ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಶ್... ಕೊನೆಗೂ ಬಂದ್ರಪ್ಪಾ ...

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೆಮ್ಮರದ ಮೇಲಿನ ಹೆಜ್ಜೇನಿಗಾಗಿ ಕೆಳಗೆ ಶತಪಥ ಸುತ್ತುವ ಕರಡಿಯ ಕನವರಿಕೆಯಂತೆ ಜನ ಇನ್ನಿಲ್ಲದ ಉದ್ವೇಗಕ್ಕೆ ಒಳಗಾಗಿದ್ದರು. ಅವರ ತಾಳ್ಮೆಯನ್ನು ಈ ಪರಿ ಪರೀಕ್ಷಿಸಿದ್ದು ನಟ ಧನುಷ್. ಅವರಿಗೆ ನೃತ್ಯ, ಹಾಡು, ಆರ್‌ಜೆಗಳ ಮಾತು, ನಗೆ ಚಟಾಕಿ ಇವ್ಯಾವುವು ಬೇಡವಾಗಿತ್ತು.
 
ಅಭಿಮಾನಿಗಳೆಲ್ಲರ ಕಣ್ಣುಗಳಲ್ಲಿ ಕಾಣುತ್ತಿದ್ದ ಭಾವ ಒಂದೇ; ಧನುಷ್‌ನನ್ನು ಯಾವಾಗ ನೋಡುತ್ತೇವೋ, ಆತನ ಶಾರೀರದಿಂದ ಕೊಲವೆರಿ ಡಿ ಹಾಡನ್ನು ಯಾವಾಗ ಕೇಳುತ್ತೇವೆಯೋ ಎಂದು.

ಪ್ರೀತಿಯ ನಟನನ್ನು ಹತ್ತಿರದಿಂದಲೇ ನೋಡಬೇಕು ಎಂದು ಕಾರ್ಯಕ್ರಮ ನಿಗದಿಗೊಂಡಿದ್ದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ ಅರಮನೆ ಮೈದಾನದಲ್ಲಿ ಜಮಾಯಿಸಿದ್ದರು.
 
ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಲಿದ್ದ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲಿ ಇದ್ದ ಕುತೂಹಲ ಸಹಜವಾದುದು. ಆದರೆ ಗಂಟೆ ಹತ್ತಾದರೂ ಧನುಷ್ ಬರದಿದ್ದಾಗ ಅವರ ಸಹನೆಯ ಕಟ್ಟೆ ಒಡೆದಿತ್ತು. `ಸರ್, ಧನುಷ್ ಎಲ್ಲಿ?~ ಎಂದು ಮಗುವೊಂದು ಆರ್‌ಜೆ ಅಬ್ಬಾಸ್ ಅವರನ್ನು ಕೇಳಿದಾಗ ಅಭಿಮಾನಿಗಳ ಮುಖದಲ್ಲಿ ಮಂದಹಾಸದ ಬುಗ್ಗೆ.

ಆರ್‌ಜೆಯನ್ನು ಛೇಡಿಸುವಂತಿದ್ದ ಮಗುವಿನ ಧ್ವನಿ ಆತನ ಮುಖದಲ್ಲಿ ಪೆಚ್ಚುನಗೆ ತರಿಸಿತು.

ಮಗು ರಾಕ್, ಆರ್‌ಜೆ ಶಾಕ್!

`ವೈ ದಿಸ್ ಕೊಲವೆರಿ ಡಿ~ ಎಂದು ಹಾಡುತ್ತಾ ಕೋಟ್ಯಂತರ ಜನರ ಮನಸ್ಸಿಗೆ ಲಗ್ಗೆ ಹಾಡಿದ ಧನುಷ್ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಬಾರದೇ ಜನರನ್ನು ಕಾಯಿಸಿ ಸತಾಯಿಸಿದರು. 7 ಗಂಟೆಗೆ ಪ್ರಾರಂಭಗೊಳ್ಳಬೇಕಿದ್ದ ಕಾರ್ಯಕ್ರಮ 10ಕ್ಕೆ ಶುರುವಾಯ್ತು.
 
ಡ್ರೆಸ್ಸಿಂಗ್ ರೂಂನಿಂದಲೇ ನಮಸ್ಕಾರ ಬೆಂಗಳೂರು ಎಂದ ನಟ ಧನುಷ್ ಸ್ವಲ್ಪ (ಮೂರು ಗಂಟೆ) ತಡವಾಗಿ ಬಂದಿದ್ದಕ್ಕೆ ಬೆಂಗಳೂರಿಗರು ಕ್ಷಮಿಸಬೇಕು ಎಂದರು!

ಆನಂತರ ಧನುಷ್ ವೇದಿಕೆಗೆ ಬಂದರು. ಬಂದವರೇ ಏಕಾಏಕಿ ಹಾಡನ್ನು ಹಾಡಲು ಮೈಕ್ ಕೈಗೆತ್ತಿಕೊಂಡರು. ಆನಂತರ ಕೊಲವೆರಿ ಡಿ ಹಾಡನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು.
 
ನಾದಸ್ವರ, ಶಹನಾಯಿ, ಸ್ಯಾಕ್ಸಫೋನ್, ಉರುಮಿ, ತವಿಲ್ ಡ್ರಮ್ಸ, ಗಿಟಾರ್ ಹಾಗೂ ಕೀಬೋರ್ಡ್ ಬಳಸಿ ಸಂಯೋಜಿಸಿದ ಈ ಹಾಡು ತಮಿಳು ಜನಪದೀಯ ಶೈಲಿಯಲ್ಲಿಯೇ ಮೂಡಿಬಂತೆನ್ನಿ. ಒನ್ಸ್ ಮೋರ್ ಎಂದ ಅಭಿಮಾನಿಗಳ ಪ್ರೀತಿಪೂರ್ವಕ ಒತ್ತಾಯಕ್ಕೆ ಮಣಿದು ಕೊಲವೆರಿ ಡಿ ಹಾಡನ್ನು ಮತ್ತೊಮ್ಮೆ ಹಾಡಿದರು ಧನುಷ್.
 
ಅವರ ಕಂಠ ಕೇವಲ ಸ್ಟುಡಿಯೋ ಒಳಗೆ ಮಾತ್ರ ಕೇಳಲು ಚೆಂದ. ಓಪನ್ ಗ್ರೌಂಡ್‌ನಲ್ಲಿ ಎಲ್ಲರನ್ನು ತಲುಪುವ, ಹಿಡಿದಿಡುವ ಶಕ್ತಿ ಅವರ ಕಂಠಕ್ಕೆ ಇಲ್ಲ ಎಂದು ಜನ ಕಿಚಾಯಿಸಿದ್ದು ಸುಳ್ಳಲ್ಲ.

ಪ್ರೀತಿಸಿದ ಹುಡುಗಿ ಪ್ರಿಯತಮನನ್ನು ತೊರೆದು ಹೋದಾಗ ನಾಯಕ ಕುಡಿದು ಹಾಡುವ ಹಾಡಂತೆ ಇದು. ಅಸಂಬದ್ಧ ಸಾಹಿತ್ಯವಿರುವ ಈ ಗೀತೆ ಈ ಪರಿ ಜನಪ್ರಿಯತೆ ಪಡೆದಿದ್ದು ಕೂಡ ಒಂದು ಪವಾಡವೇ ಸರಿ ಎಂದು ಟೀಕಿಸಿದವರೂ ಇದ್ದಾರೆ.
 
ಚಿತ್ರದ ನಿರ್ದೇಶಕರು ಈ ಸನ್ನಿವೇಶಕ್ಕೆ ಲಘು ಸಾಹಿತ್ಯವುಳ್ಳ ಆದರೆ, ಹೃದಯ ತಟ್ಟುವಂತಹ ಪದಗಳಿರಬೇಕು ಎಂದು ಬಯಸಿದರು. ಅನಿರುದ್ಧ್ ರವಿಚಂದರ್ ನಿರ್ದೇಶಕರ ಕಲ್ಪನೆಯನ್ನು ಅರ್ಥಮಾಡಿಕೊಂಡು 10 ನಿಮಿಷದಲ್ಲಿ ಟ್ಯೂನ್ ಕಂಪೋಸ್ ಮಾಡಿದರಂತೆ. ಆನಂತರ ಟ್ಯೂನ್‌ಗೆ ಅನುಗುಣವಾಗಿ ಧನುಷ್ ಸಾಹಿತ್ಯ ರಚಿಸಿದರಂತೆ.

ಆಡುಮಾತುಗಳನ್ನೇ ಬಳಸಿಕೊಂಡು ರಚಿಸಿದ ಈ ಗೀತೆ ಸೂಪ್ ಸಾಂಗ್ ಆಗಿ ಅತ್ಯಂತ ಜನಪ್ರಿಯತೆ ಪಡೆಯಿತು.

ಲೂಸ್ ಮಾದ ಖ್ಯಾತಿಯ ಯೋಗೀಶ್ ತಮ್ಮ ಅಮಲುಭರಿತ ಶಾರೀರದಲ್ಲಿ ನಟ ಧನುಷ್ ಕುರಿತು ಹೇಳಿದ್ದು ಹೀಗೆ: `ನಾನು ಧನುಷ್ ಫ್ಯಾನ್, ನನಗಿಂತ ನಮ್ಮಮ್ಮ ಇವರ ದೊಡ್ಡ ಫ್ಯಾನ್. ಕನ್ನಡಿಗರು ನನ್ನನ್ನು ಕೂಡ ಕನ್ನಡದ ಧನುಷ್ ಎಂದು ಕರೆಯುತ್ತಾರೆ. ನಾನು ಧನುಷ್ ಚಿತ್ರಗಳನ್ನು ರಿಮೇಕ್ ಮಾಡಿದ್ದೇನೆ. ನಾನು ಇದೇ ಮೊದಲ ಬಾರಿಗೆ ಧನುಷ್ ಅವರನ್ನು ನೋಡಿದ್ದು... ನಮಸ್ಕಾರ~.

`ಧನುಷ್ ನನ್ನ ಆತ್ಮೀಯ ಗೆಳೆಯ. ಆತ ಬೆಂಗಳೂರಿಗೆ ಬಂದಿರುವುದು ನಂಗೆ ಖುಷಿ ತಂದಿದೆ. ನಾನು ಮತ್ತು ಧನುಷ್ ಸಿನಿಮಾದಲ್ಲಿ ನಟಿಸಿದ್ದೇವೆ. ಹಿ ಈಸ್ ಜಂಟಲ್‌ಮನ್~ ಎಂದರು ನಟಿ ರಮ್ಯಾ. ಇವರ ಮಾತಿನ ನಡುವೆಯೇ ಬೆಂಗಳೂರಿನಲ್ಲಿರುವ ಧನುಷ್ ಅಭಿಮಾನಿ ಸಂಘದವರು ಹಾರ ತುರಾಯಿ ಹಿಡಿದು ಧನುಷ್ ಅವರನ್ನು ಸುತ್ತಿಕೊಂಡರು.

ಇವರ ಮಧ್ಯೆ ಪ್ರೇಕ್ಷಕರ ಗ್ಯಾಲರಿಯಿಂದ ಎದ್ದು ಬಂದ ಹುಡುಗಿಯೊಬ್ಬಳು, `ನಾನು ನಿಮ್ಮ ಅಭಿಮಾನಿ ಐ ಲವ್ ಯೂ ಧನುಷ್~ ಎಂದಳು. ಮತ್ತ್ಯಾರೋ ಕೆಲವರು ಮಕ್ಕಳನ್ನು ಎತ್ತಿಕೊಂಡು ಬಂದು ಧನುಷ್‌ಗೆ ಶೇಕ್‌ಹ್ಯಾಂಡ್ ಕೊಡಲು ಮುಂದಾದರು. ಪೆಚ್ಚುನಗೆ ನಗುತ್ತಾ ಎಲ್ಲವನ್ನೂ ಧನುಷ್ ಸಹಿಸಿಕೊಂಡರು.

ಬಹು ನೀರಿಕ್ಷಿತ ಚಿತ್ರ `ಥ್ರೀ~ ಸಿನಿಮಾ ಪ್ರಮೋಷನ್‌ಗೆಂದು ಬೆಂಗಳೂರಿಗೆ ಬಂದಿದ್ದ ಧನುಷ್ ರಾತ್ರಿ ಹತ್ತು ಗಂಟೆಗೆ ಬಂದು ಹತ್ತು ನಿಮಿಷ ಮಾತ್ರ ವೇದಿಕೆ ಮೇಲೆ ಇದ್ದರು (ಕೊಲವೆರಿ ಡಿ ಹಾಡನ್ನು ರಚಿಸಲು ತೆಗೆದುಕೊಂಡ ಸಮಯ ಕೂಡ ಹತ್ತು ನಿಮಿಷ).
 
ಎರಡು ಬಾರಿ ಕೊಲವೆರಿ ಡಿ ಹಾಡು ಹಾಡಿದ್ದು ಬಿಟ್ಟರೆ, ಅವರು ಬೆಂಗಳೂರಿಗೆ ಯಾಕೆ ಬಂದದ್ದು, ಏನು ಹೇಳಿದ್ದು ಎಂಬುದು ಯಾರಿಗೂ ತಿಳಿಯಲಿಲ್ಲ. ಕೊನೆಗೂ ಅದು ಚಿದಂಬರ ರಹಸ್ಯವಾಗಿಯೇ ಉಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT