ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎ' ವರ್ಗದ ಗಣಿಗಾರಿಕೆ ಪುನರಾರಂಭಕ್ಕೆ ಒತ್ತಾಯ

Last Updated 18 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು: `ಎ' ವರ್ಗದ ಗಣಿಗಳಿಂದ ಅದಿರು ತೆಗೆಯುವ ಚಟುವಟಿಕೆ ಪುನರಾರಂಭಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಕರ್ನಾಟಕ ಕಬ್ಬಿಣ ಮತ್ತು ಉಕ್ಕು ಉತ್ಪಾದಕರ ಸಂಘ (ಕೆಐಎಸ್‌ಎಂಎ - ಕಿಸ್ಮಾ), ರಾಜ್ಯ ಸರ್ಕಾರವನ್ನು ಮಂಗಳವಾರ ಒತ್ತಾಯಿಸಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರನ್ನು ಇಲ್ಲಿ ಮಂಗಳವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ `ಕಿಸ್ಮಾ' ಅಧ್ಯಕ್ಷ ವಿನೋದ್ ನೋವಲ್, `ರಾಜ್ಯದಲ್ಲಿ ಉಕ್ಕಿನ ಉದ್ಯಮ ಅದಿರಿನ ತೀವ್ರ ಕೊರತೆ ಎದುರಿಸುತ್ತಿದೆ. ರಾಜ್ಯದ ಉಕ್ಕು ಉದ್ದಿಮೆಗಳಿಗೆ ಪ್ರತಿ ವರ್ಷ ಅಂದಾಜು 35 ದಶಲಕ್ಷ ಟನ್ ಕಬ್ಬಿಣದ ಅದಿರು ಬೇಕು. ಆದರೆ ಈಗ 15 ದಶಲಕ್ಷ ಟನ್ ಅದಿರು ಪೂರೈಕೆ ಆಗುತ್ತಿದೆ' ಎಂದು ಅವರು ತಿಳಿಸಿದರು.

ಕಡಿಮೆ ಗುಣಮಟ್ಟದ ಅದಿರನ್ನು ಈಗ ಹರಾಜಿನ ಮೂಲಕ ಖರೀದಿಸಲಾಗುತ್ತಿದೆ. ರಾಜ್ಯದ ಬಹುತೇಕ ಉದ್ದಿಮೆಗಳಲ್ಲಿ ಕಡಿಮೆ ದರ್ಜೆಯ ಅದಿರನ್ನು ಸಂಸ್ಕರಿಸುವ ತಂತ್ರಜ್ಞಾನ ಇಲ್ಲ. ಹಾಗಾಗಿ, ಬಹುತೇಕ ಉದ್ದಿಮೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಇನ್ನು ಕೆಲವು ಉದ್ದಿಮೆಗಳು ತಮ್ಮ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಆಗದ ಸ್ಥಿತಿಯಲ್ಲಿವೆ ಎಂದರು.

`ಎ' ವರ್ಗದ 13 ಗಣಿಗಳ ಪುನರಾಂಭಕ್ಕೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಉನ್ನತಾಧಿಕಾರ ಸಮಿತಿ (ಸಿಇಸಿ) ಹಸಿರು ನಿಶಾನೆ ತೋರಿದೆ. ಆದರೆ ಏಳು ಗಣಿಗಳು ಇನ್ನಷ್ಟೇ ಚಟುವಟಿಕೆ ಆರಂಭಿಸಬೇಕಿದೆ. ಈ ಗಣಿಗಳು ಭಾರತೀಯ ಗಣಿ ಬ್ಯೂರೋ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿಗೆ ಕಾಯುತ್ತಿವೆ. ರಾಜ್ಯ ಸರ್ಕಾರ ಸಂಬಂಧಪಟ್ಟ ಇಲಾಖೆಗಳ ಸಭೆಯನ್ನು ತುರ್ತಾಗಿ ಕರೆದು, ಗಣಿಗಾರಿಕೆ ಪುನರಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

`ಎ1' ವರ್ಗದ ಏಳು ಗಣಿಗಳ ಗುತ್ತಿಗೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಆದರೆ ವಿವಿಧ ವ್ಯಾಜ್ಯಗಳು ಅಡ್ಡಿಬಂದಿರುವ ಕಾರಣ, ಈ ಗಣಿಗಳಲ್ಲೂ ಚಟುವಟಿಕೆ ಆರಂಭಗೊಂಡಿಲ್ಲ. ಪ್ರಕರಣಗಳ ಇತ್ಯರ್ಥಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.

`ಬಿ' ವರ್ಗದ ಗಣಿಗಳಿಗೆ ನೀಡಬೇಕಿರುವ ಪರಿಹಾರ ನಿಗದಿ ಮಾಡಲು ಇನ್ನೂ ಸಮಿತಿ ರಚಿಸಿಲ್ಲ. `ಬಿ' ವರ್ಗದ ಗಣಿಗಳ ಆರಂಭಕ್ಕೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT