ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ನಂತರ ಎಂ. ಬಿ. ಎ. ಅಥವಾ ಎಂ.ಟೆಕ್?

Last Updated 3 ಜನವರಿ 2011, 10:50 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಎಂಜಿನಿಯರಿಂಗ್ ಶಿಕ್ಷಣರಂಗದಲ್ಲಿ ಕಳೆದ ಎರಡು ದಶಕಗಳ ಮಹತ್ತರ ಬೆಳವಣಿಗೆಯೆಂದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಂಜಿನಿಯರಿಂಗ್ ಪದವೀಧರರು ಹೊರ ಬರುತ್ತಿರುವುದು. ಕೆಲ ಅಂಕಿ ಅಂಶಗಳ ಪ್ರಕಾರ ಚೀನಾ ದೇಶದ ನಂತರ ಭಾರತ ದೇಶವೇ ಇಂದು ಹೆಚ್ಚು ಸಂಖ್ಯೆಯಲ್ಲಿ ಎಂಜಿನಿಯರಿಂಗ್ ಪದವೀಧರರನ್ನು ಉತ್ಪಾದಿಸುತ್ತಿದೆ. ಅಂದಾಜಿನಂತೆ ವರ್ಷವೊಂದಕ್ಕೆ ಸುಮಾರು ಆರು ಲಕ್ಷ ಎಂಜಿನಿಯರಿಂಗ್ ಪದವೀಧರರು ಭಾರತ ದೇಶದ ನಾನಾ ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿದ್ದಾರೆ.

ಇದರಲ್ಲಿ ಮೂರನೇ ಒಂದು ಭಾಗದಷ್ಟು ಜನ ಮಾಹಿತಿ ತಂತ್ರಜ್ಞಾನ ಅಥವಾ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಪದವಿ ಗಳಿಸಿರುತ್ತಾರೆ. ಶೇಕಡಾ 70ರಷ್ಟು  ಎಂಜಿನಿಯರಿಂಗ್ ಪದವೀಧರರು ದಕ್ಷಿಣ ಭಾರತದ ರಾಜ್ಯಗಳು ಮತ್ತು ಮಹಾರಾಷ್ಟ್ರ ರಾಜ್ಯದಿಂದ ಪದವಿ ಪಡೆದಿರುತ್ತಾರೆ. ಈ ಎಲ್ಲಾ  ಎಂಜಿನಿಯರಿಂಗ್ ಪದವೀಧರರಿಗೆ ಸೂಕ್ತವಾದ ಕೆಲಸಗಳು ಸಿಗುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರ “ಇಲ್ಲ”. ಹೀಗಾಗಿ ಬಹುತೇಕ ಪದವೀಧರರು ಯಾವುದಾದರು ಸರಿ ಎಂಬಂತೆ ಸಿಕ್ಕಿದ ಕೆಲಸಕ್ಕೆ ಸೇರುತ್ತಾರೆ.

ಎಷ್ಟೋ ಕಂಪೆನಿಗಳಲ್ಲಿ ಎಂಜಿನಿಯರಿಂಗ್ ಮತ್ತು ಬೇರೆ ಪದವೀಧರರ ಕೆಲಸಗಳ ಮಧ್ಯೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹಾಗಾದರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಏನೆಂದರೆ ಎಂಜಿನಿಯರಿಂಗ್ ಪದವೀಧರರು ತಮ್ಮ  ವೃತ್ತಿ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಅದರ ಮೂಲಕ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬೇಕು. ಎದಕ್ಕೆ ಸೂಕ್ತ ಮಾರ್ಗವೆಂದರೆ ಹೆಚ್ಚಿನ ಶಿಕ್ಷಣ, ಅಂದರೆ ಸ್ನಾತಕೋತ್ತರ ಪದವಿ ಅಥವಾ ವೃತ್ತಿಪರ ಸರ್ಟಿಫಿಕೇಟ್ ಕೋರ್ಸುಗಳಿಗೆ ಸೇರುವುದು. ಸ್ನಾತಕೋತ್ತರ ಶಿಕ್ಷಣದಲ್ಲಿ ಹೆಚ್ಚಿನ ಪದವೀಧರರ ಆಕಾಂಕ್ಷೆಯೆಂದರೆ ಎಂ. ಬಿ. ಎ. ಅಥವಾ ಎಂ.ಟೆಕ್ ವ್ಯಾಸಂಗ ಮಾಡುವುದು. ಈ ಎರಡು ಜನಪ್ರಿಯ ಹಾಗೂ ಕೌಶಲ್ಯಪೂರಕ ಪದವಿಗಳ ಒಂದು ವಿಶ್ಲೇಷಣೆ ಪ್ರಸ್ತುತ ಲೇಖನದ ಉದ್ದೇಶ.

ಎಂಜಿನಿಯರಿಂಗ್ ಪದವಿ ಒಂದು ಪ್ರತಿಷ್ಠಿತ ವೃತ್ತಿಪರ ಪದವಿ. ಅಂದಮೇಲೆ ಇನ್ನೂ ಹೆಚ್ಚಿನ ಶಿಕ್ಷಣ ಅದರಲ್ಲೂ ಪುನಃ ಎರಡು ವರ್ಷಗಳ ಇನ್ನೊಂದು ವೃತ್ತಿಪರ ಸ್ನಾತಕೋತ್ತರ ಪದವಿ ಅಗತ್ಯವೇ?  ಎಂಜಿನಿಯರಿಂಗ್ ಪದವಿ ಪಡೆಯಲು ಸಾಕಷ್ಟು ಹಣ ಖರ್ಚಾಗುವುದು ಎಲ್ಲರಿಗೂ ತಿಳಿದ ವಿಷಯ. ಅದರಲ್ಲೂ ನಿರ್ದಿಷ್ಟ ಕಾಲೇಜು, ಇಂತಹುದೇ ವಿಭಾಗ, ಹಾಸ್ಟೆಲ್, ಪುಸ್ತಕಗಳು, ಕಂಪ್ಯೂಟರ್, ಮತ್ತು ಹೆಚ್ಚುವರಿ ನೈಪುಣ್ಯಕ್ಕಾಗಿ ಓದಬೇಕಾಗುವ ಸರ್ಟಿಫಿಕೇಟ್ ಕೋರ್ಸುಗಳು, ಇವೆಲ್ಲವೂ ಸೇರಿ ಪದವಿ ಪಡೆಯುವ ಹೊತ್ತಿಗೆ ಬಹಳಷ್ಟು ಹಣ ಖರ್ಚಾಗಿ ಹೋಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉನ್ನತ ಶಿಕ್ಷಣ ಅದರಲ್ಲೂ ಪುನಃ ಎರಡು ವರ್ಷಗಳ ಇನ್ನೊಂದು ವೃತ್ತಿಪರ ಸ್ನಾತಕೋತ್ತರ ಪದವಿ ಬಹಳಷ್ಟು ಜನರಿಗೆ ಎಟುಕಲಾರದ ಅಥವಾ ಹೆಚ್ಚುವರಿ ಹೊರೆಯಾಗುವ ಸಾಧ್ಯತೆಯೇ ಜಾಸ್ತಿ. ಅಂದಮೇಲೆ ಸ್ನಾತಕೋತ್ತರ ಪದವಿಯ ಬಗ್ಗೆ ಯೋಚಿಸಲು ಕಾರಣಗಳೇನು? ಈಗಾಗಲೇ ಮೇಲೆ ತಿಳಿಸಿದಂತೆ ಮುಖ್ಯ ಕಾರಣ ಎಲ್ಲಾ ಎಂಜಿನಿಯರಿಂಗ್ ಪದವೀಧರರಿಗೆ ಸೂಕ್ತವಾದ ಕೆಲಸಗಳು ಸಿಗದೇ ಇರುವುದು ಮತ್ತು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿರುವ ಎಂಜಿನಿಯರಿಂಗ್ ಪದವೀಧರರ ಮಧ್ಯೆ ಉತ್ತಮ ಉದ್ಯೋಗ ಅವಕಾಶಗಳಿಗಾಗಿ ತೀವ್ರ ಪೈಪೋಟಿ ಇರುವುದು. ಇದರ ಜೊತೆಗೆ ಬೇರೆ ಕಾರಣಗಳೆಂದರೆ:

-ಎಂಜಿನಿಯರಿಂಗ್ ಪದವಿಯ ನಂತರ ಕೆಲಸ ಸಿಕ್ಕದಿದ್ದವರು ಅಥವಾ ಇಂತಹುದೇ ಕೆಲಸ ಬೇಕೆಂದು ಹಂಬಲಿಸುವವರು ಅಥವಾ ಉನ್ನತ ಶಿಕ್ಷಣದ ಬಗ್ಗೆ ಆಸಕ್ತಿಯುಳ್ಳವರು ಸ್ನಾತಕೋತ್ತರ ಪದವಿಯ ಬಗ್ಗೆ ಯೋಚಿಸಲಾರಂಭಿಸುತ್ತಾರೆ.

-ಸ್ನಾತಕೋತ್ತರ ಪದವಿಯ ಬಗ್ಗೆ ಆಸಕ್ತಿ ವಹಿಸಲು  ಇನ್ನೊಂದು ಮುಖ್ಯ ಕಾರಣವೇನೆಂದರೆ ಕನಿಷ್ಠ ಶೇಕಡ 25ರಷ್ಟು ಪದವೀಧರರು ಉದ್ಯೋಗಗಳಿಗೆ ಬೇಕಾದ ಸಾಮರ್ಥ್ಯ ಅಥವಾ ಗುಣಮಟ್ಟ  ಇಲ್ಲದವರು. (ಸಾ್‌ಟವೇರ್ ಕಂಪೆನಿಗಳ ದಿಗ್ಗಜ ಇನ್ಫೋಸಿಸ್‌ನ ಮುಖ್ಯಸ್ಥರಾದ  ನಾರಾಯಣಮೂರ್ತಿಯವರು ಅನೇಕ ಸಂದರ್ಭಗಳಲ್ಲಿ ಎಂಜಿನಿಯರಿಂಗ್ ಪದವೀಧರರ ಕಳಪೆ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ). ಇಂತಹ ಪದವೀಧರರು ಹೆಚ್ಚಿನ ಶಿಕ್ಷಣ ಹೊಂದಲೇಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ.

-ಸ್ನಾತಕೋತ್ತರ ಪದವಿ ಪಡೆದಿರುವ ಎಂಜಿನಿಯರಿಂಗ್ ಪದವೀಧರರಿಗೆ ಸ್ವಲ್ಪವೇ ಅನುಭವದ ನಂತರ ಅಥವಾ ಬೇಗ ಉನ್ನತ ಹುದ್ದೆಗಳನ್ನು ಮತ್ತು ಪ್ರತಿಷ್ಠಿತ ಸ್ಥಾನಗಳನ್ನು ಪಡೆಯುವ ಅವಕಾಶಗಳು ಹೆಚ್ಚು. ಹೀಗಾಗಿ “ಕೆರಿಯರ್ ಪ್ರೋಗ್ರೆಶನ್’’ ತೃಪ್ತಿಕರವಾಗಿತ್ತದೆ.

-ಸ್ನಾತಕೋತ್ತರ ಪದವಿ ಪಡೆದಿರುವ ಎಂಜಿನಿಯರಿಂಗ್ ಪದವೀಧರರು ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಬೇಗ ಮುಂದುವರಿಯುವ ಸಾಧ್ಯತೆಗಳು ಹೆಚ್ಚು.

-ಎಂಜಿನಿಯರಿಂಗ್ ಪದವೀಧರರು ತಮ್ಮ ವೃತ್ತಿಯಲ್ಲಿ ಬಹಳ ಬೇಗ ತಮ್ಮ ತಾಂತ್ರಿಕ ಕೌಶಲ್ಯದ ಬಳಕೆಯ ಜೊತೆಗೆ ಮಾನವ ಸಂಪನ್ಮೂಲಗಳ ನಿರ್ವಹಣೆಯನ್ನೂ ಹೊರಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಎಂ.ಬಿ.ಎ. ಪದವಿಯು ಅವರಿಗೆ ಹೆಚ್ಚಿನ ನಿಪುಣತೆಯನ್ನು ನೀಡುತ್ತದೆ.

-ಶಿಕ್ಷಕ ವೃತ್ತಿ ಬಯಸುವವರಿಗೆ ಮತ್ತು ಮುಂದೆ ಸಂಶೋಧನೆ ಹಾಗೂ ಪಿಎಚ್. ಡಿ. ಪದವಿಯ ಮೇಲೆ ಕಣ್ಣಿಟ್ಟಿರುವವರಿಗೆ  ಸ್ನಾತಕೋತ್ತರ ಪದವಿ ಅತ್ಯಗತ್ಯ.

-ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ ಒಂದರಿಂದ ಮೂರು ವರ್ಷಗಳ ಅನುಭವ ಪಡೆದು ನಂತರ ಸ್ನಾತಕೋತ್ತರ ಪದವಿಗಳಿಗೆ ಸೇರುವವರ ಸಂಖ್ಯೆಯೂ ಈಗ ಹೆಚ್ಚಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಎಂ.ಬಿ.ಎ. ಮತ್ತು ಎಂ.ಟೆಕ್ ಹಾಗೂ ಇತರ ಸ್ನಾತಕೋತ್ತರ ಪದವಿಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಪ್ರತಿವರ್ಷ ದೇಶದೊಳಗೆ ಅಥವಾ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಬಯಸುವವರ ಸಂಖ್ಯೆ ಏರುತ್ತಲೇ ಇದೆ.

ಈ ಬೇಡಿಕೆಯಲ್ಲಿ ಎಂ.ಬಿ.ಎ. ಪದವಿಯದ್ದೇ ಸಿಂಹಪಾಲು. ಇದಕ್ಕೆ ಸಮರ್ಥನೆಯೆಂದರೆ ಕಳೆದ ಹದಿನೈದು ವರ್ಷಗಳಲ್ಲಿ ದೇಶದ ಬಹುತೇಕ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳು ತಮ್ಮ ಪ್ರವೇಶಕ್ಕೆ ಪರಿಗಣಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಾದ “ಕ್ಯಾಟ್’’ ಅನ್ನು ತೆಗೆದುಕೊಳ್ಳುವವರ ಸಂಖ್ಯೆ ಸತತವಾಗಿ ಏರಿ ಈಗ ಒಂದೂವರೆ ಲಕ್ಷ ತಲುಪಿದೆ.

ಈ ಬೆಳವಣಿಗೆಗೆ ಸಮಾನಾಂತರವಾಗಿ ದೇಶದ ತುಂಬಾ ಮ್ಯಾನೇಜ್ಮೆಂಟ್  ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿದ್ದು, ಇವುಗಳ ಸಂಖ್ಯೆಯೇ ಎರಡು ಸಾವಿರವನ್ನು ದಾಟಿದೆ.

ಈ ರೀತಿಯ ಸಂಸ್ಥೆಗಳಲ್ಲಿ ಎಂ.ಬಿ.ಎ. ಪದವಿ ಅಥವಾ ತತ್ಸಮಾನ ಪಿ.ಜಿ.ಡಿ.ಎಂ. ಪದವಿ ನೀಡುವ “ಬಿ-ಸ್ಕೂಲುಗಳು” ಎಂದು ಕರೆಯಲ್ಪಡುವ ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳ ಆಧೀನಕ್ಕೊಳಪಟ್ಟ ಕಾಲೇಜುಗಳು ಇವಲ್ಲದೇ ದೇಶದ ಪ್ರತಿಷ್ಠಿತ ಹಾಗೂ ಸುಪ್ರಸಿದ್ದ ಐ.ಐ.ಎಂ.ಗಳು, ಮತ್ತು ಪ್ರತ್ಯೇಕ ಎಂ.ಬಿ.ಎ. ವಿಭಾಗಗಳನ್ನು ಹೊಂದಿರುವ ಐ.ಐ.ಟಿ.ಗಳು ಮತ್ತು ಎನ್. ಐ. ಟಿ. ಗಳು ಸೇರಿವೆ. ಇದಲ್ಲದೇ ವಾರಾಂತ್ಯದ ತರಗತಿ ನಡೆಯುವ ಕೋರ್ಸ್‌ಗಳು, ದೂರ ಶಿಕ್ಷಣದ ಕೋರ್ಸ್‌ಗಳು ಕೂಡಾ ಇವೆ.

ಹಲವಾರು ಹೆಸರಾಂತ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶ ಪ್ರಕ್ರಿಯೆಯನ್ನು ಗಮನಿಸಿದರೆ ಪ್ರವೇಶಾಕಾಂಕ್ಷಿಗಳಲ್ಲಿ ಶೇಕಡಾ 50 ಕ್ಕೂ ಅಧಿಕ ಮಂದಿ ಎಂಜಿನಿಯರಿಂಗ್ ಪದವೀಧರರು, ಮತ್ತು ಇವರಲ್ಲಿ ಮೂರನೇ ಒಂದರಷ್ಟು ಮಂದಿ ಹುಡುಗಿಯರು.
ಈ ಪ್ರವೃತ್ತಿ ಹೆಚ್ಚಾಗುತ್ತಲೇ ಇದ್ದು, ಪ್ರವೇಶ ಪಡೆದವರ ಒಟ್ಟು ಸಂಖ್ಯೆಯಲ್ಲಿ  ನಿಧಾನವಾಗಿ ಎಂಜಿನಿಯರಿಂಗ್ ಪದವೀಧರರ ಪ್ರಮಾಣ ಶೇಕಡಾ 75 ನ್ನು ತಲುಪುತ್ತಿದೆ. ಇದನ್ನು ಮನಗಂಡು ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳು ಅವರ ಆವರಣದಲ್ಲೇ ಪ್ರತ್ಯೇಕ ಎಂ.ಬಿ.ಎ. ವಿಭಾಗಗಳನ್ನು ತೆರೆದಿವೆ.

ಇಲ್ಲಿ ಪ್ರವೇಶಾವಕಾಶ ಎಂಜಿನಿಯರಿಂಗ್ ಮತ್ತು ಬೇರೆ ಪದವೀಧರರಿಗೂ ಇದೆ.ಆದರೆ ಮ್ಯಾನೇಜ್‌ಮೆಂಟ್ ನಲ್ಲಿ ವಿಶೇಷ ಪದವಿಯನ್ನು ನೀಡುವ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಎಂಜಿನಿಯರಿಂಗ್ ಪದವೀಧರರು ಮಾತ್ರ ಪ್ರವೇಶಕ್ಕೆ ಅರ್ಹರು. ಉದಾಹರಣೆಗೆ: ನಾಸಿಕ್‌ನಲ್ಲಿರುವ ಸಿಂಬಯಾಸಿಸ್  ಇನ್ಸ್‌ಟಿಟ್ಯೂಟ್ ಾರ್ ಆಪರೇಶನ್ಸ್ ಮ್ಯಾನೇಜ್ ಮೆಂಟ್ ಮತ್ತು ಮುಂಬೈನಲ್ಲಿರುವ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಾರ್  ಟ್ರೈನಿಂಗ್ ಇನ್ ಇಂಡಸ್ಟ್ರಿಯಲ್ ಎಂಜಿನಿಯರಿಂಗ್.

ಈ ಬೆಳವಣಿಗೆಯನ್ನೇ ಪ್ರಧಾನವಾಗಿಟ್ಟುಕೊಂಡು ಮ್ಯಾನೇಜ್ಮೆಂಟ್  ಶಿಕ್ಷಣ ಸಂಸ್ಥೆಗಳು “ಬಿ.ಇ., + ಎಂ. ಬಿ. ಎ. = ಅತ್ಯುತ್ತಮ” ಎಂದು ಬಿಂಬಿಸಿ ಹೆಚ್ಚು ಪ್ರವೇಶಾವಕಾಶಗಳನ್ನು ಕಲ್ಪಿಸಿವೆ. ಅದರ ಜೊತೆಗೇ ತಮ್ಮ ಸಂಸ್ಥೆಗಳಿಗೇ ಸೇರಲಿ ಎಂದು ಅವರ ಸಂಸ್ಥೆಗಳಲ್ಲಿ ಓದಿದ ಎಂ. ಬಿ. ಎ. ಪದವೀಧರರಿಗೆ ಸಿಕ್ಕಿದ ಉದ್ಯೋಗಾವಕಾಶಗಳು ಯಾವುವು, ಅವರನ್ನು ಆಯ್ಕೆ ಮಾಡಿದ ಕಂಪೆನಿಗಳು ಯಾವುವು, ನೀಡಲಾದ ಕನಿಷ್ಠ ಮತ್ತು ಗರಿಷ್ಠ ಸಂಬಳಗಳು ಎಷ್ಟು, ಎಂಬ ವಿಷಯಗಳನ್ನು ಆಕರ್ಷಣೀಯವಾಗಿ ಚಿತ್ರಿಸುತ್ತವೆ.  ಇದರಿಂದಾಗಿ ಬಿ. ಇ. ನಂತರ ಎಂ. ಬಿ. ಎ. ಮಾಡುವುದೇ ಸರಿ ಎಂಬ ಅಭಿಪ್ರಾಯ ಬಂದರೆ ಆಶ್ಚರ್ಯವೇನಿಲ್ಲ.

ಎಂ. ಬಿ. ಎ. ಗೆ ಸೇರುವ ಎಂಜಿನಿಯರಿಂಗ್ ಪದವೀಧರರಲ್ಲಿ ಹೆಚ್ಚಿನ ಮಂದಿ ಆಯ್ಕೆ ಮಾಡುವುದು “ೈನಾನ್ಸ್‌” ಅಥವಾ “ಮಾರ್ಕೆಟಿಂಗ್‌“ ಪರಿಣತಿಗಳನ್ನು. ಕಾರಣ ಈ ಕ್ಷೇತ್ರಗಳಲ್ಲಿ ಇರುವ ವಿಪುಲ ಅವಕಾಶಗಳು ಮತ್ತು ಉತ್ತಮ ಸಂಬಳ ಸೌಲಭ್ಯಗಳು.
ಸ್ಪಷ್ಟವಾಗಿ ಹೇಳಬೇಕೆಂದರೆ ಎಂಜಿನಿಯರಿಂಗ್ ಪದವೀಧರರು ಬಹುಮಟ್ಟಿಗೆ ಒಲವು ತೋರುವುದು ಹೆಚ್ಚಾಗಿ ಪ್ರತಿಫಲ ಕೊಡುವ ಸೇವಾ ಕ್ಷೇತ್ರಗಳತ್ತ. ಇದರಿಂದಾಗಿ ಎಂಜಿನಿಯರಿಂಗ್‌ನ ಮೂಲ ಕ್ಷೇತ್ರಗಳಾದ ತಯಾರಿಕೆ, ವಿನ್ಯಾಸ, ಅಥವಾ ನಿರ್ವಹಣೆಗೆ ಸಂಬಂಧಪಟ್ಟ ಕೆಲಸಗಳನ್ನು ಆಯ್ದುಕೊಳ್ಳುವವರು ಕಡಿಮೆಯಾಗುತ್ತಿದ್ದಾರೆ.
 
ಅಂದರೆ ಮೂಲ ಶಿಕ್ಷಣವಾದ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ನೈಪುಣ್ಯತೆಗೆ ಮತ್ತು ತಾಂತ್ರಿಕ ಕೌಶಲ್ಯಗಳಿಗೆ ಅವಕಾಶ ವಿಲ್ಲದಂತಾಗುವುದಿಲ್ಲವೇ ಎಂಬ ಪ್ರಶ್ನೆಗೆ ವಿಧ್ಯಾರ್ಥಿಗಳಿಂದಾಗಲೀ, ಅಧ್ಯಾಪಕರಿಂದಾಗಲಿ, ಅಥವಾ ಕಂಪೆನಿಯವರಿಂದಾಗಲಿ ಸರಿಯಾದ ಉತ್ತರ ಸಿಗುವುದಿಲ್ಲ. ಆದರೆ  ಎಂಜಿನಿಯರಿಂಗ್ ಜೊತೆಗೆ ಮ್ಯಾನೇಜ್ಮೆಂಟ್ ಪದವಿ ಹೊಂದಿರುವವರು ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ ಮತ್ತು ಬಹುಬೇಗ ವೃತ್ತಿರಂಗದಲ್ಲಿ ಪ್ರಗತಿ ಹೊಂದುತ್ತಾರೆ ಎನ್ನುವುದು ಹಿರಿಯ ಅಧಿಕಾರಿಗಳ ಮತ್ತು ನಿಪುಣರ ಅಭಿಪ್ರಾಯ.

ಈಗ ಎಂ.ಟೆಕ್. ಶಿಕ್ಷಣದತ್ತ ಒಂದು ನೋಟ
1980ರ ದಶಕದವರೆಗೂ ಎಂ.ಟೆಕ್. ಪದವಿ ಪಡೆಯಬೇಕಾದರೆ ದೇಶದ ಹೆಗ್ಗಳಿಕೆ ವಿದ್ಯಾಲಯಗಳಾದ ಐ. ಐ. ಟಿ., ಅಥವಾ ಆರ್. ಎ. ಸಿ., (ಈಗ ಇವುಗಳನ್ನು ಎನ್. ಐ. ಟಿ. ಎಂದು ಕರೆಯಲಾಗುತ್ತಿದೆ) ಅಥವಾ ಕೆಲವೇ ವಿಶ್ವವಿದ್ಯಾನಿಲಯಗಳ ಕಾಲೇಜುಗಳಲ್ಲಿ ಪ್ರವೇಶ ಗಳಿಸಬೇಕಾಗಿತ್ತು.

ಕಾರಣ ಎಂ.ಟೆಕ್. ಪ್ರವೇಶ ಬಯಸಿ ಬರುತ್ತಿದ್ದವರು ಕೆಲವರು ಮಾತ್ರ. ಒಂದು ಅಭಿಪ್ರಾಯದಂತೆ ಅಂದಿನ ಕಾಲದಲ್ಲಿ 5 ವರ್ಷಗಳ ಅವಧಿಯ ಎಂಜಿನಿಯರಿಂಗ್ ಓದಿದನಂತರ ಪುನಃ 2 ವರ್ಷಗಳ ಅವಧಿಯ ಎಂ.ಟೆಕ್. ಪದವಿಗಾಗಿ ಸಮಯ ಹಾಗೂ ಸಂಪನ್ಮೂಲದ ಬಂಡವಾಳ ಅರ್ಹವೂ ಅಲ್ಲ ಮತ್ತು ಅಗತ್ಯವೂ ಇಲ್ಲ ಎಂಬುದಾಗಿತ್ತು. ಹೀಗಾಗಿ ಕಾಲೇಜು ಶಿಕ್ಷಕರಾಗುವ ಆಸೆ ಇದ್ದವರು ಅಥವಾ ಉನ್ನತ ಶಿಕ್ಷಣದತ್ತ ಗುರಿ ಇಟ್ಟವರು ಮಾತ್ರ ಎಂ.ಟೆಕ್. ಕೋರ್ಸಿಗೆ ಪ್ರವೇಶ ಬಯಸುತ್ತಿದ್ದರು.
 
ಇದೇ ಕಾರಣಕ್ಕಾಗಿ ಲಭ್ಯವಿದ್ದ ಸೀಟುಗಳು ಕಡಿಮೆ ಇದ್ದವು. ಆದರೆ ಸ್ನಾತಕ ಪದವಿಯ ಅವಧಿ 4 ವರ್ಷಗಳಿಗೆ ಇಳಿದ ನಂತರ ಮತ್ತು ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ಜಾಸ್ತಿಯಾಗತೊಡಗಿದಾಗ ಎಂ.ಟೆಕ್. ಪದವಿಗೂ ಬೇಡಿಕೆ ಹೆಚ್ಚಾಗತೊಡಗಿತು. ಹಲವಾರು ಎಂಜಿನಿಯರಿಂಗ್ ಪದವೀಧರರು ಬಹುಮಟ್ಟಿಗೆ ಒಲವು ತೋರುವುದು ಹೆಚ್ಚಾಗಿ ಪ್ರತಿಫಲ ಕೊಡುವ ಸೇವಾ ಕ್ಷೇತ್ರಗಳತ್ತ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎಂ.ಟೆಕ್. ಪದವಿಯ ತರಗತಿಗಳು ಪ್ರಾರಂಭವಾದವು. ಗಮನಾರ್ಹ ವಿಷಯವೆಂದರೆ ಹೊಸ ಶಾಖೆಗಳಲ್ಲಿ ಮತ್ತು ಹೊಸ ಪ್ರಾವೀಣ್ಯತೆಗಳಲ್ಲಿ ಎಂ.ಟೆಕ್. ಪದವಿಗಳು ದೊರಕಲಾರಂಭಿಸಿದವು. ಬಹುತೇಕ ಎಂಜಿನಿಯರಿಂಗ್ ಪದವೀಧರರು ಬಹುಮಟ್ಟಿಗೆ ಒಲವು ತೋರುವುದು ಹೆಚ್ಚಾಗಿ ಪ್ರತಿಫಲ ಕೊಡುವ ಸೇವಾ ಕ್ಷೇತ್ರಗಳತ್ತ. ಎಂಜಿನಿಯರಿಂಗ್ ಕಾಲೇಜುಗಳು  ಎಂ.ಟೆಕ್. ಪದವಿ ಶಿಕ್ಷಣವನ್ನು ಪೈಪೋಟಿಯ ಮೇಲೆ ಪ್ರಾರಂಭಿಸಿದವು.

ಎಂ.ಟೆಕ್. ಪದವಿ ಕೋರ್ಸುಗಳಲ್ಲಿ ಇಂದಿಗೂ 15 ರಿಂದ 20  ವಿಧ್ಯಾರ್ಥಿಗಳನ್ನು ಮಾತ್ರವೇ ತೆಗೆದುಕೊಳ್ಳುವ ಸಂಪ್ರದಾಯ ಮತ್ತು ನಿಬಂಧನೆ ಇದೆ. ಹೀಗಾಗಿ ಎಂ. ಬಿ. ಎ. ತರಗತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತೆ 60 ಅಥವಾ ಅದಕ್ಕೂ ಹೆಚ್ಚು ವಿಧ್ಯಾರ್ಥಿಗಳು ಕಾಣಿಸುವುದಿಲ್ಲ. ಆದುದರಿಂದಲೇ ಎಂ.ಟೆಕ್. ಪದವಿ ಕೋರ್ಸುಗಳನ್ನು ಗಂಭೀರ ಎಂದು ವಿಧ್ಯಾರ್ಥಿಗಳು ಪರಿಗಣಿಸುತ್ತಾರೆ. ಜೊತೆಗೆ ಎಂ. ಬಿ. ಎ. ತರಗತಿಗಳಲ್ಲಿ ಬೇರೆ ಸ್ನಾತಕ ಪದವೀಧರರೂ ಇದ್ದಾರೆ, ಎಂ.ಟೆಕ್. ಪದವಿ ಕೋರ್ಸುಗಳಿಗೆ ಎಂಜಿನಿಯರಿಂಗ್ ಪದವೀಧರರು ಮಾತ್ರವೇ ಪ್ರವೇಶ ಪಡೆಯಬಲ್ಲರು. ಕಡಿಮೆ ಸಂಖ್ಯೆಯ ವಿಧ್ಯಾರ್ಥಿಗಳು ಇರುವುದರಿಂದ ತರಗತಿಗಳಲ್ಲಿ ಶಿಕ್ಷಕರ ಮತ್ತು ವಿಧ್ಯಾರ್ಥಿಗಳ ನಡುವೆ ವಿಚಾರ ವಿನಿಮಯ ಪ್ರಕ್ರಿಯೆ ಹೆಚ್ಚಾಗಿರುತ್ತವೆ. ಇದು ಮಧುರ ಬಾಂಧವ್ಯಕ್ಕೂ ಮತ್ತು ಪರಿಣಾಮಕಾರಿ  ಜ್ಞಾನ ಪ್ರಸರಣೆಗೂ ಕಾರಣವಾಗಬಹುದು.

ಈಗ ಎಂ.ಟೆಕ್. ಪದವಿ ಕೋರ್ಸುಗಳಲ್ಲಿ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ನೈಪುಣ್ಯತೆಯನ್ನು ಪಡೆಯಲು ಗಣನೀಯ ಪ್ರಮಾಣದಲ್ಲಿ ಅವಕಾಶಗಳು ಮತ್ತು ಆಯ್ಕೆಗಳು ಇವೆ. ಕೆಲವು ಎಂ.ಟೆಕ್. ಪದವಿ ಕೋರ್ಸುಗಳು ಯಾವುದೇ ವಿಭಾಗದಲ್ಲಿ ಬಿ. ಇ. ಪದವಿ ಹೊಂದಿರುವವರಿಗೆ ಪ್ರವೇಶಾವಕಾಶವನ್ನು ನೀಡುತ್ತವೆ. ಇಂತಹ ಕೋರ್ಸುಗಳನ್ನು ‘ಇಂಟರ್ ಡಿಸಿಪ್ಲಿನರಿ’ ಕೋರ್ಸ್ ಎಂದು ಹೇಳಲಾಗುವುದು. ಅಂದರೆ ಸ್ನಾತಕ ಮತ್ತು ಸ್ನಾತಕೋತ್ತರ  ಎಂಜಿನಿಯರಿಂಗ್ ಪದವಿಗಳು ಒಂದೇ ವಿಭಾಗಕ್ಕೆ ಅಥವಾ ಒಂದೇ ನೈಪುಣ್ಯತೆಗೆ ಸೇರಿರಬೇಕಾದ ಅಗತ್ಯ ಇಲ್ಲ. ಇದರಲ್ಲೂ ಇತ್ತೀಚಿನ ಬೆಳವಣಿಗೆಯೆಂದರೆ ಯಾವುದೇ ವಿಭಾಗದಲ್ಲಿ ಬಿ. ಇ. ಪದವಿ ಪಡೆದವರು ಎಂ.ಟೆಕ್. ಪದವಿಯನ್ನು ಮಾಹಿತಿ ತಂತ್ರಶಾಸ್ತ್ರದಲ್ಲಿ ಪಡೆಯುವುದು. ಇದರಿಂದ ಇಬ್ಬಗೆಯ ಪ್ರಯೋಜನವನ್ನು ಗಳಿಸಬಹುದು ಮತ್ತು ಉದ್ಯೋಗಾವಕಾಶಗಳಲ್ಲಿ ಪ್ರಾಶಸ್ತ್ಯ ಪಡೆಯಬಹುದು.

ಎಂ.ಟೆಕ್. ಪದವೀಧರರಿಗೆ ಎಂದು ಪ್ರತ್ಯೇಕ ಅವಕಾಶಗಳನ್ನು ನೀಡುವ ಕಂಪೆನಿಗಳು ಕಡಿಮೆ. ಹೀಗಾಗಿ ಪದವಿಯ ನಂತರ ಸಾಮಾನ್ಯವಾಗಿ ಶಿಕ್ಷಕರಾಗುವ ಸಾಧ್ಯತೆ ಹೆಚ್ಚು. ಅದೂ ಅಲ್ಲದೆ ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳು ಮತ್ತು ಸಂಶೋಧನೆಗೆ ಮಹತ್ವ ನೀಡುವ ಸಂಸ್ಥೆಗಳು ಇವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುತ್ತವೆ. ಆದರೆ ಬಹುತೇಕ ಕಾರ್ಪೊರೇಟ್ ಸಂಸ್ಥೆಗಳು ಸ್ನಾತಕ ಪದವಿಯೇ ಸಾಕು ಅನ್ನುತ್ತವೆ ಮತ್ತು ಪ್ರಾರಂಭಿಕ ಸಂಬಳದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರರಿಗೆ ವ್ಯತ್ಯಾಸ ಕಂಡುಬರುವುದಿಲ್ಲ.

ಕೊನೆಯ ಮಾತು
ಅಂತಿಮವಾಗಿ ಹೇಳುವುದಾದರೆ ಸ್ನಾತಕೋತ್ತರ ಪದವಿಗಳು ಎಂಜಿನಿಯರಿಂಗ್ ಪದವೀಧರರಿಗೆ ಧೀರ್ಘಕಾಲದಲ್ಲಿ ಖಂಡಿತವಾಗಿಯೂ ಲಾಭದಾಯಕವಾಗಬಲ್ಲವು. ಆದರೆ ದೇಶದ ಮತ್ತು ಪ್ರಪಂಚದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಸಾಗುತ್ತಿರುವಾಗ ಎಂ. ಬಿ. ಎ. ಪದವಿ ಎಂ.ಟೆಕ್. ಪದವಿಗಿಂತ ಹೆಚ್ಚು ಅನುಕೂಲಕಾರಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಅಭ್ಯರ್ಥಿಗಳು ಗಮನಿಸ ಬೇಕಾದ ಇನ್ನೂ ಕೆಲವು ಅಂಶಗಳೇನೆಂದರೆ: ಸುಲಭವಾಗಿ ಪ್ರವೇಶ ಸಿಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಯಾವುದೇ ಸಂಸ್ಥೆಯನ್ನು ಆಯ್ಕೆ ಮಾಡಕೂಡದು. ಪದವಿ ನೀಡುವ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸ್ಥಾನವನ್ನು ಹೊಂದಿರಬೇಕು ಮತ್ತು ಪೂರಕವಾಗಿ ನುರಿತ ಹಾಗೂ ಅನುಭವಿ ಪ್ರಾಧ್ಯಾಪಕರುಗಳು ಇರಬೇಕು. ಎಲ್ಲಾ ಸೌಲಭ್ಯಗಳೂ ಇರಬೇಕು. ಅಭ್ಯರ್ಥಿಗಳು ಸಂಸ್ಥೆಗೆ ಸಂಬಂಧಪಟ್ಟ ಎಲ್ಲಾ ಅಂಶಗಳನ್ನೂ ಪರಿಶೀಲಿಸಬೇಕು. ಆನೇಕ ವಿಷಯಗಳು ಇಂದು ಸಂಸ್ಥೆಯ ವೆಬ್ ಸೈಟ್‌ನಲ್ಲಿ ಸಿಗುತ್ತವೆ. ಆದರೆ ಕೆಲವು ವೆಬ್‌ಸೈಟ್‌ಗಳು ಅತಿ ರಂಜಿತವಾಗಿರುತ್ತವೆ ಮತ್ತು ಉತ್ಪ್ರೇಕ್ಷೆಯಿಂದ ಕೂಡಿರುತ್ತವೆ. ಆದ್ದರಿಂದ ಎಲ್ಲಾ ವಿಷಯಗಳನ್ನು ಪರಿಶೀಲಿಸಿದ ನಂತರವೇ ಪ್ರವೇಶದ ತೀರ್ಮಾನ ಮಾಡಬೇಕು.
 

ಬಿ.ಇ., + ಎಂ. ಬಿ. ಎ. = ಅತ್ಯುತ್ತಮವೇ?

ಈ ಸಮೀಕರಣಕ್ಕೆ ಸಂಪೂರ್ಣವಾಗಿ “ಹೌದು” ಅನ್ನಲಾಗದಿದ್ದರೂ ಹಲವು ಕೋನಗಳ ಮೂಲಕ ನೋಡಿದಾಗ “ಉತ್ತಮ” ಎಂದಂತೂ ಹೇಳಬಹುದು. ಕಾರಣ ಏನೆಂದರೆ, ಕಳೆದ ಮೂರು ದಶಕಗಳಲ್ಲಿ ಕಂಡುಬಂದಿರುವ ಪ್ರವೃತ್ತಿಯಂತೆ ಬಹುತೇಕ ಕಾರ್ಪೋರೇಟ್ ಸಂಸ್ಥೆಗಳು ಅದರಲ್ಲೂ ವಿದೇಶಿ ಮೂಲದ ಕಂಪೆನಿಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಐ. ಐ. ಟಿ. ಯಿಂದ ಬಿ.ಟೆಕ್. ಮತ್ತು ಐ. ಐ. ಎಂ. ನಿಂದ ಸ್ನಾತಕೋತ್ತರ ಪದವಿಗಳನ್ನು ಪಡೆದವರಿಗೆ ಆಗ್ರ ಪಟ್ಟವನ್ನು ನೀಡಿ, ಅತಿ ಹೆಚ್ಚು ಸಂಬಳ, ಸೌಲಭ್ಯಗಳನ್ನು ಕೊಟ್ಟಿವೆ. ಹೀಗಾಗಿ ಐ. ಐ. ಟಿ. ಯಿಂದ ಬಿ.ಟೆಕ್. ಪಡೆದವರು ಗಣನೀಯ ಸಂಖ್ಯೆಯಲ್ಲಿ ಐ. ಐ. ಎಂ. ಗಳಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳಲು ನುಗ್ಗತೊಡಗಿದರು. ಐ. ಐ. ಟಿ. ಮತ್ತು ಐ. ಐ. ಎಂ. ಗಳಿಂದ ಪಡೆದ ಜೋಡಿ ಶಿಕ್ಷಣವನ್ನು “ಬ್ಲೂ ಚಿಪ್‌” ಶಿಕ್ಷಣ ಎಂದು ಪರಿಗಣಿಸಲಾಗಿದೆ. ಇದರಿಂದಾದ ಗಮನಾರ್ಹ ಬೆಳವಣಿಗೆಯೆಂದರೆ ಐ. ಐ. ಎಂ. ಗಳು ತಾರಾಮೌಲ್ಯ ಗಳಿಸಿದ್ದು. ಇದೇ ಕಾರಣದಿಂದಾಗಿ ಬೇರೆ ಕಡೆ ಓದಿದ  ಎಂಜಿನಿಯರಿಂಗ್ ಪದವೀಧರರು ಕೂಡಾ ಐ. ಐ. ಎಂ. ಗಳ ಆಕರ್ಷಣೆಗೆ ಸಿಕ್ಕಿ ಪ್ರವೇಶ ಪಡೆಯಲು ಲಗ್ಗೆ ಹಾಕಿದ್ದು ಈಗ ಇತಿಹಾಸ.

(ಲೇಖಕರು ಮ್ಯಾನೇಜ್‌ಮೆಂಟ್ ಮತ್ತು ಎಂಜಿನಿಯರಿಂಗ್ ವಿಷಯಗಳ ತಜ್ಞರು ಹಾಗೂ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT