ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥ ಹದವಿತ್ತಾ... ಎಂಥ ಮುದವಿತ್ತಾ...

Last Updated 27 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶಿವಾಜಿನಗರದ ರಸೆಲ್ ಮಾರುಕಟ್ಟೆ ಅಗ್ನಿಪರೀಕ್ಷೆಗೆ ಒಳಗಾದ ಪ್ರಸಂಗ (ಫೆ. 25, ಶನಿವಾರ) ಕೆಲವರಿಗಾದರೂ ಮಾರುಕಟ್ಟೆಯ ಗತ ವೈಭವವನ್ನು ನೆನಪಿಗೆ ತಂದಿರಬೇಕು. ಎಂಬತ್ತೈದು ವರ್ಷಗಳ ಈ ಮಾರುಕಟ್ಟೆ ಬೆಂಗಳೂರಿನ ಅತಿ ಪುರಾತನ ಮಾರುಕಟ್ಟೆಗಳಲ್ಲೊಂದು. ಕೃಷ್ಣರಾಜೇಂದ್ರ ಮಾರುಕಟ್ಟೆಗೂ (ಸಿಟಿ ಮಾರ್ಕೆಟ್) ಒಂದು ವರ್ಷದ ಮೊದಲೇ ನಿರ್ಮಾಣಗೊಂಡ ಬಜಾರಿದು.

ರಸೆಲ್ ಮಾರುಕಟ್ಟೆಯ ಪ್ರಸ್ತಾಪ ಮೊದಲಾದುದು 1915ರಲ್ಲಿ. ಕಂಟೋನ್ಮೆಂಟ್ ಪ್ರದೇಶದ ಜನಸಂಖ್ಯೆ ಒಂದೇ ಸಮನೆ ಏರುಮುಖದಲ್ಲಿದ್ದ ದಿನಗಳವು. ಆಗ, ಬೌರಿಂಗ್ ಇನ್‌ಸ್ಟಿಟ್ಯೂಟ್ ಸಮೀಪ ಒಂದು ಮಾರುಕಟ್ಟೆಯಿತ್ತು. ಆದರೆ, ಕಂಟೋನ್ಮೆಂಟ್ ಪ್ರದೇಶದ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯ ಆ ಸಣ್ಣ ಬಜಾರಿಗಿರಲಿಲ್ಲ. ಕಂಟೋನ್ಮೆಂಟ್ ಪ್ರದೇಶದ ನಾಗರಿಕರು, ಸೇನೆಯ ಅಧಿಕಾರಿಗಳು ಮತ್ತು ನೌಕರರ ಅಗತ್ಯಗಳಿಗಾಗಿ ಒಂದು ಮಾರುಕಟ್ಟೆ ಇದ್ದರೆ ಚೆನ್ನಾಗಿರುತ್ತದೆ ಎಂದು ಅಂದಿನ ಮುನಿಸಿಪಲ್ ಕಮೀಷನರ್ ಅಧ್ಯಕ್ಷರಾದ ಟಿ.ಬಿ. ರಸೆಲ್, ಐಸಿಎಸ್, ಅವರಿಗೆ ಅನ್ನಿಸಿತು. `ತರಕಾರಿ, ಮಾಂಸ, ಮೀನು ಅಂಗಡಿಗಳನ್ನು ಒಳಗೊಂಡ ಮಾರುಕಟ್ಟೆ~ಯ ಪ್ರಸ್ತಾಪವನ್ನು ಅವರು ರೂಪಿಸಿದರು. ಆದರೆ, ಉದ್ದೇಶಿತ ಮಾರುಕಟ್ಟೆಗಾಗಿ ಗುರ್ತಿಸಲಾಗಿದ್ದ ಭೂಮಿ ಸೇನೆಯ ವಶದಲ್ಲಿತ್ತು. ಲೇಡಿ ಕರ್ಜನ್ ಆಸ್ಪತ್ರೆಗೆ ಸಮೀಪದಲ್ಲಿದ್ದ ಆ ಮೈದಾನವನ್ನು ಪಡೆಯಲು ಸಾಕಷ್ಟು ಕಾಲ ಹಿಡಿಯಿತು. ಹಾಗಾಗಿ, ಮಾರುಕಟ್ಟೆಯ ಯೋಜನೆ ಪೂರ್ಣಗೊಳ್ಳಲು 1927ರವರೆಗೆ ಕಾಯಬೇಕಾಯಿತು.

1927ರ ಆಗಸ್ಟ್ 5ರಂದು ಹಾಜಿ ಸರ್ ಇಸ್ಮಾಯಿಲ್ ಸೇಟ್ ಅವರು `ರಸೆಲ್ ಮಾರುಕಟ್ಟೆ~ ಉದ್ಘಾಟಿಸಿದರು. ರಸೆಲ್ ಅವರು ಕನಸುಕಂಡ ಯೋಜನೆ ಅದಾದುದರಿಂದ, ಅವರ ಹೆಸರನ್ನೇ ಮಾರುಕಟ್ಟೆಗೆ ಇಡಲಾಯಿತು. ಮಾರುಕಟ್ಟೆಯ ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತಂತೆ. ಆಗಿನ ಕಾಲಕ್ಕೆ 269 ರೂಪಾಯಿ, 8 ಆಣೆ ಖರ್ಚಾಗಿದ್ದ ಕಾರ್ಯಕ್ರಮವದು. 

ಮೇಜರ್ ಕೆ. ಇವಾನ್ಸ್ ಗೊರ್ಡಾನ್ ಎನ್ನುವ ಅಧಿಕಾರಿ, 1927ರ ಅಕ್ಟೋಬರ್ 15ರಂದು ರಸೆಲ್ ಮಾರ್ಕೆಟ್‌ಗೆ ಅನಿರೀಕ್ಷಿತ ಭೇಟಿ ನೀಡಿದ ಸಂಗತಿಯನ್ನು ದಾಖಲಿಸಿದ್ದಾನೆ. ಆತ ಕಟ್ಟಡದ ವಿನ್ಯಾಸ ಹಾಗೂ ಅಲ್ಲಿನ ಪರಿಸರದಿಂದ ಪ್ರಭಾವಿತನಾಗಿದ್ದು, ಮದರಾಸಿನಿಂದ ಮಂಜುಗಡ್ಡೆ ತಂದು ಮಾರುತ್ತಿದ್ದ ಅಂಗಡಿಯೊಂದನ್ನು ವಿಶೇಷವಾಗಿ ಉಲ್ಲೇಖಿಸಿದ್ದಾನೆ (ಸ್ಥಳೀಯವಾಗಿ ತಯಾರಿಸುತ್ತಿದ್ದ ಮಂಜುಗಡ್ಡೆಗೆ ಹೆಚ್ಚು ಬೆಲೆ ಇತ್ತಂತೆ). ಇಂಗ್ಲಿಷ್‌ನ ಮೇಮ್‌ಸಾಹೇಬ್‌ಗಳು ಕುದುರೆಗಾಡಿಗಳಲ್ಲಿ ಮಾರುಕಟ್ಟೆಗೆ ಬಂದು ಶಾಪಿಂಗ್ ಮಾಡುತ್ತಿದ್ದರಂತೆ.

1940ರ ಸಂದರ್ಭ ರಸೆಲ್ ಮಾರುಕಟ್ಟೆಯ ಉತ್ಕರ್ಷದ ಅವಧಿ. ಬಟಾಣಿ, ಕಿತ್ತಳೆ ಮತ್ತು ಸೇಬುಹಣ್ಣುಗಳನ್ನು ಒಳಗೊಂಡ ಬುಟ್ಟಿಗಳು ರಸೆಲ್ ಮಾರುಕಟ್ಟೆಯಿಂದ ಬೇರೆ ರಾಜ್ಯಗಳಲ್ಲಿನ ಯುರೋಪಿಯನ್ ಅಧಿಕಾರಿಗಳು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ರವಾನೆ ಆಗುತ್ತಿದ್ದವಂತೆ.

ಬ್ರಿಟಿಷ್ ಆಳ್ವಿಕೆ ಸಂದರ್ಭದಲ್ಲಿ, ಕ್ರಿಸ್‌ಮಸ್ ದಿನಗಳಲ್ಲಿ ರಸೆಲ್ ಮಾರುಕಟ್ಟೆ ಪ್ರದೇಶದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನದಂತೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಮಾಂಸ, ಸಿಹಿತಿಂಡಿಗಳು, ಹೂಗಳ ವಿಶೇಷ ಪ್ರದರ್ಶನಗಳು ನಡೆಯುತ್ತಿದ್ದವು. ಉತ್ತಮ ಪ್ರದರ್ಶನಗಳಿಗೆ ಬಹುಮಾನಗಳನ್ನು ನೀಡಲಾಗುತ್ತಿತ್ತು. ಆದರೆ, ಸ್ವಾತಂತ್ರ್ಯಾನಂತರ ಈ ಕ್ರಿಸ್‌ಮಸ್ ಪ್ರದರ್ಶನಗಳು ಕಳೆಗುಂದತೊಡಗಿ, ಕ್ರಮೇಣ ನಿಂತುಹೋದವು.

ಒಂದು ಕಾಲದಲ್ಲಿ ಒಳ್ಳೆಯ ಮಾಂಸ ಬೇಕೆಂದರೆ ರಸೆಲ್ ಮಾರ್ಕೆಟ್‌ಗೆ ಹೋಗು ಎನ್ನುವ ಮಾತಿತ್ತು. ಆದರೆ, ನಗರದೆಲ್ಲೆಡೆ ತಲೆಯೆತ್ತಿರುವ ಮಾಂಸದ ಅಂಗಡಿಗಳಿಂದ ಮಾರ್ಕೆಟ್‌ನ ಮಟನ್ ವ್ಯಾಪಾರ ಈಗ ಮೊದಲಿನಂತಿಲ್ಲ.

`ರಸೆಲ್~ ಮಾರುಕಟ್ಟೆ ಚಾಲ್ತಿಗೆ ಬರುವ ಮೊದಲು, ಕಂಟೋನ್ಮೆಂಟ್‌ನ ಈ ಪ್ರದೇಶ `ಬಿಳಿ ಅಕ್ಕಿ ಪಲ್ಲಿ~ ಎಂದೂ, `ಬ್ಲಾಕ್ ಪಲ್ಲಿ~ ಎಂದೂ ಪ್ರಸಿದ್ಧವಾಗಿತ್ತು. ವಿವಿಧ ವ್ಯಾಪಾರಿ ಚಟುವಟಿಕೆಗಳಿಗೆ ಕೇಂದ್ರವಾಗಿತ್ತು. ಈಗದು ಶಿವಾಜಿನಗರ. ಧರ್ಮರಾಜ ಕೊಯಿಲ್ ಸ್ಟ್ರೀಟ್, ಮೀನಾಕ್ಷಿ ಕೊಯಿಲ್ ಸ್ಟ್ರೀಟ್, ಇಬ್ರಾಹಿಂ ಸಾಹೇಬ್ ಸ್ಟ್ರೀಟ್, ಜೈನ್ ಟೆಂಪಲ್ ರೋಡ್, ಜುಮ್ಮಾ ಮಸೀದಿ, ಸೇಂಟ್ ಮೇರಿ ಬೆಸಿಲಿಕಾ- ಎಲ್ಲವೂ ಕೂಗಳತೆ ದೂರದಲ್ಲಿರುವ ಪ್ರದೇಶವಿದು. `ಸರ್ವ ಜನಾಂಗದ ಶಾಂತಿಯ ತೋಟ~ ಎನ್ನುವ ಕವಿನುಡಿಗೆ ಅನ್ವರ್ಥವಾದುದು.

ಆರಂಭವಾದಾಗಿನಿಂದ ಈವರೆಗೂ ಗುಣಮಟ್ಟದ ಕಚ್ಚಾ ಆಹಾರ ಪದಾರ್ಥಗಳಿಗೆ ರಸೆಲ್ ಮಾರುಕಟ್ಟೆ ಪ್ರಸಿದ್ಧವಾದುದು. ತಾಜಾ ಹಣ್ಣು, ತರಕಾರಿಯ ಘಮದೊಂದಿಗೆ, ಹೂವಿನ ಪರಿಮಳವೂ, ಮಾಂಸದ ವಾಸನೆಯೂ ಒಟ್ಟಿಗೆ ಅಡರುವ ವಿಚಿತ್ರ ಪ್ರದೇಶವಿದು.

ರಸೆಲ್ ಮಾರುಕಟ್ಟೆಯಲ್ಲಿನ ಅನೇಕ ಅಂಗಡಿಗಳು ಅಪ್ಪನಿಂದ ಮಗನಿಗೆ ಬಂದಿವೆ. ತಲೆಮಾರುಗಳನ್ನು ಕಂಡ ಮಾರುಕಟ್ಟೆಯಿದು. ಹೊಸ ಹುಡುಗರಿಗೆ `ಮಾರುಕಟ್ಟೆ ಸುವರ್ಣಯುಗ~ದ ಮಾತುಗಳು ಅಜ್ಜಂದಿರ ಹಳಹಳಿಕೆಯಂತೆ ತೋರುತ್ತವೆ. ಹಳಬರ ಪಾಲಿಗೆ, ಇದು ನೆನಪುಗಳನ್ನು ಮೆಲುಕು ಹಾಕುತ್ತಿರುವ ಸ್ಮಾರಕದಂತೆ ಕಾಣಿಸುತ್ತದೆ.

ಸುಸಜ್ಜಿತ ಮಾಲ್‌ಗಳು, ವಿಶ್ವದ ಸರಕುಗಳನ್ನೆಲ್ಲ ಗುಡ್ಡೆ ಹಾಕಿಕೊಂಡ ಬಜಾರ್‌ಗಳ ನಡುವೆಯೂ ರಸೆಲ್ ಮಾರುಕಟ್ಟೆ ತನ್ನ ಜೀವಂತಿಕೆಯನ್ನು ಈಗಲೂ ಉಳಿಸಿಕೊಂಡಿದೆ.

ಅಲ್ಲಿ ಓಡಾಡಿದರೆ, ಪ್ರತಿಯೊಂದು ಅಂಗಡಿಯೂ ಒಂದೊಂದು ಕಥೆ ಹೇಳುವಂತೆ ಕಾಣಿಸುತ್ತದೆ. ಈ ಪಾರಂಪರಿಕ ಮಾರುಕಟ್ಟೆಯಲ್ಲಿ ಭಸ್ಮಾಸುರ ರೂಪಿ ಬೆಂಕಿಯ ನೆರಳು ಮೊನ್ನೆಯಷ್ಟೇ ಕಾಣಿಸಿಕೊಂಡಿದೆ. ನೆನಪು, ವಿಷಾದ, ನೋವು ನಲಿವುಗಳು ನಿತ್ಯ ಜೀವತಳೆವ ಬಹುದೊಡ್ಡ ಪ್ರಸೂತಿ ಗೃಹದಂತೆ ಮಾರುಕಟ್ಟೆ ಕಾಣಿಸುತ್ತದೆ. ಹೋಗುವವರು ಬರುವವರ ಬಿಸಿಯುಸಿರು, ಹೆಜ್ಜೆ ಸಪ್ಪಳ, ಮಾತಿನ ಗದ್ದಲದಲ್ಲಿ `ರಸೆಲ್ ಮಾರುಕಟ್ಟೆ~ ತನ್ನ ವೃದ್ಧಾಪ್ಯವನ್ನು ಹಿಂದಕ್ಕೆ ದೂಡಲು ಪ್ರಯತ್ನಿಸುವಂತೆ ಕಾಣಿಸುತ್ತದೆ.

(ಮಾಹಿತಿ: `ಡೆಕ್ಕನ್ ಹೆರಾಲ್ಡ್~ ಪತ್ರಿಕೆಯಲ್ಲಿನ ಗೀತಾ ಸುರೇಂದ್ರನ್ ಅವರ ಲೇಖನ: ಜ.24, 1982 ಮತ್ತು Bangalore: The Story Of a City
-Maya Jayapal)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT