ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಗಡ್ಡಿ ಬೆಲೆ ಕುಸಿತ: ರೈತರ ಆಕ್ರೋಶ

Last Updated 25 ಜನವರಿ 2011, 12:15 IST
ಅಕ್ಷರ ಗಾತ್ರ

ಗದಗ: ಇಲ್ಲಿನ ಎಪಿಎಂಸಿಯಲ್ಲಿ ಸೋಮವಾರ ಉಳ್ಳಾಗಡ್ಡಿ ಬೆಲೆ ದಿಢಿರ್ ಕುಸಿತಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಎಪಿಎಂಸಿಯ ಕಚೇರಿಗೆ ನುಗ್ಗಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ದರ ಕಡಿಮೆಯಾಗಿದ್ದರಿಂದ ಉಳ್ಳಾಗಡ್ಡಿ ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸಿದ ರೈತರು, ಮಾರುಕಟ್ಟೆಯ ಪ್ರಾಂಗಣದ ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದರು.

ಇಷ್ಟಾದರೂ ಖರೀದಿದಾರರು ಯಾವುದೇ ಪ್ರತಿಕ್ರಿಯೆ ತೋರದೆ ಇದ್ದದ್ದರಿಂದ ರೈತರು ಎಪಿಎಂಸಿ ಮುಖ್ಯ ಕಚೇರಿಯಲ್ಲಿ ಇರುವ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ಆಗಮಿಸಿದರು. ಆದರೆ ಮಧ್ಯಾಹ್ನ ಊಟದ ಸಮಯ ವಾಗಿದ್ದರಿಂದ ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಇರಲಿಲ್ಲ. ಇದರಿಂದ ತೀವ್ರ ರೊಚ್ಚಿಗೆದ್ದ ರೈತರು ಕಚೇರಿಯಲ್ಲಿ ಇಟ್ಟಿದ್ದ ಕುರ್ಚಿ, ಟೇಬಲ್ ಅಲ್ಮೇರಾ ಕಿತ್ತೆಸೆದು ಆಕ್ರೋಶ ವ್ಯಕ್ತ ಪಡಿಸಿದರು.

ಇದರಿಂದಾಗಿ ಕಚೇರಿಯ ಒಳಗಿದ್ದ ಕೆಲವು ಸಿಬ್ಬಂದಿಗಳು ಭಯಭೀತರಾಗಿ  ಹೊರಗೆ ಹೋದರು. ನಂತರ ರೈತರು ಕೈಗೆ ಸಿಕ್ಕಿದ ವಸ್ತುಗಳನ್ನು ಧ್ವಂಸಗೊಳಿಸಿದರು. ದೂರವಾಣಿ, ಅಂತರ್ಜಾಲ ಸಂರ್ಪಕಗಳನ್ನು ಕಿತ್ತು ಎಸೆದರು. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರ ಸಾಹಸಪಟ್ಟರು. ಕೊನೆಗೂ ಈ ಕಾರ್ಯದಲ್ಲಿ ಪೊಲೀಸರು ಯಶಸ್ವಿಯಾದರು.

ಅಲ್ಲಿಂದ ಸುಮಾರು 300ಕ್ಕೂ ಹೆಚ್ಚು ರೈತರು ಭೂಮರೆಡ್ಡಿ ಸರ್ಕಲ್‌ಗೆ ಬಂದು  ಮಾನವ ಸರಪಳಿ ನಿರ್ಮಿಸಿದರು. ಸುಮಾರು 15 ನಿಮಿಷಗಳ ಕಾಲ ರಸ್ತೆತಡೆ ನಡೆಸಿದರು. ಸಕಾಲದಲ್ಲಿ ಪೊಲೀಸರು ಮಧ್ಯಸ್ಥಿಕೆ ವಹಿಸಿ, ಮತ್ತೆ ರೈತರನ್ನು ಎಪಿಎಂಸಿಯತ್ತ ಕರೆದುಕೊಂಡು ಹೋದರು. ನಂತರ ಎಪಿಎಂಸಿ ಅಧಿಕಾರಿಗಳು ಮತ್ತು ವರ್ತಕರು ಹಾಗೂ ಉಳ್ಳಾಗಡ್ಡಿ ಖರೀದಿದಾರರನ್ನು ಸಂಪರ್ಕಿಸಿ ಮರು ಟೆಂಡರ್ ಮಾಡುವಂತೆ ಸೂಚಿಸಿದರು. ಇದರಿಂದ ರೈತರು ಶಾಂತರಾದರು.

ಸೋಮವಾರ ಮುಂಜಾನೆಯಿಂದಲೇ ಉಳ್ಳಾಗಡ್ಡಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಲು ವರ್ತಕರು ತೊಡಗಿದ್ದರು. ಇದನ್ನು ರೈತರು ಪ್ರಶ್ನಿಸಿದಾಗ, ರಾಜ್ಯದ ಎಲ್ಲ ಮಾರುಕಟ್ಟೆಯಲ್ಲೂ ಇದೇ ಬೆಲೆ ಇದೆ ಎಂದು ಹೇಳಿದರು. ಸುಮಾರು 400 ರೂಪಾಯಿಂದ ಒಂದು ಸಾವಿರ ರೂಪಾಯಿವರೆಗೆ ಉಳ್ಳಾಗಡ್ಡಿ ಖರೀದಿಸಲು ತೊಡಗಿದ್ದೆ ರೈತರ ಆಕ್ರೋಶಕ್ಕೆ ಕಾರಣವಾಯಿತು.
ಶನಿವಾರದವರೆಗೂ ಮೂರೂವರೆ ಸಾವಿರ ರೂಪಾಯಿ ಇದ್ದ ಉಳ್ಳಾಗಡ್ಡಿ ಬೆಲೆ ಸೋಮವಾರ ಅರ್ಧಕ್ಕರ್ಧ ಕಡಿಮೆಯಾದ್ದರಿಂದ ರೈತರು ಪ್ರತಿಭಟನೆಗೆ ಇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT