ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ತಂಡಗಳಿಂದ ಗಣಿ, ಸ್ಟಾಕ್‌ಯಾರ್ಡ್ ತನಿಖೆ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ:  ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಣೆ ಮೂಲಕ ಸಾವಿರಾರು ಕೋಟಿ ಮೌಲ್ಯದ ತೆರಿಗೆ ವಂಚಿಸಲಾಗಿದೆ ಎಂಬ ಲೋಕಾಯುಕ್ತರ ವರದಿಯ ಹಿನ್ನೆಲೆಯಲ್ಲಿ ಒಂದು ವಾರದಿಂದ ನಗರದಲ್ಲಿ ಬೀಡು ಬಿಟ್ಟಿರುವ ವಾಣಿಜ್ಯ ತೆರಿಗೆ ಇಲಾಖೆಯ 50ಕ್ಕೂ ಅಧಿಕ ಸಿಬ್ಬಂದಿ ಈ ಕುರಿತ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.

ಜಿಲ್ಲೆಯ 100ಕ್ಕೂ ಅಧಿಕ ಗಣಿ ಉದ್ಯಮಿಗಳು, ಅದಿರು ವ್ಯವಹಾರಕ್ಕೆ ಕೈಹಾಕಿದ್ದ ಬಳ್ಳಾರಿ ಮತ್ತು ಹೊಸಪೇಟೆ ವಿಭಾಗದ 2000ಕ್ಕೂ ಹೆಚ್ಚು ಏಜೆನ್ಸಿಗಳು ಕಳೆದ 5 ವರ್ಷಗಳ ಅವಧಿಯಲ್ಲಿ ನಡೆಸಿರುವ ವಹಿವಾಟಿನ ಮಾಹಿತಿ ಸಂಗ್ರಹಿಸಿ, ತೆರಿಗೆ ಸಂಗ್ರಹದ ಸಮಗ್ರ ವಿವರ ಕಲೆ ಹಾಕಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ನಗರದಲ್ಲಿರುವ ಇಲಾಖೆಯ ಆಡಳಿತ ಕಚೇರಿಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಕಡತಗಳನ್ನು ತಡಕಾಡುತ್ತಿರುವ ಸಿಬ್ಬಂದಿ, ತೆರಿಗೆ ವಂಚನೆಯಾಗಿದೆಯೇ ಎಂಬುದನ್ನು ತಾಳೆ ಹಾಕುತ್ತಿದ್ದಾರೆ.

ಬೆಂಗಳೂರಿನಿಂದ ಆಗಮಿಸಿರುವ 50 ಜನ ಅಧಿಕಾರಿಗಳನ್ನು, ಒಬ್ಬ ಜಂಟಿ ಆಯುಕ್ತ ಹಾಗೂ ಮೂವರು ಸಹಾಯಕ ಆಯುಕ್ತರನ್ನು ಒಳಗೊಂಡು 8 ತಂಡಗಳನ್ನಾಗಿ ವಿಂಗಡಿಸಲಾಗಿದೆ. ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನಲ್ಲಿರುವ ಗಣಿಪ್ರದೇಶಗಳಿಗೆ ಹಾಗೂ ಅದಿರು ಸ್ಟಾಕ್ ಯಾರ್ಡ್‌ಗಳಿಗೆ ತೆರಳಿ ವಿವರ ಸಂಗ್ರಹಿಸುತ್ತಿವೆಯಲ್ಲದೆ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಆದಾಯ ತೆರಿಗೆ, ರೈಲ್ವೆ ಮತ್ತು ಕಸ್ಟಮ್ಸ ಇಲಾಖೆಯಿಂದ ಹಾಗೂ ಬ್ಯಾಂಕ್‌ಗಳಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿವೆ.

ಹೊಸಪೇಟೆ ಮತ್ತು ಬಳ್ಳಾರಿಯ 75ಕ್ಕೂ ಅಧಿಕ ಬ್ಯಾಂಕ್‌ಗಳಿಗೆ ಪತ್ರ ಬರೆದಿರುವ ಇಲಾಖೆ, ಗಣಿ ಕಂಪೆನಿಗಳು ಹಾಗೂ ಅದಿರು ಸಾಗಣೆ ಏಜೆನ್ಸಿಗಳ 5ವರ್ಷದ ವಹಿವಾಟಿನ ಸಂಪೂರ್ಣ ವಿವರ ಒದಗಿಸುವಂತೆ ಸೂಚಿಸಿದೆ.

ಲೋಕಾಯುಕ್ತ ವರದಿ, ಸುಪ್ರೀಂ ಕೋರ್ಟ್ ನಿರ್ದೇಶಿತ ಕೇಂದ್ರ ಉನ್ನತಾಧಿಕಾರ ಸಮತಿ (ಸಿಇಸಿ) ಹಾಗೂ ಸಿಬಿಐ ಈ ಕುರಿತ ಮಾಹಿತಿ ಕೋರುತ್ತಿರುವುದರಿಂದ ಇದೀಗ ಗಣಿ ಕಂಪೆನಿಗಳ ವಹಿವಾಟಿನ `ಅಸೆಸ್‌ಮೆಂಟ್~ ಆರಂಭಿಸಲಾಗಿದೆ. 1 ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ ಎಂದು ಇಲಾಖೆಯ ಉನ್ನತ ಮೂಲಗಳು `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿವೆ.

ಪ್ರಥಮ ಮಾಹಿತಿ ಅನ್ವಯ ಗಣಿ ಮಾಲೀಕರು ಹಾಗೂ ಅದಿರು ಸಾಗಣೆ ಏಜೆನ್ಸಿಗಳ ಮುಖ್ಯಸ್ಥರ ಮನೆ ಮತ್ತು ಕಚೇರಿಗಳಿಗೂ ತೆರಳಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದೇ ವೇಳೆ, ಇಲಾಖೆಯ ಮತ್ತಷ್ಟು ತಂಡಗಳು ಕಾರವಾರದ ಬಳಿಯ ಬೇಲೆಕೇರಿ ಬಂದರು ಮತ್ತಿತರ ಬಂದರುಗಳ ಮೂಲಕ ಸಾಗಿರುವ ಅದಿರು ವಹಿವಾಟಿನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿವೆ ಎಂದು ತಿಳಿದುಬಂದಿದೆ.

ಬ್ಯಾಂಕ್‌ಗಳು ಸಿಬಿಐ ಮತ್ತು ಲೋಕಾಯುಕ್ತಕ್ಕೆ ಮಾಹಿತಿ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ ಅಗತ್ಯ ಮಾಹಿತಿ ನೀಡುವಲ್ಲಿ ವಿಳಂಬವಾಗುತ್ತದೆ ಎಂದು ತಿಳಿಸಿ, ಸಮಯಾವಕಾಶ ಪಡೆದಿವೆ. ಒಂದೆರಡು ದಿನಗಳಲ್ಲಿ ಎಲ್ಲ ಮಾಹಿತಿಯೂ ಲಭಿಸುವ ವಿಶ್ವಾಸವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರಕು ಸಾಗಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಇಲಾಖೆಯು ಇ- ಸುಗಮ ಮತ್ತು ಇ-ಸುವೇಗ ಯೋಜನೆ ಜಾರಿಗೆ ತಂದಿದ್ದು, ಸ್ಥಳೀಯವಾಗಿ ಹಾಗೂ ಹೊರ ರಾಜ್ಯಗಳಿಗೆ ಸಾಗಣೆ ಮಾಡಿದ ಸರಕಿನ ವಿವರ ಸುಲಭವಾಗಿ ದೊರೆಯುತ್ತದೆ. ತೆರಿಗೆ ವಂಚನೆ ಹಿನ್ನೆಲೆಯಲ್ಲಿ ನಿಯಮ ಗಾಳಿಗೆ ತೂರಿ ವ್ಯವಹಾರ ನಡೆಸಿರುವ ಗಣಿ ಮಾಲೀಕರು ಮತ್ತು ಏಜೆನ್ಸಿಯವರು ಇಲಾಖೆ ನಡೆಸುತ್ತಿರುವ ಅಸೆಸ್‌ಮೆಂಟ್‌ನಲ್ಲಿ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT