ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರ ಮಗನಿಗೆ ಅಂತಿಮ ವಿದಾಯ

Last Updated 6 ಆಗಸ್ಟ್ 2011, 3:30 IST
ಅಕ್ಷರ ಗಾತ್ರ

ಮಹಾಲಿಂಗಪುರ: ಅಪಘಾತವೊಂದರಲ್ಲಿ ಸಾವಿಗೀಡಾದ  ಆಸ್ಸಾಂ ವಲಯದ ಸೇನೆಯಲ್ಲಿದ್ದ ಯೋಧ ಸಿದ್ದಪ್ಪ ಕುಂಬಾರ (28)  ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಇಲ್ಲಿಗೆ ಸಮೀಪದ ರನ್ನ ಬೆಳಗಲಿಯ ಮಹಾಲಿಂಗೇಶ್ವರ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ನೆರವೇರಿತು.

ಆಸ್ಸಾಂದಿಂದ ಬೆಂಗಳೂರು ಮಾರ್ಗವಾಗಿ ರನ್ನಬೆಳ ಗಲಿಗೆ ಯೋಧನ ಪಾರ್ಥಿವಶರೀರ ಆಗಮಿಸಿತು. ಯೋಧನೆ ಸಾವಿನ ಹಿನ್ನೆಲೆಯಲ್ಲಿ ಗ್ರಾಮ ಶೋಕ ಸಾಗರದಲ್ಲಿ ಮುಳುಗಿತ್ತು.  ಗ್ರಾಮದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
 
ಪುತ್ರ ಸಿದ್ದಪ್ಪನ ಅಗಲಿಕೆಯಿಂದಾಗಿ  ತಂದೆ ಕೆಂಚಪ್ಪ, ತಾಯಿ ಶಂಕರೆಮ್ಮ, ಪತ್ನಿ ಶಾಂತಾ, ಸಹೋದರ , ಅಜ್ಜ, ಅಜ್ಜಿ ಹಾಗೂ ಕುಟುಂಬ ವರ್ಗದವರ ರೋದನ ಮುಗಿಲು ಮುಟ್ಟಿತ್ತು. ರಕ್ಷಣಾ ಪಡೆಯ ಸುಬೇದಾರ ರೇವಣಸಿದ್ದಪ್ಪ,  ಮಧುಕರ ಪಾಟೀಲ, ಮಹಾಲಿಂಗಪುರ ಠಾಣಾಧಿಕಾರಿ ಆರ್.ಆರ್. ಪಾಟೀಲ, ಕಮಾಂಡೋ ಪಡೆಯ ಸೈನಿಕರು  ಎರಡು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು.

2003ರಲ್ಲಿ ಸೇನೆ  ಸೇರಿದ್ದ ಸಿದ್ದಪ್ಪ ಕುಂಬಾರ ಮೊದಲ ಒಂದು ವರ್ಷ ಬೆಂಗಳೂರಿನಲ್ಲಿ ತರಬೇತಿ ಪಡೆದು ಸಿಕಂದರಾಬಾದ,  ನಂತರ ಆಸ್ಸಾಂಗೆ ವರ್ಗವಾಗಿದ್ದರು.  ಸಿದ್ದಪ್ಪನ ಕುಟುಂಬ ಕೇವಲ 30 ಗುಂಟೆ ಜಮೀನು ಹೊಂದಿದೆ. ತಂದೆ ತಾಯಿ ಇಂದಿಗೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇನ್ನೊಬ್ಬ ಸಹದೋರ  ಗಾರೆ ಕೆಲಸ ಮಾಡುತ್ತಿದ್ದಾನೆ.

ಪಿಯುಸಿ ಪ್ರಥಮ ವರ್ಷ ಪಾಸಾದ ಮೇಲೆ ಮನೆಯ ಆರ್ಥಿಕ ಪರಿಸ್ಥಿತಿ, ಕಿತ್ತು ತಿನ್ನುವ ಬಡತನದಲ್ಲಿ ಉದ್ಯೋಗವನ್ನರಸಿ ಸೈನ್ಯ ಸೇರಿದ್ದ  ಸಿದ್ದಪ್ಪ,  2009ರಲ್ಲಿ ಶಾಂತಾಳನ್ನು ಮದುವೆಯಾಗಿದ್ದ. ಅವಳೀಗ ತುಂಬು ಗರ್ಭಿಣಿ. ಅವಳ ಸ್ಥಿತಿಯನ್ನು ಕಂಡು  ಗ್ರಾಮಸ್ಥರು ಮಮ್ಮಲ ಮರುಗಿದರು.

ಅಂತ್ಯಕ್ರಿಯೆಯಲ್ಲಿ 25 ಸಾವಿರಕ್ಕೂ ಜನರು ಪಾಲ್ಗೊಂಡು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಮುಧೋಳ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಚ್. ಪಂಚಗಾವಿ, ಪಿಕೆಪಿಎಸ್ ಅಧ್ಯಕ್ಷ ಧರೆಪ್ಪ ಸಾಂಗಳೀಕರ, ಮುಧೋಳ ತಹಸೀಲ್ದಾರ ಶಂಕರಗೌಡ ಸೋಮನಾಳ, ಮುಧೋಳ ಸಿಪಿಐ ಸುರೇಶರಡ್ಡಿ. ಎಂ.ಎಸ್, ಮುಧೋಳ ತಾಲ್ಲೂಕು  ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹನುಮಂತ ಕಡಪಟ್ಟಿ,  ಸಿದ್ದಪ್ಪ ಕುಂಬಾರ ಅವರ ಬಂಧುಗಳು,  ಸಿದ್ಧಾರೂಢಮಠದ ಸಿದ್ಧರಾಮ ಸ್ವಾಮೀಜಿ ಪಾಲ್ಗೊಂಡಿದ್ದರು.

ಗ್ರಾ.ಪಂ.  ಅಧ್ಯಕ್ಷೆ ತಾಯವ್ವ ದಢೂತಿ, ಅಭಿವೃದ್ಧಿ ಅಧಿಕಾರಿ ರವಿ ಬಂಗಾರೆಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಎಲ್.ಕೆ. ಬಳಗಾನೂರ, ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ಗಿರೀಶ ಮೇತ್ರಿ, ಮಹಾಲಿಂಗಪ್ಪ ಗುಂಜಿಗಾವಿ, ಶಿವನಗೌಡ ಪಾಟೀಲ, ಸಿದ್ದಪ್ಪ ಕೊಣ್ಣೂರ, ಮಲ್ಲು ಕ್ವಾಣ್ಯಾಗೋಳ, ಹನುಮಂತ ಚಂದಪ್ಪನವರ, ಅಪ್ಪನಗೌಡ ಪಾಟೀಲ, ಸಿದ್ದಪ್ಪ ಪಾಟೀಲ, ಬಸವರಾಜ ಚಿಕ್ಕಣ್ಣವರ, ಚಿಕ್ಕಪ್ಪ ನಾಯಕ, ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಜೈನಾಥ ಸಣ್ಣಕ್ಕಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT