ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ವರ್ಷವಾದರೂ ಮುಗಿಯದ ಕಾಮಗಾರಿ

Last Updated 13 ಜೂನ್ 2011, 7:55 IST
ಅಕ್ಷರ ಗಾತ್ರ

ಹಿರಿಯೂರು: ಇದೇ ಜೂನ್ 16ಕ್ಕೆ ಕಾಮಗಾರಿಗೆ ಚಾಲನೆ ನೀಡಿ ಬರೋಬ್ಬರಿ 8 ವರ್ಷಗಳು ಮುಗಿಯುತ್ತದೆ. ಆದರೆ,  ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ.  ಇದು ತಾಲ್ಲೂಕಿನ ಉಡುವಳ್ಳಿ ಕೆರೆಗೆ ಪೂರಕ ನಾಲೆ ನಿರ್ಮಾಣ ದುಃಸ್ಥಿತಿ.

2003 ಜೂನ್ 16ರಂದು ಉಡುವಳ್ಳಿ ಕೆರೆಗೆ ್ಙ 2 ಕೋಟಿ ವೆಚ್ಚದಲ್ಲಿ ಪೂರಕ ನಾಲೆ ನಿರ್ಮಾಣ ಕಾಮಗಾರಿಗೆ ಅಂದಿನ ಜಿ.ಪಂ. ಅಧ್ಯಕ್ಷೆ ಸೌಭಾಗ್ಯಾ ಬಸವರಾಜನ್ ಚಾಲನೆ ನೀಡಿದ್ದರು. ಆರಂಭದಲ್ಲಿ ಕಾಮಗಾರಿ ನಡೆದ ಭರಾಟೆ ನೋಡಿದ ಅಚ್ಚುಕಟ್ಟು ಪ್ರದೇಶದ ರೈತರು ಒಂದೇ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ, ಕಾಮಗಾರಿ ಮುಗಿಯುವ ಲಕ್ಷಣ ಇಂದಿಗೂ ಕಾಣುತ್ತಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಲುದ್ಯಾಮೇನಹಳ್ಳಿ ಸಮೀಪದ ಕತ್ತೆಹೊಳೆ ಎಂಬ ಪ್ರದೇಶದಲ್ಲಿ 1975ರಲ್ಲಿ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಿರುವ ಸಣ್ಣ ಕೆರೆಯೊಂದಿದ್ದು, ಅದಕ್ಕೆ ಅಚ್ಚುಕಟ್ಟು ಪ್ರದೇಶವಿಲ್ಲದ ಕಾರಣ ಯಾವಾಗಲೂ ತುಂಬಿರುತ್ತಿತ್ತು. ಈ ಕೆರೆಯಿಂದ ಉಡುವಳ್ಳಿ ಕೆರೆಗೆ ಪೂರಕ ನಾಲೆ ನಿರ್ಮಿಸಿದರೆ ಕೆರೆ ಯಾವಾಗಲೂ ಜೀವಂತವಾಗಿರುತ್ತದೆ.

ರೈತರಿಗೆ, ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನರ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ ಎಂದು ಸ್ಥಳೀಯ ಮುಖಂಡರು ಒತ್ತಡ ಹೇರಿದ್ದರಿಂದ ಪೂರಕ ನಾಲೆ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು ಎಂದು ಉಡುವಳ್ಳಿ ಕೆರೆ ಅಚ್ಚುಕಟ್ಟುದಾರರಾದ ಜಿ.ಎಂ. ಉಮೇಶ್, ಎಚ್.ಡಿ. ಸೋಮಶೇಖರ್, ಎಚ್. ರಂಗನಾಥ್, ಅಬ್ದುಲ್ ರೆಹಮಾನ್ ಮತ್ತಿತರರು ಮಾಹಿತಿ ನೀಡುತ್ತಾರೆ.

1994ರಲ್ಲಿಯೇ ಯೋಜನೆ ಸಿದ್ಧಗೊಂಡರೂ ಪೂರಕ ನಾಲೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಕಾರಣದಿಂದ ಕೇಂದ್ರ ಸರ್ಕಾರದ ನಿರಾಕ್ಷೇಪಣ ಪತ್ರ ಪಡೆಯುವಲ್ಲಿ ವಿಳಂಬವಾಯಿತು. 1999ರಲ್ಲಿ ಮತ್ತೆ ಯೋಜನೆಯ ಕಡತಕ್ಕೆ ಚಾಲನೆ ದೊರೆತು ವಿವಿಧ ಇಲಾಖೆಗಳ ಅನುಮೋದನೆ ಪಡೆದು, ಹಣ ಬಿಡುಗಡೆಯಾಗಿ 2003ರಲ್ಲಿ ಕಾಮಗಾರಿ ಆರಂಭವಾಯಿತು. ಆದರೆ, 7.5 ಕಿ.ಮೀ. ಉದ್ದದ ನಾಲೆ ನಿರ್ಮಾಣದಲ್ಲಿ 5.5 ಕಿ.ಮೀ. ಮಾತ್ರ ನಿರ್ಮಿಸಿ ಕಾಮಗಾರಿ ಸ್ಥಗಿತಗೊಂಡಿತು ಎಂದು ಮುಖಂಡರು ವಿವರಿಸಿದ್ದಾರೆ.

ಕಾಮಗಾರಿಯ ಗುತ್ತಿಗೆಯನ್ನು ಕೆ.ಆರ್. ಪೇಟೆಯ ಗುತ್ತಿಗೆದಾರರೊಬ್ಬರಿಗೆ ನೀಡಲಾಗಿತ್ತು. ನಾಲೆಯನ್ನು ಕೆಲವು ಕಡೆ 51 ಅಡಿ ಅಗಲ ಹಾಗೂ 30 ಅಡಿ ಆಳ ತೆಗೆಯಬೇಕಿತ್ತು. ದೊಡ್ಡ ಗಾತ್ರದ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸಲಾಗುತ್ತಿತ್ತು. ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಯಾಗದ ಕಾರಣ ಕಾಮಗಾರಿ ಸ್ಥಗಿತಗೊಂಡಿತು.

ನಂತರ, ಕಾಮಗಾರಿ ಮುಂದುವರಿಸಲು ್ಙ 4 ಕೋಟಿ ಬೇಕಾಗುತ್ತದೆಂದು 11ನೇ ಹಣಕಾಸು ಆಯೋಗಕ್ಕೆ ವರದಿ ಸಲ್ಲಿಸಲಾಗಿತ್ತು. ಅಲ್ಲಿ ಹಣವೂ ಮಂಜೂರಾಗಿತ್ತು. ಆದರೆ, ರಾಜ್ಯದಲ್ಲಿ ಸರ್ಕಾರ ಬದಲಾದ ಕಾರಣ ಮಂಜೂರಾದ ಹಣ ಬಿಡುಗಡೆ ಆಗದೇ ಮತ್ತೆ ಕಾಮಗಾರಿಗೆ ಗ್ರಹಣ ಹಿಡಿಯಿತು ಎಂದು ಉಮೇಶ್ ಮತ್ತಿತರರು ತಿಳಿಸುತ್ತಾರೆ.

ಕಾಮಗಾರಿಗೆ ಒಟ್ಟಾರೆ ಎಷ್ಟು ವೆಚ್ಚವಾಗಿದೆ. ಉಳಿದಿರುವ ಹಣವೆಷ್ಟು. ಪೂರ್ಣಗೊಳಿಸಲು ಬೇಕಾಗಿರುವ ಹಣವೆಷ್ಟು ಎಂದು ಲೆಕ್ಕಾಚಾರ ಹಾಕಿ, ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿ ಪೂರಕ ನಾಲೆ ಪೂರ್ಣಗೊಂಡು ಪ್ರತೀ ವರ್ಷ ಕೆರೆ ಭರ್ತಿಯಾಗುತ್ತದೆ.

ಇದರಿಂದ ಸುಮಾರು 800 ಎಕರೆ ಪ್ರದೇಶ ನೀರಾವರಿಯಾಗುತ್ತದೆ. ಹಿರಿಯೂರು ನಗರದವರೆಗೆ ಅಂತರ್ಜಲ ಹೆಚ್ಚುತ್ತದೆ. ಕೆ.ಎಚ್. ರಂಗನಾಥ್, ಡಿ. ಮಂಜುನಾಥ್ ಹಾಗೂ ಡಿ. ಸುಧಾಕರ್ ಮಂತ್ರಿಗಳಾಗಿದ್ದಾಗಲೂ ಈ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ರೈತರ ಬಗ್ಗೆ ಅಪಾರ ಕಾಳಜಿ ಇದೆ ಎನ್ನುವ ಮುಖ್ಯಮಂತ್ರಿ ಇತ್ತ ಗಮನಹರಿಸಿದರೆ ನೂರಾರು ರೈತರ ಬದುಕು ಹಸನಾಗುತ್ತದೆ ಎಂದು ರೈತರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT