಿ ನಿರ್ಮಿಸಲಾಗಿತ್ತು ಎಂದು ಹೇಳಲಾದ ಅಥೆನ್ಸ್‌ನ ಮುಖ್ಯ ಕ್ರೀಡಾಂಗಣವನ್ನು ನವೀಕರಿಸಲು ಸಾಧ್ಯವಾಯಿತು.

ಇದೇ ಅಥೆನ್ಸ್‌ನಲ್ಲಿ, 108 ವರ್ಷಗಳ ನಂತರ ಅಂದರೆ 2004ರಲ್ಲಿ ಮತ್ತೊಮ್ಮೆ ಒಲಿಂಪಿಕ್ ಕ್ರೀಡೆಗಳು ನಡೆದವು. ಅಥೆನ್ಸ್ ಇದಕ್ಕಾಗಿ 11 ಶತಕೋಟಿಗೂ ಹೆಚ್ಚು ಡಾಲರ್‌ಗಳನ್ನು ಖರ್ಚುಮಾಡಿತು. 1996ರ ಒಲಿಂಪಿಕ್ ಕ್ರೀಡೆಗಳನ್ನು, ಶತಮಾನೋತ್ಸವದ ಕ್ರೀಡೆಗಳನ್ನಾಗಿ ಅಥೆನ್ಸ್‌ನಲ್ಲಿ ನಡೆಸುವ ಪ್ರಯತ್ನ ವಿಫಲವಾಗಿತ್ತು.
 
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಕ್ರೀಡೆಗಳನ್ನು ನಡೆಸುವ ಅವಕಾಶವನ್ನು ಅಟ್ಲಾಂಟಾಕ್ಕೆ ಕೊಟ್ಟಿತ್ತು. ಇದಕ್ಕೆ ಎಷ್ಟೋ ವರ್ಷಗಳ ಮೊದಲೇ ಒಲಿಂಪಿಕ್ ಕ್ರೀಡೆಗಳು ವ್ಯಾಪಾರೀಕರಣದ ಪ್ರಭಾವಕ್ಕೆ ಒಳಗಾಗಿದ್ದವು. 1984 ಲಾಸ್ ಏಂಜಲೀಸ್ ಒಲಿಂಪಿಕ್ಸ್ ಇದಕ್ಕೆ ಉತ್ತಮ ಉದಾಹರಣೆ. ಕ್ರೀಡೆ ಒಂದು ಅತ್ಯುತ್ತಮ ವ್ಯಾಪಾರೀ ಸರಕು ಎಂಬುದು ಇಲ್ಲಿ ಸಾಬೀತಾಗಿತ್ತು.

ಸುಭದ್ರ ಸಾಂಸ್ಕೃತಿಕ ನೆಲೆಗಟ್ಟು

ವ್ಯಾಪಾರೀಕರಣದ ನಡುವೆಯೂ ಕ್ರೀಡೆಯ ಸಾಂಸ್ಕೃತಿಕ ನೆಲೆಗಟ್ಟು ಕುಸಿದಿಲ್ಲ ಎಂಬುದಕ್ಕೆ ಇಡೀ ಜಗತ್ತು ಒಲಿಂಪಿಕ್ ಕ್ರೀಡೆಗಳಲ್ಲಿ ಇಟ್ಟಿರುವ ವಿಶ್ವಾಸ ನಿದರ್ಶನ. ಇಂದು ಜಗತ್ತಿನ ಎಲ್ಲ ಜನರು ಒಂದೆಡೆ ಸೇರುವ ಸ್ಥಳಗಳೆಂದರೆ ಒಲಿಂಪಿಕ್ ಕ್ರೀಡೆಗಳು ಮತ್ತು ವಿಶ್ವಸಂಸ್ಥೆ ಮಾತ್ರ ಎಂದು ಕ್ರೀಡಾ ಇತಿಹಾಸಕಾರನೊಬ್ಬ ಬರೆದಿದ್ದಾನೆ.
 
ವಿಶ್ವಸಂಸ್ಥೆ ಎಂಬುದು ರಾಜಕೀಯ ಕೇಂದ್ರ. ಅಲ್ಲಿ ಸರ್ಕಾರದ ವಿದ್ಯಾವಂತ ಪ್ರತಿನಿಧಿಗಳು ಮಾತ್ರ ಪಾಲ್ಗೊಳ್ಳುತ್ತಾರೆ. ಆದರೆ ಒಲಿಂಪಿಕ್ಸ್ ಹಾಗಲ್ಲ. ಇಲ್ಲಿ ಜಗತ್ತಿನ ಎಲ್ಲ ರೀತಿಯ ಜನರು ತಮ್ಮ ಜಾತಿ, ಮತ, ಧರ್ಮ, ಭಾಷೆ ಮರೆತು ಸೇರುತ್ತಾರೆ.

ಎಲ್ಲರೂ ಒಟ್ಟಾಗಿ ಸ್ಪರ್ಧಿಸುತ್ತಾರೆ, ಹಾಡುತ್ತಾರೆ, ಕುಣಿಯುತ್ತಾರೆ. ಎಲ್ಲರ ದೇಹದಲ್ಲೂ ಹರಿಯುವ ರಕ್ತದ ಬಣ್ಣ ಒಂದೇ ಎಂಬ ಮನುಕುಲದ ಮೂಲ ಸತ್ಯದ ಪರಿಚಯ ಇಲ್ಲಾಗುತ್ತದೆ. ಈ ಕಾರಣದಿಂದಲೇ, ಆಧುನಿಕ ಒಲಿಂಪಿಕ್ ಕ್ರೀಡೆಗಳ ಜನಕ ಪಿಯರಿ ಡಿ ಕೊಬರ್ತಿ ಅವರ ಹೃದಯಕ್ಕೆ ಸಾವಿಲ್ಲ ಎಂದು ಹೇಳುವುದು.

1936ರಲ್ಲಿ ಕೊನೆಯುಸಿರೆಳೆದ ಕೊಬರ್ತಿ ಅವರ ಹೃದಯವನ್ನು ದೇಹದಿಂದ ಬೇರ್ಪಡಿಸಿ, ಒಲಿಂಪಿಯದಲ್ಲಿ ಇಡಲಾಗಿದೆ. 1896ರಿಂದ ನಿರಂತರವಾಗಿ ಬೆಳಗುತ್ತಿರುವ ಒಲಿಂಪಿಕ್ ಜ್ಯೋತಿಯಂತೆಯೇ ಆ ಹೃದಯವೂ ಮಿಡಿಯುತ್ತಲೇ ಇದೆ!

ಆದರೂ, ಒಲಿಂಪಿಕ್ಸ್ ಇತಿಹಾಸದ ಹಲವು ಘಟನೆಗಳು, ರಾಜಕೀಯ ಹೇಗೆ ಕ್ರೀಡೆಯನ್ನು ಉಪಯೋಗಿಸಿಕೊಂಡಿದೆ ಎಂಬುದಕ್ಕೆ ಉದಾಹರಣೆಗಳಾಗಿವೆ. 1936ರ ಬರ್ಲಿನ್ ಒಲಿಂಪಿಕ್ ಕ್ರೀಡೆಗಳನ್ನು ನಡೆಸಲು ಅಡಾಲ್ಫ್  ಹಿಟ್ಲರ್ ಒಪ್ಪಿದ ಕಾರಣವೇ ಬೇರೆಯಾಗಿತ್ತು.
 
ಜಗತ್ತಿಗೆ ನಾಝೀ ಶಕ್ತಿಯ ಪರಿಚಯ ಮಾಡಿಕೊಡುವುದೇ ಆತನ ಉದ್ದೇಶವಾಗಿತ್ತು. ಆದರೆ ಆತನ ಮತಾಂಧ ಭಾವನೆಗೆ, ಆರ್ಯರೇ ಶ್ರೇಷ್ಠರೆಂಬ ಸೊಕ್ಕಿಗೆ ಪೆಟ್ಟು ಬಿದ್ದದ್ದು ಜೆಸ್ಸಿ ಓವೆನ್ಸ್ ಮತ್ತು ಧ್ಯಾನಚಂದ್ ಎಂಬ  ಸಾಮಾನ್ಯ ಜನರಿಂದ.

ಅಮೆರಿಕದ ಕಪ್ಪು ವರ್ಣೀಯ ಒವೆನ್ಸ್ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಾಗ ಹಿಟ್ಲರ್ ಆತನನ್ನು ಅಭಿನಂದಿಸಲಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದಲೇ  ಧ್ಯಾನಚಂದರನ್ನು ಅಭಿನಂದಿಸಿದ ಹಿಟ್ಲರ್, `ನೀನು ಜರ್ಮನಿ ಸೈನ್ಯದಲ್ಲಿದ್ದರೆ ಸಿಪಾಯಿ ಬದಲು ಮೇಜರ್ ಆಗಬಹುದು~ ಎಂದು ಹೇಳಿದ್ದ.  

ಹಾಗೆಯೇ ಹೆಲೆನ್ ಸ್ಟಿಫೆನ್ಸ್ ಎಂಬ ಅಮೆರಿಕದ ಓಟಗಾರ್ತಿಯನ್ನು ಮೋಹಿಸಿ, `ನೀನು ಆರ್ಯಕುಲಕ್ಕೆ ಸೇರಿದವಳಂತೆ ಕಾಣುತ್ತಿ. ನೀನು ಜರ್ಮನಿ ಪರವಾಗಿ ಓಡಬೇಕು~ ಎಂದಿದ್ದ. ಹಿಟ್ಲರ್‌ನ ಯೋಚನೆ ಏನೇ ಇದ್ದರೂ ಜರ್ಮನಿಯ ಜನ ಮಾತ್ರ ಅಮೆರಿಕ ಮತ್ತು ಚಿನ್ನ ಗೆದ್ದ ಇತರ ಕ್ರೀಡಾಪಟುಗಳನ್ನು ಮನಸಾರೆ ಅಭಿನಂದಿಸಿದ್ದರು. ಇದೇ ಅಲ್ಲವೇ ಒಲಿಂಪಿಕ್ ಕ್ರೀಡಾ ಸಂಸ್ಕೃತಿ?

ಆಟದ ಅಂಗಳದಲ್ಲಿ ರಾಜಕಾರಣ

ಬರ್ಲಿನ್ ನಂತರ, ಕ್ರೀಡೆಗಳನ್ನು ರಾಜಕೀಯವಾಗಿ ಉಪಯೋಗಿಸಿಕೊಳ್ಳಬಹುದು ಎಂಬ ಅಂಶ ಬಲಗೊಳ್ಳತೊಡಗಿತು. ಒಲಿಂಪಿಕ್ ನಿಯಮ ಮತ್ತು ಆದರ್ಶಗಳೆರಡೂ ವರ್ಣಭೇದ ನೀತಿಗೆ ವಿರುದ್ಧವಾಗಿದ್ದರೂ, ಕ್ರೀಡಾ ಜಗತ್ತಿನಲ್ಲಿ ತಾರತಮ್ಯ ಮುಂದುವರಿದೇ ಇತ್ತು.

ಇದರ ವಿರುದ್ಧ ಅಮೆರಿಕದ ಕಪ್ಪುವರ್ಣೀಯ ಅಥ್ಲೀಟುಗಳಾದ ಟೊಮಿ ಸ್ಮಿತ್ ಮತ್ತು ಜಾನ್ ಕಾರ್ಲೊಸ್, 1968ರ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲಿ ಪದಕ ಸ್ವೀಕಾರ ಸಮಾರಂಭದಲ್ಲಿ, ಕಪ್ಪು ಗ್ಲೌಸ್ ಧರಿಸಿದ ಮುಷ್ಟಿಯನ್ನು ಮೇಲೆತ್ತಿ ಪ್ರತಿಭಟಿಸಿದ್ದರು.
 
ಇದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮುಖಕ್ಕೇ ಗುದ್ದಿದಂತಾಗಿತ್ತು. ಇಬ್ಬರಿಗೂ ಶಿಕ್ಷೆಯಾಯಿತಾದರೂ, ರಾಷ್ಟ್ರಗಳ ರಾಜಕೀಯದಲ್ಲಿ ಕ್ರೀಡೆಯನ್ನು ದಾಳವಾಗಿ ಉಪಯೋಗಿಸಿಕೊಳ್ಳುವ ದಾರಿ ಗೊತ್ತಾಗಿತ್ತು. ಆದರೆ ಅದು ದುರಂತಕ್ಕೂ ಕಾರಣವಾಯಿತು.

1972ರ ಮ್ಯುನಿಚ್ ಒಲಿಂಪಿಕ್ಸ್‌ನಲ್ಲಿ ರಕ್ತಪಾತವಾಯಿತು. ಪ್ಯಾಲೆಸ್ಟೀನ್‌ನ ಬ್ಲ್ಯಾಕ್ ಸೆಪ್ಟೆಂಬರ್ ಗುಂಪು, ಕ್ರೀಡಾಗ್ರಾಮದೊಳಗೆ ನುಗ್ಗಿ, ಇಸ್ರೇಲಿನ 11 ಮಂದಿ ಕ್ರೀಡಾಪಟುಗಳನ್ನು ಕೊಂದುಹಾಕಿತು. ಇದು ಎಂಥ ಭಯದ ವಾತಾವರಣ ನಿರ್ಮಿಸಿತೆಂದರೆ, ಮುಂದಿನ ಎಲ್ಲ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪೊಲೀಸ್ ಮತ್ತು ಸೇನೆಯ ಬಿಗಿಬಂದೋಬಸ್ತ್ ಜಾರಿಗೆ ಬಂತು.

ಇತ್ತೀಚೆಗಂತೂ ಭಯೋತ್ಪಾದಕರ ಬೆದರಿಕೆಯಲ್ಲಿ ಯಾವುದೇ ಕ್ರೀಡಾಕೂಟವನ್ನು ನೋಡಲು ಹೋಗುವುದು ಒಂದು ಶಿಕ್ಷೆಯೇ ಆಗಿ ಪರಿಣಮಿಸುತ್ತಿದೆ! ಕ್ರೀಡೆಯನ್ನು ಸ್ವಚ್ಛಂದವಾಗಿ ಆನಂದಿಸಬೇಕೆಂದರೆ ಮನೆಯೊಳಗೆ ಟೀವಿ ಮುಂದೆ `ಬೆಚ್ಚಗೆ~ ಕುಳಿತುಕೊಳ್ಳಬೇಕು. ಕ್ರೀಡೆಯ ಬೆಳವಣಿಗೆಯಲ್ಲಿ ತಂತ್ರಜ್ಞಾನದ ಪಾತ್ರವೂ ಮಹತ್ವದ್ದು.

ಜಗತ್ತಿನ ಎರಡು ಪ್ರಮುಖ ಕ್ರೀಡಾಶಕ್ತಿಗಳಾಗಿ ಮೆರೆದ ಅಮೆರಿಕ ಮತ್ತು ಸೋವಿಯತ್ ಕೂಡ ಒಲಿಂಪಿಕ್ ಕ್ರೀಡೆಗಳನ್ನು ತಮ್ಮ ರಾಜಕೀಯವಾಗಿ ಬಳಸಿಕೊಂಡವು. 1956ರಲ್ಲಿ, ಆಫ್ರಿಕದ ಕಪ್ಪು ರಾಷ್ಟ್ರಗಳು, ದಕ್ಷಿಣ ಆಫ್ರಿಕದ ವರ್ಣಭೇದ ನೀತಿಯನ್ನು ಪ್ರತಿಭಟಿಸಿ ಒಲಿಂಪಿಕ್ಸ್‌ಗೆ ಬಹಿಷ್ಕಾರ ಹಾಕಿದ್ದವು.

ಆದರೆ ಕ್ರೀಡೆಗಳು ಕಳೆಗುಂದುವಂತಾಗಿದ್ದು, 1980ರಲ್ಲಿ ಅಮೆರಿಕ ಮತ್ತು ಅದರ ಬೆಂಬಲಿತ ರಾಷ್ಟ್ರಗಳು ಮಾಸ್ಕೊ ಒಲಿಂಪಿಕ್ಸ್ ಬಹಿಷ್ಕರಿಸಿದಾಗ. ಆಫಘಾನಿಸ್ತಾನ ಮೇಲಿನ ಸೋವಿಯತ್ ದಾಳಿಯನ್ನು ಖಂಡಿಸಿ ಅಮೆರಿಕ ಬಹಿಷ್ಕಾರಕ್ಕೆ ಕರೆಕೊಟ್ಟಿತು. ಇದಕ್ಕೆ ಪ್ರತೀಕಾರವಾಗಿ ಸೋವಿಯತ್ 1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ಬಹಿಷ್ಕರಿಸಿತು.

ಆದರೆ ಒಲಿಂಪಿಕ್ ಆಂದೋಲನ 1988ರಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಗಳನ್ನು ಒಂದುಗೂಡಿಸಿತು. ಸೋಲ್ ಒಲಿಂಪಿಕ್ ಕ್ರೀಡೆಗಳಿಂದ ಪ್ರಭಾವಿತವಾದ ಚೀನ 2008ರಲ್ಲಿ ಒಲಿಂಪಿಕ್ಸ್ ನಡೆಸಲು ಮುಂದಾಯಿತು. ಬೀಜಿಂಗ್ ಒಲಿಂಪಿಕ್ ಕ್ರೀಡೆಗಳ ಆರಂಭೋತ್ಸವವಂತೂ ಅಭೂತಪೂರ್ವ ಎನಿಸಿಬಿಟ್ಟಿತು.

ಈಗ ನಡೆಯಲಿರುವ ಲಂಡನ್ ಒಲಿಂಪಿಕ್ಸ್‌ನ ಪ್ರಮುಖ ಪ್ರಾಯೋಜಕ ಸಂಸ್ಥೆಯಾಗಿರುವ ಡೌ ಕೆಮಿಕಲ್ಸ್ ವಿರುದ್ಧ ಭಾರತ ಪ್ರತಿಭಟನೆ ಸಲ್ಲಿಸಿದೆ. 1984ರ ಭೋಪಾಲ್ ಅನಿಲ ದುರಂತಕ್ಕೆ ಕಾರಣವಾಗಿದ್ದ ಯೂನಿಯನ್ ಕಾರ್ಬೈಡ್ ಸಂಸ್ಥೆಯನ್ನು ಡೌ ಕೆಮಿಕಲ್ಸ್ ಖರೀದಿಸಿದೆ. ಆ ದುರಂತದಲ್ಲಿ ಸಾವಿರಾರು ಜನ ಸತ್ತರು.

ಬದುಕಿ ಉಳಿದವರು ಇನ್ನೂ ನರಳುತ್ತಲೇ ಇದ್ದಾರೆ. ಆದರೆ ಸೂಕ್ತ ಪರಿಹಾರವನ್ನು ಯೂನಿಯನ್ ಕಾರ್ಬೈಡ್ ಕೊಡಲಿಲ್ಲ. ಡೌ ಸಂಸ್ಥೆಯೂ ನಿರಾಕರಿಸಿದೆ. ಇದರ ವಿರುದ್ಧ ಭಾರತ ಪ್ರತಿಭಟಿಸಿದರೂ, ಒಲಿಂಪಿಕ್ಸ್ ಬಹಿಷ್ಕಾರದ ಬಗ್ಗೆ ಯೋಚಿಸದೇ ಕ್ರೀಡಾಪಟುಗಳನ್ನು ಕಳಿಸುತ್ತಿದೆ.

ಮೈದಾನದ ಹೊರಗಿನ ಈ ಎಲ್ಲ ಚಟುವಟಿಕೆಗಳಿಗಿಂತ, ಮೈದಾನದೊಳಗಿನ ಸಾಧನೆಗಳು ರೋಚಕ ಅಧ್ಯಾಯಗಳನ್ನು ಬರೆದಿವೆ.1896ರಲ್ಲಿ, ಅಮೆರಿಕದ ಥಾಮಸ್ ಬರ್ಕ್ 100 ಮೀಟರ್ಸ್ ಓಟವನ್ನು 12 ಸೆಕೆಂಡುಗಳಲ್ಲಿ ಓಡಿ ಚಿನ್ನ ಗೆದ್ದಿದ್ದರೆ, 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಜಮೈಕಾದ ಉಸೇನ್ ಬೋಲ್ಟ್ 9.69 ಸೆಕೆಂಡುಗಳಲ್ಲಿ ಓಡಿ ವಿಶ್ವದಾಖಲೆ ಸ್ಥಾಪಿಸಿದ್ದರು. ಇದೊಂದರಿಂದಲೇ ಓಟಗಾರನ ವೇಗ ಎಷ್ಟು ಹೆಚ್ಚಿದೆ ಎಂಬುದನ್ನು ಅಳೆಯಬಹುದು.

ಇದೇ ರೀತಿ ಪ್ರತಿಯೊಂದು ಸ್ಪರ್ಧೆಯಲ್ಲೂ ಪ್ರಗತಿ ಕಂಡುಬಂದಿದೆ. ದಾಖಲೆಗಳಿಗೆ ಮಿತಿಯೇ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ದಾಖಲೆಯ ಅಥವಾ ಚಿನ್ನದ ಪದಕದ ಹುಚ್ಚಿನಲ್ಲಿ ಉದ್ದೀಪನ ಮದ್ದು ಸೇವನೆಯಂಥ ಮೋಸದ ದಾರಿಗಳೂ ಹುಟ್ಟಿಕೊಂಡಿವೆ.
 
1988ರ ಸೋಲ್ ಒಲಿಂಪಿಕ್ಸ್‌ನಲ್ಲಿ ಕೆನಡಾದ ಬೆನ್ ಜಾನ್ಸನ್ ಅವರ ನೂರು ಮೀಟರ್ಸ್ ಓಟವನ್ನು ನೋಡಿವರ‌್ಯಾರೂ ಮರೆಯಲು ಸಾಧ್ಯವಿಲ್ಲ. ಅಮೆರಿಕದ ಖ್ಯಾತ ಓಟಗಾರ ಕಾರ್ಲ್ ಲೂಯಿಸ್ ಅವರನ್ನು ಎರಡನೇ ಸ್ಥಾನಕ್ಕೆ ದೂಡಿದ್ದ ಆ ಓಟವನ್ನು ಬೆನ್ 9.79 ಸೆಕೆಂಡುಗಳಲ್ಲಿ ಗೆದ್ದಿದ್ದರು. ಆದರೆ ಆ ಸಂತಸ ಹೆಚ್ಚು ಹೊತ್ತು ಉಳಿದಿರಲಿಲ್ಲ.

ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಅವರು ಪದಕ ಕಳೆದುಕೊಂಡರು. ಕೆಲವು ವರ್ಷಗಳ ನಂತರ ಅವರು ಮತ್ತೆ ಓಡಿದರೂ ಮೊದಲಿನ ಜಾನ್ಸನ್ ಅವರಾಗಿರಲಿಲ್ಲ. ಕ್ರೀಡೆಯೇ ಅವರಿಗೆ ಪಾಠ ಕಲಿಸಿತ್ತು.

ಫಿನ್‌ಲೆಂಡ್‌ನ ಪಾವೊ ನುರ್ಮಿ (1920ರಲ್ಲಿ ಮೂರು ಹಾಗೂ 1924ರ ಒಲಿಂಪಿಕ್ಸ್‌ನಲ್ಲಿ ಐದು ಚಿನ್ನದ ಪದಕಗಳು), ಅಮೆರಿಕದ ಜಿಮ್ ಥೋರ್ಪ್, ಜೆಸ್ಸಿ ಓವೆನ್ಸ್, ಧ್ಯಾನ್‌ಚಂದ್, ಹಾಲೆಂಡ್‌ನ ಫ್ಯಾನಿ ಬ್ಲ್ಯಾಂಕಸ್-ಕೊಯೆನ್, ವಿಲ್ಮಾ ರುಡಾಲ್ಫ್, ಮಹಮ್ಮದ್ ಅಲಿ, ಮಾರ್ಕ್ ಸ್ಪಿಟ್ಜ್, ಮೈಕೆಲ್ ಫೆಲ್ಪ್ಸ್- ಒಬ್ಬರೇ ಇಬ್ಬರೇ ನೂರಾರು ಮಂದಿ ಕ್ರೀಡಾಪಟುಗಳು ಗೆದ್ದ ಚಿನ್ನದ ಪದಕಗಳ ಹಿಂದೆ ಮನಮುಟ್ಟುವ ಕಥೆಗಳಿವೆ.
 
ಪೊಲೀಯೋಪೀಡಿತಳಾಗಿದ್ದ ವಿಲ್ಮಾ ರುಡಾಲ್ಫ್ 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ತೋರಿದ ಮೂರು ಚಿನ್ನದ ಪದಕಗಳ ಸಾಧನೆ, ಅದೇ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಬಂಗಾರದ ಪದಕವನ್ನು ಕೊರಳಿಗೆ ಹಾಕಿಕೊಂಡ ಕ್ಯಾಸಿಯಸ್ ಕ್ಲೇ (ನಂತರ ಮಹಮ್ಮದ್ ಅಲಿ) ಅಮೆರಿಕದ ಬಿಳಿಯರ ಮೇಲಿನ ಸಿಟ್ಟಿಗೆ ಆ ಪದಕವನ್ನು ನದಿಗೆ ಎಸೆದದ್ದು, 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಅವರಿಗೆ ಮತ್ತೊಂದು ಚಿನ್ನದ ಪದಕ ದಯಪಾಲಿಸಿ, ಕ್ರೀಡಾಜ್ಯೋತಿ ಬೆಳಗುವ ಗೌರವ ನೀಡಿದ್ದು ಮತ್ತೆ ಮತ್ತೆ ಓದಬೇಕೆನಿಸುವ ಅಧ್ಯಾಯಗಳು.

1928ರಿಂದ ಸತತ ಆರು ಒಲಿಂಪಿಕ್ಸ್‌ಗಳಲ್ಲಿ ಭಾರತ ಹಾಕಿ ತಂಡದ ಸುವರ್ಣ ಅಧ್ಯಾಯಗಳಲ್ಲಿ ಹಾಕಿ ಮಾಂತ್ರಿಕ ಎಂದು ಹೆಸರು ಮಾಡಿ, ಜೀವಂತವಿರುವಾಗಲೇ ದಂತಕಥೆಯಾದ ಧ್ಯಾನಚಂದ್ ಒಲಿಂಪಿಕ್ಸ್‌ನ ಸಾಂಸ್ಕೃತಿಕ ದೀವಿಗೆಯನ್ನು ಎತ್ತಿಹಿಡಿದವರು. 

ಶ್ರೀಸಾಮಾನ್ಯರ ಯಶೋಗಾಥೆ

ಒಲಿಂಪಿಕ್ ಕ್ರೀಡೆಗಳ ಯಶೋಗಾಥೆಯ ವಿಶೇಷವೆಂದರೆ, ಇದರಲ್ಲಿ ಮೂಡಿಬರುವ ಚಿನ್ನದ ಪದಕಗಳ ವೀರರೆಲ್ಲ ಸಾಮಾನ್ಯ ಜನರು. ಅವರ ಬದುಕಿಗೆ ಅರ್ಥ ತಂದುಕೊಟ್ಟಿದ್ದೇ ಕ್ರೀಡೆ. ಒಲಿಂಪಿಕ್ ಕ್ರೀಡಾಂಗಣ ಜಗತ್ತಿನ ಅತಿ ದೊಡ್ಡ ರಂಗಮಂದಿರ. ರಂಗದ ಮೇಲೆ ಬರುವ ಪ್ರತಿಯೊಬ್ಬ ಕ್ರೀಡಾಪಟುವೂ ದೊಡ್ಡ ಕಲಾವಿದನೇ.

ಓಟದಲ್ಲಿ, ಜಿಗಿತದಲ್ಲಿ, ಈಜಿನಲ್ಲಿ, ಜಿಮ್ನಾಸ್ಟಿಕ್ಸ್‌ನಲ್ಲಿ, ಹಾಕಿಯಲ್ಲಿ, ಟೆನಿಸ್‌ನಲ್ಲಿ, ಫುಟ್‌ಬಾಲ್‌ನಲ್ಲಿ, ಬ್ಯಾಡ್ಮಿಂಟನ್‌ನಲ್ಲಿ ಹಾಗೂ ಇನ್ನಿತರ ಎಲ್ಲ ಆಟಗಳಲ್ಲಿ ಕ್ರೀಡಾಪಟುಗಳ ಸರ್ವೋತ್ಕೃಷ್ಟ ಸಾಧನೆಗಳು ಸುಮಧುರ ಸಂಗೀತ ಅಥವಾ ರಂಜನೀಯ ನಾಟಕದಷ್ಟೇ ಮನೋಲ್ಲಾಸಕರ. ಇಲ್ಲಿ ಗೆಲ್ಲುವವರಿಗಿಂತ ಸೋಲುವವರೇ ಹೆಚ್ಚು.
 
ಆದರೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಆಕರ್ಷಣೆ ಎಷ್ಟೆಂದರೆ, ಅವುಗಳಿಗಾಗಿ ವರ್ಷಗಟ್ಟಲೆ ಶ್ರಮಪಡುತ್ತಾರೆ. ಚಿನ್ನ ಗೆದ್ದರೆ ಆನಂದಬಾಷ್ಪ, ಸೋತರೆ ಕಣ್ಣೀರು. ಸೋತರೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ತೃಪ್ತಿ. ಅದೇ ಮುಂದಿನ ಹೋರಾಟಕ್ಕೆ ಮಾರ್ಗದರ್ಶಿ.
ಬರೀ ಕ್ರೀಡಾಪಟುಗಳನ್ನಷ್ಟೇ ಅಲ್ಲ, ಇಡೀ ಜಗತ್ತನ್ನೇ ಬೆರಗುಗೊಳಿಸುವ ಭುವನದ ಬೆಡಗು ಈ ಒಲಿಂಪಿಕ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT