ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಬಿ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ

Last Updated 22 ಮೇ 2012, 8:00 IST
ಅಕ್ಷರ ಗಾತ್ರ

ಕೋಲಾರ: ಅಂಗಡಿಗಳ ಸಾಲಿನುದ್ದಕ್ಕೂ ಚರಂಡಿ ನಿರ್ಮಾಣ ಕಾಮಗಾರಿ ತೆವಳುತ್ತಿದೆ. ಅಲ್ಲಲ್ಲಿ ನಿಂತ ಚರಂಡಿ ನೀರಿನ ದುರ್ವಾಸನೆಯಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಅಂಗಡಿಗಳ ಎದುರು ಕಲ್ಲು-ಮಣ್ಣುಗಳ ರಾಶಿ ಕರಗಿಲ್ಲ, ಸದಾ ಕಾಲ ದೂಳು.

ಅಂಗಡಿಗೂ ರಸ್ತೆಗೂ ನಡುವೆ ಚರಂಡಿಗಾಗಿ ಹಳ್ಳದ ಮೇಲೆ ನಿರ್ಮಿಸಿದ ಮರದ ಬೊಂಬು, ರಿಪೀಸಿನ ಸೇತುವೆ ಮೇಲೆ ನಡೆದಾಟ. ಗಿರಾಕಿಗಳಿಗೂ ಈ ರಸ್ತೆಗೆ ಬರುವುದೆಂದರೆ ಕಿರಿಕಿರಿ. ಅಲ್ಲಲ್ಲಿ ಮ್ಯಾನ್‌ಹೋಲ್‌ಗಳಿಂದ ಸೋರುವ ಚರಂಡಿ ನೀರು....ರಸ್ತೆಯ ಅಂಚಿನಲ್ಲಿರಬೇಕಾದ ವಿದ್ಯುತ್ ಕಂಬಗಳು ವಾಹನಗಳಿಗೆ ಅಡ್ಡ ನಿಂತಿವೆ.

ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿ 110 ದಿನವಾದರೂ ನಗರದ ಎಂ.ಬಿ.ರಸ್ತೆಯ ಸ್ಥಿತಿಯಲ್ಲಿ ಮಾತ್ರ ಸುಧಾರಣೆಯಾಗಿಲ್ಲ. ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆಯ ರಸ್ತೆ ಒತ್ತುವರಿ ತೆರವು ಜಂಟಿ ಕಾರ್ಯಾಚರಣೆ ನಡೆದು ಸೋಮವಾರಕ್ಕೆ 110 ದಿನವಾಗುತ್ತದೆ.
 
ರಸ್ತೆಯಲ್ಲಿ ನಿರಾತಂಕವಾಗಿ ಕಾಲಿಡುವ ಸನ್ನಿವೇಶವೂ ಇಲ್ಲ. ಅಂಗಡಿಗಳ ಸಾಲಿನಲ್ಲಿ ಚರಂಡಿ ನಿರ್ಮಾಣ ಕಾರ್ಯ ನಡೆದಿರುವುದನ್ನು ಬಿಟ್ಟರೆ ಬೇರೆ ಕೆಲಸ ಆರಂಭವಾಗಿಲ್ಲ. ರಸ್ತೆಯ ಅಮ್ಮವಾರಿ ಪೇಟೆ ವೃತ್ತದ ಸಮೀಪ ಮ್ಯಾನ್‌ಹೋಲ್‌ನಿಂದ ಚರಂಡಿ ನೀರು ಸೋರಿಕೆ ತಡೆಯಲು ಕ್ರಮ ಕೈಗೊಳ್ಳಬೇಕೆಂದು  ರಸ್ತೆ ತಡೆ ನಡೆಸಲಾಗಿತ್ತು.

ಹೊಸ ಬಸ್‌ನಿಲ್ದಾಣ ವೃತ್ತದ ಸಮೀಪದಿಂದ ಮೆಕ್ಕೆ ವೃತ್ತದವರೆಗೆ ನಡೆದಿರುವ ರಸ್ತೆ ವಿಸ್ತರಣೆ ಕಾಮಗಾರಿ ವ್ಯಾಪಾರಿಗಳಲ್ಲಿ, ನಾಗರಿಕರಲ್ಲಿ ಅಸಹನೆ ಹೆಚ್ಚಿಸುತ್ತಿದೆ. ಕಳೆದ ಜ.28ರಂದು ರಸ್ತೆ ವಿಸ್ತರಣೆ ಸಲುವಾಗಿ ಒತ್ತುವರಿ ತೆರವು ಆರಂಭವಾದಾಗ ವ್ಯಾಪಾರಿಗಳು ಪ್ರತಿಭಟಿಸಿದ್ದರು. ಅಮ್ಮವಾರಿಪೇಟೆ ವೃತ್ತದಲ್ಲಿ ಲಾಠಿಪ್ರಹಾರವೂ ನಡೆದಿತ್ತು.

ನಂತರ ಕಟ್ಟಡ ತಾಜ್ಯವನ್ನು ಸ್ಥಳಾಂತರಿಸುವ ಕೆಲಸವೂ ವಿಳಂಬಗತಿಯಲ್ಲೆ ನಡೆದಿತ್ತು. ಕಟ್ಟಡಗಳ ಮಾಲೀಕರು ಮರುನಿರ್ಮಾಣ ಕಾಮಗಾರಿಯನ್ನು ಕಟ್ಟಡ ತ್ಯಾಜ್ಯಗಳ ರಾಶಿಯ ನಡುವೆಯೇ  ಆರಂಭಿಸಿದ್ದರು. ಈಗಲೂ ಮರುನಿರ್ಮಾಣ ನಡೆಯುತ್ತಲೇ ಇದೆ.

ಚರಂಡಿ ನಿರ್ಮಾಣ:
ತೆರವು ಕಾರ್ಯಾಚರಣೆ ಬಳಿಕ ಮೊದಲಿಗೆ ರಸ್ತೆಯ ಒಂದು ಬದಿಯಲ್ಲಿ ಚರಂಡಿ ನಿರ್ಮಿಸುವ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಈಗ ರಸ್ತೆಯ ಎರಡೂ ಬದಿಯಲ್ಲಿ  ಚರಂಡಿ ನಿರ್ಮಾಣ ನಡೆಯುತ್ತಿದೆ ಎಂಬುದಷ್ಟೇ ಸಮಾಧಾನದ ಸಂಗತಿಯಾಗಿದೆ.

ವಸತಿಗೃಹ: ಕಾರ್ಯಾಚರಣೆ ದಿನದಂದು ಪೊಲೀಸ್ ವಸತಿ ಗೃಹದ ಕಾಂಪೌಂಡ್ ಅನ್ನು ಸ್ವಲ್ಪ ಮಟ್ಟಕ್ಕೆ ಮಾತ್ರ ಕೆಡವಲಾಗಿತ್ತು. ಆದರೆ ನಂತರ ಕೆಡಹುವ ಕಾರ್ಯ ನಡೆದಿಲ್ಲ. ವಸತಿಗೃಹ ದಾಟಿದ ಬಳಿಕ ಮತ್ತೆ ಅಂಗಡಿಗಳನ್ನು ಕೆಡವಲಾಗಿದೆ. ಮೆಕ್ಕೆವೃತ್ತದಲ್ಲಿರುವ ಚರ್ಚ್ ಕಾಂಪೌಂಡ್ ಅನ್ನೂ ಒಡೆಯಲಾಗಿದೆ. ಇಷ್ಟೆಲ್ಲ ಮಾಡಿದ ಬಳಿಕ ಪೊಲೀಸ್ ವಸತಿ ಗೃಹದ ಕಾಂಪೌಂಡ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಟ್ಟಡ ಕಾಂಪೌಂಡ್ ಇನ್ನೂ ಕೆಡವದೆ ಇರಲು ಕಾರಣವೇನು? ಎಂಬ ವ್ಯಾಪಾರಿಗಳ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಮುಗಿಯುವುದೇ?: 2.8 ಕೋಟಿ ರೂಪಾಯಿ ವೆಚ್ಚದಲ್ಲಿ  ಎಂ.ಬಿ ರಸ್ತೆ ವಿಸ್ತರಣೆಗೆ 6 ತಿಂಗಳ ಗಡುವನ್ನು ನೀಡಲಾಗಿದೆ. ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಶುರು ಮಾಡುವ ಹೊತ್ತಿಗೆ ಎರಡು ತಿಂಗಳು ಮುಗಿದು ನಾಲ್ಕು ತಿಂಗಳ ಕಾಲಾವಧಿ ಉಳಿದಿತ್ತು. ಈಗ ಈ ಗಡುವು ಮುಗಿಯಲೂ ಕೆಲವೇ ದಿನಗಳು ಬಾಕಿ ಇವೆ.

ಕಾಮಗಾರಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು ಎಂಬುದು ಸದ್ಯದ ಆಗ್ರಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT