ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಜಿ. ರಸ್ತೆಗೆ ಬಂದ ಮೆಟ್ರೊ ರೈಲು

Last Updated 23 ಜನವರಿ 2011, 20:25 IST
ಅಕ್ಷರ ಗಾತ್ರ

ಬೆಂಗಳೂರು: ಮಿಣುಕು ಬೆಳಕು ಬೀರುತ್ತಾ ಘೀಳಿಡುವ ಹಾರ್ನ್‌ನೊಂದಿಗೆ ಹೆಜ್ಜೆಯ ಮೇಲೆ ಹೆಜ್ಜೆಯಿರಿಸಿದಂತೆ  ಮೆಟ್ರೊ ರೈಲು ಬಂದಾಗ ಜನರಲ್ಲಿ ಪುಳಕ. ಜತೆಗೆ ಸಂಭ್ರಮದ ಚಪ್ಪಾಳೆ. ರೈಲಿನ ಸದ್ದು ಕೇಳಿದೊಡನೆ ಹಲಸೂರು, ಟ್ರಿನಿಟಿ ವೃತ್ತ, ಬ್ರಿಗೇಡ್ ಜಂಕ್ಷನ್, ಎಂ.ಜಿ.ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಕೂಡ ಕುತೂಹಲದಿಂದ ಕ್ಷಣ ನಿಂತು ಖುಷಿ ಪಟ್ಟರು.

ನಗರದ ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆಯವರೆಗಿನ ಮೆಟ್ರೊ ರೀಚ್-1 ಮಾರ್ಗದಲ್ಲಿ ಭಾನುವಾರ ಬಹು ನಿರೀಕ್ಷಿತ ಮೆಟ್ರೊ ರೈಲು ತನ್ನ ಪ್ರಥಮ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಅಧಿಕಾರಿಗಳು, ಅವರ ಕುಟುಂಬ ವರ್ಗ ಹಾಗೂ ಆಹ್ವಾನಿತ ಅತಿಥಿಗಳು ಪರೀಕ್ಷಾರ್ಥ ಸಂಚಾರಕ್ಕೆ ಸಾಕ್ಷಿಯಾದರು.

ಒಟ್ಟು 6.7 ಕಿ.ಮೀ ಉದ್ದದ ಜೋಡಿ ಮಾರ್ಗದಲ್ಲಿ ಒಂದು ಬದಿಯ ಹಳಿಗಳ (ಅಪ್‌ಲೈನ್) ಮೇಲೆ ಸುಮಾರು ನಾಲ್ಕು ಗಂಟೆಗಳ ಕಾಲ ಪರೀಕ್ಷಾರ್ಥ  ಸಂಚಾರ ನಡೆಸಲಾಯಿತು.  ಮೊದಲ ಸಂಚಾರ ಆದ ಕಾರಣ ರೈಲು ವೇಗವಾಗಿ ಚಲಿಸಲಿಲ್ಲ. ಅಡಿಗಡಿಗೂ ಹಳಿ ವ್ಯವಸ್ಥೆಯನ್ನು ಅಧಿಕಾರಿಗಳು ಪರೀಕ್ಷಿಸಿದರು. ಇದರಿಂದ ರೈಲು ನಿಧಾನಗತಿಯಲ್ಲಿ ಕ್ರಮಿಸಿತು.

ಬೈಯಪ್ಪನಹಳ್ಳಿ, ಸಿಎಂಎಚ್ ರಸ್ತೆ ನಿಲ್ದಾಣಗಳನ್ನು ಹಾದು ಹಲಸೂರು ನಿಲ್ದಾಣಕ್ಕೆ ಆಗಮಿಸಿದ ರೈಲು ತಾಂತ್ರಿಕ ತೊಂದರೆಯಿಂದಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲೇ ನಿಲ್ಲಬೇಕಾಯಿತು. ತೊಂದರೆಗಳನ್ನು ನಿವಾರಿಸಿಕೊಂಡ ಬಳಿಕ ರೈಲು ಟ್ರಿನಿಟಿ ವೃತ್ತದ ನಿಲ್ದಾಣದಿಂದ ಎಂಜಿ ರಸ್ತೆ ನಿಲ್ದಾಣದ ಗಡಿವರೆಗೂ ನಿರಾತಂಕವಾಗಿ ಬಂದಿತು. ಬಳಿಕ ಬಂದ ಹಳಿಗಳ ಮೇಲೆಯೇ ರೈಲು ವಾಪಸ್ ಬೈಯಪ್ಪನಹಳ್ಳಿ ಡಿಪೋಗೆ ಹಿಂದಿರುಗಿತು.

ಮೆಟ್ರೊದ ಪ್ರತಿ ರೈಲು ಗಾಡಿಗೂ ಮುಂದೆ ಮತ್ತು ಹಿಂದೆ ಎಂಜಿನ್ ಅಥವಾ ಚಾಲಕನ ಕ್ಯಾಬಿನ್ ಇರುತ್ತದೆ. ಚಾಲಕರು ಮಾತ್ರ ತಾವು ಚಲಿಸುವ ದಿಕ್ಕಿಗೆ ಅನುಗುಣವಾಗಿ ಮುಂದಿನ ಅಥವಾ ಹಿಂದಿನ ಕ್ಯಾಬಿನ್‌ಗೆ ಬಂದು ರೈಲು ಚಲಾಯಿಸುತ್ತಾರೆ.

 ಜೋಡಿ ಮಾರ್ಗದ ಎರಡೂ ಬದಿಯ ಹಳಿಗಳ ಮೇಲೆ ಪರೀಕ್ಷಾರ್ಥ ಸಂಚಾರ ಯಶಸ್ವಿಯಾದ ಮೇಲೆ ರೈಲು ಬಂದ ಹಳಿಗಳ ಮೇಲೆಯೇ ಹಿಂದಿರುಗುವುದಿಲ್ಲ. ಬದಲಿಗೆ ಅಪ್‌ಲೈನ್‌ನಲ್ಲಿ ಬರುವ ರೈಲು, ಹಳಿಗಳ ನಡುವಿನ ‘ಎಕ್ಸ್’ ಆಕಾರದ ವ್ಯವಸ್ಥೆ ಮೂಲಕ ಡೌನ್‌ಲೈನ್ ಹಳಿಗಳಿಗೆ ಸ್ಥಳಾಂತರಗೊಂಡು ಹಿಂದಿರುಗುತ್ತದೆ.

ಕಟ್ಟಡಗಳ ಮೇಲೆ ಜನ: ನಗರದ ಎಂ.ಜಿ.ರಸ್ತೆ ನಿಲ್ದಾಣಕ್ಕೆ ಮೆಟ್ರೊ ರೈಲು ಆಗಮಿಸಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಕೆಲ ಸಾರ್ವಜನಿಕರು ಹತ್ತಿರದ ಕಟ್ಟಗಳನ್ನು ಏರಿ ರೈಲು ಬರುವುದನ್ನು ಕಾತಾರದಿಂದ ನಿರೀಕ್ಷಿಸಿದರು.

ಮಧ್ಯಾಹ್ನ 2 ಗಂಟೆಯಿಂದಲೇ ಕೆಲವರು ಕಟ್ಟಡಗಳನ್ನು ಏರಿ ಕುಳಿತಿದ್ದರು. ಮಾಧ್ಯಮದವರ ಕ್ಯಾಮರಾಗಳು ರೈಲು ಆಗಮನವನ್ನು ಸೆರೆಹಿಡಿಯಲು ಕಣ್ಣಗಲಿಸಿ ಕುಳಿತವು. ಸಂಜೆ 7ರ ಸುಮಾರಿಗೆ ಮೆಟ್ರೊ ಆಗಮಿಸಿದಾಗ ಕಾದಿದ್ದವರ ಸಂಭ್ರಮ ಮೇರೆ ಮೀರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT