ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಜಿ.ರಸ್ತೆಯಲ್ಲಿ `ಡ್ರಮ್ ಜಾಮ್-2' ಕಲರವ

Last Updated 21 ಜುಲೈ 2013, 19:44 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿನಿತ್ಯ ಸಾವಿರಾರು ವಾಹನಗಳ ಸದ್ದು ಕೇಳಿ ಬರುವ ನಗರದ ಎಂ.ಜಿ.ರಸ್ತೆಯಲ್ಲಿ ಭಾನುವಾರ ಡ್ರಮ್‌ಗಳ ಕಲರವ. ಮಕ್ಕಳು, ಪೋಷಕರು ಡ್ರಮ್ ಬಾರಿಸಲು ತುದಿಗಾಲಲ್ಲಿ ನಿಂತಿದ್ದರು.

`ಮೆಟ್ರೊ- ರಂಗೋಲಿ ಕಲಾ ಕೇಂದ್ರ'ದಲ್ಲಿ ಆಯೋಜಿಸಿದ್ದ `ಸಮುದಾಯ ಡ್ರಮ್ ಜಾಮ್-2' ಕಾರ್ಯಕ್ರಮದ ನೋಟವಿದು. ಡ್ರಮ್ ಜಾಮ್ ಸಹಯೋಗದಲ್ಲಿ ತಿಂಗಳಿಗೊಮ್ಮೆ ಸಾಮೂಹಿಕವಾಗಿ ಡ್ರಮ್ ಬಾರಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸುಮಾರು 200 ಡ್ರಮ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಮನೆಯಿಂದಲೇ ಸಂಗೀತ ಉಪಕರಣಗಳನ್ನು ತಂದಿದ್ದರು.

`ನಮ್ಮ ಮೆಟ್ರೊ ಕಾಮಗಾರಿ ಸಂದರ್ಭದಲ್ಲಿ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರು ಸಾಕಷ್ಟು ಕಿರಿಕಿರಿ ಅನುಭವಿಸಿದ್ದಾರೆ. ಮೆಟ್ರೊ ಕಾಮಗಾರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಿರಂತರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಬೇಸರವನ್ನು ದೂರ ಮಾಡುವ ಉದ್ದೇಶದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ' ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ವಸಂತ ರಾವ್ ತಿಳಿಸಿದರು.

`ಇಲ್ಲಿ ಸೇರಿರುವವರು ಯಾರೂ ಪರಸ್ಪರ ಪರಿಚಿತರಲ್ಲ. ಜನರ ನಡುವೆ ಸ್ನೇಹ ಹಾಗೂ ಸೌಹಾರ್ದ ಸಂಬಂಧ ಬೆಳೆಸುವ ಉದ್ದೇಶದಿಂದ ಡ್ರಮ್‌ಜಾಮ್ ಸಂಘಟಿಸಲಾಗುತ್ತಿದೆ. ರಂಗೋಲಿ- ಕಲಾ ಕೇಂದ್ರಕ್ಕೆ ಆಗಮಿಸುತ್ತಿರುವ ಸಾರ್ವಜನಿಕರಿಂದಲೂ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ' ಎಂದು ಗಾಯಕಿ ವಸುಂಧರಾ ದಾಸ್ ಹೇಳಿದರು.

`ಇಲ್ಲಿ ಕಲಾ ಕೇಂದ್ರ ಆರಂಭವಾದ ಬಳಿಕ ರಜಾ ದಿನಗಳಲ್ಲಿ ಇಲ್ಲಿಗೆ ಕುಟುಂಬ ಸಮೇತವಾಗಿ ಭೇಟಿ ನೀಡುತ್ತಿದ್ದೇನೆ. ಸಾಮೂಹಿಕವಾಗಿ ಡ್ರಮ್ ಬಾರಿಸಲು ಅವಕಾಶ ಕಲ್ಪಿಸಿರುವುದರಿಂದ ಉತ್ಸಾಹ ಇಮ್ಮಡಿಯಾಗಿದೆ' ಎಂದು ಸಾಫ್ಟ್‌ವೇರ್ ಎಂಜಿನಿಯರ್ ಸಂದೀಪ್ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT