ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತುವಾರಿ ಸಮಿತಿಯ ಸೂಚನೆ ಪಾಲನೆ ಇಲ್ಲ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸಂಕಷ್ಟ ಪರಿಸ್ಥಿತಿ ಇದೆ~ ಎಂದು ಒಪ್ಪಿಕೊಂಡಿರುವ `ಕಾವೇರಿ ಉಸ್ತುವಾರಿ ಸಮಿತಿ~ಯು (ಸಿಎಂಸಿ), ಅಕ್ಟೋಬರ್ 16ರಿಂದ 31ರೊಳಗೆ ಬಿಳಿಗುಂಡ್ಲುವಿಗೆ 8.85ಟಿಎಂಸಿ ಅಡಿ ನೀರು ಹರಿಯಬೇಕೆಂದು ಗುರುವಾರ ಹೇಳಿದೆ. ಆದರೆ, ಜಲಾಶಯಗಳಿಂದಲೇ ಬಿಡಬೇಕು ಅಥವಾ ದಿನನಿತ್ಯ ಇಂತಿಷ್ಟೇ ಪ್ರಮಾಣದಲ್ಲೇ ನೀರು ಹರಿಸಬೇಕೆಂಬ ಷರತ್ತುಗಳನ್ನು ಹಾಕಿಲ್ಲ. ಇದರಿಂದ ಕರ್ನಾಟಕ ಸದ್ಯಕ್ಕೆ ನೆಮ್ಮದಿಯಾಗಿದೆ.

ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಡಿ.ವಿ. ಸಿಂಗ್ ನೇತೃತ್ವದ `ಸಿಎಂಸಿ~ ಸಭೆ, ಅ.16ರಿಂದ ಅ.31ರವರೆಗೆ 8.85ಟಿಎಂಸಿ ನೀರು ಬಿಳಿಗುಂಡ್ಲುವಿಗೆ ಹರಿಸಬೇಕೆಂದು ತೀರ್ಮಾನಿಸಿತು.

ಕರ್ನಾಟಕ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ತಮಿಳುನಾಡು ಮುಖ್ಯ ಕಾರ್ಯದರ್ಶಿ ದೇವೇಂದ್ರನಾಥ್ ಸಾರಂಗಿ, ಪುದುಚೇರಿ ಮುಖ್ಯ ಕಾರ್ಯದರ್ಶಿ ಸತ್ಯವತಿ ಹಾಗೂ ಕೇರಳ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಲತಿಕಾ ಭಾಗವಹಿಸಿದ್ದರು. `ಸಿಎಂಸಿ~ ಸಭೆ ಬಳಿಕ ಡಿ.ವಿ. ಸಿಂಗ್, ಪ್ರಧಾನಿ ಕಚೇರಿಗೆ ಸಭೆಯ ತೀರ್ಮಾನ ವಿವರಿಸಿದರು.

 `ಸದ್ಯದ ಸ್ಥಿತಿಯಲ್ಲಿ ರಾಜ್ಯದ ಜಲಾಶಯಗಳಿಂದ ನೀರು ಬಿಡುವುದು ಅಸಾಧ್ಯ~ ಎಂದು ಕರ್ನಾಟಕ ಖಡಾಖಂಡಿತವಾಗಿ ಹೇಳಿತು. 

 `ನೀವು ಹೇಗಾದರೂ ಮಾಡಿ. ಈ ತಿಂಗಳ ಅಂತ್ಯದೊಳಗೆ ಬಿಳಿಗುಂಡ್ಲುವಿಗೆ 8.85ಟಿಎಂಸಿ ಅಡಿ ನೀರು ಹರಿಯುವಂತೆ ನೋಡಿಕೊಳ್ಳಿ~ ಎಂದು ಸಿಎಂಸಿ ಅಧ್ಯಕ್ಷರು ಸೂಚಿಸಿದರು ಎಂದು ಅಧಿಕೃತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಈಶಾನ್ಯ ಮಾರುತ ಆರಂಭವಾದರೆ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳ ಕೆಳಗಿನ ಪ್ರದೇಶದಿಂದ (ಜಲಾಶಯದ ಹೊರಗಿನ ಪ್ರದೇಶ) ನೀರು ಬಿಳಿಗುಂಡ್ಲುವಿಗೆ ಸಹಜವಾಗಿ ಹರಿದು ಹೋಗಲಿದೆ. 2002-03ರಲ್ಲಿ ಇದಕ್ಕಿಂತ ಸಂಕಷ್ಟದ ಪರಿಸ್ಥಿತಿ ಇದ್ದಾಗಲೇ ಸುಮಾರು 28 ಟಿಎಂಸಿ ಅಡಿ ನೀರು ಬಿಳಿಗುಂಡ್ಲುವಿಗೆ ಹರಿದು ಹೋಗಿದೆ. ಸರಿಯಾದ ಒಂದು ಮಳೆ ಬಂದರೆ ಸಾಕು. ಎಲ್ಲ ಸಮಸ್ಯೆ ಪರಿಹಾರವಾಗುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸಂಕಷ್ಟ ಹಂಚಿಕೆಗೆ ಸೂಚನೆ: ಕಾವೇರಿ ಕೊಳ್ಳದ ಜಲಾಶಯಗಳ ಸಂಗ್ರಹ, ಬೆಳೆ ಸ್ಥಿತಿಗತಿ ಕುರಿತು ಪರಿಶೀಲಿಸಲು ಈಚೆಗೆ ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಿದ್ದ ಜಲ ಸಂಪನ್ಮೂಲ ಕಾರ್ಯದರ್ಶಿಗಳ ನೇತೃತ್ವದ ಪರಿಣತರ ತಂಡ ಎರಡೂ ರಾಜ್ಯಗಳಲ್ಲೂ ಸಂಕಷ್ಟದ ಪರಿಸ್ಥಿತಿ ಇದೆ ಎಂದು ಹೇಳಿದೆ. ಕರ್ನಾಟಕದ ಜಲಾಶಯಗಳಲ್ಲಿ ಶೇ 41ರಷ್ಟು ಹಾಗೂ ತಮಿಳುನಾಡಿನ ಜಲಾಶಯದಲ್ಲಿ ಶೇ18ರಷ್ಟು ನೀರಿನ ಕೊರತೆ ಇದೆ.

ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳು ಸಂಕಷ್ಟವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಭೆ ಸೂಚಿಸಿದೆ.
 ಕರ್ನಾಟಕ ಜೂನ್‌ನಿಂದ ಅಕ್ಟೋಬರ್‌ವರೆಗೆ ಬಿಡಬೇಕಾಗಿರುವ ನೀರನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿಲ್ಲ. ಇನ್ನೂ ಬಾಕಿ (ಬ್ಯಾಕ್‌ಲಾಗ್) ಉಳಿಸಿಕೊಂಡಿದೆ. ಈ ಬಾಕಿ ಬಿಡುವಂತೆ ಸೂಚಿಸಬೇಕೆಂಬ ತಮಿಳುನಾಡು ಬೇಡಿಕೆಗೆ `ಸಿಎಂಸಿ~ ಕಿವಿಗೊಡಲಿಲ್ಲ.

ಈ ವಿಷಯ ಸುಪ್ರೀಂಕೋರ್ಟ್ ಮುಂದಿದ್ದು ಅಲ್ಲೇ ಬಗೆಹರಿಸಿಕೊಳ್ಳಬೇಕೆಂದು ಸಲಹೆ ಮಾಡಿದೆ. `ಕಾವೇರಿ ಉಸ್ತುವಾರಿ ಸಮಿತಿ~ಯು, ಕರ್ನಾಟಕದಿಂದ ಹರಿದಿರುವ ನೀರು ಹಾಗೂ ಮಳೆ ಪರಿಸ್ಥಿತಿ ಕುರಿತು ಪರಿಶೀಲಿಸಲು ಅ.29ರಂದು ಪುನಃ ಸಭೆ ಸೇರಲಿದೆ.

`ಕರ್ನಾಟಕದ ಕಾವೇರಿ ಜಲಾಶಯಗಳಲ್ಲಿ 52ಟಿಎಂಸಿ ಅಡಿ ಸಂಗ್ರಹವಿದೆ. ಇನ್ನೂ 58ಟಿಎಂಸಿ ಅಡಿ ಸಂಗ್ರಹವಾಗುವ ನಿರೀಕ್ಷೆಯಿದೆ. ನೀರಾವರಿ ಹಾಗೂ ಕುಡಿಯುವ ಅಗತ್ಯ ಪೂರೈಸಲು ಇಷ್ಟು ನೀರು (110 ಟಿಎಂಸಿ) ಅಗತ್ಯವಿದೆ~ ಎಂದು ರಾಜ್ಯಕ್ಕೆ ಭೇಟಿ ನೀಡಿದ್ದ ಪರಿಣತರ ತಂಡ ಅಭಿಪ್ರಾಯಪಟ್ಟಿದೆ~.  ರಾಜ್ಯದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಸಭೆಗೆ ಖಚಿತಪಡಿಸಿದ್ದಾರೆ.

ಕಾವೇರಿ ನ್ಯಾಯಮಂಡಳಿಯ 1991ರ ಮಧ್ಯಂತರ ಆದೇಶದ ಪ್ರಕಾರ ಅಕ್ಟೋಬರ್ ಕೊನೆಯ ಪಾಕ್ಷಿಕದಲ್ಲಿ 15ಟಿಎಂಸಿ ಅಡಿ, ನವೆಂಬರ್‌ನಲ್ಲಿ 16.5ಟಿಎಂಸಿ ಅಡಿ, ಡಿಸೆಂಬರ್‌ನಲ್ಲಿ 10.37 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ಸರಿಯಾಗಿ ಮಳೆ ಆಗದೆ  ಸಂಕಷ್ಟ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ಶೇ.60ರಷ್ಟು ಅಂದರೆ ಅನುಕ್ರಮವಾಗಿ 8.85, 9.47, 6.12 ಟಿಎಂಸಿ ನೀರು ಹರಿಸಬೇಕಾಗಿದೆ.

`ಸೌಹಾರ್ದ ವಾತಾವರಣದಲ್ಲಿ `ಸಿಎಂಸಿ~ ಸಭೆ ನಡೆದಿದೆ. ಎರಡೂ ರಾಜ್ಯಗಳ ಸ್ಥಿತಿಗತಿ ಕುರಿತು ಚರ್ಚೆ ಮಾಡಲಾಗಿದೆ. ಮಳೆ ಕಡಿಮೆ ಆಗಿರುವುದರಿಂದ ನೀರಿನ ಅಭಾವವಿದೆ ಎಂಬ ಸಂಗತಿಗಳು ಸಭೆಯಲ್ಲಿ ಚರ್ಚೆಯಾಯಿತು. `ನ್ಯಾಯಮಂಡಳಿ ಮಧ್ಯಂತರ ತೀರ್ಪಿನ ಅನ್ವಯ ನೀರು ಕೊಡಿಸಿ~ ಎಂದು ತಮಿಳುನಾಡು ಒತ್ತಾಯಿಸಿತು. ಇದು ಸಾಧ್ಯವಿಲ್ಲ ಎಂದು ಕರ್ನಾಟಕ ಹೇಳಿತು.

ಎರಡೂ ರಾಜ್ಯಗಳ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು 8.85ಟಿಎಂಸಿ ಅಡಿ ನೀರು ಹರಿಸುವಂತೆ ಹೇಳಲಾಯಿತು. ಯಾರೂ ಇದಕ್ಕೆ ವಿರೋಧ ಮಾಡಲಿಲ್ಲ~ ಎಂದು ಸಿಎಂಸಿ ಅಧ್ಯಕ್ಷ ಡಿ.ವಿ.ಸಿಂಗ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT