ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೊಂದು ಕ್ರೀಡಾಂಗಣ ಇರಲಿ: ವಿಕಾಸಗೌಡ

Last Updated 1 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಮೈಸೂರು: ಪ್ರತಿಯೊಂದು ಊರಿನಲ್ಲೂ ಕನಿಷ್ಠ ಒಂದು ಕ್ರೀಡಾಂಗಣ, ಈಜುಗೊಳ, ಕ್ರೀಡಾ ಸೌಕರ್ಯಗಳು ಇರಬೇಕು. ಆಗ ಮಾತ್ರ ಕ್ರೀಡಾಭಿವೃದ್ಧಿ ಸಾಧ್ಯ ಎಂದು ಒಲಿಂಪಿಯನ್ ವಿಕಾಸಗೌಡ ಹೇಳಿದರು.

ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, `ಅಮೆರಿಕದಲ್ಲಿ ಕ್ರೀಡಾ ಸೌಲಭ್ಯ ಗಳಿಗೆ ಕೊರತೆಯಿಲ್ಲ. ಅದೇ ರೀತಿ ಭಾರತ ದಲ್ಲಿಯೂ ಆಗಬೇಕು. ಇಲ್ಲಿ ಪ್ರತಿಭೆಗಳು ಸಾಕಷ್ಟಿವೆ. ಅವರ ಅಭ್ಯಾಸಕ್ಕೆ ತಕ್ಕ ಸೌಲಭ್ಯಗಳು ಬೇಕು. ಆರೋಗ್ಯ, ಕ್ರೀಡೆಯ ದೃಷ್ಟಿಯಿಂದ ಪ್ರತಿಯೊಂದು ಊರಿನಲ್ಲಿ. ಸಮುದಾಯಗಳಲ್ಲಿ ಈಜುಗೊಳ, ಮೈದಾನ, ಬ್ಯಾಸ್ಕೆಟ್‌ಬಾಲ್ ಅಂಕಣಗಳು ಇರಬೇಕು~ ಎಂದು ಅಭಿಪ್ರಾಯಪಟ್ಟರು.

`ಅಮೆರಿಕ ಮತ್ತು ಚೀನಾದ ಕ್ರೀಡಾ ವ್ಯವಸ್ಥೆಯಲ್ಲಿ ವ್ಯತ್ಯಾಸಗಳಿವೆ. ಅಮೆರಿಕದಲ್ಲಿ ಮುಕ್ತ ಅವಕಾಶಗಳು ಇವೆ. ಕ್ರೀಡೆಯ ಆಯ್ಕೆ, ಅಭ್ಯಾಸ, ಬೆಳವಣಿಗೆಗಳಿಗೆ ವಿಶೇಷ ರೀತಿಯ ಪ್ರೋತ್ಸಾಹಗಳು, ಸೌಲಭ್ಯಗಳು ಇವೆ. ಕ್ರೀಡಾಪಟು ತನ್ನ ನೆಚ್ಚಿನ ಆಟವನ್ನು ಆಯ್ದುಕೊಂಡು ಸಾಧನೆ ಮಾಡಲು ಸಾಧ್ಯ. ಆದರೆ ಚೀನಾದ  ಸನ್ನಿವೇಶವೇ ಬೇರೆ ತರಹ. ಅಲ್ಲಿ ಉದಾಹರಣೆ ಕೊಡುವುದಾದರೆ ಒಂದು ಬಾರಿ ಒಂದು ಸಾವಿರ ಜನರನ್ನು ಆಯ್ಕೆ ಮಾಡಿದರೆ, ಅವರನ್ನು ಕಡ್ಡಾಯವಾಗಿ ಸೂಚಿತ ಕ್ರೀಡೆಗಳಲ್ಲಿಯೇ ಅಭ್ಯಾಸ ಮಾಡಬೇಕು. ಅದೂ ಅತ್ಯಂತ ಕಠೋರವಾದ ಅಭ್ಯಾಸದ ವಿಧಾನದಲ್ಲಿ ಅವರು ಪದಕ ಗೆಲ್ಲುವ ಸಾಧನೆ ಮಾಡಬೇಕು. ಕ್ರೀಡೆಯ ನಂತರದ ಅವರ ಜೀವನ ಯಾವ ರೀತಿ ಇರುತ್ತದೆ ಎಂಬುದು ಮುಖ್ಯ~ ಎಂದು ವಿಶ್ಲೇಷಿಸಿದರು.

ಸಮುದಾಯ ಸಹಭಾಗೀತ್ವ ಮುಖ್ಯ: `ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸುವುದನ್ನು ಕಡಿಮೆ ಮಾಡಬೇಕು. ಜನರೇ ಕ್ರೀಡಾಭಿವೃದ್ಧಿ ಯತ್ತ ಗಮನ ಹರಿಸಬೇಕು. ಅಮೆರಿಕದಲ್ಲಿ ಯಾವುದೇ ಅಧಿಕಾರಿ ಅಥವಾ ಮಂತ್ರಿ ಕೆಲಸ ಮಾಡದಿದ್ದರೆ, ಮಕ್ಕಳಿಗೆ ಅನ್ಯಾಯವಾದರೆ ಜನರು ಪ್ರಶ್ನಿಸುತ್ತಾರೆ, ಪ್ರತಿಭಟನೆ ನಡೆಸುತ್ತಾರೆ. ಆದರೆ ನಮ್ಮಲ್ಲಿ ನಾವು ವೈಯಕ್ತಿಕ ಹಿತಾಸಕ್ತಿಯನ್ನು ನೋಡಿಕೊಂಡು, ನಮಗ್ಯಾಕೆ ಎಂದು ಸುಮ್ಮನೆ ಕೂರುತ್ತೇವೆ. ಅದು ತಪ್ಪು ಮತ್ತು ದೇಶದ್ರೋಹ ಎನ್ನುವುದು ನನ್ನ ಅಭಿಪ್ರಾಯ~ ಎಂದು ವಿಕಾಸಗೌಡರ ತಂದೆ ಮತ್ತು ತರಬೇತುದಾರ ಶಿವೇಗೌಡರು ಅಭಿಪ್ರಾಯಪಟ್ಟರು.

`ಅಮೆರಿಕದಲ್ಲಿ ವಿಕಾಸ್ ಓದುತ್ತಿದ್ದ ಪ್ರೌಢಶಾಲೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಪಾಲಕರು ಮತ್ತು ಆ ಪ್ರದೇಶದ ಜನರು ಸೇರಿ ಆರು ಲಕ್ಷ ಡಾಲರ್ (3 ಕೋಟಿ ರೂಪಾಯಿ) ಸೇರಿಸಿದ್ದೆವು. ಒಳ್ಳೆಯ ಟ್ರ್ಯಾಕ್ ನಿರ್ಮಾಣವಾಗಿ, ಈಗಲೂ ಬಳಕೆಯಾಗುತ್ತದೆ. ನಾವು ನೆಲೆಸಿರುವ ಫ್ರೆಡ್ರಿಕ್ ಜಿಲ್ಲೆಯಲ್ಲಿ ಸುಮಾರು ಎರಡು ಲಕ್ಷ ಜನಸಂಖ್ಯೆಯಿದೆ. ಆದರೆ 15-20 ಸುಸಜ್ಜಿತ ಕ್ರೀಡಾಂಗಣಗಳಿವೆ. ಭಾರತದಲ್ಲಿ ಈ ತರಹ ಎಲ್ಲಿದೆ. ಇಲ್ಲಿಯ ಸರ್ಕಾರಿ ಕ್ರೀಡಾಶಾಲೆಗಳು, ವಸತಿನಿಯಗಳು ನಿರಾಶ್ರಿತರ ಶಿಬಿರಗಳಂತೆ ಇವೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ದೀಪಕ್, ಉಪಾಧ್ಯಕ್ಷ ಪ್ರಗತಿ ಗೋಪಾಲಕೃಷ್ಣ, ಕಾರ್ಯದರ್ಶಿ ಸುಬ್ರಹ್ಮಣ್ಯ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT