ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟ ಮಾಡಿದ ಮೇಲೆ...

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
`ಊಟ ಬಲ್ಲವನಿಗೆ ರೋಗ ಇಲ್ಲ' ಎನ್ನುವುದು ನಾಣ್ಣುಡಿ. ಅದೇ ರೀತಿ ಊಟ ಆದ ಮೇಲೆ ಏನೇನು ಮಾಡಬೇಕು, ಯಾವ ಕೆಲಸ ಮಾಡಬಾರದು ಎಂಬುದನ್ನೂ ಕಲಿತುಕೊಂಡರೆ ಅನೇಕ ರೋಗಗಳಿಂದ ಮುಕ್ತ ಆಗಬಹುದು. 
 
ಸಾಮಾನ್ಯವಾಗಿ ಊಟ ಆದ ಮೇಲೆ ಕೆಲವರು ಕೆಲವು ಅಭ್ಯಾಸಗಳನ್ನು ಇಟ್ಟುಕೊಂಡಿರುತ್ತಾರೆ. ಅದನ್ನು ಒಳ್ಳೆಯ ಅಭ್ಯಾಸವೆಂದು ಅವರು ಭಾವಿಸಿರುತ್ತಾರೆ. ಆದರೆ ಈ ಅಭ್ಯಾಸಗಳು ಎಂತಹ ಅಡ್ಡ ಪರಿಣಾಮಗಳನ್ನು ಬೀರುತ್ತವೆ ಎಂಬುದು ಇಲ್ಲಿದೆ ನೋಡಿ.
 
ನಡೆಯುವುದು
ಊಟದ ನಂತರ ನಡೆದರೆ ಊಟ ಮಾಡಿದ್ದು ಜೀರ್ಣವಾಗಿ ಬೊಜ್ಜು ಬರುವುದಿಲ್ಲ ಎಂದು ನೀವು ಬೇರೆಯವರಿಂದ ಕೇಳಿರಬಹುದು ಅಥವಾ ಕೆಲವು ಪುಸ್ತಕಗಳಲ್ಲಿ ಓದಿರಲೂಬಹುದು. ಆದರೆ ಊಟವಾದ ತಕ್ಷಣ ನಡೆಯುವುದು ಒಳ್ಳೆಯದಲ್ಲ!
 
ಏಕೆಂದರೆ ಹೀಗೆ ಮಾಡಿದರೆ ದೇಹಕ್ಕೆ ಆಹಾರದಲ್ಲಿರುವ ಪೋಷಕಾಂಶಗಳನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಊಟ ಮಾಡಿ ಸ್ವಲ್ಪ ಹೊತ್ತಿನ ಬಳಿಕ ನಡೆಯಿರಿ. ಇದು ದೇಹಕ್ಕೆ ಚೈತನ್ಯವನ್ನೂ ನೀಡುತ್ತದೆ, ನಿಮ್ಮನ್ನು ಆರೋಗ್ಯಕರವಾಗೂ ಇರಿಸುತ್ತದೆ.
 
ಧೂಮಪಾನ
ಧೂಮಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಲೋಕಕ್ಕೇ ತಿಳಿದ ವಿಚಾರ. ಹಾಗೆಂದು ಧೂಮಪಾನಿಗಳು ಅದನ್ನೇನೂ ಬಿಟ್ಟಿಲ್ಲ. ಊಟ ಆದ ನಂತರ ಒಂದು `ದಮ್' ಎಳೆದರೆ ಅವರಿಗೇನೋ ಸಮಾಧಾನ.
 
ಆದರೆ ಧೂಮಪಾನಿಗಳೇ ನಿಮಗಿದೋ ಎಚ್ಚರಿಕೆಯ ಗಂಟೆ. ಊಟವಾದ ತಕ್ಷಣವೇ ನೀವೇನಾದರೂ ಒಂದು ಸಿಗರೇಟ್ ಅಥವಾ ಬೀಡಿ ಸೇದುವಿರೋ ಅದು 10ಕ್ಕೆ ಸಮ ಎನ್ನುವುದನ್ನು ನೆನಪಿಡಿ. 
 
ಹಣ್ಣುಸವಿಯುವುದು
ಹಣ್ಣು ಆರೋಗ್ಯಕ್ಕೆ ಅವಶ್ಯಕವಾಗಿ ಬೇಕೇ ಬೇಕು. ಹಣ್ಣನ್ನು ಹೆಚ್ಚಿಗೆ ತಿಂದಷ್ಟೂ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವ ಮಾತು ಅಕ್ಷರಶಃ ಸತ್ಯ. 
ಆದರೆ ಹಣ್ಣನ್ನು ಯಾವಾಗ ತಿನ್ನಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಊಟವಾದ ತಕ್ಷಣವೇ ಹಣ್ಣು ತಿನ್ನುವ ಅಭ್ಯಾಸ ಹಲವರಿಗೆ ಇರುತ್ತದೆ.

ಆದರೆ ನಿಮಗೆ ಗೊತ್ತೇ? ಊಟ ಆದ ತಕ್ಷಣ ಹಣ್ಣು ತಿಂದರೆ ಹೊಟ್ಟೆಯಲ್ಲಿ ಗಾಳಿ ತುಂಬಿ, ಹೊಟ್ಟೆ ದಪ್ಪಗಾಗುತ್ತದೆ. ಇದರಿಂದ ಬೊಜ್ಜು ಬೆಳೆಯುತ್ತದೆ. ಆದ್ದರಿಂದ ಊಟ ಮಾಡುವ ಒಂದು ಗಂಟೆ ಮೊದಲು ಅಥವಾ ಊಟ ಮಾಡಿ 2-3 ಗಂಟೆಯ ಬಳಿಕ ಹಣ್ಣುಗಳನ್ನು ತಿಂದರೆ ಆರೋಗ್ಯ ವೃದ್ಧಿಯಾಗುತ್ತದೆ.

ಚಹಾ ಕುಡಿಯುವುದು
ಊಟವಾದ ಬಳಿಕ ಒಂದು `ಸಿಪ್' ಚಹಾದ ಸೇವನೆ ಮನಸ್ಸಿಗೆ ಆಹ್ಲಾದ ಉಂಟು ಮಾಡುತ್ತದೆ. ಆದರೆ ಇದು ಆರೋಗ್ಯಕ್ಕೆ ಮಾರಕ. ಚಹಾದಲ್ಲಿ ಆ್ಯಸಿಡ್ ಅಂಶ ಇರುತ್ತದೆ. ಊಟವಾದ ತಕ್ಷಣ ಅದನ್ನು ಕುಡಿದರೆ ಆಹಾರದಲ್ಲಿರುವ ಪ್ರೊಟೀನ್ ಜೀರ್ಣವಾಗಲು ತೊಂದರೆ ಉಂಟಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ.
 
ಸ್ನಾನ ಮಾಡುವುದು
ಊಟ ಮಾಡಿದ ಕೂಡಲೇ ಸ್ನಾನ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಊಟ ಮಾಡಿದ ನಂತರ ಸ್ನಾನ ಮಾಡಿದಾಗ ಕೈ ಮತ್ತು ಕಾಲುಗಳಲ್ಲಿ ರಕ್ತ ಸಂಚಾರ ಹೆಚ್ಚಾಗಿ ಹೊಟ್ಟೆ ಭಾಗದಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತದೆ. ಇದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ.
ಬೆಲ್ಟ್ ಸಡಿಲಗೊಳಿಸುವುದು
 
ಹೊಟ್ಟೆ ಬಿರಿಯ ಊಟ ಮಾಡಿದಾಗ ನೀವು ಧರಿಸಿರುವ ಬೆಲ್ಟ್ ಹಿಂಸೆ ನೀಡುತ್ತದೆ ಅಲ್ಲವೇ? ಆಗ ಅದನ್ನು ಹಾಗೇ ಸ್ವಲ್ಪ ಸಡಿಲ ಮಾಡಿಕೊಳ್ಳೋಣ ಎನಿಸುತ್ತದೆ. ಹೀಗಾಗಿ ಬಹುತೇಕರು ಊಟದ ಸಮಯದಲ್ಲಿ ಬೆಲ್ಟ್ ಸಡಿಲ ಮಾಡಿಕೊಳ್ಳುತ್ತಾರೆ.
 
ಆದರೆ ಈ ರೀತಿ ಮಾಡಿದರೆ ದೊಡ್ಡ ಕರುಳು ಸ್ವಲ್ಪ ತಿರುಗಿದಂತಾಗಿ ನೋವು ಕಂಡು ಬರುವ ಸಾಧ್ಯತೆ ಇರುತ್ತದೆ. ಊಟ ಮಾಡಿದ್ದು ಹೆಚ್ಚುಕಮ್ಮಿಯಾಗಿ ಹೊಟ್ಟೆ ನೋವು ಬಂತು ಎಂದು ನೀವು ಭಾವಿಸುತ್ತೀರಿ. ಆದರೆ ಆ ನೋವಿಗೆ ಕಾರಣ ನೀವು ಬೆಲ್ಟ್ ಸಡಿಲ ಮಾಡಿಕೊಂಡಿರುವುದು ಎನ್ನುವುದು ನೆನಪಿರಲಿ.

ನಿದ್ದೆ
ಗಡದ್ದಾಗಿ ಊಟ ಮಾಡಿದ ತಕ್ಷಣ ನಿದ್ದೆ ಎಳೆಯುವುದು ಸಾಮಾನ್ಯ. ಹಾಗೆಂದು ತಕ್ಷಣವೇ ನಿದ್ದೆ ಮಾಡಿ ಬಿಟ್ಟೀರಿ ಜೋಕೆ. ಹೀಗೆ ಮಾಡಿದರೆ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ತಲೆದೋರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT