ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್ ಮನೆಯೀಗ ನರ್ಸರಿ

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಿದೇಶದಲ್ಲಿ ಎಂಜಿನಿಯರ್ ಉದ್ಯೋಗವಿದ್ದರೂ ಅದರ ಆಸೆ ತೊರೆದು ಕೃಷಿಯಲ್ಲಿಯೇ ತೊಡಗಿಸಿಕೊಂಡು ಮಾದರಿ ಎನಿಸಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯ ಸುಧೀರ್.

ಮನೆಯ ಮುಂದೆ ಸಣ್ಣದಾಗಿ ಪ್ರಾರಂಭಗೊಂಡ ಇವರ ನರ್ಸರಿಯು ಇಂದು `ಗ್ರೀನ್ ಹೌಸ್' ಆಗಿದೆ. ಹಲವಾರು ನಮೂನೆಯ ಅಲಂಕಾರಿಕ ಹೂವುಗಳು, ವಿವಿಧ ತಳಿಯ ಮಾವು, ಸಪೋಟ, ಸೀಬೆ, ಜಂಬುನೇರಳೆ ಇತ್ಯಾದಿ ವಿವಿಧ ಹಣ್ಣುಗಳ ಗಿಡಗಳು, ರಬ್ಬರ್, ಉತ್ತಮ ತಳಿಯ ತೆಂಗು ಹಾಗು ಅಡಿಕೆ ಗಿಡಗಳು ಹೀಗೆ ಹಲವಾರು ನಮೂನೆಯ ಗಿಡಗಳಿಂದ ತುಂಬಿ ಹಸಿರಾಗಿ ನಳನಳಿಸುತ್ತಿದೆ. ಇವರೀಗ `ವನಸುಮ ನರ್ಸರಿ'ಯ ಮಾಲೀಕ.

ಹನ್ನೊಂದು ವರ್ಷಗಳ ಹಿಂದೆ ಬಹರೇನ್‌ನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಈ ಉದ್ಯೋಗಕ್ಕಿಂತ ಕೃಷಿಯೇ ಉತ್ತಮ ಎನ್ನಿಸಿತು. ತಾಯ್ನಾಡಿಗೆ ಬಂದು ತಂದೆಯ ಜೊತೆ ಕೃಷಿಯಲ್ಲಿ ತೊಡಗಿಸಿಕೊಂಡರು. ತಾವೂ ಏನಾದರೂ ಸ್ವಉದ್ಯೋಗ ಮಾಡಬೇಕೆಂದು ಹಂಬಲಿಸಿದ್ದರು. ತಾಯಿ ಸುಮಾ ಹಾಗೂ ಬಂಧುಗಳ ಸಲಹೆಯಂತೆ ಆರಂಭಿಸಿರುವ ನರ್ಸರಿ ಈಗ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.

`ವಿವಿಧ ನಮೂನೆಯ ಹೂವು, ಹಣ್ಣು ಮತ್ತು ಅಲಂಕಾರಿಕ ಗಿಡಗಳನ್ನು ಸಂಗ್ರಹಿಸುವುದು ಹಾಗೂ ಇವುಗಳನ್ನು ಪೋಷಿಸುವುದು ನರ್ಸರಿ ಉದ್ಯಮದ ಮುಖ್ಯ ಉದ್ದೇಶ, ಇದೊಂದು ಕಲೆ ಕೂಡ. ಇದಕ್ಕೆ ಆಸಕ್ತಿ ಬಹು ಮುಖ್ಯ. ಜೊತೆಗೆ ಗಿಡಗಳ ಮಾಹಿತಿಯೂ ಇರಬೇಕು.

ಗಿಡಗಳನ್ನು ನಾಟಿಮಾಡುವ ವಿಧಾನ ಮತ್ತು ಅವುಗಳಿಗೆ ಗೊಬ್ಬರ, ನೀರು ಪೂರೈಸುವ ಬಗೆ, ಅವುಗಳಿಗೆ ಬಿಸಿಲಿನ ಹೊಂದಾಣಿಕೆ ಯಾವ ರೀತಿ ಮಾಡಬೇಕು ಎಂಬಿತ್ಯಾದಿ ತಿಳಿವಳಿಕೆ ಅಗತ್ಯ. ವಿವಿಧ ಕಡೆಗಳಿಂದ ತರಿಸಿದ ಗಿಡಗಳನ್ನು ಸುಡುಮಣ್ಣು, ಗೊಬ್ಬರ ಹಾಗು ಮರಳು ಮಿಶ್ರಣ ಮಾಡಿದ ಹೊಸ ಪಾಲಿಥೀನ್ ಚೀಲಗಳಲ್ಲಿ ಪುನಃ ನಾಟಿಮಾಡಿ ಅವುಗಳು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಬೇಕಾಗುತ್ತದೆ' ಎಂದು ಇವರು ಆಸಕ್ತಿಯಿಂದ ನರ್ಸರಿ ಉದ್ಯಮದ ಬಗ್ಗೆ ವಿವರಿಸುತ್ತಾರೆ.

ತೋಟದಲ್ಲಿಯೇ ತಯಾರು
ಸುಧೀರ್ ಅವರು ಉತ್ತಮ ತಳಿಯ ತೆಂಗು, ಅಡಿಕೆ, ರಬ್ಬರ್ ಗಿಡಗಳನ್ನು ತಮ್ಮ ತೋಟದಿಂದಲೇ ತಯಾರಿಸುತ್ತಾರೆ. ವಿವಿಧ ತಳಿಯ ಹಣ್ಣುಗಳ ಗಿಡಗಳನ್ನೂ ತಮ್ಮಲ್ಲಿಯೇ ತಯಾರಿಸುತ್ತಾರೆ. ಗೊಬ್ಬರಕ್ಕಾಗಿ ಹೈನುಗಾರಿಕೆಯನ್ನೂ ಮಾಡುತ್ತಿರುವ ಇವರು ತಮ್ಮ ನರ್ಸರಿಗಾಗಿ ಬೆಂಗಳೂರು, ಹಾಸನ, ಕೊಲ್ಕತ್ತಾ ಇತ್ಯಾದಿ ಕಡೆಗಳಿಂದ ಇನ್ನೂ ಹಲವಾರು ನಮೂನೆಯ ಅಲಂಕಾರಿಕ ಹೂವು, ಹಣ್ಣುಗಳ ಗಿಡಗಳನ್ನು ತರಿಸುತ್ತಿದ್ದು, ಅವುಗಳಿಗಾಗಿ ಉತ್ತಮ ಗೊಬ್ಬರ, ಸುಡುಮಣ್ಣು ಇತ್ಯಾದಿಗಳನ್ನು ತಮ್ಮಲ್ಲಿಯೇ ತಯಾರಿಸಿ ಸಲಹುತ್ತ್ದ್ದಿದಾರೆ. ಹೂ ತೋಟಗಳ ನಿರ್ಮಾಣದಲ್ಲೂ ಬಹಳ ಆಸಕ್ತಿ ಹೊಂದಿದ ಇವರು ಹಲವು ಕಡೆಗಳಲ್ಲಿ ಲಾನ್, ರಾಕ್ ಗಾರ್ಡನ್ ನಿರ್ಮಿಸಿದ್ದಾರೆ.

`ಸದಾ ಗಿಡಗಳ ಜೊತೆಗೆ ಇರಬೇಕು. ಅವುಗಳಿಗೆ ಸಮಯಕ್ಕೆ ಸರಿಯಾಗಿ ಆಹಾರ ಹಾಗೂ ರೋಗ ನಿರೋಧಕ ಔಷಧಿಗಳನ್ನು ಸಿಂಪಡಿಸಿ ಉಪಚರಿಸುತ್ತಿರಬೇಕು. ಆಗ ಮಾತ್ರ ನರ್ಸರಿಯು ಹೂವು, ಹಣ್ಣುಗಳಿಂದ ತುಂಬಿ ಹಸಿರಾಗಿ ನಳನಳಿಸುವುದನ್ನು ಕಾಣಬಹುದು' ಎನ್ನುತ್ತಾರೆ ಸುಧೀರ್.

ಉಪ್ಪಿನಂಗಡಿಯಿಂದ ಪುತ್ತೂರಿಗೆ ತಿರುಗುವ ರಸ್ತೆಬದಿಯಲ್ಲಿರುವ ಇವರ `ವನಸುಮ' ನರ್ಸರಿಯಲ್ಲಿ ಐದು ರೂಪಾಯಿಂದ ಸುಮಾರು ಎರಡು ಸಾವಿರ ರೂಪಾಯಿವರೆಗಿನ ಗಿಡಗಳೂ ಮಾರಾಟವಾಗುತ್ತವೆ. ಮಂಗಳೂರು, ಕಾಸರಗೋಡು, ಹಾಸನ, ಶಿವಮೊಗ್ಗ, ಮಡಿಕೇರಿ ಇತ್ಯಾದಿ ಕಡೆಗಳಲ್ಲಿ ಇವರಿಂದ ಪಡೆದ ವಿವಿಧ ಗಿಡಗಳು ಹಣ್ಣು, ಹೂ ಅರಳಿಸಿ ನಗುತಿರುವುದನ್ನು ಕೇಳಿ ನೋಡಿ ಧನ್ಯತೆಯನ್ನು ಇವರು ಅನುಭವಿಸುತ್ತಾರೆ. ಮಾಹಿತಿಗೆ  94488 43758.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT