ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಪಿ ನಿಗದಿ: ಮಾರಾಟ ಮಾಯೆ!

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತಿಂಗಳ ಮನೆ ಸಾಮಾನು ತರಲು ಯಾವುದೇ ಮಾಲ್‌ಗಳಿಗೆ ಹೋಗಿ ಹೊರಬರುವಾಗ ‘ಅಬ್ಬಾ ಸಾಮಾನೆಲ್ಲ ಎಷ್ಟೊಂದು ದುಬಾರಿಯಾಗಿ ಬಿಟ್ಟಿದೆಯಪ್ಪಾ’ ಎಂದು ನೊಂದುಕೊಳ್ಳುವ ಗೃಹಿಣಿ ಮೊಗದಲ್ಲಿ ಬಿಲ್‌ನ ಕೊನೆಯ ಭಾಗ ನೋಡಿದಾಗ ಸುಮ್ಮನೆಯಾದರೂ ಒಂದಿಷ್ಟು ಖುಷಿಯ ಭಾವ ಚಿಮ್ಮುತ್ತದೆ! ಪೊಟ್ಟಣಗಳ ಮೇಲೆ ಬರೆದಿರುವ ಗರಿಷ್ಠ ಮಾರಾಟ ಮೊತ್ತಕ್ಕಿಂತ (‘ಎಂಆರ್‌ಪಿ’) ಒಂದಿಷ್ಟು ಕಡಿಮೆ ಹಣ ನೀಡಿದ್ದೇನೆ ಎಂಬ ಸಮಾಧಾನ, ಸಂತಸದ ಬಿಂಬವದು.

‘ನೀವು ಖರೀದಿಸಿರುವ ಸಾಮಗ್ರಿಗಳ ನಿಜವಾದ ಮೊತ್ತ ಇಷ್ಟು, ಕೊಡಬೇಕಾದದ್ದು ಇಷ್ಟು, ನೀವು ಉಳಿಸಿದ್ದು ಇಷ್ಟು...’ ಎಂದು ಕೊನೆಯಲ್ಲಿ ಬರೆದಿರುತ್ತಾರಲ್ಲ, ಅದರಲ್ಲಿ ನೀವು ಉಳಿಸಿದ್ದು ಇಷ್ಟು (you have saved ₨...) ಎನ್ನುವುದನ್ನು ನೋಡಿದ ತಕ್ಷಣ ಬರುವ ‘ರಿಯಾಯಿತಿ’  ನಗು. ಗರಿಷ್ಠ ಹಣಕ್ಕಿಂತ ನೂರೋ, ನೂರೈವತ್ತೋ ರೂಪಾಯಿಗಳನ್ನು ಕಡಿಮೆ ನೀಡಿರುವ ತೃಪ್ತಿ ಆ ನಗುವಿನಲ್ಲಿರುತ್ತದೆ.

ಈ ರಿಯಾಯಿತಿ ಹಬ್ಬದ ದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ  ಮಾತ್ರವಲ್ಲದೇ ವರ್ಷ ಪೂರ್ತಿ ಇರುವಂಥದ್ದು. ತಮ್ಮದೇ ಮಳಿಗೆಯಲ್ಲಿ ಸಾಮಾನು ಖರೀದಿ ಮಾಡಲಿ ಎಂದು ಗ್ರಾಹಕರಿಗೆ ನೀಡುವ ಆಮಿಷ ಎನ್ನಲೂಬಹುದು. ಅದೇನೇ ಇದ್ದರೂ ಗ್ರಾಹಕರಿಗೆ ಸ್ವಲ್ಪ ಹಣ ಉಳಿಸಿದ ಸಂತೋಷ ಅಷ್ಟೆ. ಕೆಲ ವರ್ಷಗಳ ಹಿಂದೆ ಈ ‘ಎಂಆರ್‌ಪಿ’ ಬಗ್ಗೆ ಯಾರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುತ್ತಲೇ ಇರಲಿಲ್ಲ. ಪೊಟ್ಟಣಗಳ ಮೇಲೆ ಅಥವಾ ಕೊಂಡುಕೊಳ್ಳುವ ಸಾಮಾನುಗಳ ಮೇಲೆ ಎಷ್ಟು ದರ ನಮೂದು ಮಾಡಲಾಗಿತ್ತೋ ಅಷ್ಟನ್ನೇ ಕೊಟ್ಟು ಬರುವುದಷ್ಟೇ ಗೊತ್ತಿತ್ತು. ಹಳ್ಳಿಗಳಲ್ಲಿ, ಚಿಕ್ಕ ಪಟ್ಟಣಗಳಲ್ಲಿ ಈಗಲೂ ಹಾಗೇ ಇದೆ ಬಿಡಿ.

ಹಣ ಉಳಿಸುವ ಲೆಕ್ಕಾಚಾರ
ಆದರೆ ನಗರಗಳಲ್ಲಿ ಮಾತ್ರ ಈಗ ‘ಎಂಆರ್‌ಪಿ’ ಮತ್ತು ‘ರಿಯಾಯ್ತಿ ಮಾರಾಟ ದರ’ದ ಬಗ್ಗೆ ಅಳೆದೂ ಸುರಿದೂ ನೋಡುತ್ತಾರೆ. ಯಾವ ವಸ್ತುವನ್ನು ಯಾವ ಮಾಲ್‌ ಅಥವಾ ಬಜಾರ್‌ನಲ್ಲಿ, ಎಷ್ಟು ಖರೀದಿಸಿದರೆ, ಎಷ್ಟೆಷ್ಟು ಉಳಿಸಬಹುದು ಎಂದು ಬಹಳವಾಗಿ ಲೆಕ್ಕಾಚಾರ ಹಾಕುವವರೂ ಇದ್ದಾರೆ. ‘ವೆಡ್‌ನೆಸ್‌ ಡೇ ಬಜಾರ್‌’ ಅಥವಾ ‘ಮಾಸಾಂತ್ಯದ ರಿಯಾಯ್ತಿ ಮಾರಾಟ’ದತ್ತಲೂ ಗಮನವಿಟ್ಟು ಆದಷ್ಟೂ ಹೆಚ್ಚು ಹಣ ಉಳಿತಾಯ ಮಾಡುವ ಜಾಣ್ಮೆ ಪ್ರದರ್ಶಿಸುವವರೂ ಹೆಚ್ಚುತ್ತಿದ್ದಾರೆ. ಇದೆಲ್ಲವೂ ನಗರಗಳಲ್ಲಿ ಸಂದಿಗುಂದಿಗಳಲ್ಲೂ ತಲೆ ಎತ್ತಿರುವ ಮಾಲ್‌ಗಳ ಕಮಾಲ್‌!

ಡಿಸ್ಕೌಂಟ್‌ ಅಚ್ಚರಿ!
ಪೊಟ್ಟಣಗಳ ಮೇಲೆ, ತಂಪು ಪಾನೀಯಗಳು ಅಥವಾ ಕುಡಿಯುವ ನೀರಿನ ಬಾಟಲಿಗಳ ಮೇಲೆ ನಮೂದಿಸಲಾದ ಬೆಲೆಗಿಂತ ಒಂದೋ- ಎರಡೋ ರೂಪಾಯಿಯನ್ನು ಹೆಚ್ಚಿಗೆ ವಸೂಲು ಮಾಡುವವರು ಬೀದಿಬದಿ ಅಂಗಡಿಗಳಲ್ಲಿ, ಬಸ್‌ ನಿಲ್ದಾಣಗಳ ಮಳಿಗೆಗಳಲ್ಲಿ, ರೈಲು ನಿಲ್ದಾಣದ ಮಾರಾಟ ಕೇಂದ್ರಗಳಲ್ಲಿ ಇರುವಾಗ, ಇದೇನಪ್ಪ, ಗರಿಷ್ಠ ಮಾರಾಟದ ಬೆಲೆಗಿಂತಲೂ ಕಡಿಮೆ ದರಕ್ಕೆ, ಅದೂ ಈ ಪರಿಯ ‘ಡಿಸ್ಕೌಂಟ್’ ನೀಡಲಾಗುತ್ತಿದೆಯಲ್ಲ’ ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡುವುದು ಸಹಜವೇ!

ಇರುವ ಮೊತ್ತಕ್ಕಿಂತ ಕಡಿಮೆ ಬೆಲೆಗೆ ಸಾಮಾನು ನೀಡಲಾಗುತ್ತಿದೆ ಎಂದ ಮೇಲೆ ಅಲ್ಲೇನೋ ಎಡವಟ್ಟು ಇರಲೇಬೇಕು ಎನ್ನುವ ಸಂಶಯವೂ ಸುಳಿಯದೇ ಇರಲಾರದು. ಸ್ವಲ್ಪ ಹೆಚ್ಚಿಗೆ ರಿಯಾಯಿತಿ ಇದ್ದರಂತೂ ಮುಗಿದೇ ಹೋಯಿತು. ‘ಇದರಲ್ಲೇನಾದರೂ ಮೋಸ ಇರಬಹುದೇ, ಓಲ್ಡ್ ಸ್ಟಾಕ್‌, ಡೇಟ್‌ ಬಾರ್‌ ಆಗಿರುವ ಸಾಮಗ್ರಿ ಏನಾದರೂ ಇರಬಹುದೇ’ ಎಂಬ ಗುಮಾನಿ ಕ್ಷಣ ಮಾತ್ರದಲ್ಲಿ ತಲೆಯ ಒಳಗೆ ಬೇಡವೆಂದರೂ ನುಸುಳಿ ಬಿಡುತ್ತದೆ.

ಯಾರಾದರೂ ಕಾರಣವಿಲ್ಲದೇ ಒಳ್ಳೆಯದು ಮಾಡಿದರು ಎಂದರೆ ಅಲ್ಲಿ  ಅನುಮಾನ ಹುಟ್ಟಿಕೊಳ್ಳೋದು ಮನುಷ್ಯ ಸಹಜ ಗುಣ. ಹಾಗೇನೆ ಇಲ್ಲೂ. ಈ ಸಂದೇಹಕ್ಕೆ ಇಂಬು ಕೊಡಲು ಎನ್ನುವಂತೆ ಒಂದೇ ಕಂಪೆನಿ, ಒಂದೇ ತೂಕ, ಒಂದೇ ಗುಣಮಟ್ಟ ಇರುವ ಸಾಮಗ್ರಿಗಳಿಗೆ ಒಂದೊಂದು ಕಡೆ ಒಂದೊಂದು ಬೆಲೆ, ಒಂದೊಂದು ಮಾಲ್‌ಗಳಲ್ಲಿ ಒಂದೊಂದು ದರ!

ಉದಾಹರಣೆಗೆ ಅಡುಗೆ ಎಣ್ಣೆಯನ್ನೇ ತೆಗೆದುಕೊಳ್ಳಿ. ಅದರ ಮೇಲೆ ‘ಎಂಆರ್‌ಪಿ’ 110 ರೂಪಾಯಿ ಎಂದು ಬರೆದಿದ್ದರೆ, ಚಿಲ್ಲರೆ ವ್ಯಾಪಾರ ಮಳಿಗೆಯಲ್ಲಿ ಅಷ್ಟೇ ಮೊತ್ತ ಕೊಡಬೇಕು. ಒಂದು ಮಾಲ್‌ನಲ್ಲಿ ಇದಕ್ಕೆ 100 ರೂಪಾಯಿ ಆಗಿದ್ದರೆ, ಇನ್ನೊಂದು ಮಾಲ್‌ನಲ್ಲಿ 80 ರೂಪಾಯಿ ಇರುತ್ತದೆ! ಇನ್ನು ಕೆಲವು ಮಾಲ್‌ಗಳಲ್ಲಿ ಬಿಸ್ಕತ್‌, ಚಾಕೊಲೇಟ್‌ ಇತ್ಯಾದಿಗಳ ಮೇಲೆ ಶೇ 5--ರಿಂದ 10ರಷ್ಟು ರಿಯಾಯಿತಿ ಇಟ್ಟಿದ್ದರೆ, ಅದೇ ಬಿಸ್ಕತ್‌, ಚಾಕೊಲೇಟ್‌ಗಳ ಖರೀದಿಗೆ ಇನ್ನೊಂದು ಮಾಲ್‌ನಲ್ಲಿ ‘ಒಂದು ಕೊಂಡರೆ ಇನ್ನೊಂದು ಉಚಿತ’ ಎಂಬ ‘ಆಕರ್ಷಣೆ’ ನೀಡಿರುತ್ತಾರೆ!

ಒಂದಿಷ್ಟು ಸಾಮಾನು ಖರೀದಿ ಮಾಡಿ 25 ರೂಪಾಯಿ ಉಳಿಸಿದ ಖುಷಿಯಲ್ಲಿ ಬಂದಿದ್ದರೆ, ಪಕ್ಕದ ಮನೆಯವರು ಇನ್ನೊಂದು ಮಾಲ್‌ನಲ್ಲಿ ಅದೇ ಸಾಮಾನು ಖರೀದಿಸಿ 50 ರೂಪಾಯಿ ಉಳಿಸಿ ನಮಗೆ ಅಳು ಬರಿಸಿರುತ್ತಾರೆ. ಅದೇ ಸಿಟ್ಟಿನಲ್ಲಿ ಸಾಮಾನು ಖರೀದಿ ಮಾಡಿದ ಮಳಿಗೆಯ ಮಾಲೀಕರನ್ನೋ, ಮಾರಾಟಗಾರರನ್ನೋ ಹೋಗಿ ದಬಾಯಿಸಿದರೆ ‘ಗುಣಮಟ್ಟದಲ್ಲಿ ವ್ಯತ್ಯಾಸ ಇದೆ ಮೇಡಂ/ ಸರ್... ನೋಡಲು ಒಂದೇ ರೀತಿ ಕಂಡರೂ ನಮ್ಮ ಸಾಮಗ್ರಿ ಗುಣಮಟ್ಟ ಚೆನ್ನಾಗಿದೆ’ ಎಂದು ಹೇಳಿ ಬಾಯಿ ಮುಚ್ಚಿಸುತ್ತಾರೆ! ಏನೂ ಹೇಳಲಾಗದಂತಹ ಪರಿಸ್ಥಿತಿ ನಿಮ್ಮದು. ಪೆಚ್ಚು ಮೋರೆ ಹಾಕಿ ಹೊರಕ್ಕೆ ಬರುವುದೊಂದೇ ಗ್ರಾಹಕರಿಗೆ ಇರುವ ದಾರಿ.

ಉಳಿತಾಯವಾದ ಖುಷಿ
ಒಟ್ಟಿನಲ್ಲಿ ತಲೆ ಕೆಡಿಸಿಕೊಂಡರೆ ಈ ‘ಎಂಆರ್‌ಪಿ’ ಎನ್ನೋದು ಗ್ರಾಹಕರಿಗೆ ಗೋಜಲೋ ಗೋಜಲು. ಸಗಟು ವ್ಯಾಪಾರಸ್ತರಲ್ಲಿ ಹೋಗಿ ತೆಗೆದುಕೊಂಡದ್ದಕ್ಕಿಂತ ಮಾಲುಗಳಿಗೆ ಹೋದುದಕ್ಕೆ ಒಂದಿಷ್ಟು ಹಣ ಉಳಿಯಿತು ಎನ್ನೋದಷ್ಟೇ ಖುಷಿ (ಮಾಲುಗಳು ದೂರ ಇದ್ದರೆ ಎಷ್ಟೋ ಸಂದರ್ಭಗಳಲ್ಲಿ ಉಳಿಸಿದ ಹಣಕ್ಕಿಂತ  ಹೆಚ್ಚಿನ ಹಣ ಪೆಟ್ರೋಲ್‌, ಡೀಸಲ್‌ಗಳಿಗೆ ಖರ್ಚಾಗುವುದೂ ಉಂಟು ಎನ್ನುವುದು ಬೇರೆ ಮಾತು ಬಿಡಿ!).

ಏನಿದು ‘ಎಂಆರ್‌ಪಿ’?
ಹಾಗಿದ್ದರೆ ಈ ಗರಿಷ್ಠ ಮಾರಾಟ ಮಿತಿ (‘ಎಂಆರ್‌ಪಿ’) ಎಂದರೆ ಏನು? ಮಾಲ್‌ಗಳಲ್ಲಿ ‘ಎಂಆರ್‌ಪಿ’ಗಿಂತ ಕಡಿಮೆ ಮೊತ್ತಕ್ಕೆ ಸಾಮಾನು ಗಳನ್ನು ಮಾರುವುದು ಏಕೆ? ಜೀವನದಲ್ಲಿ ಒಂದೋ, ಎರಡೋ ಬಾರಿ ಖರೀದಿಸುವ ದುಬಾರಿ ಬೆಲೆಯ ಎಲೆಕ್ಟ್ರಿಕಲ್‌ ಸಾಮಗ್ರಿಗಳಿಂದ ಹಿಡಿದು, ದಿನನಿತ್ಯ ಕೊಳ್ಳುವ ಆಹಾರ ಸಾಮಗ್ರಿಗಳವರೆಗೂ ‘ಎಂಆರ್‌ಪಿ’ಯಲ್ಲಿ ರಿಯಾಯಿತಿ ಏಕೆ? ಒಂದೇ ಕಂಪೆನಿಯ, ಒಂದೇ ಗುಣಮಟ್ಟದ ಸಾಮಗ್ರಿಗಳಿಗೆ ಒಂದೊಂದು ಕಡೆ ಒಂದೊಂದು ಬೆಲೆ ಏಕೆ? ನಮಗೆ ಕಡಿಮೆ ಮೊತ್ತಕ್ಕೆ ನೀಡಿದರೆ ಅವರಿಗೆ ನಷ್ಟ ಅಲ್ವಾ? ಹೀಗೆ ನೂರಾರು ಪ್ರಶ್ನೆ ಕಾಡುವುದು ಸಹಜ.

ಗರಿಷ್ಠ ಮಾರಾಟ ದರದ ಮಿತಿಯನ್ನು ನಿಗದಿ ಮಾಡುವವರು ಆಯಾ ವಸ್ತುಗಳ ತಯಾರಕರು. ಸಾಮಾನುಗಳಿಗೆ ಬಳಸಿರುವ ಪದಾರ್ಥ, ಬಣ್ಣ, ರುಚಿ ಜೊತೆಗೆ ಪೊಟ್ಟಣ ಮಾಡಿ ಮಾರಾಟಕ್ಕೆ ಸಜ್ಜುಗೊಳಿಸಲು, ದೇಶದಾದ್ಯಂತದ ಮಾರಾಟ ಮಳಿಗೆಗಳಿಗೆ ತಲುಪಿಸಲು ತಗಲುವ ಖರ್ಚು, ಸರಕು ವಿತರಕರಿಗೆ ನೀಡಬೇಕಾದ ಕಮಿಷನ್‌, ಚಿಲ್ಲರೆ ಮಾರಾಟಗಾರರ ಲಾಭಾಂಶ, ಕಂಪೆನಿಯ ಲಾಭ ಎಲ್ಲವನ್ನೂ ಲೆಕ್ಕಹಾಕಿ ಪ್ರತಿಯೊಂದು ವಸ್ತುವಿನ ‘ಗರಿಷ್ಠ ಮಾರಾಟ ದರ’ದ (ಎಂಆರ್‌ಪಿ) ಮಿತಿಯನ್ನು ನಿಗದಿಪಡಿಸಲಾಗುತ್ತದೆ.

ಗೃಹ ಬಳಕೆ ಎಲೆಕ್ಟ್ರಿಕಲ್‌ ಸಾಮಗ್ರಿಗಳಾದ ಫ್ರಿಡ್ಜ್, ವಾಷಿಂಗ್‌ ಮೆಷಿನ್‌, ಮೈಕ್ರೊವೇವ್‌ ಆವನ್‌, ಮೊಬೈಲ್‌ ದೂರವಾಣಿ, ರೇಡಿಯೊ, ಟೇಪ್‌ ರಿಕಾರ್ಡರ್‌ ಇತ್ಯಾದಿಗಳಾದರೆ ಅವುಗಳ ತಯಾರಿಕೆಯಲ್ಲಿ ತಗಲುವ ವೆಚ್ಚ, ಅವುಗಳಿಗೆ ಬಳಸಿದ ಸಾಮಾನುಗಳ ವೆಚ್ಚ, ಜತೆಗೆ ಮಾರಾಟ ತೆರಿಗೆ ಇತ್ಯಾದಿಗಳ ಲೆಕ್ಕಾಚಾರ ಹಾಕಿ ‘ಎಂಆರ್‌ಪಿ’ ನಿಗದಿ ಮಾಡಲಾಗುತ್ತದೆ.

ಆ ಸಾಮಗ್ರಿ ಅಥವಾ ಪದಾರ್ಥ ತಯಾರು ಮಾಡಲು ನಿಜವಾಗಿ ಎಷ್ಟು ವೆಚ್ಚ ತಗುಲಿದೆಯೋ ಅದಕ್ಕಿಂತ ಸಾಮಗ್ರಿಗಳಿಗೆ ಅನುಗುಣವಾಗಿ ಶೇ 6ರಿಂದ 17ರಷ್ಟು ಹೆಚ್ಚಿನ ದರವನ್ನು ಗರಿಷ್ಠ ಮಾರಾಟ ಮಿತಿಯ ರೂಪದಲ್ಲಿ ನಿಗದಿ ಮಾಡಲಾಗುತ್ತದೆ, ಉದಾಹರಣೆಗೆ ಒಂದು ಪ್ಯಾಕೇಟ್ ಎಣ್ಣೆಗೆ ನಿಜವಾಗಿ ತಗಲಿರುವ ವೆಚ್ಚ 100 ರೂಪಾಯಿಗಳಾದರೆ ಅದಕ್ಕೆ 106 ರೂಪಾಯಿಗಳಿಂದ 117 ರೂಪಾಯಿಗಳವರೆಗೂ ನಿಗದಿ ಮಾಡಲಾಗುತ್ತದೆ. ಈಗ ಆ ಸರಕನ್ನು ‘ಎಂಆರ್‌ಪಿ’ಗಿಂತ ಎಷ್ಟು ಕಡಿಮೆ ದರಕ್ಕೆ ಮಾರಾಟ ಮಾಡಬಹುದು ಎನ್ನುವ ನಿರ್ಧಾರ, ವಿವೇಚನೆ  ಚಿಲ್ಲರೆ ಮಾರಾಟಗಾರನಿಗೆ ಬಿಟ್ಟದ್ದು.

ಮೇಲೆ ಹೇಳಿರುವ ಎಣ್ಣೆಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಒಂದು ಲೀಟರ್‌ ಎಣ್ಣೆಯನ್ನು ಮಾರಾಟಗಾರ 100 ರೂಪಾಯಿಗಳಿಂದ 117 ರೂಪಾಯಿಗಳವರೆಗೂ ಮಾರಾಟ ಮಾಡಬಹುದು. ‘ಗರಿಷ್ಠ ಮಾರಾಟ ದರ’ 117 ರೂಪಾಯಿ ಇರುವುದಾದರೆ ಮಾರಾಟಗಾರ ಅದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದಕ್ಕೆ ಕಾರಣ ಗ್ರಾಹಕರ ಓಲೈಕೆ. ಏಕೆಂದರೆ ಇದು ಸ್ಪರ್ಧಾತ್ಮಕ ಮಾರುಕಟ್ಟೆ ಯುಗ.

ಗ್ರಾಹಕ ಕೂಡ ಬಹಳ ಬುದ್ಧಿವಂತನಾಗಿದ್ದಾನೆ. ಎಲ್ಲಿ ಆತನಿಗೆ ಕಡಿಮೆ ದರಕ್ಕೆ ಸಾಮಗ್ರಿ ಸಿಗುತ್ತದೋ ಅಲ್ಲಿಗೇ ಆತ ಹೋಗುತ್ತಾನೆ. ಅದಕ್ಕಾಗಿಯೇ ಮಾರಾಟಗಾರ ‘ಗರಿಷ್ಠ ಮಾರಾಟ ದರ’ಕ್ಕೆ ಮಾರುವುದರ ಬದಲು ಬೇರೆ ಪ್ರತಿಸ್ಪರ್ಧಿ ಮಳಿಗೆಗಳಿಗಿಂತ ಸ್ವಲ್ಪ ಕಡಿಮೆ ಬೆಲೆಗೇ ಮಾರಾಟ ಮಾಡುವ ಪೈಪೋಟಿಗೆ ಇಳಿದಿರುವುದು.

ಬೆಂಗಳೂರು, ಮೈಸೂರು ಮುಂತಾದ ಮಹಾನಗರಗಳ ಮಟ್ಟಿಗೆ ಹೇಳುವುದಾದರೆ ಬಿಗ್‌ ಬಜಾರ್‌, ಮೋರ್, ರಿಲಯನ್ಸ್ ಫ್ರೆಷ್‌, ಬೈ ಅಂಡ್‌ ಸೇವ್‌, ಫುಡ್‌ ಬಜಾರ್‌... ಹೀಗೆ ಪ್ರಸಿದ್ಧ ಮಾಲ್‌ಗಳು ಆದಷ್ಟೂ ರಿಯಾಯ್ತಿ ದರ ನಿಗದಿ ಮಾಡಲು ಪೈಪೋಟಿಗೆ ಇಳಿದಿವೆ. ಗ್ರಾಹಕರನ್ನು ಆಕರ್ಷಿಸಲು ಏನೆಲ್ಲ ಕಸರತ್ತುಗಳನ್ನೂ ಮಾಡುತ್ತಿವೆ. ಆದರೆ ಮಹಾನಗರಗಳಲ್ಲಿ ಬಾಡಿಗೆ ಮೊತ್ತ ಆ ದೇವರಿಗೇ ಪ್ರೀತಿ. ಇನ್ನು ಮಾಲ್‌ಗಳು ದಿನನಿತ್ಯವೇ ಲಕ್ಷಗಟ್ಟಲೆ ಬಾಡಿಗೆ ನೀಡುವ ಪರಿಸ್ಥಿತಿ.

ಇಂತಹ ಸಂದರ್ಭಗಳಲ್ಲಿ ಮಾಲ್‌ ಬಾಡಿಗೆ, ಕೆಲಸಗಾರರಿಗೆ ಸಂಬಳ ಇತ್ಯಾದಿ ಖರ್ಚು ವೆಚ್ಚವನ್ನೆಲ್ಲ ಲೆಕ್ಕಾಚಾರ ಹಾಕಿ ಗ್ರಾಹಕರಿಗೆ ರಿಯಾಯಿತಿ ನೀಡಲಾಗುತ್ತದೆ. ಅದರಿಂದಲೂ ಮಾಲ್‌ ಮಾಲೀಕರಿಗೆ ಏನೂ ನಷ್ಟ ಇಲ್ಲ, ಹಾಗೇನೇ ಅದರಲ್ಲಿ ಯಾವ ಮೋಸವೂ ಇಲ್ಲ. ‘ರಿಯಾಯಿತಿ ನೀಡಿರುವುದು ಯಾಕಪ್ಪ?’ ಎಂದು ಸಂದೇಹ ಪಟ್ಟುಕೊಳ್ಳುವ ಅವಶ್ಯಕತೆಯೂ ಇಲ್ಲ.

ಒಂದಿಷ್ಟು ಎಚ್ಚರಿಕೆ
‘ಎಂಆರ್‌ಪಿ’ಯಲ್ಲಿ ರಿಯಾಯಿತಿ ನೀಡುವುದು ಸರಿಯೇ. ಆದರೆ ಕೆಲವು ಮಾಲ್‌ಗಳಲ್ಲಿ ಇದರಲ್ಲೂ ಚಾಣಾಕ್ಷತನ ತೋರುತ್ತಾರೆ. ಬೆಲೆಯಲ್ಲಿ ಏರಿಳಿತ ಸಹಜ. ಅಂತಹ ಸಂದರ್ಭಗಳಲ್ಲಿ ‘ಎಂಆರ್‌ಪಿ’ಯತ್ತ ಗ್ರಾಹಕರು ಜಾಗರೂಕರಾಗಿರಬೇಕು. ಉದಾಹರಣೆಗೆ ಒಂದು ಕೆ.ಜಿ.ಗೆ 40 ರೂಪಾಯಿ ಇದ್ದ ಸಕ್ಕರೆ ಬೆಲೆ ಒಂದು ತಿಂಗಳಿನಲ್ಲೇ 50 ರೂಪಾಯಿಗೆ ಏರಿತು ಎಂದಿಟ್ಟುಕೊಳ್ಳಿ. ಆಗ ಮಳಿಗೆಯ ಮಾಲೀಕ ಪೊಟ್ಟಣಗಳ ಮೇಲೆ ಹಿಂದೆ ಇದ್ದ ‘ಎಂಆರ್‌ಪಿ’ ಬೆಲೆ ₨40 ಇದ್ದುದನ್ನು ತಿದ್ದಿ ₨50 ಮಾಡಿಬಿಡುತ್ತಾನೆ.

ಈ ಬಗ್ಗೆ ಕೇಳಿದರೆ ಇದು ಈಗಿನ ಬೆಲೆ ಎನ್ನಬಹುದು. ಆದರೆ ಹಾಗೆ ಮಾಡಲು ಕಾನೂನಿನಡಿ ಆತನಿಗೆ ಅವಕಾಶ ಇಲ್ಲ. ಯಾವುದೇ ಕಾರಣಕ್ಕೂ ‘ಎಂಆರ್‌ಪಿ’ಯನ್ನು ತಿದ್ದುವ ಅಧಿಕಾರ ಯಾರಿಗೂ ಇಲ್ಲ. ಹಿಂದೆ ಏನು ಬೆಲೆ ಇತ್ತೋ ಅದೇ ಬೆಲೆಯಲ್ಲೇ ಆ ವಸ್ತುವನ್ನು ಗ್ರಾಹಕರಿಗೆ ಮಾರಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ‘ತೂಕ ಮತ್ತು ಅಳತೆ ನಿಯಂತ್ರಣ ಇಲಾಖೆ’ಗೆ ದೂರು ದಾಖಲು ಮಾಡಬಹುದು ಅಥವಾ ‘ಗ್ರಾಹಕ ಹಿತರಕ್ಷಣಾ ವೇದಿಕೆ’ಯ ಮೊರೆ ಹೋಗಬಹುದು.

ಅದೇ ರೀತಿ ಅವಧಿ ಮೀರಿದ ಸಾಮಗ್ರಿಗಳನ್ನು ಕೂಡ ಮಾರಾಟ ಮಾಡುವಂತಿಲ್ಲ. ಇದು ಕೂಡ ಶಿಕ್ಷಾರ್ಹ ಅಪರಾಧ. ಹಾಗೆಯೇ, ಯಾವುದೋ ಒಂದು ಸಾಮಾನಿಗೆ ‘ಉಳಿಸಿ 10 ರೂಪಾಯಿ’ ಎಂದು ಕೆಳಗಡೆ ಫಲಕ ಹಾಕಿರುತ್ತಾರೆ ಎಂದುಕೊಳ್ಳಿ. ಅದನ್ನು ನೋಡಿ ಅಲ್ಲಿಯೇ ಮುಂದುಗಡೆ ಇದ್ದ ಪೊಟ್ಟಣವೊಂದನ್ನು ನೀವು ನೋಡದೇ ಬ್ಯಾಗಿಗೆ ಇಳಿಸಿಕೊಂಡು ಬಿಟ್ಟೀರಿ ಜೋಕೆ. ಏಕೆಂದರೆ ಎಷ್ಟೋ ಬಾರಿ ಮುಂದುಗಡೆ ಇಟ್ಟಿರುವ ಪೊಟ್ಟಣಗಳು ‘ಉಳಿಸಿ 10 ರೂಪಾಯಿ’ಗೆ ಸೇರಿರುವುದಿಲ್ಲ.

ಅದು ಕಳೆದ ಬಾರಿಗೆ ‘ಉಳಿಸಿ 5 ರೂಪಾಯಿ’ಗೋ ಅಥವಾ ರಿಯಾಯಿತಿ ಇಲ್ಲದ ಪೊಟ್ಟಣವೂ ಆಗಿರುತ್ತದೆ. 10 ರೂಪಾಯಿ ರಿಯಾಯಿತಿ ನೀಡಿರುವ ಪೊಟ್ಟಣ ಹಿಂಬದಿ ಸಾಲಿನಲ್ಲಿ ಇರುತ್ತದೆ. ನೀವು 10 ರೂಪಾಯಿ ಉಳಿಸಿದೆನೆಂಬ ಸಂತಸದಲ್ಲಿ ಮನೆಗೆ ಬಂದು ಬಿಲ್‌ ನೋಡಿದರೆ ಅಲ್ಲಿ ಗರಿಷ್ಠ ಮಾರಾಟ ದರವೇ ಇದ್ದು ಹೌಹಾರಬೇಕಾಗುತ್ತದೆ!

 ಇನ್ನು ಕೆಲವು ಸಂದರ್ಭಗಳಲ್ಲಿ ಅವಧಿ ಮೀರಲು ಇನ್ನೇನು ಕೆಲ ದಿನಗಳ ಬಾಕಿ ಇವೆ ಎನ್ನುವಾಗ ಶೇಕಡ ಐದೋ, ಹತ್ತೋ, ಇಪ್ಪತ್ತೋ ರಿಯಾಯಿತಿ ಎಂದು ಬೋರ್ಡ್ ಹಾಕಿರುತ್ತಾರೆ. ಆಹಾರ ಪದಾರ್ಥಗಳಾಗಿದ್ದಲ್ಲಿ ಅವಧಿ ಮೀರುವ ಒಳಗೆ ಅದನ್ನು ಬಳಸಲು ಸಾಧ್ಯವೇ ಎಂಬುದನ್ನು ನೋಡಿ ಯೋಚಿಸಿ ಅದನ್ನು ಖರೀದಿಸಿ. ಇಲ್ಲದಿದ್ದರೆ ರಿಯಾಯಿತಿ ಜೊತೆ ಅನಾರೋಗ್ಯವನ್ನೂ ಮನೆಗೆ  ಕೊಂಡೊಯ್ದಂತಾಗುತ್ತದೆ!

ಇವರೇನಂತಾರೆ?
‘ಎಂಆರ್‌ಪಿ’ ಬಗ್ಗೆ ಬೆಂಗಳೂರಿನ ವಿವಿಧ ಮಾಲ್‌ಗಳ ಮಾಲೀಕರು, ಮಾರಾಟ ಪ್ರತಿನಿಧಿಗಳನ್ನು ಮಾತಾಡಿಸಿದಾಗ ಅವರು ಹೇಳಿದ್ದು ಹೀಗೆ;
‘ಬೇರೆ ಮಾಲ್‌ಗಳಿಗೆ ಹೋಲಿಸಿದರೆ ನಮ್ಮಲ್ಲಿ ಗ್ರಾಹಕರಿಗೆ ರಿಯಾಯಿತಿ ಹೆಚ್ಚು. ಇಲ್ಲಿ ಬಂದು ಖರೀದಿ ಮಾಡಿದರೆ ಹೆಚ್ಚಿನ ಉಳಿತಾಯ ಮಾಡಬಹುದು. ಇದಕ್ಕೆ ನಮ್ಮಲ್ಲಿ ಸದಾ ತುಂಬಿ ತುಳುಕುತ್ತಿರುವ ಗ್ರಾಹಕರೇ ಸಾಕ್ಷಿ’ ಎನ್ನುತ್ತಾರೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ 24 ವರ್ಷಗಳಷ್ಟು ಹಳೆಯದಾಗಿರುವ ‘ಬೈ ಅಂಡ್‌ ಸೇವ್‘ ಮಳಿಗೆ ಮಾಲೀಕ ಪ್ರಭಾಕರ್‌.

‘ಹೆಚ್ಚಿನ ಮಾಲ್‌ಗಳು ಪ್ರತಿ ತಿಂಗಳು ಬಾಡಿಗೆ ಹಣ ಕಟ್ಟಬೇಕು. ಹೆಚ್ಚಿನ ಕೆಲಸಗಾರರು ಇದ್ದರೆ ಸಂಬಳಕ್ಕೂ ಹೆಚ್ಚಿನ ಖರ್ಚು ಆಗುತ್ತದೆ. ಇದನ್ನೆಲ್ಲ ತಾಳೆ ಹಾಕಿ ಅಲ್ಲಿ ರಿಯಾಯಿತಿ ನೀಡಲಾಗುತ್ತದೆ. ಆದರೆ ನಮ್ಮದು ಸ್ವಂತ ಕಟ್ಟಡ. ಆದ್ದರಿಂದ ಬಾಡಿಗೆ ನೀಡುವ ಅವಶ್ಯಕತೆ ಇಲ್ಲ. ಇದರಿಂದಲೇ ನಮ್ಮಲ್ಲಿ ಬರುವ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ನೀಡಲು ಸಾಧ್ಯ’ ಎನ್ನುವುದು ಅವರ ಪ್ರತಿಪಾದನೆ.

‘ನಮ್ಮಲ್ಲಿ ಆಹಾರ ಪದಾರ್ಥ, ದಿನಸಿ, ಬೇಳೆ- ಕಾಳು ಸೇರಿದಂತೆ ಒಟ್ಟಾರೆ 15 ಸಾವಿರಕ್ಕಿಂತಲೂ ಹೆಚ್ಚಿನ ಸಾಮಾನುಗಳು ಲಭ್ಯವಿವೆ. ಪ್ರತಿಯೊಂದು ಸಾಮಾನಿಗೂ ಇಲ್ಲಿ ರಿಯಾಯಿತಿ ಇದ್ದೇ ಇದೆ. ಅದೇ ನಮ್ಮ ಸ್ಪೆಷಾಲಿಟಿ’ ಎನ್ನುವ ಅವರು, ‘ಇಂಥದ್ದೊಂದು ರಿಯಾಯಿತಿ ದರದ ಮಾರಾಟದ ಪರಿಕಲ್ಪನೆ ಹುಟ್ಟುಹಾಕಿದ್ದೇ ನಾವು. ಇದನ್ನೇ ಎಲ್ಲೆಡೆ ಅನುಸರಿಸಲಾಗುತ್ತಿದೆ’ ಎನ್ನುತ್ತಾರೆ.

ಎಲ್ಲಕ್ಕಿಂತ ಅಡುಗೆ ಎಣ್ಣೆಯಲ್ಲಿಯೇ ಹೆಚ್ಚಿನ ರಿಯಾಯಿತಿ ಇರುವುದು ಹಾಗೂ ಒಂದೇ ಕಂಪೆನಿ ಎಣ್ಣೆ ಒಂದೊಂದು ಕಡೆಗಳಲ್ಲಿ ಒಂದೊಂದು ಬೆಲೆ ಇರುವ ಔಚಿತ್ಯವನ್ನು ವಿವರಿಸಿದ ಅವರು, ‘ಆಹಾರ ಸಾಮಗ್ರಿಗಳಲ್ಲಿ ಹೆಚ್ಚಾಗಿ ಮಾರಾಟ ಆಗುವುದೇ ಎಣ್ಣೆ. ಏನಿಲ್ಲವೆಂದರೂ ವಾರಕ್ಕೆ ಒಂದು ಲೀಟರ್‌ ಎಣ್ಣೆ ಸಾಮಾನ್ಯವಾಗಿ ಬೇಕೇ ಬೇಕು.

ಇದಕ್ಕಾಗಿಯೇ ಗೃಹಿಣಿಯರು ಇದರ ಮೇಲಿನ ರಿಯಾಯಿತಿಗೆ ಬೇಗನೇ ಆಕರ್ಷಿತರಾಗುತ್ತಾರೆ. ಮೊದಲೇ ಹೇಳಿದ ಹಾಗೆ ಆಯಾ ಮಳಿಗೆಗಳು ತಮ್ಮ ಎಲ್ಲ ಖರ್ಚುಗಳನ್ನೂ ಲೆಕ್ಕ ಹಾಕಿ ‘ಎಂಆರ್‌ಪಿ’ಗಿಂತ ತಮಗೆ ಅನುಕೂಲ ಆಗುವ ರೀತಿಯಲ್ಲಿ ಇಂತಿಷ್ಟು ಎಂದು ರಿಯಾಯಿತಿ ನೀಡುತ್ತಾರೆ. ಎಲ್ಲಿ ಹೆಚ್ಚಿನ ರಿಯಾಯಿತಿ ಸಿಗುತ್ತದೆ ಎಂಬುದನ್ನು ಪರಿಶೀಲಿಸಿ ಖರೀದಿ ಮಾಡುವುದು ‘ಗ್ರಾಹಕರ ಜಾಣ್ಮೆ’ಗೆ ಸಂಬಂಧಿಸಿದ ಸಂಗತಿ ಎನ್ನುತ್ತಾರೆ.

ಆಹಾರ ಪದಾರ್ಥ ಮಾತ್ರವಲ್ಲದೇ ಫ್ರಿಡ್ಜ್, ವಾಷಿಂಗ್‌ ಮೆಷಿನ್‌, ಇಸ್ತ್ರಿ ಪೆಟ್ಟಿಗೆ ಹೀಗೆ ಎಲ್ಲ ಎಲೆಕ್ಟ್ರಿಕಲ್‌ ಸಾಮಗ್ರಿಗಳ ಮೇಲೆಯೂ ಈ ರಿಯಾಯಿತಿ ಕೊಡುಗೆ ಕಾಣಬಹುದು. ಕೆಲವು ಮಾರಾಟ ಮಳಿಗೆಗಳಲ್ಲಿ ಹೆಸರಾಂತ ಬ್ರಾಂಡೆಡ್‌ ಕಂಪೆನಿಗಳ ಎಲೆಕ್ಟ್ರಾನಿಕ್‌ ಉಪಕರಣಗಳ ಖರೀದಿ ವೇಳೆ ಚೌಕಾಷಿಗೂ ಅವಕಾಶವಿರುತ್ತದೆ.

ರಿಯಾಯಿತಿ ಕೊಡುಗೆ ಬಗ್ಗೆ ವಿವರಿಸುವ ಬೆಂಗಳೂರಿನ ಪ್ಯಾಲೇಸ್‌ ಗುಟ್ಟಹಳ್ಳಿ ಬಳಿ ಇರುವ ‘ಸನ್‌ರೈಸ್‌ ಎಲೆಕ್ಟ್ರಿಕ್ಸ್’ನ ಮಾಲೀಕ ಮುಜೀಬ್‌ ಬಾಷಾ, ‘ನಾವು ಎಲೆಕ್ಟ್ರಿಕಲ್‌ ಸಾಮಾನು ತಯಾರಕ ಕಂಪೆನಿಗಳಿಂದ ಖರೀದಿ ಮಾಡುವಾಗ ನಮಗೆ ಇಂತಿಷ್ಟು ಕಮಿಷನ್‌ ಸಿಗುತ್ತದೆ. ಜತೆಗೆ ನೂರಾರು ಎಲೆಕ್ಟ್ರಿಕಲ್‌ ಸಾಮಗ್ರಿಗಳನ್ನು ಒಟ್ಟಿಗೇ ಖರೀದಿಸಿದಾಗ ಅವರು ಮತ್ತೊಂದಿಷ್ಟು ಉಚಿತವಾಗಿ ನೀಡುತ್ತಾರೆ. ಇದರಲ್ಲಿ ನಮಗೆ ಲಾಭ ಸಿಗುತ್ತದೆ. ಆದ್ದರಿಂದ ‘ಎಂಆರ್‌ಪಿ’ಗಿಂತ ನಮಗೆ ಇಷ್ಟ ಬಂದ ಹಾಗೆ ಕಡಿಮೆ ಬೆಲೆಗೆ ಮಾರಾಟ ಮಾಡಲು ಅವಕಾಶವಿದೆ. ಬೇರೆ ಮಳಿಗೆಗಳಿಗಿಂತ ನಮ್ಮಲ್ಲಿ ಹೆಚ್ಚಿಗೆ ರಿಯಾಯಿತಿ ಇದೆ ಎಂದಾದರೆ ಸಹಜವಾಗಿ ಗ್ರಾಹಕರು ಹೆಚ್ಚು ಆಕರ್ಷಿತರಾಗುತ್ತಾರೆ’ ಎಂದು ರಿಯಾಯಿತಿ ಗುಟ್ಟನ್ನು ಬಿಚ್ಚಿಡುತ್ತಾರೆ.

‘ಇಲ್ಲಿ ನಮ್ಮ ಲಾಭ- ನಷ್ಟಕ್ಕಿಂತ ಗ್ರಾಹಕರನ್ನು ಆಕರ್ಷಣೆಗೆ ಒಳಪಡಿಸುವುದು ಮುಖ್ಯ. ಸ್ಪರ್ಧೆ ಹೆಚ್ಚಿರುವಾಗ ಈ ಆಕರ್ಷಣೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಒಮ್ಮೆ ಗ್ರಾಹಕರ ಒಲವು ನಮ್ಮ ಕಡೆ ಬಂತೆಂದರೆ ಆಗ ನಮಗೇ ಲಾಭ. ಹೆಚ್ಚಿನ ಗ್ರಾಹಕರು ಬಂದರೆ ರಿಯಾಯಿತಿ ಹೆಚ್ಚಿದ್ದರೂ ಲಾಭಕ್ಕೇನು ಕೊರತೆ ಇರುವುದಿಲ್ಲ ಅಲ್ಲವೇ?’ ಎನ್ನುವುದು ಮಾಲ್‌ಗಳ ಪಟ್ಟಿಯಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿರುವ ‘ಬಿಗ್‌ ಬಜಾರ್‌’ನ ಮಾರಾಟ ಪ್ರತಿನಿಧಿ ಪ್ರದೀಪ್‌ ಚೌಹಾಣ್‌ ಅವರ ಮಾತು.

‘ಕೆಲ ವರ್ಷಗಳ ಹಿಂದೆ ರಿಯಾಯಿತಿ ಹೆಚ್ಚಿಗೆ ಇದ್ದುದರಿಂದ ಸಾಮಾನುಗಳನ್ನು ಖರೀದಿ ಮಾಡಲು ಜನರು ಅನುಮಾನಿಸಿದ್ದೂ ಉಂಟು. ಇದರಲ್ಲೇನೋ ಮೋಸ ಇದೆ ಎಂದೇ ಜನ ಸಂಶಯಿಸುತ್ತಿದ್ದರು. ಆದರೆ ಈಗ ರಿಯಾಯಿತಿ ಹೆಚ್ಚಿಗೆ ಇರುವುದನ್ನೇ ನೋಡಿ ಪರಿಶೀಲಿಸಿ ಜನರು ಕೊಳ್ಳುತ್ತಾರೆ. ಪೈಪೋಟಿ ಎಂದ ಮೇಲೆ ಹೆಚ್ಚಿಗೆ ಲಾಭ ಮಾಡುವ ಆಸೆಗೆ ಬೀಳುವ ಪ್ರಶ್ನೆಯೇ ಇಲ್ಲ, ಗ್ರಾಹಕರ ಭರವಸೆ ಮುಖ್ಯ ಅಷ್ಟೇ’ ಎನ್ನುತ್ತಾರೆ ‘ಮೋರ್‌’ನ ಮಾರಾಟಗಾರ ಎನ್‌.ಸುಧೀರ್‌. ಇದೇ ಅನಿಸಿಕೆ ‘ರಿಲಯನ್ಸ್ ಫ್ರೆಷ್‌’ ಮಾರಾಟ ಪ್ರತಿನಿಧಿ ಗಿರೀಶ್‌ ಅವರದ್ದೂ ಕೂಡ.

‘ಎಂಆರ್‌ಪಿ’: ಕಾನೂನು ಏನನ್ನುತ್ತದೆ?
* ಪೊಟ್ಟಣಗಳಲ್ಲಿ ಮಾರಾಟ ಮಾಡುವ ಪ್ರತಿಯೊಂದು ಸಾಮಗ್ರಿಗಳ ಮೇಲೆ ಕಡ್ಡಾಯವಾಗಿ ‘ಎಂಆರ್‌ಪಿ’ ನಿಗದಿ ಮಾಡಿರಬೇಕು.
* ಪೊಟ್ಟಣ ಸಾಮಗ್ರಿಗಳನ್ನು ಪೊಟ್ಟಣದ ಮೇಲೆ ನಮೂದಿಸಿರುವ ‘ಎಂಆರ್‌ಪಿ’ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ.
* ಪೊಟ್ಟಣ ಸಾಮಗ್ರಿಗಳ ಮೇಲೆ ನಮೂದಿಸಿರುವ ‘ಎಂಆರ್‌ಪಿ’ಯನ್ನು ಸ್ಟಿಕ್ಕರ್ ಅಂಟಿಸಿಯೋ ಅಥವಾ ತಿದ್ದಿಯೋ ಬದಲಾಯಿಸುವಂತಿಲ್ಲ.
* ಗರಿಷ್ಠ ಮಾರಾಟ ಬೆಲೆಯನ್ನು ನೀಡುವಾಗ ಅದರ ಜತೆಗೇ ಪೊಟ್ಟಣದಲ್ಲಿರುವ ಸಾಮಗ್ರಿಯ ನಿವ್ವಳ ಅಳತೆ ಅಥವಾ ತೂಕವನ್ನು ಕಡ್ಡಾಯವಾಗಿ ಪ್ರಕಟಿಸಿರಲೇಬೇಕು.
* ಪೊಟ್ಟಣ ಮಾಡಿದ ಸಾಮಗ್ರಿಗಳ ಇನ್ನಿತರ ವಿವರಗಳನ್ನು ಪ್ರಮಾಣ ಬದ್ಧ ಮಾನಕಗಳಲ್ಲಿ (Standard units) ನೀಡಬೇಕು. ಉದಾಹರಣೆಗೆ: ಮೊಬೈಲ್, ಟಿವಿ ಪರದೆಯ ಗಾತ್ರವನ್ನು ಮಿಲಿ ಮೀಟರ್‌/ ಸೆಂಟಿ ಮೀಟರ್‌ನಲ್ಲಿಯೇ ನೀಡಬೇಕು, ಇಂಚುಗಳಲ್ಲಿ ನೀಡಕೂಡದು.
* ಪೊಟ್ಟಣಗಳಲ್ಲಿನ ಸಾಮಗ್ರಿಗಳಲ್ಲಿ   ತಯಾರಕ, ಪ್ಯಾಕರ್ ಅಥವಾ ಆಮದುದಾರರ ಹೆಸರು ಮತ್ತು ವಿಳಾಸ ಕಡ್ಡಾಯವಾಗಿ ನಮೂದಿಸಿರಬೇಕು.
* ತಯಾರಾದ, ಪ್ಯಾಕ್ ಮಾಡಿದ ಅಥವಾ ಆಮದಾದ ತಿಂಗಳು ಮತ್ತು ವರ್ಷವನ್ನು ಸ್ಪಷ್ಟವಾಗಿ ಮುದ್ರಿಸಿರಬೇಕು.
* ಪೊಟ್ಟಣದ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ ರೂಪಾಯಿಗಳಲ್ಲಿ ನಮೂದಿಸಿರಬೇಕು. (ಎಲ್ಲ ತೆರಿಗೆಗಳು ಸೇರಿ).
* ಗ್ರಾಹಕ ಕುಂದುಕೊರತೆ ವಿಚಾರಣಾ ವ್ಯಕ್ತಿ, ಕೇಂದ್ರದ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ- ಮೇಲ್ ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು.
* ಗ್ರಾಹಕರು ಕಡ್ಡಾಯವಾಗಿ ರಸೀತಿ ಪಡೆಯಬೇಕು. ಮಾರಾಟದಲ್ಲಿ ಮೋಸ ನಡೆದಿದೆ ಎಂದಾದರೆ ಸಂಬಂಧಿತ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲು ಮಾಡಬೇಕು.

ಸಾಮಗ್ರಿ , ಎಂಆರ್‌ಪಿ,  ವಿವಿಧ ಮಳಿಗೆಗಳಲ್ಲಿ, ಸ್ಪರ್ಧಾತ್ಮಕ ದರ(₨)
ಸನ್‌ಪ್ಯೂರ್‌ (1ಲೀ)  99 80.80 82 84
ಸನ್‌ಪ್ಯೂರ್‌ (5 ಲೀ) 499 421 429 478
ರುಚಿಗೋಲ್ಡ್‌ 86 64 69
ನಂದಿನಿ ತುಪ್ಪ(500 ಮಿ.ಲೀ) 319 316
ಉದ್ದಿನ ಬೇಳೆ(1 ಕೆ.ಜಿ ಪ್ಯಾಕ್‌) 96 78 89 92
ತೊಗರಿಬೇಳೆ(1 ಕೆ.ಜಿ ಪ್ಯಾಕ್‌) 109 84 94
ರೆಡ್‌ಲೇಬಲ್‌ ಟೀ(500 ಗ್ರಾಂ) 190 180.50 189
ಸ್ಪ್ರೈಟ್‌(2ಲೀ) 78 69 71 75
ಕೋಕೊ ಕೋಲಾ(2ಲೀ) 78 69 72.

ಹೆಚ್ಚಿಗೆ ಹಣ ಕೇಳಿೀರಿ ಹುಷಾರ್!
ಬಸ್‌ ಸ್ಟ್ಯಾಂಡ್‌ ಅಥವಾ ತಂಪು ಪಾನೀಯಗಳ ಮಾರಾಟ ಮಳಿಗೆಗಳಲ್ಲಿ ನೀವೇನಾದರೂ ಪಾನೀಯ ತೆಗೆದುಕೊಂಡಿದ್ದರೆ ಖಂಡಿತವಾಗಿಯೂ ಒಂದೋ- ಎರಡೋ ರೂಪಾಯಿ ಹೆಚ್ಚಿಗೆ ಕೊಟ್ಟಿರುತ್ತೀರಿ ಅಲ್ಲವೆ? ಈ ಬಗ್ಗೆ ಹೆಚ್ಚಿನವರು ಮಾರಾಟಗಾರನ ಜತೆ ಜಗಳ ಮಾಡಿರಲಿಕ್ಕೂ ಸಾಕು. ಇದು ‘ಫ್ರೀಜಿಂಗ್ ಚಾರ್ಜ್’(ಪಾನೀಯ ತಂಪು ಮಾಡಲು ತೆಗೆದುಕೊಳ್ಳುವ ಶುಲ್ಕ) ಅಂತ ಹೇಳಿ ಮಾರಾಟಗಾರ ನಿಮ್ಮ ಬಾಯನ್ನು ಮುಚ್ಚಿಸಿರುತ್ತಾನೆ.

ಎಂಆರ್‌ಪಿಗಿಂತ ಹೆಚ್ಚು ಹಣ ಪಡೆಯುವುದು ಕಾನೂನು ಪ್ರಕಾರ ತಪ್ಪು. ಉತ್ಪನ್ನ ಸಂಗ್ರಹಣೆ ಮತ್ತು ನಿರ್ವ ಹಣೆಗೆಂದೇ ಕಂಪೆನಿಗಳು ವರ್ತಕರಿಗೆ  ಪ್ರತ್ಯೇಕ ಕಮಿಷನ್ ನೀಡುತ್ತವೆ. ಒಂದೊಮ್ಮೆ ಎಲ್ಲೇ ಆಗಲಿ, ‘ಎಂಆರ್‌ ಪಿ’ಗಿಂತ ಹೆಚ್ಚು ಹಣ ಕೇಳಿದರೆ  ಗ್ರಾಹಕರು ರಸೀತಿ ಪಡೆಯಬೇಕು. ಆಗ ತೂಕ ಮತ್ತು ಅಳತೆ ನಿಯಂತ್ರಣ ಇಲಾಖೆಗೆ ರಸೀತಿಯೊಂದಿಗೆ ದೂರನ್ನೂ ದಾಖಲು ಮಾಡಬಹುದು.

ಬಹಳಷ್ಟು ವರ್ತಕರು ರಸೀತಿ ನೀಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ  ಮಳಿಗೆಯ ಪೂರ್ಣ ವಿವರ ಸಂಗ್ರಹಿಸಿ (ಮಳಿಗೆ ಹೆಸರು, ಇರುವ ಸ್ಥಳ ಇತ್ಯಾದಿ) ಅವರ ವಿರುದ್ಧ ಇಲಾಖೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಬಹುದು. ಪ್ರತಿ ನಗರದಲ್ಲೂ ಪ್ರತ್ಯೇಕ ದೂರು ಸ್ವೀಕೃತಿ ಕೇಂದ್ರಗಳಿವೆ. ಬೆಂಗಳೂರಿಗರು 080- 22342380 ಸಂಖ್ಯೆಗೆ ಕರೆ ಮಾಡಬಹುದು. ದೂರಿನ ಸತ್ಯಾಸತ್ಯತೆ ಪರಿಶೀಲಿಸಲು ಇಲಾಖೆಯ ಸಂಬಂಧಿತ ಇನ್‌ಸ್ಪೆಕ್ಟರ್‌ ಒಬ್ಬರನ್ನು ಆ ಮಳಿಗೆಗೆ ಕಳುಹಿಸುತ್ತದೆ.

ಅಲ್ಲಿ ಹೆಚ್ಚಿನ ದರದ ಮಾರಾಟ ನಡೆಯುತ್ತಿದ್ದರೆ ಮಳಿಗೆ ಮಾಲೀಕರಿಗೆ ಮೊದಲು ನೋಟಿಸ್‌ ಜಾರಿ ಮಾಡಿ ನಂತರ ದಂಡ ವಿಧಿಸಲಾಗುತ್ತದೆ. ಬಸ್‌ ಸ್ಟ್ಯಾಂಡ್‌, ರೈಲ್ವೆ ಸ್ಟೇಷನ್‌ ಅಥವಾ ಇನ್ನಾವುದೇ ಕಡೆ ಮಾರಾಟಗಾರರು ‘ಎಂಆರ್‌ಪಿ’ಗಿಂತ ಹೆಚ್ಚು ಹಣ ವಸೂಲು ಮಾಡಿದರೆ ಗ್ರಾಹಕರು ‘ಒಂದೋ- ಎರಡೋ ರೂಪಾಯಿ ತಾನೇ,  ಸುಮ್ಮನೆ ತಕರಾರು ಏಕೆ?’.. ಎಂದು ಸುಮ್ಮನಾಗುವ ಬದಲು ನಿಮ್ಮ ಹಕ್ಕನ್ನು ಚಲಾಯಿಸಬೇಕು. ಈ ನಿಟ್ಟಿನಲ್ಲಿಯೇ ಕೇಂದ್ರ ಸರ್ಕಾರ ‘ಗ್ರಾಹಕರೇ ಜಾಗೃತರಾಗಿ’(ಜಾಗೋ ಗ್ರಾಹಕ್‌) ಎಂಬ ಅಭಿಯಾನವನ್ನೇ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT