ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರು ಹಿರಿದು, ಆದರೆ ಸೌಲಭ್ಯ ಕಿರಿದು!

Last Updated 16 ಫೆಬ್ರುವರಿ 2013, 10:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು:  ಸಖರಾಯಪಟ್ಟಣದ ಅರಸ ರುಕ್ಮಾಂಗದ ತನ್ನ ಹಿರಿಯ ಮಗಳಿಗೆ ಬಳುವಳಿಯಾಗಿ ನೀಡಿದ ಊರೇ ಹಿರೆಮಗಳೂರು! ಈಗ ಇದು ನಗರಸಭೆಯ 3ನೇ ವಾರ್ಡ್. ಹಿರೇಮಗಳೂರಿನ ಹಿನ್ನೆಲೆ ಕೆದಕಿದಾಗ ಇತಿಹಾಸ ಹಿರಿದಾಗಿ ಕಾಣಿಸುತ್ತದೆ! ಆದರೆ, ಊರಲ್ಲಿರುವ ನಾಗರಿಕ ಸೌಲಭ್ಯ ಕಿರಿದಾಗಿ ಕಾಣಿಸುತ್ತದೆ!!

ದಕ್ಷಿಣ ದಿಕ್ಕಿನಿಂದ ಚಿಕ್ಕಮಗಳೂರು ನಗರ ಪ್ರವೇಶಿಸುವವರನ್ನು ಹಿರೇಮಗಳೂರು ಹೆಬ್ಬಾಗಿಲಿನಂತೆ ಸ್ವಾಗತಿಸುತ್ತದೆ. ಇಲ್ಲಿ ಇತಿಹಾಸ ಪ್ರಸಿದ್ಧ ಕೋದಂಡರಾಮಚಂದ್ರ ಸ್ವಾಮಿ ದೇವಾಲಯವೂ ಇದೆ. ಈ ದೇಗುಲ ವರ್ಷವಿಡಿ ಯಾತ್ರಿಕರನ್ನು ಕೈಬೀಸಿ ಕರೆಯುತ್ತದೆ. ಐತಿಹಾಸಿಕ ಹಿನ್ನೆಲೆ ಊರು ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ ಎನ್ನುವ ಕೊರಗು ಸ್ಥಳೀಯರದು.

ಸುಮಾರು 500ರಿಂದ 600 ಮನೆಗಳಿವೆ. ಶೇ.90ರಷ್ಟು ರೈತರು ಮತ್ತು ಕೂಲಿಕಾರ್ಮಿಕರೇ ಇದ್ದಾರೆ. ಇಂದಿಗೂ ಈ ವಾರ್ಡ್‌ನಲ್ಲಿ ಸುಮಾರು 150 ಮನೆಗಳಲ್ಲಿ ಶೌಚಾಲಯ ಇಲ್ಲ. ರೈಲ್ವೆ ನಿಲ್ದಾಣದ ಕಡೆಗೆ ಇರುವ ಬಯಲು ಜಾಗವನ್ನೇ ಮಲವಿಸರ್ಜನೆಗೆ ಆಶ್ರಯಿಸಿದ್ದಾರೆ. ಸಾಮೂಹಿಕ ಶೌಚಾಲಯ ಕಟ್ಟಿಸಲು ಮೀಸಲಿಟ್ಟಿದ್ದ ಜಾಗವೂ ಉಳಿದಿಲ್ಲ. ಬೆಳಿಗ್ಗೆ, ಸಂಜೆ ಹೊತ್ತು ಮಹಿಳೆ, ಪುರುಷರೆನ್ನದೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಗುತ್ತಿ ಮರೆಹಿಡಿದುಕೊಂಡು ಮಲವಿಸರ್ಜನೆಗೆ ಕೂರುತ್ತಾರೆ. ವಾರ್ಡ್‌ನಲ್ಲಿ ಅನೈರ್ಮಲ್ಯ ಎದ್ದುಕಾಣುತ್ತದೆ.

ಹಿರೆಕೊಳಲೆ ಕೆರೆ ಮತ್ತು ಯಗಚಿ ಜಲಾಶಯದ ನೀರು ಈ ವಾರ್ಡ್‌ಗೆ ಬರುವ ಮೊದಲು ಪುರಾತನ ಕಾಲದಿಂದಲೂ ಸಿಹಿ ನೀರಿನ `ಚಿಲುಮೆ'ಯೇ ಇಡೀ ಹಿರೇಮಗಳೂರಿನ ಜನರ ದಾಹ ನೀಗಿಸುವ ಜೀವ ಸೆಲೆಯಾಗಿತ್ತು. ಇದು ಎಂತಹ ಕ್ಷಾಮದ ಕಾಲದಲ್ಲೂ ಬತ್ತಿರುವುದನ್ನು ನೋಡಿಯೇ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಆದರೆ, ಈಗ ಈ `ಚಿಲುಮೆ'ಯನ್ನು ಹಾಳು ಬಿಟ್ಟಿದ್ದು, ಬಯಲು ಬಹುರ್ದೆಸೆಗೆ ಹೋದವರು `...' ತೊಳೆದುಕೊಳ್ಳುವ ಮೂಲಕ ಮಲೀನ ಗೊಳಿಸುತ್ತಿದ್ದಾರೆ. ಪುರಾತನ ಕಾಲದ ಚಿಲುಮೆ ಸಂರಕ್ಷಿಸಿ, ಕುಡಿಯುವ ನೀರು ಪೂರೈಕೆಗೆ ಬಳಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಊರ ಮುಂದಿನ ಪಾತಾಳೇಶ್ವರ ದೇಗುಲ ಬಳಿ ಇದ್ದ ಐತಿಹಾಸಿಕ ಪುಷ್ಕರಣಿಯ ಜೀರ್ಣೋದ್ಧಾರವೂ ಆಗಲಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

ವಾರ್ಡ್‌ನಲ್ಲಿ ಯುಜಿಡಿ ಕೆಲಸ ನಡೆಯುತ್ತಿರುವುದರಿಂದ ಯಾವುದೇ ರಸ್ತೆಗಳ ಅಭಿವೃದ್ಧಿಗೆ ನಗರಸಭೆ ಕೈಹಾಕಿಲ್ಲ. ಕೆಲವು ಬೀದಿಗಳಲ್ಲಿ ಬಾಕ್ಸ್ ಚರಂಡಿ ಕಾಮಗಾರಿ ಆಗಿದೆ. ಆದರೆ, ಕೆಲ ಬೀದಿಗಳಲ್ಲಿ ಮನೆಗಳ ಮುಂದಿನ ಮೆಟ್ಟಿಲುಗಳು ಚರಂಡಿ ದಾಟಿ ರಸ್ತೆಗೆ ಇಳಿದಿದ್ದು, ಮೆಟ್ಟಿಲುಗಳ ತೆರವಿಗೆ ಜನರು ಅವಕಾಶ ನೀಡದೆ ಬಾಕ್ಸ್ ಚರಂಡಿ ಕಾಮಗಾರಿ ಕೈಗೊಳ್ಳುವುದು ನಗರಸಭೆಗೆ ಕಷ್ಟವಾಗಿದೆ.

ಇಡೀ ವಾರ್ಡ್‌ನಲ್ಲಿ 3 ಮಂದಿ ಮಾತ್ರ ಪೌರಸೇವಾ ನೌಕರರು ಸ್ವಚ್ಛತಾ ಕಾರ್ಯ ನಿರ್ವಹಿಸಬೇಕಿರುವುದರಿಂದ ಚರಂಡಿಗಳ ಸ್ವಚ್ಛತೆ ಹೇಳಿಕೊಳ್ಳುವಂತಿಲ್ಲ. ಕೆಲ ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ, ನಿಂತಲ್ಲೇ ಇದ್ದು ಸೊಳ್ಳೆಗಳ ಉತ್ಪತ್ತಿ ತಾಣವಾಗಿವೆ. ಇನ್ನೂ ಇಲ್ಲಿ ಕಸ ಸಂಗ್ರಹಣೆಯೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಸಿಬ್ಬಂದಿಗೆ ಸವಾಲಾಗಿದೆ. ಬಹುತೇಕ ರೈತರು, ಕೂಲಿ ಕಾರ್ಮಿಕರು ಇಲ್ಲಿ ವಾಸಿಸುತ್ತಿರುವುದರಿಂದ ಮನೆ ಪಕ್ಕದ ಜಾಗ ಅಥವಾ ಹಿತ್ತಲಿನಲ್ಲಿ ತಿಪ್ಪೆಗುಂಡಿ ಹಾಕಿಕೊಂಡಿದ್ದಾರೆ. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ತಿಪ್ಪೆಗೆ ಹಾಕುತ್ತಾರೆ. `ಗಂಟೆ ಗಾಡಿಗಳಿಗೆ ಕಸ ಕೊಡುವುದಿಲ್ಲವೆಂದ ಮೇಲೆ ಶುಲ್ಕ ಏಕೆ ಕೊಡಬೇಕು' ಎಂದು ನಿವಾಸಿಗಳು ಪ್ರಶ್ನಿಸುತ್ತಾರೆ. ಇದು ಕಸ ಸಂಗ್ರಹಿಸುವವರು ಮತ್ತು ಸ್ಥಳೀಯ ನಿವಾಸಿಗಳ ನಡುವೆ ಹಲವು ಬಾರಿ ವಾಕ್ಸಮರಕ್ಕೂ ಕಾರಣವಾಗಿದೆ. ನಗರಸಭೆ ವ್ಯಾಪ್ತಿಗೆ ಸೇರಿ ಮೂರ‌್ನಾಲ್ಕು ದಶಕಗಳೇ ಕಳೆದರೂ ಹಿರೇಮಗಳೂರಿನಲ್ಲಿ ಇನ್ನೂ ಗ್ರಾಮೀಣ ಜೀವನ ಶೈಲಿ, ಬದುಕು ಬದಲಾಗಿಲ್ಲ.

ಕಳೆದ 5 ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ಸುಮಾರು 94 ಲಕ್ಷ ರೂಪಾಯಿ ಅನುದಾನ 3ನೇ ವಾರ್ಡ್‌ಗೆ ಲಭಿಸಿದೆ. ಸುಮಾರು 16 ಕಾಮಗಾರಿಗಳು ನಡೆದಿದ್ದು, 3 ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಪೂರ್ಣಗೊಂಡಿವೆ. ಅಂಗನವಾಡಿ, ಪ್ರಾಥಮಿಕ ಶಾಲೆ, ಸಮುದಾಯ ಭವನ, ವಾಣಿಜ್ಯ ಮಳಿಗೆ  ನಿರ್ಮಿಸಲಾಗಿದೆ. 21 ಮಂದಿಗೆ ಆಶ್ರಯ ಮನೆ, 13 ಮಂದಿಗೆ ಪಕ್ಕಾ ಮನೆ, ಶೇ.18ರ ಅನುದಾನದಲ್ಲಿ 13 ಮಂದಿಗೆ `ಮಾಂಗಲ್ಯ', 80 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಮತ್ತು ವಿದ್ಯಾರ್ಥಿ ವೇತನ ಕೊಡಿಸಿದ್ದೇನೆ ಎನ್ನುತ್ತಾರೆ ವಾರ್ಡ್ ಪ್ರತಿನಿಧಿಸಿರುವ ಸದಸ್ಯ ಜಾನಯ್ಯ. 

ಆಗಬೇಕಿರುವುದು: ಸುಮಾರು 100ಕ್ಕೂ ಹೆಚ್ಚು ಫಲಾನುಭವಿಗಳಿಗೆ ಆಶ್ರಯ ಮನೆ ಸಿಗಬೇಕಿದೆ. 150ಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯ ಆಗಬೇಕಿದೆ. ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸೊಳ್ಳೆ ಕಾಟ ನಿಯಂತ್ರಿಸಬೇಕು. ಮಲಿನಗೊಂ ಡಿರುವ `ಚಿಲುಮೆ' ಸಂರಕ್ಷಿಸಿ, ಸದ್ಬಳಕೆಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯರು.

(ನಗರಸಭೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಈ ಸರಣಿ  ನಿಲ್ಲಿಸಲಾಗುತ್ತಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT