ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳವರ ಆರ್ಭಟ: ಕಾಡುವ ಸ್ಪೃಶ್ಯ-ಅಸ್ಪೃಶ್ಯ ಭೇದಭಾವ

Last Updated 25 ಏಪ್ರಿಲ್ 2013, 9:40 IST
ಅಕ್ಷರ ಗಾತ್ರ

ರಾಯಚೂರು:  ಜಿಲ್ಲೆಯ ಲಿಂಗಸುಗೂರು ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರದಲ್ಲಿ ಗ್ರಾನೈಟ್ ಕ್ವಾರಿ ಮಾಲೀಕರು ಮತ್ತು ಸಿವಿಲ್ ಕಾಮಗಾರಿ ಗುತ್ತಿಗೆದಾರರ ಸದ್ದು ದಿಢೀರನೆ ಜೋರಾಗಿ ಕೇಳುತ್ತಿದೆ. ಅದರೊಂದಿಗೆ ಸ್ಪೃಶ್ಯ-ಅಸ್ಪೃಶ್ಯ ಭೇದಭಾವದ `ಸಪ್ಪಳ'ವೂ ಕೇಳುತ್ತಿದೆ.

ಹಿಂದಿನ ಚುನಾವಣೆಯಲ್ಲಿ ಬಳ್ಳಾರಿ `ಗಣಿಧಣಿ'ಗಳ ಪ್ರಭಾವ ರಾಯಚೂರು, ಕೊಪ್ಪಳದ ಮೇಲೂ ಇತ್ತು. ಆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಸಿವಿಲ್ ಕಾಮಗಾರಿ ಗುತ್ತಿಗೆದಾರ ಮಾನಪ್ಪ ವಜ್ಜಲ್ ಈಗ ಪಕ್ಷ ಬದಲಿಸಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

ಕಾಂಗ್ರೆಸ್‌ನ ಡಿ.ಎಸ್.ಹೂಲಿಗೇರಿ ಮತ್ತು ಬಿಎಸ್‌ಆರ್ ಕಾಂಗ್ರೆಸ್‌ನ ಸಿದ್ದು ವೈ.ಬಂಡಿ ಲಿಂಗಸುಗೂರಿಗೆ ಹೊಂದಿಕೊಂಡಂತಿರುವ ಬಾಗಲಕೋಟೆ ಜಿಲ್ಲೆಯ ಇಳಕಲ್‌ನವರು. ಇಬ್ಬರೂ ಗ್ರಾನೈಟ್ ಕ್ವಾರಿ ಮಾಲೀಕರು. ಈ ಮೂವರೂ ಬೋವಿ ಸಮಾಜದವರು, ಗಟ್ಟಿಕುಳಗಳು. ಹಾಗಾಗಿ ಈ ಕ್ಷೇತ್ರದಲ್ಲಿ ಆರ್ಭಟ ಹೆಚ್ಚಾಗಿದೆ.

ಇದರ ಬೆನ್ನಲ್ಲೇ ಕ್ಷೇತ್ರದಲ್ಲಿ, ಸ್ಪೃಶ್ಯ ಮತ್ತು ಅಸ್ಪೃಶ್ಯ ಸಮುದಾಯಕ್ಕೆ ಸೇರಿದವರ ನಡುವೆ ವೈಮನಸ್ಸು ಮೂಡಿದೆ. ಇದಕ್ಕೆ ಮೂಲ ಕಾರಣ ಕಾಂಗ್ರೆಸ್. ಪ್ರಥಮ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷವು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ, ಮಾದಿಗ (ಎಡಗೈ) ಸಮಾಜದ ಪಾಮಯ್ಯ ಮುರಾರಿ ಅವರಿಗೆ ಟಿಕೆಟ್ ಪ್ರಕಟಿಸಿತ್ತು. ಕೆಲ ದಿನಗಳ ನಂತರ ಅವರ ಬದಲಿಗೆ ಹೂಲಿಗೇರಿ ಅವರಿಗೆ ಟಿಕೆಟ್ ನೀಡಿತು. ಕಾಂಗ್ರೆಸ್‌ನ ಈ ವರ್ತನೆಯಿಂದ ಅಸ್ಪೃಶ್ಯರು ಕೆರಳಿದ್ದಾರೆ.

ಈ ಬಾರಿ ಮಾದಿಗ ಸಮಾಜದವರಿಗೆ ಟಿಕೆಟ್ ತಪ್ಪಿದ್ದರಿಂದ ಚಲವಾದಿ (ಬಲಗೈ) ಸಮಾಜದವರೂ ಅವರೊಂದಿಗೆ ಕೈ ಜೋಡಿಸಿ ಎಡಗೈ ಅಭ್ಯರ್ಥಿ ಪರ ಪ್ರಚಾರ ನಡೆಸುವುದು, ಸಭೆಗಳನ್ನು ಏರ್ಪಡಿಸಿ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಣದಲ್ಲಿರುವ ಎಡಗೈ ಸಮುದಾಯಕ್ಕೆ ಸೇರಿದ ಏಕೈಕ ಅಭ್ಯರ್ಥಿ ಕೆಜೆಪಿಯ ಎಚ್.ವಿ.ಮುರಾರಿ ಅವರನ್ನು ಬೆಂಬಲಿಸಲು ಮನವಿ ಮಾಡುತ್ತಿದ್ದಾರೆ. ಸಾರ್ವಜನಿಕರೇ ಸಭೆಯೊಂದರಲ್ಲಿ 85,000 ರೂಪಾಯಿ ಸಂಗ್ರಹಿಸಿ ಪ್ರಚಾರಕ್ಕೆ ಬಳಸಲು ಕೊಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.

ಪಾಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ಪ್ರಕಟಿಸದಿದ್ದರೆ ಇದಾವುದೂ ನಡೆಯುತ್ತಿರಲಿಲ್ಲ. ಕೊಟ್ಟು ನಂತರ ಕಿತ್ತುಕೊಂಡ ಕಾರಣ ಜನರು ಸಿಟ್ಟಾಗಿದ್ದಾರೆ ಎನ್ನುತ್ತಾರೆ ದಲಿತ ಸಂಘರ್ಷ ಸಮಿತಿ ಮುಖಂಡ ಪ್ರಭುಲಿಂಗ ಮೇಗಲಮನಿ. ಇದು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಲಾಗದು. ಆದರೆ, `ಹುಲ್ಲು ಎದ್ದು ಬಂಡೆಗೆ ಬಾರಿಸಿದರೆ ಬಂಡೆ ಪುಡಿಯಾದೀತು' ಎಂಬ ಮಾತು ಈ ಭಾಗದಲ್ಲಿ ಕೇಳಿಬರುತ್ತಿದೆ. ಜನರ ಆಕ್ರೋಶ ಬಲಿಷ್ಠರನ್ನು ಹೊಸಕಿಹಾಕುತ್ತದೆ ಎಂಬರ್ಥದಲ್ಲಿ ಈ ರೀತಿ ಹೇಳಲಾಗುತ್ತಿದೆ.

ರಾಜಕೀಯ ಅಧಿಕಾರ ಪಡೆಯಲು ಒಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಧಿಕಾರ ಸಿಗುವುದೇ ಇಲ್ಲ ಎಂಬ ಭಾವನೆ ಹೊಂದಿರುವ ಎಡಗೈ-ಬಲಗೈ ಸಮುದಾಯಗಳ ಮುಖಂಡರು ಸಮಾಜದವರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ತಮ್ಮ ಉಳಿವಿಗಾಗಿ ಸಂಘಟಿತರಾಗಬೇಕು ಎಂಬ ಮನೋಭಾವ ಜನರಲ್ಲಿ ಮೂಡಿದೆ. ಇದು ಕಣದಲ್ಲಿರುವ ಇತರೆ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿದೆ.

`ಅಸ್ಪೃಶ್ಯತೆಯ ನೋವುಂಡ ಸಮಾಜವನ್ನು ಕಡೆಗಣಿಸಿ, ಸ್ಪೃಶ್ಯರಾದ ಬೋವಿಗಳಿಗೆ ಮಣೆ ಹಾಕುವ ಮೂಲಕ ಹಿಂದಿನ ಚುನಾಚಣೆಯಲ್ಲಿ ಬಿಜೆಪಿ ಮಾಡಿದ್ದನ್ನೇ ಈಗ ಕಾಂಗ್ರೆಸ್ ಅನುಸರಿಸಿದೆ. ಇದೇ ಏನು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ' ಎಂದು ಈ ಗುಂಪಿನವರು ಪ್ರಶ್ನಿಸುತ್ತಾರೆ.

ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಪಾಮಯ್ಯ ಮುರಾರಿ, `ಟಿಕೆಟ್ ಕೈ ತಪ್ಪಲು ಕಾರಣ ತಿಳಿದಿಲ್ಲ. ಬಿ ಫಾರಂ ಪಡೆದುಕೊಳ್ಳಲು ಕೆಪಿಸಿಸಿ ಕಚೇರಿಗೆ ಬನ್ನಿ ಎಂಬ ಸೂಚನೆ ಬಂತು. ಅಲ್ಲಿಗೆ ಹೋದಾಗ, ನಿಮ್ಮ ಸಂಬಂಧಿಕರು ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದಾರಂತೆ. ನಿಮ್ಮ ವಿರುದ್ಧ ಎಐಸಿಸಿಗೆ ಆಕ್ಷೇಪ ಹೋಗಿದೆ.

ಈ ಕ್ಷೇತ್ರದ ಬಿ ಫಾರಂ ವಿತರಣೆಯನ್ನು ನಂತರ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಲಾಯಿತು. ನಾನೂ ಕಾಯುತ್ತಿದ್ದೆ. ಅಲ್ಲಿಯೇ ಇದ್ದರೂ ನನ್ನ ಬದಲಿಗೆ ಇನ್ನೊಬ್ಬರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದನ್ನು ತಿಳಿಸಲಿಲ್ಲ. ಬೇಸರವಾಯಿತು. ಏನೋ ಪಿತೂರಿ ನಡೆದಿದೆ. ಆದರೂ ಪಕ್ಷದ ಆದೇಶದಂತೆ ನಡೆದುಕೊಳ್ಳುತ್ತೇನೆ ' ಎಂದರು.

ಅಸ್ಪೃಶ್ಯ ಸಮುದಾಯಕ್ಕೆ ಸೇರಿದವರನ್ನು ಮೇಲ್ವರ್ಗದವರು ಸಾಮಾನ್ಯವಾಗಿ ಇಷ್ಟಪಡುವುದಿಲ್ಲ. ಹಾಗಾಗಿ ಅವರ ಮತಗಳನ್ನು ಸೆಳೆಯಲು ಮೀಸಲು ಕ್ಷೇತ್ರಗಳಲ್ಲಿ ಸ್ಪೃಶ್ಯ ಸಮುದಾಯವರಿಗೆ (ಬೋವಿ. ಲಂಬಾಣಿ) ಪಕ್ಷಗಳು ಆದ್ಯತೆ ನೀಡುತ್ತವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಇದೇ ತಂತ್ರ ಅನುಸರಿಸಿ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು.

ಇದರ ನಡುವೆಯೂ ಕಣದಲ್ಲಿರುವ ಉಳ್ಳವರ ಆರ್ಭಟ ಜೋರಾಗಿಯೇ ನಡೆದಿದೆ. ಚುನಾವಣೆಗೆ ಅಭ್ಯರ್ಥಿಗಳು ವರ್ಷಾನುಗಟ್ಟಲೆಯಿಂದ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಲಿಂಗಸುಗೂರು ಕ್ಷೇತ್ರದ ಅಭ್ಯರ್ಥಿಗಳು ಒಂದು ಕೈ ಮೇಲೆ ಎನ್ನಬಹುದು. ಈಗಲೂ ಮತವನ್ನು ಖಚಿತಪಡಿಸಿಕೊಳ್ಳಲು ಗುಡಿ-ಗುಂಡಾರಗಳ ದುರಸ್ತಿ, ನಿರ್ಮಾಣಕ್ಕೆ ಸ್ಥಳದಲ್ಲೇ ಹಣ ಘೋಷಣೆ ಕಾರ್ಯಕ್ರಮ ಗ್ರಾಮಗಳಲ್ಲಿ ಯಾವುದೇ ಎಗ್ಗಿಲ್ಲದೆ ಸಾಗಿದೆ ಎಂದು ಹೇಳಲು ಗ್ರಾಮಸ್ಥರು ಹಿಂಜರಿಯಲಿಲ್ಲ.

ಯಲಗಲದಿನ್ನಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮೂರು ಲಕ್ಷ ರೂಪಾಯಿ ಯೋಜನೆ ಸಿದ್ಧವಾಗಿದೆ. ಅದಕ್ಕೆ ಹಣ ಬೇಕು ಎಂದು ಗ್ರಾಮಸ್ಥರು ಹೇಳುತ್ತಿದ್ದಂತೆಯೇ, ಅಭ್ಯರ್ಥಿಯೊಬ್ಬರು ಒಂದು ಲಕ್ಷ ರೂಪಾಯಿ ಕೊಟ್ಟು, `ಮತ ಹಾಕಿ, ನಂತರ ಉಳಿದ ಹಣ ಕೊಡುತ್ತೇನೆ. ಕೆಲಸ ಶುರು ಮಾಡಿ. ಇನ್ನೂ ಹೆಚ್ಚಾದರೂ ಪರವಾಗಿಲ್ಲ' ಎಂದು ಉದಾರತೆ ಮೆರೆದು ಹೋಗಿದ್ದಾರೆ ಎಂದು ಗ್ರಾಮಸ್ಥರು ಮುಚ್ಚುಮರೆ ಮಾಡದೇ ಬಹಿರಂಗಪಡಿಸಿದರು.

ಹೆಸರೂರಿನ ಗ್ರಾಮಕ್ಕೆ ಕಳೆದ ಚುನಾವಣೆ ಸಂದರ್ಭದಲ್ಲಿ ತೇರು ನಿರ್ಮಾಣಕ್ಕೆ ಮೂರು ಲಕ್ಷ ರೂಪಾಯಿ ಪಾವತಿಸಿದ್ದ ಒಬ್ಬರು, ಈ ಬಾರಿ ಹೋದಾಗ ಗ್ರಾಮಸ್ಥರು ಹೊಸ ತಗಾದೆ ತೆಗೆದು `ಹಳೆಯದು ಆಗಿನ ಚುನಾವಣೆಗೆ ಮುಗಿಯಿತು. ಈಗ ಹೊಸದಾಗಿ ಎಷ್ಟು ಕೊಡುತ್ತೀರಿ ಹೇಳಿ' ಎಂದು ನೇರವಾಗಿಯೇ ಕೇಳಿದ್ದಾರೆ ಎಂಬ ಮಾಹಿತಿ ಇದೆ. 

`ಈಗ ಇವೆಲ್ಲಾ ನಮ್ಮ ಕ್ಷೇತ್ರದಲ್ಲಿ ಸಾಮಾನ್ಯ ಸಂಗತಿ. ಹಣ ನೀರಿನಂತೆ ಹರಿಯುತ್ತಿದೆ. ಕಣ್ಣಿಗೆ ಕಾಣುವಂತೆಯೇ ಎಲ್ಲ ನಡೆಯುತ್ತಿದ್ದರೂ ತಡೆಯಲು ಯಾರೂ ಮುಂದಾಗುತ್ತಿಲ್ಲ' ಎಂಬ ಅಳಲು ಗ್ರಾಮಸ್ಥರದ್ದು.

ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ಎಲ್ಲೆಲ್ಲೂ ಇದೇ ಮಾತು ಕೇಳುತ್ತದೆ. ಆ ಪಕ್ಷದವರು ಆ ಗ್ರಾಮಕ್ಕೆ ಇಷ್ಟು ಕೊಟ್ಟರು. ಈ ಗ್ರಾಮಕ್ಕೆ ಇನ್ನೊಂದು ಪಕ್ಷದವರು ಅಷ್ಟು ಕೊಟ್ಟರು ಎಂಬುದೇ ಚರ್ಚೆಯ ವಿಷಯವಾಗಿದೆ.

ಕಣದಲ್ಲಿ ನಿವೃತ್ತ ಡಿಐಜಿ

ವೈರ್‌ಲೆಸ್ ಮತ್ತು ಕಂಟ್ರೋಲ್ ರೂಂ ಡಿಐಜಿಯಾಗಿ ಸೇವೆ ಸಲ್ಲಿಸಿ ಐದು ವರ್ಷಗಳ ಹಿಂದೆ ನಿವೃತ್ತರಾದ ಟಿ.ಆರ್.ನಾಯ್ಕ ಬಿಜೆಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ನಿವೃತ್ತಿ ನಂತರ ಕಾಂಗ್ರೆಸ್ ಸೇರಿದ ಅವರು, 2008ರ ಚುನಾವಣೆಯಲ್ಲಿಯೇ  ಈ ಕ್ಷೇತ್ರದಿಂದ ಸ್ಪರ್ಧಿಸಲು ಯತ್ನಿಸಿದ್ದರು. ಆಗ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. ಪಕ್ಷ ತೊರೆದ ಅವರು ಬಿಜೆಪಿ ಸೇರಿ ಕಣಕ್ಕಿಳಿದಿದ್ದಾರೆ. ತಾಲ್ಲೂಕಿನ ಆಶಿಹಾಳ ತಾಂಡಾ ನಿವಾಸಿಯಾದ ಅವರು ತಾಲ್ಲೂಕಿನಲ್ಲಿ ನೀರಾವರಿ ಯೋಜನೆ ಜಾರಿಗೆ ನಡೆದ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT