ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತುವಾರಿ ಸಚಿವಗೆ ನಗರ ಸಮಸ್ಯೆ ದರ್ಶನ

Last Updated 16 ಏಪ್ರಿಲ್ 2011, 7:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವ್ಯವಸ್ಥಿತವಾಗಿ ಕುಡಿಯುವ ನೀರು ಬಿಡುತ್ತಿಲ್ಲ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲ. ರಸ್ತೆಗಳು ಅಭಿವೃದ್ಧಿ ಕಂಡಿಲ್ಲ, ಚರಂಡಿಗಳು ಗಬ್ಬು ನಾರುತ್ತಿವೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಇಲ್ಲ, ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಕಳಪೆ...

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರು ಬಿಚ್ಚಿಟ್ಟ ಸಮಸ್ಯೆಗಳ ಮೂಟೆ ಇದು.
‘ನಗರದಲ್ಲಿ ಏನೂ ಸರಿಯಾಗಿಲ್ಲ’ ಎಂದೇ ಮಾತು ಪ್ರಾರಂಭಿಸಿದ ಷಡಕ್ಷರಿ, ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಚಿವರು ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಸೂಕ್ತ. ರಸ್ತೆಗಳು ದುರಸ್ತಿ ಕಾಣದಾಗಿವೆ. ನಗರದ ಸೌಂದರ್ಯ ಹೆಚ್ಚಿಸಬೇಕಾದ ಕೆರೆಗಳು ಅಳುತ್ತಿವೆ. ಬೀದಿ ದೀಪಗಳು ನಿರ್ವಹಣೆ ಇಲ್ಲದೆ ಕಂಗಾಲಾಗಿವೆ. ಈ ಊರಿನಲ್ಲಿ ಪ್ರತಿಭಟಿಸುವ ಕೆಚ್ಚೇ ಇಲ್ಲದ ಮನುಷ್ಯರು ವಾಸವಾಗಿದ್ದಾರೇನೋ ಏಂಬ ಭಾವನೆ ಉಂಟಾಗಿದೆ ಎಂದರು.

ರತ್ನಗಿರಿ ಬೋರೆ ಬಡಾವಣೆಯಲ್ಲಿ ನಿರ್ಮಿಸಿರುವ ಚರಂಡಿ ಕಾಮಗಾರಿಗೆ ‘ತಲೆ ಇಲ್ಲ, ಬಾಲ ಇಲ್ಲ’. ಪ್ಲಾಸ್ಟಿಕ್‌ಗಳ ರಾಶಿ ಎಲ್ಲೆಡೆ ಕಣ್ಣಿಗೆ ರಾಚುತ್ತದೆ. ವಿಲೇವಾರಿ ಸಮರ್ಪಕವಾಗಿಲ್ಲ. ವಾರಕ್ಕೊಮ್ಮೆ ಕುಡಿಯುವ ನೀರು ನೀಡಲಾಗುತ್ತಿದೆ ಎಂದು ಅಲ್ಲಿನ ವಾಸಿ ಶ್ರೀಹರಿ ತಿಳಿಸಿದರು.

ಐ.ಜಿ.ರಸ್ತೆ ವಿಸ್ತರಣೆ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ. ರತ್ನಗಿರಿ ರಸ್ತೆ ವಿಸ್ತರಣೆಗೆ ಹಾಕಿರುವ ಗುರುತು ತಾರತಮ್ಯ ರೀತಿಯಲ್ಲಿದೆ ಎಂದು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಅನಿಲ್ ಕುಮಾರ್ ದೂರಿದರು.

ನಗರದ ಕೊಳಚೆ ನೀರು ಯಗಚಿ ನದಿ ಸೇರುತ್ತಿದೆ. ಅದೇ ಹಿನ್ನೀರಿನಿಂದಲೇ ನಗರಸಭೆ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. ಕೊಳಕು ನೀರು ಕುಡಿಯುವನ್ನು ತಪ್ಪಿಸಬೇಕು. ಮುಗುಳುವಳ್ಳಿ ಬಳಿ ನಿರ್ಮಿಸಿರುವ ವಿದ್ಯುತ್ ಪರಿವರ್ತಕ ಘಟಕದ ಕಾಮಗಾರಿ ಪೂರ್ಣ ಗೊಳಿಸಿ ವಿದ್ಯುತ್ ಸಮಸ್ಯೆ ನಿವಾರಿಸಬೇಕೆಂದು ಬಸವನಹಳ್ಳಿಯ ಜಿ.ವಿ.ಚೂಡನಾಥ ಅಯ್ಯರ್ ಸಲಹೆ ನೀಡಿದರು.

ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಇಲ್ಲದೆ ಬಡರೋಗಿಗಳು ಪ್ರತಿನಿತ್ಯ ಪಡುತ್ತಿರುವ ಬವಣೆ ತಪ್ಪಿಸಿ ಎಂದು ಯುವಕ ಸಂಘದ ಷಹಬುದ್ದೀನ್ ಕೋರಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮನೆ ನಿರ್ಮಿಸಿಕೊಳ್ಳಲು ನಗರಸಭೆಯಿಂದ ನೀಡುತ್ತಿದ್ದ ಅನುದಾನವನ್ನು ಮುಂದುವರಿಸಬೇಕೆಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಒತ್ತಾಯಿಸಿದರು.

ನಗರದಲ್ಲಿ ಒತ್ತುವರಿಯಾಗಿರುವ ಉದ್ಯಾ ನವನವನ್ನು ತೆರವು ಗೊಳಿಸಬೇಕು. ಚರಂಡಿ ನಿರ್ಮಿಸುವಾಗ ತೆಗೆದ ಕಲ್ಲುಗಳ ನಾಪತ್ತೆಯಾಗಿವೆ. ಕೂಡಲೇ ಈ ಕುರಿತು ತನಿಖೆ ನಡೆಸಬೇಕೆಂದು ಡಿಎಸ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಯ್ಯ ಆಗ್ರಹಿಸಿದರು.

ಅಂಬೇಡ್ಕರ್ ಭವನಕ್ಕೆ ನೀಡಿರುವ ಸಾಮ ಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕೆ.ಕುಮಾರ್ ಒತ್ತಾಯಿಸಿದರು.

ನಗರಸಭೆಯಲ್ಲಿ ಗುತ್ತಿಗೆ ನಿರ್ವಹಿಸಲು ನೋಂದಣಿಗೆ ಅರ್ಜಿ ಸಲ್ಲಿಸಿ ಎರಡು ತಿಂಗಳಾಗಿದೆ. ಯಾವುದೆ ಪ್ರಯೋಜವಾಗಿಲ್ಲ ಎಂದು ಮಹಿಳೆ ಶಕುಂತಲಾ ನೊಂದು ನುಡಿದರು. ಜಯನಗರ ಬಡಾವಣೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಚಂದ್ರಶೇಖರ್ ಹೇಳಿದರು.

ವಾರ್ಡ್‌ನಂಬರ್ 12ರಲ್ಲಿ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿವೆ ಎಂದು ವಾಸಿಂ ತಿಳಿಸಿದರು. ಚರಂಡಿಗಳೆಲ್ಲ ಕೆಸರಿನಿಂದ ಕೂಡಿವೆ. ಸೊಳ್ಳೆಗಳ ಆಗರವಾಗಿವೆ ಎಂದು ರೈತ ಸಂಘದ ರಾಜಶೇಖರಪ್ಪ ಕಿಡಿಕಾರಿದರು. ನಗರದಲ್ಲಿ ಕೆರೆಗಳಿಗೆ ವ್ಯಯಿಸಿರುವ ಮೊತ್ತದ ಸಮಗ್ರ ಮಾಹಿತಿ ನೀಡುವಂತೆ ಎಚ್.ಎಂ.ರೇಣುಕಾರಾಧ್ಯ ಒತ್ತಾಯಿಸಿದರು.

ಯಗಚಿ ಯೋಜನೆ ಕುಡಿಯುವ ನೀರು ನಗರಸಭೆಗೆ ಬಿಳಿಯಾನೆಯಾಗಿದೆ ಎಂದು ನಗರಸಭಾ ಸದಸ್ಯ ಶ್ರೀಧರ ಉರಾಳ್ ಸಚಿವರಿಗೆ ತಿಳಿಸಿದರೆ, ಮೋಟಾರ್ ದುರಸ್ತಿ ನೆಪದಲ್ಲಿ ಹಣ ದುರುಪಯೋಗವಾಗುತ್ತಿದೆ ಎಂದವರು ನಗರಸಭಾ ಸದಸ್ಯ ಸಂದೀಪ್. ಹಲವು ವರ್ಷಗಳಿಂದ ನಗರಸಭೆಯಲ್ಲಿ ಬೇರುಬಿಟ್ಟಿರುವ ಅಧಿಕಾರಿ ಮತ್ತು ನೌಕರರನ್ನು ವರ್ಗಾವಣೆ ಮಾಡುವಂತೆ ಎಚ್.ಎನ್.ಮಂಜಯ್ಯ ಆಗ್ರಹಿಸಿದರು.

ಆಜಾದ್ ಮೈದಾನದಲ್ಲಿ ತಳ್ಳುಗಾಡಿ ಗಳನ್ನಿಟ್ಟುಕೊಂಡು ಜೀವನ ನಡೆಸಲು ಅವಕಾಶಮಾಡಿಕೊಡಿ ಎಂದು ಬಾಬು ಮನವಿ ಮಾಡಿದರು.
ಹಿರೇಮಗಳೂರಿನಲ್ಲಿರುವ ಹೊಂಡವನ್ನು ಕೊಳವಾಗಿ ಪರಿವರ್ತಿಸಬೇಕೆಂದು ಜಗದೀಶ್ ತಿಳಿಸಿದರು. ಪ್ರತಿವಾರ್ಡಿನಲ್ಲಿ 2 ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸುವುದು ಸೂಕ್ತವೆಂದು ಉಪ್ಪಳ್ಳಿಯ ದಾವೂದ್ ಸಲಹೆ ನೀಡಿದರು. ದೇವರಾಜಶೆಟ್ಟಿ, ಜಯರಾಮ್, ಮಂಜುನಾಥ ಜೋಷಿ, ರಾಮನಹಳ್ಳಿ ಕುಮಾರ್ ಮಾತನಾಡಿದರು.

‘ನಗರಸಭೆ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ’
 ಚಿಕ್ಕಮಗಳೂರು: ನಗರದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನೊಳಗೊಂಡ ಫಲಕ ಅಳವಡಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಎಚ್ಚರಿಸಿದರು.

ನಗರಸಭೆ ಆವರಣದಲ್ಲಿ ಶುಕ್ರವಾರ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ನಂತರ ಅವರು ಮಾತನಾಡಿದರು.
ನಗರದಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಉಳಿಸಿಕೊಳ್ಳಲು ಹೆಚ್ಚು ಗಮನಹರಿಸಲಾಗುವುದು. ನಗರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ನಗರಸಭೆ ಸಿಬ್ಬಂದಿ ಕೊರತೆ ನೀಗಿಸುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು. ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ನೇಮಕಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ನಗರಸಭೆಯಲ್ಲಿ ಆದಾಯ ಕಡಿಮೆಯಾಗಿದೆ- ಖರ್ಚು ಹೆಚ್ಚಾಗಿದೆ. ಕೆಲವು ಭಾಗದಲ್ಲಿ ಬಡಾವಣೆ ನಿರ್ಮಿಸುವಾಗ ಮೂಲಸೌಕರ್ಯ ಕಲ್ಪಿಸಿಲ್ಲ. ಹಾಗಾಗಿ ನಗರಸಭೆಯೇ ಲಕ್ಷಾಂತರ ರೂಪಾಯಿ ವ್ಯಯಿಸಿ ರಸ್ತೆ, ಚರಂಡಿ ನಿರ್ಮಿಸುತ್ತಿದೆ ಎಂದರು.

ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ. ಅಂದಾಜುಪಟ್ಟಿಯಂತೆ ಕೆಲಸಗಳಾಗದಿದ್ದರೆ ಯಾವುದೇ ಏಜೆನ್ಸಿಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಭ್ಯಂತರವಿಲ್ಲ ಎಂದರು. ಇದೇ ಸಂದರ್ಭದಲ್ಲಿ ಅವರು ಬಸವನಹಳ್ಳಿಕೆರೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ನೀಡಿದರು.

ನಗರಸಭೆ ಅಧ್ಯಕ್ಷ ಡಿ.ಕೆ.ನಿಂಗೇಗೌಡ, ಉಪಾಧ್ಯಕ್ಷೆ ಯಶೋಧಾ, ಜಿಲ್ಲಾಧಿಕಾರಿ ಎನ್.ಎಸ್. ಚನ್ನಪ್ಪಗೌಡ, ನಗರಸಭೆ ಸದಸ್ಯರಾದ ಎಚ್.ಡಿ.ತಮ್ಮಯ್ಯ, ಪ್ರೇಮ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT