ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡೋಸಲ್ಫಾನ್ ತಾತ್ಕಾಲಿಕ ನಿಷೇಧ

Last Updated 17 ಫೆಬ್ರುವರಿ 2011, 10:50 IST
ಅಕ್ಷರ ಗಾತ್ರ

ಬೆಂಗಳೂರು:ತನಗಿರುವ ಸೀಮಿತ ಅಧಿಕಾರವನ್ನು ಬಳಸಿ ರಾಜ್ಯದಲ್ಲಿ ತಾತ್ಕಾಲಿಕವಾಗಿ ಎರಡು ತಿಂಗಳ ಕಾಲ ಎಂಡೋಸಲ್ಪಾನ್ ಕ್ರಿಮಿ ನಾಶಕದ ಬಳಕೆಯನ್ನು ನಿಷೇಧಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಅಲ್ಲದೆ ಇದನ್ನು ಶಾಶ್ವತವಾಗಿ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.

ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ, ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ 1968ರ ವಿಷಜನ್ಯ ಕಾಯ್ದೆ ಸೆಕ್ಷನ್ 27(1) ಪ್ರಕಾರ ಎಂಡೋಸಲ್ಪಾನ್ ಮಾರಾಟ, ಹಂಚಿಕೆ ಮತ್ತು ಬಳಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎರಡು ತಿಂಗಳ ಕಾಲ ನಿಷೇಧಿಸಲಾಗಿದೆ ಎಂದರು.

ಅಲ್ಲದೆ ಇದೇ ಕಾಯ್ದೆಯ ಸೆಕ್ಷನ್ 27(2) ಪ್ರಕಾರ ಕಾಯಂ ಆಗಿ ಇದನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ನಿಷೇಧದ ನಂತರವೂ ಇದನ್ನು ಮಾರಾಟ ಮಾಡುವುದಾಗಲಿ, ಬಳಕೆ ಮಾಡುವುದಾಗಲಿ ಮಾಡಿದರೆ ಕಾನೂನು ಪ್ರಕಾರ ದಂಡ ವಿಧಿಸುವುದು ಸೇರಿದಂತೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೇರಳ ಸರ್ಕಾರ ಈಗಾಗಲೇ ಎಂಡೋಸಲ್ಪಾನ್ ಬಳಕೆಯನ್ನು ನಿಷೇಧಿಸಿದ್ದು, ಕರ್ನಾಟಕ ಎರಡನೇ ರಾಜ್ಯವಾಗಲಿದೆ. ಇದರ ಬಳಕೆಯಿಂದ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಸೇರಿದಂತೆ ಹಲವೆಡೆ ಜನ ಕಾಯಿಲೆಗಳಿಂದ ನರಳುತ್ತಿದ್ದಾರೆ. ಇದನ್ನು ಗಮನಿಸಿ ಅವರ ಹಿತದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದರು.

ಆರೋಪ: ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಎಂಡೋಸಲ್ಪಾನ್ ಕಂಪೆನಿಗಳ ಲಾಬಿಗೆ ಮಣಿದಿದ್ದಾರೆ. ಇದನ್ನು ನಿಷೇಧ ಮಾಡಿ ಎಂದು ಮನವಿ ಮಾಡಿದರೆ ಕಂಪೆನಿಗಳ ಪರವಾಗಿ ಮಾತನಾಡುತ್ತಾರೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಎಂಡೋಸಲ್ಪಾನ್ ಬಳಕೆಯಿಂದಾಗಿ ಕ್ಯಾನ್ಸರ್, ಚರ್ಮರೋಗ ಕಾಣಿಸಿಕೊಳ್ಳುತ್ತಿರುವುದಲ್ಲದೆ ಕುರುಡರು ಹಾಗೂ ಅಂಗವಿಕಲರಾಗುತ್ತಿದ್ದರು. 15 ವರ್ಷಗಳ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಕೂಡಲೇ ಇದನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಬೇಕು. ಬೇರೆ ಕ್ರಿಮಿನಾಶಕಗಳನ್ನು ಮಾರಾಟ ಮಾಡುವಾಗ ಅದರಲ್ಲಿ ಎಂಡೋಸಲ್ಪಾನ್ ಅಂಶ ಇಲ್ಲದೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕಾಯ್ದೆಗೆ ತಿದ್ದುಪಡಿ: ದೇವಸ್ಥಾನಗಳಿಗೆ ಆಡಳಿತ ಮಂಡಳಿಗಳ ಬದಲು ರಾಜ್ಯ ಧಾರ್ಮಿಕ ಪರಿಷತ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ರಚನೆಗೆ ಅವಕಾಶ ಮಾಡಿಕೊಡುವ ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳ ಕಾಯ್ದೆ ಸೆಕ್ಷನ್ 25ಕ್ಕೆ ತಿದ್ದುಪಡಿ ತರುವುದಕ್ಕೆ ಒಪ್ಪಿಗೆ ನೀಡಲಾಗಿದೆ.

2003ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಾಗ ಹೈಕೋರ್ಟ್ ರದ್ದುಪಡಿಸಿತ್ತು. ನಂತರ ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನು ಎತ್ತಿಹಿಡಿದಿದ್ದು ಸೆಕ್ಷನ್ 25ಕ್ಕೆ ಮಾತ್ರ ತಿದ್ದುಪಡಿ ತನ್ನಿ ಎಂದು ಸೂಚಿಸಿದೆ. ಅದಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಲಾಗಿದ್ದು, ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಮಸೂದೆಯನ್ನು ಮಂಡಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT