ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟರ ಘಟ್ಟಕ್ಕೆ ಅಜರೆಂಕಾ, ಸೆರೆನಾ

ಆಸ್ಟ್ರೇಲಿಯ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್: ರಷ್ಯಾದ ವೆಸ್ನಿನಾಗೆ ನಿರಾಸೆ, ಫೆಡರರ್‌ಗೆ ಗೆಲುವು
Last Updated 21 ಜನವರಿ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ/ಐಎಎನ್‌ಎಸ್): ಕಳೆದ ವರ್ಷದ ಚಾಂಪಿಯನ್ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಮತ್ತೊಂದು ಸಲ ಪ್ರಶಸ್ತಿ ಎತ್ತಿ ಹಿಡಿಯುವತ್ತ ದಿಟ್ಟ ಹೆಜ್ಜೆ ಹಾಕಿದ್ದಾರೆ. ಸೋಮವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅಜರೆಂಕಾ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ ಇಬ್ಬರೂ ಗೆಲುವು ಸಾಧಿಸಿ ಎಂಟರ ಘಟ್ಟ ತಲುಪಿದರು.

ಅಗ್ರ ಶ್ರೇಯಾಂಕದ ಅಜರೆಂಕಾ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಎರಡೂವರೆ ಗಂಟೆ ಹೋರಾಟ ನಡೆಸಿ 6-1, 6-1ರಲ್ಲಿ ರಷ್ಯಾದ ಎಲೆನಾ ವೆಸ್ನಿನಾ ಎದುರು ಗೆಲುವು ಸಾಧಿಸಿದರು. ಶ್ರೇಯಾಂಕ ರಹಿತ ಆಟಗಾರ್ತಿ ವೆಸ್ನಿನಾ 2006ರ ಆಸ್ಟ್ರೇಲಿಯ ಓಪನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ನಲ್ಲೂ ನಿರಾಸೆ ಕಂಡಿದ್ದರು. ಈ ಸಲವು ಮತ್ತೊಮ್ಮೆ ಇದೇ ಹಂತದಲ್ಲಿ ಸೋಲು ಎದುರಾಯಿತು.

ಅಜರೆಂಕಾ ಎಂಟರ ಘಟ್ಟದ ಹೋರಾಟದಲ್ಲಿ ಸ್ವಾಟ್ಲೆನಾ ಕುಜ್ನೆತೊವಾ ಎದುರು ಪೈಪೋಟಿ ನಡೆಸಲಿದ್ದಾರೆ. ರಷ್ಯಾದ ಈ ಆಟಗಾರ್ತಿ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 6-2, 2-6, 7-5ರಲ್ಲಿ ಡೆನ್ಮಾರ್ಕ್‌ನ ಕ್ಯಾರೊಲಿನ್ ವೊಜ್ನಿಯಾಕಿ ಎದುರು ಗೆಲುವು ಪಡೆದರು.
“ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಕ್ಕೆ ಖುಷಿಯಾಗಿದೆ. ಮುಂದಿನ ಪಂದ್ಯದತ್ತ ಗಮನ ಹರಿಸುತ್ತೇನೆ. ಈ ಪಂದ್ಯ ರೋಚಕವಾಗಿತ್ತು” ಎಂದು ಅಜರೆಂಕಾ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ವಿಲಿಯಮ್ಸಗೆ ಗೆಲುವು: ಆಸ್ಟ್ರೇಲಿಯ ಓಪನ್ ಟೂರ್ನಿಯಲ್ಲಿ ಐದು ಸಲ ಚಾಂಪಿಯನ್ ಆಗಿರುವ ಸೆರೆನಾ ವಿಲಿಯಮ್ಸ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 6-2, 6-0ರಲ್ಲಿ ರಷ್ಯಾದ ಮರಿಯಾ ಕಿರಿಲೆಂಕೊ ಎದುರು ಸುಲಭ ಗೆಲುವು ಸಾಧಿಸಿದರು. ಈ ಆಟಗಾರ್ತಿ 2010ರಲ್ಲಿ ಕೊನೆಯ ಸಲ ಮೆಲ್ಬರ್ನ್ ಪಾರ್ಕ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.

ಫೆಡರರ್‌ಗೆ ಗೆಲುವು: ಎರಡನೇ ಶ್ರೇಯಾಂಕ ಹೊಂದಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-4, 7-6, 6-2ರಲ್ಲಿ ಕೆನಡಾದ ಮಿಲೊಸ್ ರೊಯಾನಿಕ್ ಎದುರು ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು. ಫೆಡರರ್ ಗ್ರ್ಯಾನ್ ಸ್ಲಾಮ್‌ಟೂರ್ನಿಯಲ್ಲಿ ಎಂಟರ ಘಟ್ಟ ಪ್ರವೇಶಿಸಿದ್ದು ಇದು 35ನೇ ಸಲ. ಈ ಆಟಗಾರ ನಾಲ್ಕು ಸಲ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ ಸಹ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಸ್ಟಾನಿಸ್ಲಸ್ ವಾವ್ರಿಂಕಾ ಎದುರು ಪ್ರಯಾಸದ ಗೆಲುವು ಪಡೆದಿದ್ದರು.

ಸೊಂಗಾ ಗೆಲುವಿನ ಓಟ: ಆರಂಭದ ಸುತ್ತಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಫ್ರಾನ್ಸ್‌ನ ಜೊ ವಿಲ್‌ಫ್ರಡ್ ಸೊಂಗಾ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-4, 3-6, 6-3, 6-2ರಲ್ಲಿ ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೂಟ್ ಎದುರು ಗೆಲುವಿನ ನಗೆ ಬೀರಿದರು. ಏಳನೇ ಶ್ರೇಯಾಂಕ ಹೊಂದಿರುವ ಸೊಂಗಾ 28 ನಿಮಿಷ ನಡೆದ ಎರಡನೇ ಸೆಟ್ ಸೆಣಸಾಟದಲ್ಲಿ ಸೋಲು ಅನುಭವಿಸಿ ನಂತರ ತಿರುಗೇಟು ನೀಡಿದರು.

ಇನ್ನೊಂದು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ನ ಜೆರೆಮಿ ಚಾರ್ಡಿ 5-7, 6-3, 6-2, 6-2ರಲ್ಲಿ ಇಟಲಿಯ ಆ್ಯಂಡ್ರೆಸ್ ಸಿಪ್ಪೆ ಎದುರು ಜಯ ಪಡೆದು ಇದೇ ಮೊದಲ ಸಲ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು. ಫ್ರೆಂಚ್, ವಿಂಬಲ್ಡನ್ ಹಾಗೂ ಅಮೆರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಈ ಆಟಗಾರ ಒಮ್ಮೆಯೂ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದಿರಲಿಲ್ಲ. 2008ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ತಲುಪಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ 6-3 6-1ರಲ್ಲಿ ಫ್ರಾನ್ಸ್‌ನ ಗಿಲ್ಲಿಸ್ ಸಿಮೊನ್ ಅವರನ್ನು ಪರಾಭವಗೊಳಿಸಿದರು.

ಸಾನಿಯಾ-ಬಾಬ್‌ಗೆ ಜಯ

ಮೆಲ್ಬರ್ನ್ (ಪಿಟಿಐ): ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬಾಬ್ ಬ್ರಯಾನ್ ಜೋಡಿ, ರೋಹನ್ ಬೋಪಣ್ಣ-ಚೀನಾ ತೈಪೆಯ ಸು ವೇಯ್ ಹಿಷಿಯ್ ಜೋಡಿ ಆಸ್ಟ್ರೇಲಿಯ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.

ಸೋಮವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸಾನಿಯಾ ಹಾಗೂ ಬ್ರಯಾನ್ ಜೋಡಿ 4-6, 6-1, 10-4ರಲ್ಲಿ ಅಮೆರಿಕದ ಅಬಿಗೈಲ್ ಸ್ಪೇರ್ಸ್‌ ಮತ್ತು ಸ್ಕಾಟ್ ಲಿಪ್ಸ್ಕಿ ಎದುರು ಗೆಲುವು ಸಾಧಿಸಿತು. 57 ನಿಮಿಷ ನಡೆದ ಸೆಣಸಾಟದಲ್ಲಿ ಅಮೆರಿಕದ ಶ್ರೇಯಾಂಕ ರಹಿತ ಜೋಡಿಯ ವಿರುದ್ಧ ಗೆಲುವು ಸಾಧಿಸಲು ಸಾನಿಯಾ-ಬ್ರಯಾನ್ ಕೊಂಚ ಕಷ್ಟಪಡಬೇಕಾಯಿತು.

ಭಾರತದ ಇನ್ನೊಬ್ಬ ಆಟಗಾರ ರೋಹನ್ ಬೋಪಣ್ಣ ಅವರು ಸು ವೇಯ್ ಹಿಷಿಯ್ ಜೊತೆಗೂಡಿ  ಆಡಿ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಈ ಜೋಡಿ 6-1, 7-5ರ ನೇರ ಸೆಟ್‌ಗಳಿಂದ ಸ್ಲೋವಾಕಿಯಾದ ಡೇನಿಯಲ್ ಹಚಂಚೊವಾ- ಇಟಲಿಯ ಫಾಬಿಯೊ ಫೊಗ್ನಿನಿ ಅವರನ್ನು ಸೋಲಿಸಿತು.

ಡಬಲ್ಸ್‌ನಲ್ಲಿ ಹೋರಾಟ ಅಂತ್ಯ: ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತ ಉತ್ತಮ ಪ್ರದರ್ಶನ ತೋರುತ್ತಿದ್ದರೆ, ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಭಾರತದ ಹೋರಾಟ ಅಂತ್ಯ ಕಂಡಿತು.ಮಹೇಶ್ ಭೂಪತಿ ಮತ್ತು ಕೆನಡಾದ ಡೇನಿಯಲ್ ನೆಸ್ಟರ್ ಜೋಡಿ ಶ್ರೇಯಾಂಕ ರಹಿತ ಆಟಗಾರರಾದ ಇಟಲಿಯ ಸಿಮೊನ್ ಬೊಲೈಲಿ ಹಾಗೂ ಫಾಬಿಯೊ ಫೊಗ್ನಿನಿ ಎದುರಿನ ಮೂರನೇ ಸುತ್ತಿನ ಪಂದ್ಯದಲ್ಲಿ 3-6, 6-4, 3-6ರಲ್ಲಿ ನಿರಾಸೆ ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT