ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್‌ನಲ್ಲಿ ಬಂಡಾಯದ ಕಾವು!

Last Updated 13 ಏಪ್ರಿಲ್ 2013, 8:03 IST
ಅಕ್ಷರ ಗಾತ್ರ

ಬೆಳಗಾವಿ: ಕುಂದಾನಗರಿಯಲ್ಲಿ ವಿಧಾನಸಭೆ ಚುನಾವಣೆಯ ಕಾವು ಬಿಸಿಲಿಗಿಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚುನಾವಣಾ ಕಣಕ್ಕೆ ಇಳಿಯಬಯಸಿರುವವರು ಮತದಾರರ ಓಲೈಕೆಗೆ ಕಸರತ್ತು ಆರಂಭಿಸಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಮಾತ್ರ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದರೆ, ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾತ್ರ ಘೋಷಿಸಿದೆ. ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯಲ್ಲಿ ಬಂಡಾಯದ ಮಾತುಗಳು ಕೇಳಿ ಬರುತ್ತಿವೆ.

ಬೆಳಗಾವಿ ನಗರದ ಪ್ರತಿಷ್ಠಿತ ಕ್ಷೇತ್ರವಾಗಿರುವ ದಕ್ಷಿಣ ವಿಧಾನಸಭೆ ಮತಕ್ಷೇತ್ರದಲ್ಲಿ ಚುನಾವಣೆ ಬಿಸಿ ಹೆಚ್ಚುತ್ತಿದೆ. ಈ ಕ್ಷೇತ್ರದಲ್ಲಿ ಮರಾಠಿ ಭಾಷಿಕರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತ ಬಂದಿವೆ. ಮರಾಠಿ ಭಾಷಿಕರ ಮತಗಳನ್ನು ಸೆಳೆಯಲು ಎಲ್ಲ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ.

ಭಾರತೀಯ ಜನತಾ ಪಕ್ಷದ ಹಾಲಿ ಶಾಸಕ ಅಭಯ ಪಾಟೀಲ, ಮರು ಆಯ್ಕೆ ಬಯಸಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ತಮ್ಮ ಅವಧಿಯಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಚಾರ ಕಾರ್ಯವನ್ನು ಅಭಯ ಪಾಟೀಲ ಭರದಿಂದ ನಡೆಸಿದ್ದಾರೆ. ನಗರೋತ್ಥಾನ ಯೋಜನೆಯಡಿಯಲ್ಲಿ 100 ಕೋಟಿ ರೂಪಾಯಿ ಮಹಾನಗರ ಪಾಲಿಕೆಗೆ ಎರಡನೇ ಕಂತು ಬಂದಿದ್ದು, ಈ ಅನುದಾನದಲ್ಲಿನ ಕೆಲಸಕ್ಕೆ ಹೆಚ್ಚಿನ ಮುತವರ್ಜಿ ವಹಿಸಿದ್ದ ಶಾಸಕರು, ಚುನಾವಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ.

ಶಾಸಕ ಅಭಯ ಪಾಟೀಲ ಅವರ ವೈಫಲ್ಯಗಳನ್ನು ಎತ್ತಿ ತೋರಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪ್ರತಿತಂತ್ರ ರೂಪಿಸಿದೆ. ಚುನಾವಣೆಯಲ್ಲಿ ಅಭಯ ಪಾಟೀಲರಿಗೆ ಸೆಡ್ಡು ಹೊಡೆಯಲು ಎಂಇಎಸ್ ಎಲ್ಲ ತರಹದ ಸಿದ್ಧತೆಗಳಲ್ಲಿ ತೊಡಗಿದೆ. ಕ್ಷೇತ್ರದಲ್ಲಿ ಸಮರ್ಪಕವಾಗಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ಎಂಇಎಸ್ ನಾಯಕರು ಈಗಾಗಲೇ ಹಲವಾರು ಬಾರಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಜನರ ಗಮನ ಸೆಳೆಯಲು ಯತ್ನಿಸಿದ್ದಾರೆ.

ಬಿಜೆಪಿಗೆ ಎಂಇಎಸ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷ ತೀವ್ರ ಪೈಪೋಟಿ ನೀಡಲು ಕಾರ್ಯೋನ್ಮುಖವಾಗಿವೆ. ಈ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಬಂಡಾಯದ ಬಿಸಿ ಕಾಣದಿದ್ದರೂ, ಕಾಂಗ್ರೆಸ್ ಹಾಗೂ ಎಂಇಎಸ್‌ನಲ್ಲಿ ಬಂಡಾಯದ ಬಿಸಿ ಮುಗಿಲು ಮುಟ್ಟಿದೆ.

ಎಂಇಎಸ್‌ದಿಂದ ಕಿರಣ ಸಾಯಿನಾಕ್, ಮಾಜಿ ಮೇಯರ್ ಸಂಭಾಜಿ ಪಾಟೀಲ, ದೀಪಕ ದಳವಿ, ನೇತಾಜಿ ಮನಗೂತ್ಕರ್ ಕಣಕ್ಕಿಳಿಯಲು ಪ್ರಯತ್ನ ಮುಂದುವರಿಸಿದ್ದಾರೆ. ಆದರೆ, ಎಂಇಎಸ್‌ದಲ್ಲಿರುವ ಗುಂಪುಗಾರಿಕೆಯಿಂದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಬಂಡಾಯ ಮುಗಿಲು ಮುಟ್ಟಿದ್ದರಿಂದ ಎಂಇಎಸ್ ಈವರೆಗೂ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿಲ್ಲ. ಸಾಯಿನಾಕ್, ಸಂಭಾಜಿ ಪಾಟೀಲ ಸೇರಿದಂತೆ ಉಳಿದವರು ಸಹ ಸ್ಪರ್ಧೆಗೆ ಇಳಿಯುವುದಾಗಿ ಖಚಿತಪಡಿಸಿದ್ದಾರೆ. ಇದರಿಂದ ಎಂಇಎಸ್ ನಾಯಕರಿಗೆ ತಲೆನೋವಾಗಿದೆ.
ಎಂಇಎಸ್ ಹಿಡಿತಕ್ಕೆ ಈ ಕ್ಷೇತ್ರ ಪಡೆಯಲೇಬೇಕೆಂಬ ನಾಯಕರ ಆಸೆಗೆ ಈಗಲೇ ತಣ್ಣೀರೆರಚಿದಂತಾಗಿದೆ. ಭಿನ್ನಮತ ಶಮನಗೊಳಿಸಲು ನಿತ್ಯ ಸಭೆಯಲ್ಲಿ ತೊಡಗಿರುವ ಎಂಇಎಸ್ ನಾಯಕರು, ಬಂಡಾಯ ಸಾರಲು ಮುಂದಾಗಿರುವ ಆಕಾಂಕ್ಷಿಗಳನ್ನು ಸಮಾಧಾನ ಪಡಿಸಲು ಹೆಣಗಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಎಂಇಎಸ್‌ನಲ್ಲಿ ಉಲ್ಬಣಿಸಿರುವ ಭಿನ್ನಮತ ಶಮನಗೊಳ್ಳುವ ಸಾಧ್ಯತೆ ಕಡಿಮೆ ಎಂದು ಅದರ ನಾಯಕರೇ ಹೇಳುತ್ತಿದ್ದಾರೆ. ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯುವುದು ಗ್ಯಾರಂಟಿ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಎಂಇಎಸ್ ನಾಯಕರಿಗೆ ನಿಂಗಲಾರದ ಬಿಸಿ ತುಪ್ಪವಾಗಿದೆ.

ಎಂಇಎಸ್ ಪರಿಸ್ಥಿತಿ ಒಂದೆಡೆಯಾದರೆ, ಕಾಂಗ್ರೆಸ್ ಪಕ್ಷದ ಸ್ಥಿತಿ ಇದರಿಂದ ಹೊರತಾಗಿಲ್ಲ. ಕಾಂಗ್ರೆಸ್ ಪಕ್ಷದ ಅನೀಲ ಪೋತದಾರ, ಜಯರಾಜ್ ಹಲಗೇಕರ, ಶಂಕರ ಮುನವಳ್ಳಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಆದರೆ ಇದುವರೆಗೆ ಪಕ್ಷದ ವರಿಷ್ಠರಿಂದ ಯಆವದ ಆದೇಶ ಬಂದಿಲ್ಲ. ಟಿಕೆಟ್ ಆಕಾಂಕ್ಷಿಗಳು ನವದೆಹಲಿಯಲ್ಲಿ ಬೀಡು ಬಿಟ್ಟಿದ್ದು, ತಮ್ಮ ತಮ್ಮ ನಾಯಕರ ಮೇಲೆ ಒತ್ತಡ ತರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಟಿಕೆಟ್ ಸಿಗದಿದ್ದರೆ ಅಧಿಕೃತ ಅಭ್ಯರ್ಥಿಯನ್ನು ಸೋಲಿಸುವ ಲೆಕ್ಕಾಚಾರದಲ್ಲಿ ಈಗಲೇ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT