ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥ ಸೊಗಸು! ಎಂಥ ಕನಸು!

Last Updated 3 ಜನವರಿ 2011, 7:00 IST
ಅಕ್ಷರ ಗಾತ್ರ

ಹೊಸತನ್ನು ಸ್ವಾಗತಿಸುವುದು ಹೇಗೆ? ಸಂಭ್ರಮ ಮತ್ತು ನಿರೀಕ್ಷೆಗಳೊಂದಿಗೆ ತಾನೆ. ಹೊಸ ವರ್ಷದ ಈ ಮೊದಲ ಸಂಚಿಕೆಯ ಹೂರಣ ಕೂಡ ಸಂಭ್ರಮ-ನಿರೀಕ್ಷೆಗಳೇ. ಸಂಗೀತ-ನೃತ್ಯಕ್ಕೆ ಸಂಬಂಧಿಸಿದಂತೆ ಅಪರೂಪದ ಕಾರ್ಯಕ್ರಮಗಳ ನೆಪದಲ್ಲಿನ ಎರಡು ಬರಹಗಳು 2011ರ ಸ್ವಾಗತಕ್ಕೆ ಮುನ್ನುಡಿಯಂತಿವೆ. ಗಂಧರ್ವಲೋಕದ ವಾಸ್ತವದೊಂದಿಗೆ ಕಿನ್ನರಲೋಕದ ಕನಸುಗಳೂ ಇವೆ. ಆದರ್ಶ, ಮೌಲ್ಯ- ಕನಸುಗಳಿಗೆ ಎಷ್ಟೊಂದು ಬಣ್ಣ. ಈ ಸಡಗರ, ಕನಸುಗಳ ಸಂಗಮವೇ- ಎಂಥ ಸೊಗಸು! ಎಂಥ ಕನಸು!

ವಯಲಿನ್ ವಿರಾಟ
ಡೈರಿ ಬರೆಯುವುದು ಅವರ ಜನ್ಮಕ್ಕಂಟಿದ್ದ ಹವ್ಯಾಸ. ಬುದ್ಧಿ ಬಂದಾಗಿನಿಂದ ಡೈರಿ ಬರವಣಿಗೆಯನ್ನು ತಪ್ಪಿಸಿರಲಿಲ್ಲ. ಐದು ಪೈಸೆ ಖರ್ಚು ಮಾಡಿದ್ದರಿಂದ ಹಿಡಿದು ಆ ದಿನದ ಸಂಗೀತಾಭ್ಯಾಸದ ಮಧುರ ಕ್ಷಣಗಳವರೆಗೆ ಎಲ್ಲಕ್ಕೂ ಆ ಬರವಣಿಗೆಯಲ್ಲಿ ತಾವಿತ್ತು. ಹಾಗೆ ಬರೆಯುತ್ತಾ ಇದ್ದವರು, 1990ರ ಡಿಸೆಂಬರ್ 4ನೇ ತಾರೀಖಿನ ಜಾಗದಲ್ಲಿ ಚಿತ್ತುಚಿತ್ತಾಗಿ ಏನೇನೋ ಗೀಚಿದ್ದರು. ಅದು ಅವರು ತೀರಿಕೊಂಡ ದಿನ! ಸಾವಿನ ಭವಿಷ್ಯ ಅವರಿಗೆ ಅದು ಹೇಗೆ ಹೊಳೆದಿತ್ತೋ, ಡೈರಿಯ ಆ ದಿನದ ಭಾಗದಲ್ಲೆಲ್ಲಾ ಮೊದಲೇ ಮೃತ್ಯುಗೆರೆಗಳನ್ನು ದಾಖಲಿಸಿದ್ದರು. ಬದುಕಿನುದ್ದಕ್ಕೂ ವಯಲಿನ್ ನಾದದಲೆಗಳ ಜೊತೆ ಆಟವಾಡಿದ, ಅಳಿದ ಮೇಲೂ ಜಗತ್ತಿಗೆ ತಮ್ಮ ಮಕ್ಕಳ ಮೂಲಕ ಅದೇ ನಾದದಲೆ ಹರಡುವಂತೆ ಮಾಡಿದ ಆ ಚೇತನದ ಹೆಸರು ವಿ.ಲಕ್ಷ್ಮೀನಾರಾಯಣ.

ಇಂಥ ತಂದೆಯ ನೆನಪು ಜೀಕುತ್ತಾ ಬೆಂಗಳೂರಿನ ಡಾಲರ್ಸ್‌ ಕಾಲೋನಿಯ ತಮ್ಮ ಮನೆಯ ಸೋಫಾ ಮೇಲೆ ಕುಳಿತಿದ್ದವರು ಎಲ್.ಸುಬ್ರಹ್ಮಣ್ಯಂ. ಅವರನ್ನು ವಿಶ್ವದ ಅನೇಕ ಸಂಗೀತಗಾರರು ‘ಭಾರತೀಯ ವಯಲಿನ್‌ನ ದೇವರು’ ಎಂದೇ ಕರೆಯುತ್ತಾರೆ.

ಲಕ್ಷ್ಮೀನಾರಾಯಣ ತೀರಿಕೊಂಡು ವಾರವಾಗಿತ್ತಷ್ಟೆ. ಮಗ ಸುಬ್ರಹ್ಮಣ್ಯಂ ಅದೇನನ್ನೋ ಹುಡುಕಲೆಂದು ಪುಸ್ತಕದ ಶೆಲ್ಫ್‌ನತ್ತ ಹೋದರು. ಅಲ್ಲಿ ಕಂಡದ್ದು ಅಪ್ಪನ ಡೈರಿ. ಅದರ ಪುಟಗಳ ನಡುವೆ ಒಂದಿಷ್ಟು ಪತ್ರಗಳು. ಅವು ಪ್ರತ್ಯೇಕವಾಗಿ ತಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತಿತರರಿಗೆ ಬರೆದಿಟ್ಟಂಥವು. ಎಲ್ಲವುಗಳ ಸಾರ ಹೆಚ್ಚೂ ಕಡಿಮೆ ಒಂದೇ- ‘ಇಂಡಿಯನ್ ವಯಲಿನ್ ಜಗದ್ವಿಖ್ಯಾತವಾಗುವಂತೆ ಏನಾದರೂ ಮಾಡಬೇಕು. ಅದನ್ನು ಯಾರೂ ಬಿಡಕೂಡದು’.

ತಂದೆಯ ಕೊನೆ ಆಸೆಯ ಆ ಪತ್ರವನ್ನು ಓದಿದ ಸುಬ್ರಹ್ಮಣ್ಯಂ ಕಣ್ಣಲ್ಲಿ ತೇವ ತುಂಬಿತ್ತು. ಅದಕ್ಕೂ ಆರು ವರ್ಷ ಮೊದಲು ಅಮ್ಮ ತೀರಿಕೊಂಡಾಗ ಖಿನ್ನರಾಗಿ ಕೆಲವು ದಿನ ನುಡಿಸದೇ ಬಿಟ್ಟ ವಯಲಿನ್ ಕಡೆಗೆ ಮತ್ತೆ ಮಗನನ್ನು ಕೈಹಿಡಿದು ಕರೆದುಕೊಂಡು ಹೋಗಿದ್ದವರು ಅದೇ ಅಪ್ಪ. ಅಮ್ಮನ ಅಗಲಿಕೆಯ ದುಃಖದಲ್ಲೇ ಒತ್ತಡಕ್ಕೆ ಮಣಿದು ರಷ್ಯಾಕ್ಕೆ ಹೋಗಿ ವೇದಮಂತ್ರಗಳ ಹೊಸ ಮಟ್ಟುಗಳನ್ನು ನುಡಿಸಿ ಬಂದಾಗ ಹೆಮ್ಮೆಯಿಂದ ಬರಮಾಡಿಕೊಂಡಿದ್ದವರೂ ಅದೇ ಅಪ್ಪನೇ.

ಲಕ್ಷ್ಮೀನಾರಾಯಣ ಹುಟ್ಟಿದ್ದು 1911, ಜನವರಿ 11. ಮೊದಲು ಕೈಯಲ್ಲಿ ವಯಲಿನ್ ಹಿಡಿದಾಗಿನ್ನೂ ವಯಸ್ಸು ನಾಲ್ಕು. ಗುರು ಬಾಲು ಸ್ವಾಮಿ ದೀಕ್ಷಿತರ್ ಸಂಗೀತ ದೀಕ್ಷೆ ಕೊಟ್ಟರು. ಶಾಸ್ತ್ರೀಯವಾಗಿ ವಯಲಿನ್ ಕಲಿತ ನಂತರ ಏಳನೇ ವಯಸ್ಸಿಗಾಗಲೇ ಪಕ್ಕವಾದ್ಯಗಾರನಾಗಿ ವೇದಿಕೆ ಪ್ರವೇಶಿಸಿದ್ದಾಯಿತು. ಲಕ್ಷ್ಮೀನಾರಾಯಣರ ತಂದೆ ಕೇರಳದ ಹಡಗಿನಲ್ಲಿ ಕೆಲಸ ಮಾಡುತ್ತಿದ್ದರು.

ಸಂಗೀತಗಾರ ಅಲ್ಲದಿದ್ದರೂ ಸಹೃದಯಿ. ಹಾಗಾಗಿ ಯಾರಾದರೂ ಸಂಗೀತಗಾರರು ಹಡಗು ಹತ್ತಿದರೆ ಅವರನ್ನು ತಲುಪಬೇಕಾದ ಜಾಗಕ್ಕೆ ಟಿಕೆಟ್ ಇಲ್ಲದೆಯೇ ಪುಕ್ಕಟೆಯಾಗಿ ಕರೆದುಕೊಂಡು ಹೋಗುತ್ತಿದ್ದರು. ಅಮ್ಮ ಊರೂರಲ್ಲಿ ಜಾನಪದಗೀತೆ ಹಾಡಿ ಪಳಗಿದ್ದವರು. ಅಪ್ಪನ ಸಹೃದಯತೆ, ಅಮ್ಮನ ಸಂಗೀತ ಪ್ರೀತಿ ಎರಡರ ಎರಕ ಲಕ್ಷ್ಮೀನಾರಾಯಣ.

ವಯಲಿನ್‌ನಲ್ಲಿ ಹೆಚ್ಚಿನದೇನನ್ನೋ ಕಲಿಯಬೇಕೆಂಬ ಉತ್ಕಟತೆ ತಿರುಪ್ಪಾರ್‌ಕಡಲ್ ಶ್ರೀನಿವಾಸ ಅಯ್ಯಂಗಾರರ ಗರಡಿ ತಲುಪಲು ಕಾರಣವಾಯಿತು. ಅವರಿಂದ ಕಲಿತ ಪ್ರಯೋಗಶೀಲತೆಯನ್ನು ದಾಟಿಸಲು ಮುಂದೆ ದೊಡ್ಡ ಶಿಷ್ಯವೃಂದವನ್ನೇ ಅವರು ಸೃಷ್ಟಿಸಿಕೊಂಡದ್ದು ದಿವ್ಯವಾದ ಸಾಧನೆ.

1940ರಲ್ಲಿ ಶ್ರೀಲಂಕಾದ ಜಾಫ್ನಾದಲ್ಲಿ ಸಂಗೀತದ ಪ್ರೊಫೆಸರ್ ಕೆಲಸ ಸಿಕ್ಕಿತು. ಪಾಠ ಹೇಳಿಕೊಡುವ ಕಾಯಕವನ್ನಷ್ಟೇ ಅಲ್ಲದೆ ವಯಲಿನ್ ಅಭ್ಯಾಸವನ್ನೂ ಶ್ರದ್ಧೆಯಿಂದ ಮುಂದುವರಿಸಿದ ಅವರಿಗೆ 1955ರಲ್ಲಿ ಸಿಕ್ಕಿದ್ದು ಕೊಲಂಬೋದ ರೇಡಿಯೋ ಸಿಲೋನ್ ವೇದಿಕೆ. ಅಲ್ಲಿ ವಿವಿಧ ವಾದ್ಯ ಸಂಯೋಜನೆ ಮಾಡಿ, ಮೂರು ವರ್ಷ ಅನೇಕರಿಗೆ ಸಂಗೀತದ ರುಚಿ ಹತ್ತಿಸಿದರು.
 
1958ರಲ್ಲಿ ಶ್ರೀಲಂಕಾದಲ್ಲಿ ಗಲಭೆಗಳಾದವು. ಹಾಗಾಗಿ ಅಲ್ಲಿಂದ ಭಾರತಕ್ಕೆ ಬಂದರು. ಭಾರತವಷ್ಟೇ ಅಲ್ಲದೆ ಏಷ್ಯಾದ ಇತರ ಕೆಲವು ರಾಷ್ಟ್ರಗಳು ಹಾಗೂ ಅಮೆರಿಕದಲ್ಲಿ ವಯಲಿನ್ ಕಾರ್ಯಕ್ರಮಗಳನ್ನು ಕೊಟ್ಟ ಲಕ್ಷ್ಮೀನಾರಾಯಣ, ಎಂದಿಗೂ ಸಂಗೀತದ ಪಾಠ ಹೇಳಿಕೊಡುವುದೇ ತಮ್ಮ ಆದ್ಯತೆ ಎಂದು ಭಾವಿಸಿದರು. ಇದಕ್ಕೆ ಮುಖ್ಯ ಕಾರಣ, ಸಂಗೀತ ಪರಂಪರೆ ದೊಡ್ಡದಾಗಬೇಕು ಎಂಬ ಮಹತ್ವಾಕಾಂಕ್ಷೆ.

ಪತ್ನಿ ಸೀತಾಲಕ್ಷ್ಮಿ ವೀಣೆ ನುಡಿಸುತ್ತಿದ್ದರು. ಜೋಲಿಯಲ್ಲಿ ಮಗು ಇತ್ತೆಂದರೆ ಹಾಡು ತಾನೇತಾನಾಗಿ ಹರಿಯುತ್ತಿತ್ತು. ಮನೆಯಲ್ಲಿ ಹುಟ್ಟಿದ ಎಲ್ಲಾ ಮಕ್ಕಳಿಗೂ ಶೈಶವಾವಸ್ಥೆಯಲ್ಲೇ ಸಂಗೀತದ ವಾತಾವರಣ ಒದಗಿದ್ದೇ ಹಾಗೆ.

ಘಲ್ಲು ಘಲ್ಲೆನುತ...
ವೈಜಯಂತಿ ಕಾಶಿ ಕೂಚಿಪುಡಿ ರಾಷ್ಟ್ರಪ್ರಸಿದ್ಧ ನೃತ್ಯ ಕಲಾವಿದರು. ಬೆಂಗಳೂರಿನ ‘ಶಾಂಭವಿ ಸ್ಕೂಲ್ ಆಫ್ ಆರ್ಟ್’ನ ಸ್ಥಾಪಕಿ ಮತ್ತು ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ. ಅವರೀಗ, ಬೆಂಗಳೂರಿನಲ್ಲಿ ನಡೆಯುವ ಮೂರನೇ ‘ಡಾನ್ಸ್ ಜಾತ್ರೆ’ ತಯಾರಿಯಲ್ಲಿದ್ದಾರೆ. ಈ ಗಡಿಬಿಡಿಯಲ್ಲಿ ತಮ್ಮ ತಂಡದೊಟ್ಟಿಗೆ ನೃತ್ಯ ಪ್ರದರ್ಶನ ನಡೆಸುವುದನ್ನೇನೂ ಮೊಟಕುಗೊಳಿಸಿಲ್ಲ. ಜಾತ್ರೆಯ ತಯಾರಿಯೂ ಜೋರು. ಪಕ್ಕದ ಹೈದರಾಬಾದಿನಲ್ಲೋ, ಕೇರಳದಲ್ಲೋ ತಂಡ ಕಟ್ಟಿಕೊಂಡು ಹೆಜ್ಜೆ ಹಾಕುತ್ತಲೇ ಚಿಕ್ಕ-ಪುಟ್ಟ ಪ್ರಯಾಣಗಳ ಮಧ್ಯೆ ದೊಡ್ಡ ಕನಸು ಕಾಣುವ ಅವರು ‘ಸಾಪ್ತಾಹಿಕ’ದ ಧ್ವನಿಗೆ ಸ್ಪಂದಿಸಿದರು.

ನೃತ್ಯವನ್ನು ಹೊಸಪೀಳಿಗೆಗೆ ತಲುಪಿಸುವುದು ಹೇಗೆ? ವೈಜಯಂತಿ ಹೇಳುವುದು ಹೀಗೆ:
ಹೊಸತನಕ್ಕೆ ಪಿಳಿಪಿಳಿ ಕಣ್ಣುಬಿಡುವ ಈಗಿನ ಮಕ್ಕಳಿಗೆ ಪೌಷ್ಠಿಕವೆಂದು ಜೋಳದ ರೊಟ್ಟಿಯನ್ನೋ, ರಾಗಿಮುದ್ದೆಯನ್ನೋ ತಿನ್ನಿಸಹೋದರೆ ಅವು ಮುಖ ಸಿಂಡರಿಸುವುದು ಸಹಜ. ಆದರೆ, ಈ ಮೂಲ ಆಹಾರಗಳ ಬೈಪ್ರಾಡಕ್ಟ್‌ಗಳನ್ನೇ ಆಕರ್ಷಕ ಪ್ಯಾಕೆಟ್‌ಗಳಲ್ಲಿ ಕೊಟ್ಟು ನೋಡಿ? ಅವು ಬಾಯಿಚಪ್ಪರಿಸದೆ ಇರಲಾರವು. ಅದೇ ರೀತಿ ಸಾಂಪ್ರದಾಯಿಕ ಕಲೆಗಳನ್ನು ಹಸಿಹಸಿಯಾಗಿ ಕೊಡದೆ, ಮೊದಮೊದಲು ‘ಆಮದು ಸರಕಿನ’ ಆಕರ್ಷಕ ರ್ಯಾಪರ್‌ಗಳಲ್ಲಿ ದೇಸಿ ಬೈಪ್ರಾಡಕ್ಟ್‌ಗಳ ತುಣುಕುಗಳನ್ನು ಬಾಯಿಗಿಡುತ್ತಾ, ಕ್ರಮೇಣ ಮೂಲರಸದ ರುಚಿ ಹತ್ತಿಸಬೇಕಾಗುತ್ತದೆ. ಇಂಥ ಪ್ರಯತ್ನಗಳು ಈಗಾಗಲೇ ಎಲ್ಲ ಕಲಾವಲಯಗಳಲ್ಲಿ ನಡೆದಿವೆ.

ನಡೆಯುತ್ತಿವೆ. ಕಲಾವಿದರು ಪ್ರದರ್ಶನ ನೀಡುತ್ತಾರೆ. ಆಸಕ್ತರು ಆಸ್ವಾದಿಸುತ್ತಾರೆ. ಇಷ್ಟಕ್ಕೇ ಇದು ಸೀಮಿತ. ಆದರೆ ಕಲೆ ಉದ್ಯಮವಾಗಿ ಬೆಳೆಯಲು ಇದರಿಂದಷ್ಟೇ ಸಾಧ್ಯವಿಲ್ಲ. ಕಲೆ ಉದ್ಯಮವಾಗಿ ಬೆಳೆಯಬೇಕೆಂದರೆ ಹೊಸ ಪ್ರೇಕ್ಷಕರನ್ನು ರೂಪಿಸಬೇಕು. ಪ್ರೇಕ್ಷಕರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಲೆಯೊಂದಿಗೆ ಬೆರೆಯಬೇಕು’. ಈ ಪರಿಕಲ್ಪನೆಯಲ್ಲೇ ವೈಜಯಂತಿ ಪ್ರತಿ ವರ್ಷ ‘ಡಾನ್ಸ್ ಜಾತ್ರೆ’ಯನ್ನು ಆಯೋಜಿಸುತ್ತಿದ್ದಾರೆ.

‘ಒಬ್ಬ ನೃತ್ಯಕಲಾವಿದನಿಗೆ ರೆಕಗ್ನಿಶನ್ ಸಿಗಬೇಕು ಅಂದ್ರೆ ಕನಿಷ್ಠ ಮೂವತ್ತು ವರ್ಷದ ಸಾಧನೆ ಬೇಕು. ಹಾಗೆ ಗುರುತಿಸಿಕೊಂಡ ಬಳಿಕ ಅವರು ನೃತ್ಯಶಾಲೆ, ನೃತ್ಯ ಪ್ರದರ್ಶನಕ್ಕಷ್ಟೇ ಸೀಮಿತರಾಗುತ್ತಾರೆ. ಅಷ್ಟಕ್ಕೆ ಅರ್ಧ ಆಯುಷ್ಯ ಕಳೆದುಹೋಗಿರುತ್ತದೆ. ನೃತ್ಯವನ್ನೇ ನಂಬಿದವರ ಆರ್ಥಿಕ, ಸಾಮಾಜಿಕ ಸ್ಥಿತಿಯ ಬಗ್ಗೆ ಕೇಳಲೇಬಾರದು. ಈಗ ಕಲೋದ್ಯಮವಾಗಿರುವ ಸಿನಿಮಾವನ್ನೇ ತೆಗೆದುಕೊಳ್ಳಿ.

ನೃತ್ಯವಿದ್ದರೇನೇ ಸಿನಿಮಾ. ಎಲ್ಲಾ ನಟರೂ ತರಬೇತಿ/ಕೋರ್ಸ್ ಪೂರೈಸಿರುವುದಿಲ್ಲ. ಆದರೆ, ನೃತ್ಯಕ್ಕೆ ಮಾತ್ರ ತರಬೇತಿ ಪಡೆದ ಕಲಾವಿದರನ್ನೇ ಸಿನಿಮಾ ಇಂಡಸ್ಟ್ರಿಯವರು ಹುಡುಕುತ್ತಾರೆ. ನೃತ್ಯ, ಯಾವ ಕಾಲಕ್ಕೂ ಮನರಂಜನೆಯ ಮುಂಚೂಣಿಯಲ್ಲಿ ನಿಲ್ಲುವಂಥದ್ದು. ಇದು ಯಾಕೆ ಇಂಡಸ್ಟ್ರಿಯಾಗಿ ಬೆಳೆಯಬಾರದು? ಹಾಗೆ ಅದು ಬೆಳೆಯಬೇಕೆಂದರೆ ಪೂರಕವಾಗಿ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವ ಜವಾಬ್ದಾರಿಯೂ ಕಲಾವಲಯದವರದ್ದೇ’.

‘ಪ್ರಮೋಟಿಂಗ್ ದಿ ಸೇಲ್ಸ್ ಆಫ್ ಡಾನ್ಸ್’ ಎಂಬ ಪರಿಕಲ್ಪನೆಯನ್ನು ಕಲಾವಿದ ಚಾಕಚಕ್ಯತೆಯಿಂದ ನೇಯಬೇಕಾಗುತ್ತದೆ. ಕಲೆ ಉದ್ಯಮವಾಗಿ ಬೆಳೆಯಲು ಅವಶ್ಯವಿರುವ ಬೆಂಬಲವನ್ನು ವಿವಿಧ ಸಂಪ್ರದಾಯದ ಕಲಾವಿದರ, ಆಸಕ್ತರ ಮತ್ತು ಪ್ರೇಕ್ಷಕರ ತೊಡಗುವಿಕೆಯಿಂದ ಸಾಧಿಸಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವೈಜಯಂತಿ ಅವರ ‘ಡಾನ್ಸ್ ಜಾತ್ರೆ’ಯ ಐಡಿಯಾದ ಕೆಲ ತುಣುಕುಗಳು ಹೀಗಿವೆ:

‘ಈ ಡಾನ್ಸ್ ಜಾತ್ರೆಯಲ್ಲಿ ನಡೆಯುವ ಕಾರ್ಯಾಗಾರಗಳಲ್ಲಿ ಕೂಚಿಪುಡಿ, ಮೋಹಿನಿಯಾಟ್ಟಂ, ಜಾನಪದ, ಕ್ರಿಯೇಟಿವ್ ಡಾನ್ಸ್ ಥೆರಪಿ, ಒಡಿಸ್ಸಿ, ಫ್ರೀ ಸ್ಟೈಲ್ ಡಾನ್ಸ್, ಬ್ಯಾಲೆ ಇತ್ಯಾದಿ ಪ್ರಕಾರಗಳನ್ನು ಕಲಾವಿದರು ಕಲಿಯಬಹುದು. ಕಲಾವಿದರಷ್ಟೇ ಏಕೆ? ಚಿಕ್ಕಂದಿನಲ್ಲಿ ಡಾನ್ಸ್ ಕಲಿಯಬೇಕಿತ್ತು. ಆದರೆ ಈಗ ಕೈಕಾಲು ಆಡುವುದೇ ಎಂದು ಅನುಮಾನಿಸುವವರೂ ಕೂಡ ಸಂಕೋಚ ಬಿಟ್ಟು ಮುದ್ರೆಗಳನ್ನೋ, ಹೆಜ್ಜೆ ಹಾಕಲೋ ಪ್ರಯತ್ನಿಸಬಹುದು.

ಒಂದುವೇಳೆ ಅವರೊಳಗಿನ ಕಲಾವಿದನಿಗೆ ಆತ್ಮವಿಶ್ವಾಸ ಬಂದಲ್ಲಿ ಪೂರ್ಣ ಪ್ರಮಾಣದಲ್ಲಿ ಆಗದಿದ್ದರೂ ಕೊನೆಪಕ್ಷ ‘ವೀಕೆಂಡ್ ಕಲಾವಿದ’ರಾಗಿಯಾದರೂ ಅವರು ರೂಪುಗೊಳ್ಳಬಹುದು’.

‘ಬೆಂಗಳೂರಿನಲ್ಲಿ ವಾರಕ್ಕೆ ನಾಲ್ಕೈದು ರಂಗಪ್ರವೇಶಗಳು ನಡೆಯುತ್ತವೆ. ಆದರೆ ಅವರಿಗೆಲ್ಲ ಅವಕಾಶ ಬೇಕಲ್ಲವೆ? ಅದಕ್ಕೂ ಉತ್ತರವಾಗುತ್ತದೆ ಈ ಜಾತ್ರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT