ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟದಲ್ಲಿ ನಿಜವಾಗಲೂ ಹಲ್ಲಿ ಇತ್ತೆ?

ಶಾಲಾಮಕ್ಕಳು ಅಸ್ವಸ್ಥಗೊಂಡ ಪ್ರಕರಣ
Last Updated 14 ಡಿಸೆಂಬರ್ 2012, 12:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪೆರೇಸಂದ್ರದ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಯಲ್ಲಿ ಹಲ್ಲಿ ಬಿದ್ದಿದ್ದ ಅಡುಗೆ ಸೇವಿಸಿ 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.

`ಅಡುಗೆಯನ್ನು ಪರಿಶೀಲಿಸಿದಾಗ ದೇಹ ಮತ್ತು ಬಾಲವುಳ್ಳ ಆಕೃತಿಯೊಂದು ಪತ್ತೆಯಾಗಿತ್ತು' ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ದೇವರಾಜ್ ಹೇಳಿದರೆ, `ಯಾವುದೇ ರೀತಿಯ ಹಲ್ಲಿ ಅಥವಾ ಕೀಟ ಪತ್ತೆಯಾಗಿಲ್ಲ' ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಭಕ್ತವತ್ಸಲಂ ಹೇಳುತ್ತಾರೆ. ಆದರೆ ಪ್ರೌಢಶಾಲೆಯ ಮಕ್ಕಳು ಮಾತ್ರ ಊಟದಲ್ಲಿ ಹಲ್ಲಿ ಕಂಡು ಬಂದದ್ದು ಸತ್ಯ ಎಂದು ಹೇಳುತ್ತಿದ್ದಾರೆ!

ಘಟನೆ ನಡೆದ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗೆ ಅಧಿಕಾರಿಗಳಾದ ದೇವರಾಜ್ ಮತ್ತು ಡಾ. ಭಕ್ತವತ್ಸಲಂ ಅವರು ಭೇಟಿ ನೀಡಿದ್ದರು. ಆಕೃತಿಯೊಂದು ಪತ್ತೆಯಾಗಿರುವ ಕುರಿತು ಒಬ್ಬರು ಹೇಳಿದರೆ, ಅಡುಗೆಯಲ್ಲಿನ ಅಂಶಗಳನ್ನು ಪರೀಕ್ಷಿಸಲು ಅದನ್ನು ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಹೇಳಿದರು. ಊಟದಲ್ಲಿ ಯಾವುದೇ ರೀತಿಯ ಸಮಸ್ಯೆಯೂ ಇಲ್ಲ ಎಂದು ಹೇಳಲಾಗಿತ್ತು. ಆದರೆ 70ಕ್ಕೂ ಹೆಚ್ಚು ಮಕ್ಕಳಲ್ಲಿ ದಿಢೀರ್‌ನೇ ಹೊಟ್ಟೆನೋವು, ಹೊಟ್ಟೆಯುರಿ ಕಾಣಿಸಿಕೊಂಡಿದ್ದು ಮತ್ತು ವಾಂತಿ ಮಾಡಿಕೊಂಡಿದ್ದು ಹೇಗೆ ಎಂಬುದರ ಬಗ್ಗೆ ಯಾರು ಸಹ ಉತ್ತರಿಸಲಿಲ್ಲ.

ಅಸ್ವಸ್ಥ ಮಕ್ಕಳ ಆರೋಗ್ಯ ವಿಚಾರಿಸಲು ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ್ದ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳ ಸಮಿತಿ ಸದಸ್ಯ ರಾಘವೇಂದ್ರ ಹನುಮಾನ್, `ವಸತಿಪ್ರೌಢಶಾಲೆಗಳಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಯಾರೂ ಸಹ ಗಂಭೀರವಾಗಿ ಆಲೋಚನೆ ಮಾಡುತ್ತಿಲ್ಲ. ವಸತಿ ಪ್ರೌಢಶಾಲೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮತ್ತು ಮಕ್ಕಳಿಗೆ ಸರಿಯಾಗಿ ನೋಡಿಕೊಳ್ಳುವ ಕುರಿತು ಯಾರು ಸಹ ಸರಿಯಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ. ಇದರ ಕುರಿತು ಪದೇ ಪದೇ ಎಚ್ಚರಿಸಿದರೂ ಯಾವುದೇ ರೀತಿಯಲ್ಲೂ ಪ್ರಯೋಜನವಾಗಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದರು.

`ಅಡುಗೆಯನ್ನು ಪರೀಕ್ಷಿಸಿರುವ ಬೆಂಗಳೂರಿನ ಸಾರ್ವಜನಿಕ ಆರೋಗ್ಯ ಸಂಸ್ಥೆಯ (ಪಿಎಚ್‌ಐ) ತಜ್ಞರು ಅಡುಗೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಹಲ್ಲಿ ಅಥವಾ ಕೀಟ ಕಂಡು ಬಂದಿಲ್ಲ. ಹೀಗಿದ್ದರೂ ಮಕ್ಕಳು ಹೇಗೆ ಅಸ್ವಸ್ಥರಾದರು ಎಂಬುದು ಗೋಜಲುಮಯವಾಗಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿದ ನಂತರವಷ್ಟೇ ಸತ್ಯಾಂಶ ಬೆಳಕಿಗೆ ಬರಲಿದೆ' ಎಂದು ಡಾ. ಭಕ್ತವತ್ಸಲಂ ತಿಳಿಸಿದರು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ದೇವರಾಜ್, `ದೇಹ ಮತ್ತು ಬಾಲವುಳ್ಳ ಆಕೃತಿಯೊಂದು ಪತ್ತೆಯಾಗಿತ್ತು ಎಂಬುದು ತಿಳಿದು ಬಂದಿತ್ತು. ಆದರೆ ಈಗ ಅದು ಇಲ್ಲವೇ ಇಲ್ಲ ಎನ್ನುತ್ತಿರುವುದು ಅಚ್ಚರಿ ಉಂಟು ಮಾಡಿದೆ. ಪ್ರಕರಣದ ಪ್ರಾಥಮಿಕ ಹಂತದ ತನಿಖೆಯಲ್ಲಿ ಇದು ಪ್ರೌಢಶಾಲೆಯ ಅಡುಗೆ ನೌಕರರದ್ದೇ ಕೃತ್ಯ ಎಂಬುದು ಬೆಳಕಿಗೆ ಬಂದಿದೆ' ಎಂದರು.

`ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿಪ್ರೌಢಶಾಲೆಯ ಪ್ರಾಂಶುಪಾಲರಿಗೆ ನೋಟಿಸ್ ಹೊರಡಿಸಲಾಗಿದೆ. ಈಗಿರುವ ಅಡುಗೆ ನೌಕರರನ್ನು ವಜಾಗೊಳಿಸಿ, ಹೊಸಬರನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ. ಪ್ರಕರಣದ ಸತ್ಯಾಂಶ ಬೆಳಕಿಗೆ ಬರುವವರೆಗೆ ತನಿಖೆ ಮುಂದುವರೆಸಲಾಗುವುದು' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT