ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡಿ ಸುತ್ತೋಲೆೆ ಕಸದ ಬುಟ್ಟಿಗೆ

Last Updated 17 ಸೆಪ್ಟೆಂಬರ್ 2011, 7:55 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯ ಯಾವುದೇ ಜಮೀನು ಇತರ ಇಲಾಖೆಗೆ ನೀಡುವ ಪೂರ್ವದಲ್ಲಿ ಕಂದಾಯ ಇಲಾಖೆಯ ಮಂಜೂರಾತಿ ಅತ್ಯಗತ್ಯ. ನಿಗಮದ ಅಡಿಯಲ್ಲಿ ಬರುವ ಖಾಸಗಿ ಸಂಸ್ಥೆ, ಸಂಘ, ಮಠ ಮುಂತಾದವುಗಳಿಗೆ ಜಮೀನು ನೀಡುವಂತೆ ಕೋರಿ ಬರುವ ಪ್ರಸ್ತಾವನೆಗಳನ್ನು ಮಂಜೂರಾತಿಗೆ ಕಾನೂನಿನಲ್ಲಿ ಅವಕಾಶವಿಲ್ಲವೆಂದು ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ನಿಗಮದ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ಕ್ಯಾರೇ ಅನ್ನದೆ ಬಾಡಿಗೆ ಆಧಾರದ ಮೇಲೆ ಶೆಡ್‌ಗಳನ್ನು ಹಂಚಿಕೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.

2009 ಫೆಬ್ರುವರಿ 18ರಂದು ನಿಗಮದ ವ್ಯವಸ್ಥಾಪಕರು ಕೃಷ್ಣಾ ಭಾಗ್ಯ ಜಲ ನಿಗಮದ ಸ್ವಾಧೀನದಲ್ಲಿ ಬರುವ ಜಮೀನುಗಳನ್ನು ಲೀಸ್ ಆಧಾರದ ಮೇಲೆ ಅಥವಾ ಹಸ್ತಾಂತರಿಸುವ ಬಗ್ಗೆ ಸುತ್ತೋಲೆ  ಹೊರಡಿಸಿದ್ದಾರೆ.

ನಿಗಮದ ಸ್ವತ್ತು ಬಾಂಡುದಾರಿಗೆ ಹಾಗೂ ಸಾಲ ನೀಡುವವರಿಗೆ ಅಡಮಾನ ಮಾಡಿರುವುದರಿಂದ ಲೀಸ್ ಮೇಲೆ ಯಾರಿಗೂ ನೀಡಕೂಡದೆಂದು ಕಟ್ಟುನಿಟ್ಟಿನ ಆದೇಶವನ್ನು ಸರ್ಕಾರ ನೀಡಿದೆ. ಅದಕ್ಕಾಗಿ ಯಾವುದೇ ಖಾಸಗಿ ಶೈಕ್ಷಣಿಕ ಸಂಸ್ಥೆಗಳು, ಸಂಘ, ಮಠಕ್ಕೆ ನೀಡುವಂತೆ ಬರುವ ಪ್ರಸ್ತಾವನೆಗಳನ್ನು ಪರಿಗಣಿಸುವಂತಿಲ್ಲವೆಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ನಿಗಮದ ಆದೇಶವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಒಂದು ವೇಳೆ ನಿಯಮ ನಿಬಂಧನೆಗಳನ್ನು ಮೀರಿ ಪ್ರಸ್ತಾವನೆಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಿದಲ್ಲಿ ಅನಾವಶ್ಯಕವಾಗಿ ಕ್ರಮ ಕೈಗೊಂಡಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಿಚಿತ್ರವೆಂದರೆ ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ಕಳೆದ ಜುಲೈ ತಿಂಗಳಲ್ಲಿ ಆಡಳಿತ ಕಟ್ಟಡದ ಹಿಂದೆ ಇರುವ ವಾಹನ ನಿಲುಗಡೆ ಶೆಡ್‌ಗಳನ್ನು ಬಾಡಿಗೆ ಆಧಾರದ ಮೇಲೆ ಖಾಸಗಿ ವ್ಯಕ್ತಿಗಳಿಗೆ ಖಾನಾವಳಿ, ಹೋಟೆಲ್ ನಡೆಸಲು ಬಾಡಿಗೆ ರೂಪದಲ್ಲಿ ನೀಡಿದ್ದಾರೆ. ಇದು ನಿಗಮದ ಅಧಿಕಾರಿಗಳು ಮೇಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡುವ ಪರಿಯಾಗಿದೆ ಎಂದು ತಾಲ್ಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಬಸವರಾಜ ಅರುಣಿ ವ್ಯಂಗ್ಯಮಾಡಿದ್ದಾರೆ.

ನಿಗಮದ ಸುತ್ತೋಲೆಯ ನಿಯಮಗಳನ್ನ ಪಾಲಿಸದ ಅಧಿಕಾರಿಯ ವಿರುದ್ಧ ತಕ್ಷಣ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಅವರು ಕೆಬಿಜೆಎನ್‌ಎಲ್ ನಿಗಮದ ಎಂಡಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT