ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ಸಂದೇಹ- ಸಮಾಧಾನ

Last Updated 12 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಮಾನ್ಯ ಸಂದೇಹಗಳಿಗೆ ಉತ್ತರಿಸುವ ಪ್ರಯತ್ನ ಇಲ್ಲಿದೆ.

ಯಾವ ಬ್ರಾಂಚ್ ತೆಗೆದುಕೊಂಡರೆ ಉದ್ಯೋಗಾವಕಾಶ ಹೆಚ್ಚು?
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದರೂ ಸಾಕಷ್ಟು ಉದ್ಯೋಗಾವಕಾಶಗಳಿವೆ. ಬಹಳಷ್ಟು ಸಾಫ್ಟವೇರ್ ಕಂಪೆನಿಗಳು ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೂ ಒಟ್ಟಿಗೆ ಕ್ಯಾಂಪಸ್ ಸಂದರ್ಶನ ನಡೆಸಿ ಅರ್ಹತೆ, ಕೌಶಲದ ಆಧಾರದ ಮೇಲೆ ಆಯ್ಕೆ ಮಾಡುತ್ತವೆ.

ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ಪಡೆಯಲು ಯಾವ ರೀತಿಯ ತರಬೇತಿ ಬೇಕಾಗುತ್ತದೆ?
ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡಿ ಪ್ರತಿ ಸೆಮಿಸ್ಟರ್‌ನಲ್ಲೂ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಬೇಕು. ಕ್ಯಾಂಪಸ್ ಸಂದರ್ಶನಕ್ಕೆ ಸಂಬಂಧಪಟ್ಟಂತೆ ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನದ ತರಬೇತಿ ಮುಖ್ಯ. ಸಂದರ್ಶನಗಳಲ್ಲಿ ಆಯ್ಕೆ ಮಾಡುವಾಗ ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನಕ್ಕೆ ಕೊಡುವಷ್ಟೇ ಮಹತ್ವವನ್ನು ಬುದ್ಧಿಮತ್ತೆ, ಸಂವಹನ ಕೌಶಲ್ಯ, ನಾಯಕತ್ವ ಮುಂತಾದ ಸ್ಪರ್ಧಾತ್ಮಕ ಗುಣಗಳಿಗೆ ಕೊಡುತ್ತಾರೆ.

ಕಂಪ್ಯೂಟರ್ ಸೈನ್ಸ್, ಇನ್‌ಫಾರ್ಮೇಷನ್ ಸೈನ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಟೆಲಿಕಮ್ಯೂನಿಕೇಷನ್ ಬ್ರಾಂಚ್‌ಗಳಿಗೆ ಇರುವ ವ್ಯತ್ಯಾಸಗಳೇನು? 
ಇತ್ತೀಚಿನ ಪಠ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇನ್‌ಫರ್ಮೇಷನ್ ಸೈನ್ಸ್ ಬ್ರಾಂಚ್‌ಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. 3 ನೇ ಹಾಗೂ ಅಂತಿಮ ವರ್ಷದಲ್ಲಿ ಕೆಲವು ಪಠ್ಯಗಳು ಮಾತ್ರ ಬೇರೆಯಾಗಿರುತ್ತವೆ, ಅವನ್ನು ಎಲೆಕ್ಟಿವ್ಸ್ ಮೂಲಕ ವ್ಯಾಸಂಗ ಮಾಡಬಹುದಾಗಿದೆ. ಇದೇ ರೀತಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಮತ್ತು ಟೆಲಿಕಮ್ಯೂನಿಕೇಷನ್ ಬ್ರಾಂಚ್‌ಗಳ ಪಠ್ಯಕ್ರಮ ಸಹ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಕಂಪ್ಯೂಟರ್ ಸೈನ್ಸ್ ಮತ್ತು ಇನ್‌ಫಾರ್ಮೆಷನ್ ಸೈನ್ಸ್ ವಿದ್ಯಾರ್ಥಿಗಳಿಗೆ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಮತ್ತು ಟೆಲಿಕಮ್ಯೂನಿಕೇಷನ್ ವಿದ್ಯಾರ್ಥಿಗಳಿಗೆ ಹೆಚ್ಚು ಕಡಿಮೆ ಒಂದೇ ರೀತಿಯ ಉದ್ಯೋಗಾವಕಾಶವಿರುತ್ತದೆ.

ಮೆಕ್ಯಾನಿಕಲ್‌ನಂತಹ ಬ್ರಾಂಚ್‌ಗೆ ಹುಡುಗಿಯರು ಸೇರುತ್ತಾರೆಯೇ?
ಹೌದು, ಇತ್ತೀಚೆಗೆ ಅವರ ಸಂಖ್ಯೆ ಹೆಚ್ಚಾಗುತ್ತಿದೆ. ಮೆಕ್ಯಾನಿಕಲ್ ಬ್ರಾಂಚ್ ಅಭ್ಯಾಸದಲ್ಲಿ ದೈಹಿಕವಾಗಿ ಬಹಳ ಶ್ರಮಪಡುವ ಅವಶ್ಯಕತೆ ಇರುವುದಿಲ್ಲ.

ಮೊದಲನೇ ವರ್ಷ ಪ್ರವೇಶ ಪಡೆದ ಬ್ರಾಂಚನ್ನು ಎರಡನೇ ವರ್ಷದಿಂದ ಬೇರೆ ಬ್ರಾಂಚ್‌ಗೆ ಬದಲಾಯಿಸಿಕೊಳ್ಳಬಹುದೇ?
ಬ್ರಾಂಚ್ ಬದಲಾವಣೆಯ ಅವಕಾಶ ಮುಖ್ಯವಾಗಿ ಕಾಲೇಜಿನ ಮೊದಲನೇ ವರ್ಷದ ಪರೀಕ್ಷೆಯ ಫಲಿತಾಂಶ ಅವಲಂಬಿಸಿರುತ್ತದೆ. ಮೊದಲನೇ ವರ್ಷ ಎಲ್ಲಾ ಬ್ರಾಂಚ್‌ಗಳಿಗೂ ಒಂದೇ ಸಮನಾದ ಪಠ್ಯಕ್ರಮವಿರುತ್ತದೆ. ಹಾಗಾಗಿ ಮೊದಲನೇ ವರ್ಷ ಪ್ರವೇಶ ಪಡೆದ ಬ್ರಾಂಚ್ ಯಾವುದಿದ್ದರೂ ಎರಡನೇ ವರ್ಷದಲ್ಲಿ ಬೇರೆ ಬ್ರಾಂಚ್‌ಗೆ ಬದಲಾಯಿಸಿಕೊಳ್ಳಲು ಕೆಳಕಂಡಂತೆ ಅವಕಾಶವಿದೆ.

ಉದಾಹರಣೆಗೆ ಒಂದು ಕಾಲೇಜಿನಲ್ಲಿ 4 ವಿದ್ಯಾರ್ಥಿಗಳು ಯಾವುದೇ ಬೇರೆ ಬ್ರಾಂಚ್‌ನಿಂದ ಕಂಪ್ಯೂಟರ್ ಸೈನ್ಸ್ ಬ್ರಾಂಚ್‌ಗೆ ಬದಲಾಯಿಸಿಕೊಳ್ಳಬೇಕೆಂದರೆ- 2ನೇ ಸೆಮಿಸ್ಟರ್ ಫಲಿತಾಂಶದ ನಂತರ ಆ ಕಾಲೇಜಿನ ಕಂಪ್ಯೂಟರ್‌ಸೈನ್ಸ್ ಬ್ರಾಂಚ್‌ನ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಸಂಖ್ಯೆ ಗರಿಷ್ಠ ಮಿತಿಗಿಂತ 4 ಕಡಿಮೆ ಇರಬೇಕಾಗುತ್ತದೆ.

ಬ್ರಾಂಚ್ ಬದಲಾವಣೆ ಕೋರಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೆರಿಟ್‌ನಲ್ಲಿ ಮೊದಲ ಸ್ಥಾನದಲ್ಲಿ ಇರಬೇಕು. ಇದರ ಜೊತೆಗೆ ಇನ್ನೂ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ.

ಮೊದಲನೇ ವರ್ಷ ನಮ್ಮ ಮೆರಿಟ್/ ರ‌್ಯಾಂಕ್‌ಗೆ ತಕ್ಕಂತೆ ಯಾವ ಕಾಲೇಜಿನಲ್ಲಿ ಪ್ರವೇಶ ಸಿಗುವುದೋ ಅಲ್ಲಿ ವ್ಯಾಸಂಗ ಮಾಡಿ ಎರಡನೇ ವರ್ಷಕ್ಕೆ ಬೇರೊಂದು ಕಾಲೇಜಿನಲ್ಲಿ ನಮಗೆ ಬೇಕಾದ ಬ್ರಾಂಚ್‌ಗೆ ವರ್ಗಾವಣೆ ಮಾಡಿಕೊಳ್ಳಬಹುದೆ?
ವಿಟಿಯುನಲ್ಲಿ ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ಯಾವುದೇ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ (1, 3, 5, 7 ನೇ ಸೆಮಿಸ್ಟರ್‌ಗೆ ) ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿದೆ. ಹಳೇ ಕಾಲೇಜಿನಿಂದ ಹೊಸ ಕಾಲೇಜಿಗೆ ಅದೇ ಬ್ರಾಂಚ್‌ಗೆ ವರ್ಗಾವಣೆಯಾಗಬೇಕು ಹಾಗೂ ಹೊಸ ಕಾಲೇಜಿನಲ್ಲಿ ಆ ಬ್ರಾಂಚ್‌ನಲ್ಲಿ ಗರಿಷ್ಠ ಪ್ರವೇಶ ಮಿತಿ ಮೀರಿರಬಾರದು. 2ನೇ ವರ್ಷಕ್ಕೆ ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ಅದೇ ಬ್ರಾಂಚ್‌ಗೆ ವರ್ಗಾವಣೆ ಮಾಡಿಕೊಂಡ ನಂತರ ಆ ಕಾಲೇಜಿನಲ್ಲಿ ಬೇರೆ ಬ್ರಾಂಚ್‌ಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದ್ದರೆ ಪ್ರಯತ್ನಿಸಬಹುದು.

ಬ್ರಾಂಚ್ ಹಾಗೂ ಕಾಲೇಜು ಬದಲಿಸಲು ಪರೀಕ್ಷೆಯ ಫಲಿತಾಂಶ ಮುಖ್ಯ. ಒಂದು ವೇಳೆ ಫಲಿತಾಂಶ ತಡವಾಗಿ ಬಂದರೆ ಪಾಠಗಳ ಕಲಿಕೆಯಲ್ಲಿ ತೊಂದರೆಯಾಗಬಹುದು.

ಈ ಸಲ ಬೋಧನಾ ಶುಲ್ಕ ಬದಲಾಗಿದೆಯೇ? ಸರ್ಕಾರಿ ಸಿಇಟಿ, ಕಾಮೆಡ್-ಕೆ ಸೀಟುಗಳ ಶುಲ್ಕ ಎಷ್ಟು?
ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಸೀಟುಗಳ ಶುಲ್ಕ ಕಳೆದ ವರ್ಷದಂತೆಯೇ ರೂ.18,090 (ಬೋಧನಾ ಶುಲ್ಕ ರೂ.15,000 ಹಾಗೂ ಇತರೆ ರೂ.3,090).

ಖಾಸಗಿ ಅನುದಾನ ರಹಿತ ಕಾಲೇಜುಗಳಲ್ಲಿ ಶುಲ್ಕ ಶೇ 10 ರಷ್ಟು ಹೆಚ್ಚಾಗಿರುತ್ತದೆ. ಶುಲ್ಕ ಎರಡು ವಿಧದಲ್ಲಿರುತ್ತದೆ (33,000 ಅಥವಾ 38,500 ರೂ). ಇದರ ಆಯ್ಕೆಯನ್ನು ಕಾಲೇಜಿಗೆ ಬಿಡಲಾಗಿದೆ. 35,000 ರೂ ಶುಲ್ಕದ ಕಾಲೇಜಿನಲ್ಲಿ ಬೋಧನಾ ಶುಲ್ಕ ಗರಿಷ್ಠ 1,37,500 ರೂ.  38,500 ರೂ ಶುಲ್ಕದ ಕಾಲೇಜಿನಲ್ಲಿ ಇದು 1,10,000 ರೂ. ಇದಲ್ಲದೆ ಇತರೆ ಶುಲ್ಕ 3,090 ರೂ. ಪರಿಶಿಷ್ಟ ಜಾತಿ ಹಾಗೂ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯ್ತಿಯಿದೆ. ವಿವರಗಳಿಗೆ ಡಿಡಿಡಿ.ಛಿ.ಚ್ಟ.್ಞಜ್ಚಿ.ಜ್ಞಿ, ಡಿಡಿಡಿ.್ಚಟಞಛಿ.ಟ್ಟಜ.

ಸರ್ಕಾರಿ ಸಿಇಟಿ ಅಥವಾ ಕಾಮೆಡ್-ಕೆ ಕೌನ್ಸೆಲಿಂಗ್‌ನಲ್ಲಿ ಸೀಟು ಶುಲ್ಕ ಪಾವತಿಸಿ ಆಯಾ ಕಾಲೇಜಿನಲ್ಲಿ ಪ್ರವೇಶ ನೋಂದಣಿ ಮಾಡಿಸುವಾಗ ಇತರೇ ಶುಲ್ಕವೇನಾದರೂ ಭರಿಸಬೇಕಾಗುತ್ತದೆಯೇ?
ಹೌದು. ಅನುದಾನರಹಿತ ಖಾಸಗಿ ಕಾಲೇಜುಗಳಲ್ಲಿ ಕೆಲವೊಂದು ಇತರೆ ಸೌಲಭ್ಯಗಳಿಗೆ ಶುಲ್ಕ ಭರಿಸಬೇಕಾಗುತ್ತದೆ.


 

(ಲೇಖಕರು ಶಿವಮೊಗ್ಗದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯರು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT