ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್ ವಿರುದ್ಧ ಕರವೇ ಪ್ರತಿಭಟನೆ

Last Updated 6 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಯಲಹಂಕ: ಕನ್ನಡ ರಾಜ್ಯೋತ್ಸವನ್ನು ಕರಾಳ ದಿನವನ್ನಾಗಿ ಆಚರಿಸಿದ ಹಾಗೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ನಿಲುವು ತಳೆದಿರುವ ಎಂಇಎಸ್ ಕಾರ್ಯಕರ್ತರ ಧೋರಣೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಯಲಹಂಕ ಹಾಗೂ ಬ್ಯಾಟರಾಯನಪುರ ಘಟಕಗಳ ಕಾರ್ಯಕರ್ತರು ಇಲ್ಲಿನ ಕೆಂಪೇಗೌಡ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ವೇದಿಕೆಯ ರಾಜ್ಯ ಉಪಾಧ್ಯಕ್ಷ ದಾ.ಪಿ.ಆಂಜನಪ್ಪ ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಗೌರವ ಸೂಚಿಸಿರುವ ಎಂಇಎಸ್ ಕಾರ್ಯಕರ್ತರ ಕ್ರಮ ರಾಷ್ಟ್ರ ದ್ರೋಹ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸುವ ಕಾರ್ಯವಾಗಿದೆ. ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಅನ್ಯೋನ್ಯವಾಗ್ದ್ದಿದರೂ ಎಂಇಎಸ್ ಮತ ಬ್ಯಾಂಕ್ ರಾಜಕಾರಣ ಮಾಡುವ ಉದ್ದೇಶದಿಂದ ಇಬ್ಬರ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಕೂಡಲೇ ಬೆಳಗಾವಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸುವುದರ ಜತೆಗೆ ಮೇಯರ್, ಉಪ ಮೇಯರ್, ಮಾಜಿ ಮೇಯರ್ ಸೇರಿದಂತೆ ಎಂಇಎಸ್‌ನಿಂದ ಗೆದ್ದು ಬಂದಿರುವ ಪಾಲಿಕೆ ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಮೇಯರ್ ಮಂದಾ ಬಾಳೇಕುಂದ್ರಿ ಹಾಗೂ ಮಾಜಿ ಮೇಯರ್ ಸಾಂಬಾಜಿ ಪಾಟೀಲ್ ಅವರ ಪ್ರತಿಕೃತಿ ದಹಿಸಲಾಯಿತು. ವೇದಿಕೆಯ ಯಲಹಂಕ ಹಾಗೂ ಬ್ಯಾಟರಾಯನಪುರ ಘಟಕಗಳ ಅಧ್ಯಕ್ಷರಾದ ಕೆ.ಸತೀಶ್, ಸುರೇಶ್ ಮುಖಂಡರಾದ ಕೆ.ರಾಜಪ್ಪ, ವೇಣುೀಪಾಲ್, ಕೃಷ್ಣ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT