ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎಂಪಿಎಂ~ ಕಾರ್ಖಾನೆಯಲ್ಲಿ ಉತ್ಪಾದನೆ ಇಳಿಮುಖ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಭದ್ರಾವತಿ: ಕಚ್ಚಾ ಸಾಮಗ್ರಿ ಕೊರತೆ, ಘಟಕಗಳದುಃಸ್ಥಿತಿ ಪರಿಣಾಮ ಇಲ್ಲಿನ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ)ಯಲ್ಲಿ  ಕಾಗದ ಮತ್ತು ಸಕ್ಕರೆ ಉತ್ಪಾದನೆ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಸಿಬ್ಬಂದಿ ಕೊರತೆ ಇಲ್ಲದಿದ್ದರೂ, ಉತ್ಪಾದನೆಗೆ ಅವಶ್ಯವಿರುವ ಕಚ್ಚಾ ವಸ್ತುಗಳನ್ನು ಪೂರೈಸುವಲ್ಲಿ ಅನುಸರಿಸಿರುವ ಮಂದಗತಿ ಧೋರಣೆ ಉತ್ಪಾದನೆ ಇಳಿಕೆಗೆ ಕಾರಣವಾಗಿದೆ.ಪಲ್ಪ್, ಕೆಮಿಕಲ್ಸ್, ವಾಷಿಂಗ್, ಮರ ಹಾಗೂ ರಿಫೈನರೀಸ್ ಕೊರತೆ ಪರಿಣಾಮ ಕಾಗದ ಯಂತ್ರ-3ರಲ್ಲಿನ ಉತ್ಪಾದನೆ ಕುಂಠಿತವಾಗಿದೆ. ಇದರೊಂದಿಗೆ ಕಾಗದ ಯಂತ್ರದ-4ರಲ್ಲಿನ ಉತ್ಪಾದನೆ 8ರಿಂದ 10ಗಂಟೆಗೆ ಸೀಮಿತವಾಗಿದೆ. ಮೂರು ಪಾಳಿಯ ಸಿಬ್ಬಂದಿ ಸಂಪೂರ್ಣ ಬಳಕೆ ಮಾಡಿಕೊಂಡು ಉತ್ಪಾದನಾ ಚಟುವಟಿಕೆ ಮಾಡುವಲ್ಲಿ ಕಾರ್ಖಾನೆ ಹಿನ್ನಡೆ ಕಂಡಿದೆ.

ಸಕ್ಕರೆ ಉತ್ಪಾದನೆ ಕುಸಿತ: ಪ್ರತಿ ವರ್ಷ 3.5ರಿಂದ 4ಲಕ್ಷ ಟನ್  ಕಬ್ಬು ಅರೆಯುವ ಗುರಿ ಹೊಂದುತ್ತಿದ್ದ ಸಕ್ಕರೆ ವಿಭಾಗ ಅದರಲ್ಲಿ ಯಶಸ್ಸು ಕಂಡಿರುವುದು ಬೆರಳೆಣಿಕೆಯಷ್ಟು ವರ್ಷಮಾತ್ರ. ಕಳೆದ ಮೂರೂವರೆ ತಿಂಗಳು ಅವಧಿಯಲ್ಲಿ 1.48ಲಕ್ಷ ಟನ್ ಕಬ್ಬು ಅರೆಯಲಾಗಿದೆ.

ಪ್ರಸಕ್ತ ವರ್ಷ ಕಾರ್ಖಾನೆಗೆ ಕಬ್ಬು ಪೂರೈಸಲು ಮಾಡಿದ ಒಪ್ಪಂದ ಪ್ರಮಾಣ 3ಲಕ್ಷ ಟನ್ ಮೀರಿದ್ದರೂ, ಬಂದಿರುವುದು ಅದರ ಅರ್ಧ ಭಾಗ ಮಾತ್ರ. ಉಳಿಕೆ ಕಬ್ಬು ಹಾವೇರಿ, ದಾವಣಗೆರೆ ಭಾಗದ ಮೂರು ಸಕ್ಕರೆ ಕಾರ್ಖಾನೆಗಳ ಪಾಲಾಗಿದೆ. ಕಬ್ಬಿನ ಕಟಾವಿಗೆ ಕೂಲಿಯಾಳುಗಳ ಸಮಸ್ಯೆ, ವೇತನ ಪಾವತಿಯಲ್ಲಿನ ವಿಳಂಬ, ಸಾಗಣೆ ಸಮಸ್ಯೆಗಳಿಂದ ಬೇಸತ್ತ ಕೃಷಿಕರು, ದಲಾಲರ ಸಹಕಾರದೊಂದಿಗೆ ಖಾಸಗಿ ಕಾರ್ಖಾನೆಯತ್ತ ಮುಖ ಮಾಡಿದ್ದಾರೆ.

ರಕ್ಷಣೆ ಭರವಸೆ: ಸರ್ಕಾರಿ ಸ್ವಾಮ್ಯದ ಈ ಕಾರ್ಖಾನೆ ಉಳಿಸಲು ಈಗಾಗಲೇ ಎರಡು ಬಾರಿ ಸಭೆ ನಡೆದಿದೆ. ಮಾರ್ಚ್ 2013ರ ತನಕ ಕಾರ್ಖಾನೆ ಹಾಗೂ ಕಾರ್ಮಿಕರನ್ನು ರಕ್ಷಿಸಿಕೊಂಡು ಹೋಗುವ ಇರಾದೆ ಸರ್ಕಾರದ್ದು. ನಂತರದ ದಿನಗಳಲ್ಲಿ ಕೆಲವು ಮಾರ್ಗಸೂಚಿ ಅನುಷ್ಠಾನದ ಮೂಲಕ ಪುನಶ್ಚೇತನಕ್ಕೆ  ಮುಂದಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಅಧಿಕಾರಿ ವಲಯದಲ್ಲಿ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT