ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್ ಆಯ್ಕೆಯಲ್ಲಿಯೂ ಎಡವಟ್ಟು!

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಹಾಗೂ ರಾಜ್ಯ ಸರ್ಕಾರದ ಸ್ಪಷ್ಟೀಕರಣಕ್ಕೂ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಬೆಲೆ ನೀಡದಿರುವ ಪ್ರಕರಣವೂ ಇಲ್ಲಿ ನಡೆದಿದೆ.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಕೆಪಿಎಸ್‌ಸಿ ಮಾಡಿದ ಇಂಥ ಎಡವಟ್ಟಿನ ಬಗ್ಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಈಗ ವಿಚಾರಣೆ ನಡೆಸುತ್ತಿದೆ.

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯಲ್ಲಿ 102 ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಕೆಪಿಎಸ್‌ಸಿ 2007ರಲ್ಲಿ ಅಧಿಸೂಚನೆ ಹೊರಡಿಸಿತು. ಈ ಅಧಿಸೂಚನೆಯಲ್ಲಿಯೇ 84 ಹುದ್ದೆಗಳನ್ನು ಹೊರಗಿನ ಅಭ್ಯರ್ಥಿಗಳಿಗೂ, 20 ಹುದ್ದೆಗಳನ್ನು ಲೋಕೋಪಯೋಗಿ ಇಲಾಖೆಯಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವವರಿಗೂ ನೀಡಲಾಗುವುದು ಎಂದು ಪ್ರಕಟಿಸಿತು. ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನೂ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕವೇ ಆಯ್ಕೆ ಮಾಡಲಾಗುವುದು ಎಂದೂ ಪ್ರಕಟಿಸಲಾಗಿತ್ತು.

ಹೊರಗಿನ ಅಭ್ಯರ್ಥಿಗಳ ಕೋಟಾ ಮತ್ತು ಸೇವೆ ಸಲ್ಲಿಸುತ್ತಿರುವವರ ಕೋಟಾದಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗ, ಮಹಿಳೆ, ಗ್ರಾಮೀಣ, ಮಾಜಿ ಸೈನಿಕರಿಗೆ ಪ್ರತ್ಯೇಕವಾಗಿ ಮೀಸಲಾತಿ ಕಲ್ಪಿಸಲಾಗಿತ್ತು. ಹುದ್ದೆಗೆ ಅರ್ಜಿ ಸಲ್ಲಿಸುವ ನಮೂನೆಯಲ್ಲಿ ಇದಕ್ಕೆ ಪ್ರತ್ಯೇಕ ಕಾಲಂವೊಂದನ್ನು ಇಡಲಾಗಿತ್ತು. ಅದರಲ್ಲಿ `ಹೊರಗಿನ ಅಭ್ಯರ್ಥಿಯಾ' ಅಥವಾ `ಸೇವೆಯಲ್ಲಿ ಇರುವ ಅಭ್ಯರ್ಥಿಯಾ' ಎಂದು ನಮೂದಿಸುವುದು ಕಡ್ಡಾಯ ಮಾಡಲಾಗಿತ್ತು.

ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಹೊರಗಿನ ಅಭ್ಯರ್ಥಿಗಳು ಮತ್ತು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಸಂದರ್ಶನ ಮುಗಿದು ಆಯ್ಕೆ ಪಟ್ಟಿ ಪ್ರಕಟಿಸುವಾಗ ಕೆಪಿಎಸ್‌ಸಿ ಕೋಟಾವನ್ನು ಬದಲಾಯಿಸಿದ್ದು ಬಹಿರಂಗವಾಯಿತು. ಇಲಾಖೆ ಸೇವೆಯಲ್ಲಿದ್ದ 20 ಜನರನ್ನು ನೇಮಕಾತಿ ಮಾಡಿಕೊಳ್ಳುವ ಬದಲು 39 ಮಂದಿಯನ್ನು ಆಯ್ಕೆ ಮಾಡಲಾಗಿತ್ತು.

`ಮೀಸಲಾತಿ' ನಿಯಮವನ್ನು `ಕೋಟಾ'ಕ್ಕೆ ಅನ್ವಯಿಸಿದ್ದು ಈ ಎಡವಟ್ಟಿಗೆ ಕಾರಣವಾಯಿತು. ಮೀಸಲಾತಿ ನಿಯಮದಂತೆ, ಈ ವರ್ಗಕ್ಕೆ ಸೇರಿದ ಯಾವುದೇ ಅಭ್ಯರ್ಥಿ ಅತಿ ಹೆಚ್ಚು ಅಂಕ ಪಡೆದರೆ ಅವರು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗುತ್ತಾರೆ. ಆಗ ಮೀಸಲಾತಿಯಲ್ಲಿ ನಿಗದಿಯಾದ ಸ್ಥಾನಗಳು ಆಯಾ ಜಾತಿಗೆ ಸಿಗುತ್ತವೆ. ಅಲ್ಲದೆ ಅತಿ ಹೆಚ್ಚು ಅಂಕ ಪಡೆದ ಅದೇ ಜಾತಿಯವರಿಗೆ ಸಾಮಾನ್ಯ ವರ್ಗದಲ್ಲಿಯೂ ಸ್ಥಾನ ಸಿಗುತ್ತದೆ. ಇದೇ ನಿಯಮವನ್ನು ಇಲ್ಲಿ ಅನುಸರಿಸಿದ್ದರಿಂದ ನಿಗದಿತ ಕೋಟಾಕ್ಕಿಂತ 19 ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾದರು. ಇದನ್ನು ಕೆಲವರು ಆಕ್ಷೇಪಿಸಿದಾಗ ಕೆಪಿಎಸ್‌ಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ನಿವೃತ್ತ ಅಧ್ಯಕ್ಷ ಚಾಮಯ್ಯ ಅವರ ಅಭಿಪ್ರಾಯವನ್ನು ಕೇಳಿತು.

`ಕೋಟಾ' ಮತ್ತು `ಮೀಸಲಾತಿ' ಎರಡೂ ಬೇರೆ ಬೇರೆ. ಮೀಸಲಾತಿಯ ನಿಯಮಗಳನ್ನು ಕೋಟಾಕ್ಕೆ ಅನ್ವಯ ಮಾಡಲು ಸಾಧ್ಯವಿಲ್ಲ ಎಂದು ತಮಿಳುನಾಡಿನ ದೊರೆಸ್ವಾಮಿ ಮತ್ತು ತಮಿಳುನಾಡು ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉದಾಹರಿಸಿ ಚಾಮಯ್ಯ ತಮ್ಮ ಅಭಿಪ್ರಾಯವನ್ನು ನೀಡಿದರು.

ನಂತರ ಕೆಪಿಎಸ್‌ಸಿ ಈ ಬಗ್ಗೆ ಸರ್ಕಾರದ ಸ್ಪಷ್ಟನೆಯನ್ನು ಕೇಳಿತು. ಆಗ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರೂ ಕೂಡ ಚಾಮಯ್ಯ ಅವರ ಅಭಿಪ್ರಾಯವನ್ನೇ ಎತ್ತಿ ಹಿಡಿದರು. ಅಲ್ಲದೆ 2007ರಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ನೇಮಕಾತಿ ನಿಯಮಗಳ ಪ್ರಕಾರವೂ ಸೇವಾ ನಿರತ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿಯೇ ಮಾಡಬೇಕು ಎಂದು ಸರ್ಕಾರ ಸೂಚಿಸಿತು.

ಸರ್ಕಾರದ ಸೂಚನೆ, ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನಿವೃತ್ತ ಅಧ್ಯಕ್ಷರ ಅಭಿಪ್ರಾಯ, ಸುಪ್ರೀಂಕೋರ್ಟ್ ತೀರ್ಪು ಹಾಗೂ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳ ಆಕ್ಷೇಪಗಳಿಗೆ ಕಿವಿಗೊಡದ ಕೆಪಿಎಸ್‌ಸಿ ಕರಡು ಆಯ್ಕೆ ಪಟ್ಟಿಯನ್ನೇ ಅಂತಿಮ ಆಯ್ಕೆ ಪಟ್ಟಿ ಎಂದು ಪರಿಗಣಿಸಿತು. ಇದನ್ನು ಕೆಲವು ಅಭ್ಯರ್ಥಿಗಳು ವಿರೋಧಿಸಿದರು.

ಸೇವಾ ನಿರತ ಅಭ್ಯರ್ಥಿಗಳನ್ನು 20 ಹುದ್ದೆಗಳಿಗೆ ಮಾತ್ರ ನೇಮಕ ಮಾಡಿಕೊಂಡಿದ್ದರೆ ತಮಗೂ ನೌಕರಿ ದೊರೆಯುತ್ತಿತ್ತು. ಹೊರಗಿನ ಅಭ್ಯರ್ಥಿಗಳ ಕೋಟಾದಲ್ಲಿ ಸೇವಾ ನಿರತರನ್ನೂ ಆಯ್ಕೆಮಾಡಿದ್ದರಿಂದ ತಮಗೆ ಅನ್ಯಾಯವಾಗಿದೆ ಎಂದು 19 ಮಂದಿ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ದೂರು ಸಲ್ಲಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳ ಪಟ್ಟಿ ಮಾಡುವಾಗ, ಸಂದರ್ಶನಕ್ಕೆ ಅಭ್ಯರ್ಥಿಗಳ ಪಟ್ಟಿ ಮಾಡುವಾಗ ಪ್ರತ್ಯೇಕವಾಗಿ ಆಯ್ಕೆ ಮಾಡಿದ್ದ ಕೆಪಿಎಸ್‌ಸಿ, ಸಂದರ್ಶನದ ನಂತರ ಅಂತಿಮ ಪಟ್ಟಿ ಸಿದ್ಧಪಡಿಸುವಾಗ ಕೋಟಾ ನಿಯಮ ಉಲ್ಲಂಘನೆ ಮಾಡಿದ್ದು ಯಾಕೆ ಎಂದು ನೊಂದ ಅಭ್ಯರ್ಥಿಗಳು ಪ್ರಶ್ನಿಸುತ್ತಾರೆ.

ಸಂದರ್ಶನಕ್ಕೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಾಗ 1:5 ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಸೇವಾ ನಿರತ ಎಂಜಿನಿಯರ್‌ಗಳ ಕೋಟಾದಲ್ಲಿ ಸಂದರ್ಶನಕ್ಕೆ ನೂರು ಮಂದಿಯನ್ನು ಕರೆಯಲಾಗಿತ್ತು. 84 ಸ್ಥಾನಗಳ ಹೊರಗಿನ ಅಭ್ಯರ್ಥಿಗಳ ಕೋಟಾದಲ್ಲಿ 420 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿತ್ತು. ಸೇವಾ ನಿರತರ ಕೋಟಾದಲ್ಲಿ ನೂರಕ್ಕೆ 39 ಮಂದಿ ಆಯ್ಕೆಯಾದರು. ಹೊರಗಿನ ಅಭ್ಯರ್ಥಿಗಳ ಕೋಟಾದಲ್ಲಿ  65 ಮಂದಿ ಮಾತ್ರ ಆಯ್ಕೆಯಾದರು. ಇಂತಹ ತಪ್ಪುಗಳು ಸಂಭವಿಸಲು ಕಾರಣ ಏನು? ಇದರ ಹಿಂದಿರುವ ಗುಟ್ಟೇನು ಎಂದು ಅವರು ಪ್ರಶ್ನೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT