ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಎ: ಮಂಜಿನಂತೆ ಮಾಯವಾದ ಗೊಂದಲ

Last Updated 31 ಜುಲೈ 2012, 5:05 IST
ಅಕ್ಷರ ಗಾತ್ರ

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಹುಬ್ಬಳ್ಳಿ:
ಭಾನುವಾರವಷ್ಟೇ ಎಂಬಿಎ ಪ್ರವೇಶ ಪರೀಕ್ಷೆ ಬರೆದಿದ್ದ ಆ ವಿದ್ಯಾರ್ಥಿಗಳು ಸೋಮವಾರ ಮನದಲ್ಲಿ ನೂರಾರು ಪ್ರಶ್ನೆಗಳನ್ನು ಹೊತ್ತು ಬಂದಿದ್ದರು. ಮರಳಿ ಹೋಗುವಾಗ ತಮ್ಮೆಲ್ಲ ಸಂಶಯಗಳಿಗೆ ಸಮರ್ಪಕ ಉತ್ತರ ಸಿಕ್ಕ ಸಮಾಧಾನ ಅವರ ಮೊಗದಲ್ಲಿ ಲಾಸ್ಯವಾಡುತ್ತಿತ್ತು.

`ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಸಮೂಹ ನಗರದ ದೇಶಪಾಂಡೆ ಪ್ರತಿಷ್ಠಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಂಬಿಎ ಕೌನ್ಸೆಲಿಂಗ್ ಶಿಬಿರದಲ್ಲಿ ಕಂಡುಬಂದ ನೋಟ ಇದು. `ಎಂತಹ ಕೋರ್ಸು, ಯಾವ ಕಾಲೇಜು, ಮುಂದಿರುವ ಅವಕಾಶ ಏನು, ಸಿಗುವ ಸಂಬಳ ಎಷ್ಟು~ ಮೊದಲಾದ ಪ್ರಶ್ನೆಗಳು ಮಂಜಿನಂತೆ ಮಾಯವಾಗಿದ್ದವು.

ಹಲವು ಎಂಬಿಎ ಕಾಲೇಜುಗಳು ದೇಶಪಾಂಡೆ ಪ್ರತಿಷ್ಠಾನದ ಆವರಣದಲ್ಲೇ ಮಳಿಗೆಗಳನ್ನು ಹಾಕಿ, ತಮ್ಮ ಕಾಲೇಜಿನ ಸೌಲಭ್ಯಗಳ ವಿಷಯವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದವು. ಶಿಬಿರಕ್ಕೆ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮ್ಯಾನೇಜ್‌ಮೆಂಟ್ ಶಿಕ್ಷಣ ಪಡೆಯಲು ಹೊರಟಿರುವ ಯುವಪಡೆಗೆ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದರು.

`ಸಮಾಜ, ವ್ಯವಸ್ಥೆ ನೀವು ಅಂದುಕೊಂಡಷ್ಟು ಕೆಟ್ಟಿಲ್ಲ. ಕೆಟ್ಟದ್ದನ್ನೇ ನೋಡುವ ಪ್ರವೃತ್ತಿ ಸಲ್ಲ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಯಾತ್ರೆಗೆ ಹೋಗುವುದಕ್ಕಿಂತ ನಾವು ಏನನ್ನು ಮಾಡಲು ಹೊರಟಿದ್ದೇವೆ ಎನ್ನುವ ಪೂರ್ವ ತಯಾರಿ ಮುಖ್ಯ. ಆದ್ದರಿಂದ ಯಾವುದೇ ವಿಷಯವನ್ನು ಅಧ್ಯಯನಕ್ಕೆ ಆಯ್ದುಕೊಳ್ಳುವ ಮುನ್ನ ನಾವು ಏನನ್ನು, ಏಕೆ ಮತ್ತು ಹೇಗೆ ಮಾಡಬೇಕು ಎಂಬುದರ ಅರಿವು ಸ್ಪಷ್ಟವಾಗಿರಬೇಕು~ ಎಂದು ಅವರು ಸಲಹೆ ನೀಡಿದರು.


`ಋಣಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳದೆ ವ್ಯವಸ್ಥೆ ಮೇಲೆ ಭರವಸೆ ಇಟ್ಟು ಮುನ್ನಡೆಯಬೇಕು. ಭೂತ ಇಲ್ಲವೆ ಭವಿಷ್ಯದ ಬಗೆಗೆ ಚಿಂತಿಸದೆ ವರ್ತಮಾನದಲ್ಲಿ ಉತ್ಕೃಷ್ಟವಾದುದನ್ನು ಸಾಧಿಸಬೇಕು. ಈ ಪ್ರವೃತ್ತಿಯೇ ನಮ್ಮ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತದೆ~ ಎಂದು ಅವರು ಹೇಳಿದರು.

`ಸಾಮಾನ್ಯವಾಗಿ ಎಲ್ಲರ ಸಾಧನೆಯ ಹಿಂದೆ ಹಣ-ಹೆಸರಿನ ಗಳಿಕೆ, ಪ್ರತಿಷ್ಠೆ ಮತ್ತು ಸ್ಥಾನಮಾನದ ಆಸೆಗಳೇ ಕೆಲಸ ಮಾಡುತ್ತವೆ. ವೈಯಕ್ತಿಕ ಹಿತಾಸಕ್ತಿ ಮಾತ್ರವಲ್ಲದೆ ಸಮಾಜ ಹಾಗೂ ದೇಶದ ಒಳಿತೂ ನಮ್ಮ ಉದ್ದೇಶ ಆಗಿರಬೇಕು~ ಎಂದು ಬೀಳಗಿ ಸಲಹೆ ನೀಡಿದರು.

`ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಾಗಾರ ಏರ್ಪಡಿಸುವ ಮೂಲಕ `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಸಮೂಹ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿದೆ~ ಎಂದು ಅವರು ಪ್ರಶಂಸಿದರು.

ಟಾಟಾ ಮಾರ್ಕೊಪೊಲೊ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎಂಎಸ್‌ಆರ್‌ಕೆ ಪ್ರಸಾದ್, ಟಾಟಾ ಮೋಟಾರ್ಸ್‌ ಪ್ರಾದೇಶಿಕ ವ್ಯವಸ್ಥಾಪಕ ಅಮೀರ್ ಅಹ್ಮದ್, ಕೆಎಲ್‌ಇ ಐಎಂಎಸ್‌ಆರ್ ನಿರ್ದೇಶಕ ಡಾ.ಪಿ.ವಿ. ರೂಡಗಿ, ಬೆಳಗಾವಿಯ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಫೈನಾನ್ಸ್ ವಿಭಾಗದ ಮುಖ್ಯಸ್ಥ ಆನಂದ ಗೋಸಾವಿ ಮಾತನಾಡಿದರು.


`ಪ್ರಜಾವಾಣಿ~ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥ ಎಂ. ನಾಗರಾಜ, ಡೆಕ್ಕನ್ ಹೆರಾಲ್ಡ್ ಉಪ ಸುದ್ದಿ ಸಂಪಾದಕ ಆನಂದ ಯಮನೂರ, ಪತ್ರಿಕೆಯ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಬಿ.ಎ. ರವಿ, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ದಿವಾಕರ ವೇದಿಕೆ ಮೇಲೆ ಹಾಜರಿದ್ದರು.


ಜಾಹೀರಾತು ವಿಭಾಗದ ವ್ಯವಸ್ಥಾಪಕ ರವಿ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೃತಾ ಸುಹಾನಿ ಪ್ರಾರ್ಥಿಸಿದರು. ರೂಬಿನ್ ಮತ್ತು ಅಕ್ಷತಾ ನಿರೂಪಿಸಿದರು. ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ವಿ.ಆರ್.ಅಳಗಪ್ಪನ್ ವಂದಿಸಿದರು.

ತಜ್ಞರು ಹೇಳಿದ್ದೇನು?

ಪದವಿಯೊಂದೇ ಸಾಲದು
`ಎಂಬಿಎ ಪದವೀಧರರು ಕೇವಲ ತಾಂತ್ರಿಕ ಮತ್ತು ವ್ಯವಸ್ಥಾಪನಾ ಜ್ಞಾನ ಹೊಂದಿದರೆ ಸಾಲುವುದಿಲ್ಲ. ಸಂವಹನ ಕೌಶಲ, ಸೃಜನಶೀಲತೆ, ಕೆಲಸ ಮಾಡುವ ಉತ್ಸಾಹ, ವಿಶ್ಲೇಷಣಾ ಮನೋಭಾವ ಹಾಗೂ ಸಂಕೀರ್ಣ ಸನ್ನಿವೇಶಗಳನ್ನು ನಿರ್ವಹಿಸುವ ಜಾಣ್ಮೆ ಕೂಡ ಮುಖ್ಯವಾಗುತ್ತದೆ. ಅಂತಹ ವ್ಯಕ್ತಿಗಗಳನ್ನೇ ಕಂಪೆನಿಗಳು ಹುಡುಕುತ್ತಿರುತ್ತವೆ.

`ನಿಮ್ಮ ಅಭಿರುಚಿಯನ್ನು ಸರಿಯಾಗಿ ಗುರುತಿಸಬೇಕು ಮತ್ತು ಅದಕ್ಕೆ ತಕ್ಕಂತೆ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಒಳ್ಳೆಯ ವೃತ್ತಿ ಜೀವನ ರೂಪಿಸಿಕೊಳ್ಳಲು ಸಾಧ್ಯ. ಎಂಬಿಎಯ ಎಲ್ಲ ಶಾಖೆಗಳೂ ಮಹತ್ವವಾದವು. ದೂರದೃಷ್ಟಿ ಹಾಗೂ ಬದ್ಧತೆಯಿಂದ ಯಾವುದೇ ಶಾಖೆಯಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ. ಯಾವುದೇ ಕಂಪೆನಿಯಲ್ಲಿ ಇಂಟರ್ನ್‌ಷಿಪ್ ಮೂಲಕ ಗಳಿಸಿದ ತರಬೇತಿ ಇಲ್ಲವೆ ಉದ್ಯಮದ ಸ್ಥಾಪಿಸಿದ ಅನುಭವ ಕೆಲಸ ಸೇರಲು ಅನುವಾಗುತ್ತದೆ.

`ಎಂಬಿಎ ಶಿಕ್ಷಣದಲ್ಲಿ ಕಾರ್ಮಿಕರ ಕಾನೂನಿನ ಮೂಲ ಅಂಶಗಳನ್ನು ಹೇಳಿಕೊಡುವುದರಿಂದ ಪ್ರತ್ಯೇಕವಾಗಿ ಅದನ್ನು ಕಲಿಯುವ ಅಗತ್ಯ ಇಲ್ಲ~
ಎಂಎಸ್‌ಆರ್‌ಕೆ ಪ್ರಸಾದ್,
ಟಾಟಾ ಮಾರ್ಕೊಪೊಲೊ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ

`ಸಿದ್ಧ ವ್ಯವಸ್ಥಾಪಕರು~ ಬೇಕು
`ಮೊದಲ ದಿನದಿಂದಲೇ ಪರಿಪೂರ್ಣವಾಗಿ ಕೆಲಸ ಮಾಡುವಂತಹ `ಸಿದ್ಧ ವ್ಯವಸ್ಥಾಪಕ~ರನ್ನು ಇಂದಿನ ಕಂಪೆನಿಗಳು ಎದುರು ನೋಡುತ್ತವೆ. ವೀರೇಂದ್ರ ಸೆಹ್ವಾಗ್ ತರಹ ಮೊದಲ ಓವರ್‌ನಿಂದಲೇ ರನ್ ಗಳಿಸುವವರಿಗೆ ಭಾರಿ ಬೇಡಿಕೆ. ಅದೇ ವ್ಯವಸ್ಥಾಪನ ಕೆಲಸವನ್ನು ವಿಭಿನ್ನವಾಗಿ ಮಾಡುವವರು ಗಮನ ಸೆಳೆಯುತ್ತಾರೆ.
`ದೇಶಾದ್ಯಂತ ಸುಮಾರು 2,000 ಬಿ-ಸ್ಕೂಲ್‌ಗಳಿದ್ದು, 1.5 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಾಮರ್ಥ್ಯ ಹೊಂದಿವೆ. ಆದರೆ, ಆಕಾಂಕ್ಷಿಗಳ ಸಂಖ್ಯೆ ನಾಲ್ಕು ಲಕ್ಷಕ್ಕೂ ಅಧಿಕವಾಗಿರುತ್ತದೆ. ಅದೇ ತಾನೆ ಪದವಿ ಪೂರೈಸಿ ಬಂದವರಿಗೆ ತಿಂಗಳಿಗೆ ರೂ 20 ಸಾವಿರದಷ್ಟು ಸಂಬಳ ಸಿಗುತ್ತದೆ. ಎಂಬಿಎ-ಫೈನಾನ್ಸ್ ಅಧ್ಯಯನ ಮಾಡಿದವರಿಗೆ ಬೇಕಾದಷ್ಟು ಅವಕಾಶ ಕಾದಿವೆ.
ಆನಂದ ಗೋಸಾವಿ, ಬಿಐಎಂಎಸ್ ಫೈನಾನ್ಸ್ ವಿಭಾಗದ ಮುಖ್ಯಸ್ಥ

ಗ್ಲೋಕಲೈಸೇಶನ್ ಕಲ್ಪನೆಯಿರಲಿ
`ಹುಟ್ಟಿದ ಮಗುವಿನಿಂದಲೇ ಮಾರ್ಕೆಟಿಂಗ್ ವ್ಯಾಪ್ತಿ ಶುರುವಾಗುತ್ತದೆ. ಗ್ರಾಹಕನ ಅಭಿರುಚಿ ಗ್ರಹಿಕೆ, ಸಂಶೋಧನೆ, ಉತ್ಪಾದನೆ, ಪ್ಯಾಕಿಂಗ್, ದರ ನಿಗದಿ, ಜಾಹೀರಾತು, ಸರಕು ಜನಪ್ರಿಯಗೊಳಿಸುವುದು ಮತ್ತು ಮಾರಾಟ ಮಾಡುವುದು ಇಷ್ಟೊಂದು ಹಂತಗಳನ್ನು ಮಾರ್ಕೆಟಿಂಗ್ ಕ್ಷೇತ್ರ ಹೊಂದಿದೆ. ಗ್ಲೋಕಲೈಸೇಶನ್ ಕಲ್ಪನೆ ಈ ಕ್ಷೇತ್ರದಲ್ಲಿ ಹೊಸದಾಗಿ ಬೆಳೆದಿದೆ. ಗ್ಲೋಕಲೈಸೇಶನ್ ಎಂದರೆ ಜಾಗತಿಕ ದೃಷ್ಟಿ ಇರಬೇಕು. ಸ್ಥಳೀಯರನ್ನು ತಲುಪುವಂತಹ ಸೃಷ್ಟಿ ನಮ್ಮದಾಗಿರಬೇಕು ಎಂಬುದೇ ಆಗಿದೆ. ಇಂತಹ ವಿಶೇಷ ಗುಣ ಬೆಳೆಸಿಕೊಂಡವರು ಮಾರ್ಕೆಟಿಂಗ್ ಕ್ಷೇತ್ರದ ಕಡೆಗೆ ಧಾವಿಸಬಹುದು.
ಅಮೀರ್ ಅಹ್ಮದ್, ಟಾಟಾ ಮೋಟಾರ್ಸ್‌ ಪ್ರಾದೇಶಿಕ ವ್ಯವಸ್ಥಾಪಕ

ಗ್ರಾಹಕಸ್ನೇಹಿ ಕೌಶಲ ಬೇಕು
`ಮೌಲ್ಯ ವನ್ನು ಮಾರಾಟ ಮಾಡುವಂತಹ ಕೌಶಲ ಬೆಳೆಸಿಕೊಳ್ಳಬೇಕೇ ವಿನಃ ದರವನ್ನಲ್ಲ. ಗ್ರಾಹಕರನ್ನು ತೃಪ್ತಿಪಡಿಸಿದರೆ ಸಾಲದು; ಅವರಲ್ಲಿ ಹರ್ಷ ಉಕ್ಕಿಸುವಂತಹ ತಂತ್ರಗಳನ್ನು ಮೈಗೂಡಿಸಿಕೊಳ್ಳಬೇಕು. ಎಂಬಿಎ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿದ್ದು, ಅವುಗಳ ವಿಷಯವಾಗಿ ಆಕಾಂಕ್ಷಿಗಳು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಗ್ರಾಹಕ ಸ್ನೇಹಿ ವ್ಯವಸ್ಥೆ ರೂಪಿಸಿಕೊಂಡರೆ ಬಹುಬೇಗ ಯಶಸ್ಸು ಸಾಧ್ಯ. ಆದ್ದರಿಂದ ಗ್ರಾಹಕರ ಅಗತ್ಯ ಮನಗಾಣುವ ಕೌಶಲ ನಮ್ಮಲ್ಲಿರಬೇಕು.
ಡಾ.ಪಿ.ಬಿ. ರೂಡಗಿ, ಕೆಎಲ್‌ಇ ಐಎಂಎಸ್‌ಆರ್ ನಿರ್ದೇಶಕ

ಎಂಎಸ್‌ಇನತ್ತ ಗಮನಹರಿಸಿ
ಸಾಮಾಜಿಕ ಉದ್ಯಮ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂಎಸ್‌ಇ) ದೇಶಪಾಂಡೆ ಪ್ರತಿಷ್ಠಾನದಿಂದ ಆರಂಭಿಸಲಾಗಿದ್ದು, ಈ ಕೋರ್ಸ್‌ಗೆ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯತೆ ಇದೆ. ಲಾಭ ಮಾಡುವ ಕಂಪೆನಿಗಳು ಮಾತ್ರವಲ್ಲದೆ ಲಾಭದ ಆಸೆಯಿಲ್ಲದ ಸ್ವಯಂ ಸೇವಾ ಸಂಸ್ಥೆಗಳಲ್ಲೂ ಇಂತಹ ಪದವೀಧರರ ಅಗತ್ಯ ಇದೆ.
ಶಶಿಧರ್, ದೇಶಪಾಂಡೆ ಪ್ರತಿಷ್ಠಾನದ ಪ್ರತಿನಿಧಿ

ಬಂದವರು ಹೀಗೆಂದರು

ಮ್ಯಾನೇಜ್‌ಮೆಂಟ್ ಶಿಕ್ಷಣ ಕುರಿತು ಹೆಚ್ಚಿನ ಮಾಹಿತಿ ಬಯಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸದಿಂದ ಉತ್ತಮ ಮಾಹಿತಿ ದೊರಕಿದೆ. ಮುಂದೆ ಎಂಬಿಎ ಮಾಡಬೇಕೆಂಬ ಗುರಿ ಇದೆ.
ಜಿ.ಜಿ. ಸತ್ಯನಾರಾಯಣ

ಬಿಸಿಎ ವಿಷಯದಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದೇನೆ.  ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಒಂದಿಷ್ಟು ಉಪಯುಕ್ತ ಮಾಹಿತಿ ದೊರೆಯಿತು.
ಸೌಮ್ಯ

ಮ್ಯಾನೇಜ್‌ಮೆಂಟ್ ಶಿಕ್ಷಣಕ್ಕೆ ಸಂಬಂಧಿಸಿದ ಈ ಕಾರ್ಯಕ್ರಮದಲ್ಲಿ ನೀಡಿದ ಮಾಹಿತಿಗಳು ವಿವರವಾಗಿದ್ದವು. ಮುಂದೆ ಎಂಬಿಎ ಮಾಡಬಯಸುವವರಿಗೆ ಇದು ಉಪಯುಕ್ತ ಕೌನ್ಸೆಲಿಂಗ್.
ಶಾಲಿನಿ


ಮಾನವ ಸಂಪನ್ಮೂಲ, ಹಣಕಾಸು, ಮಾರುಕಟ್ಟೆ... ಹೀಗೆ ಎಂಬಿಎನಲ್ಲಿನ ಅನೇಕ ವಿಷಯಗಳ ಕುರಿತು ಪರಿಚಯದ ಜೊತೆಗೆ ಮಾಹಿತಿಯೂ ದೊರೆಯಿತು. ಉಪನ್ಯಾಸಕರು ನಮ್ಮಡನೆ ಸಂವಾದ ನಡೆಸಿದ್ದು ಸಹ ಉತ್ತಮವಾಗಿತ್ತು.

ಅಂಜನಾ
ಹಾವೇರಿ ಜಿಲ್ಲೆ ಹಾನಗಲ್‌ನ ಎಸ್‌ಕೆಸಿ ಕಾಲೇ ಜಿನಲ್ಲಿ ಬಿ.ಕಾಂ. ಪದವಿ ಪೂರೈಸಿದ್ದೇನೆ. ಕಾರ್ಯಕ್ರಮ ನಡೆಯುವ ವಿಷಯವನ್ನು ಪತ್ರಿಕೆಯಲ್ಲಿ ಓದಿ ಆಸಕ್ತಿ ಮೂಡಿ ಈ ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಂಡೆ. ಎಚ್‌ಆರ್ ಅಥವಾ ಹಣಕಾಸು ವಿಷಯದಲ್ಲಿ ಎಂಬಿಎ ಮಾಡುವ ಕನಸು ಇದೆ. ಈ ವಿಷಯಗಳ ಕುರಿತು ಇಲ್ಲಿ ನೀಡಿದ ಮಾಹಿತಿಗಳು ಉಪಯುಕ್ತವಾಗಿವೆ.
ಸೌಮ್ಯ

ಮಗಳು ಸನಾ ಪದವಿ ಶಿಕ್ಷಣ ಪೂರೈ ಸಿದ್ದು, ಆಕೆಯನ್ನು ಎಂಬಿಎ ಓದಿಸಬೇಕು ಎಂದುಕೊಂಡಿದ್ದೇನೆ.  ಹೊರಗಡೆ ಮಳಿಗೆಗಳಲ್ಲಿ ಶಿಕ್ಷಣ ಸಂಸ್ಥೆಗಳು ನೀಡಿದ ವಿವರ ಹಾಗೂ ಬ್ಯಾಂಕಿನಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ಸಹ ಮಾಹಿತಿ ಇರುವುದು ಉಪಯುಕ್ತವಾಗಿದೆ.
ನದಾಫ್ ಎಂ.ಎಂ.

ಪದವಿ ಶಿಕ್ಷಣ ಮುಗಿ ಸಿದ್ದು, ಎಂಬಿಎ ಮಾಡಬೇಕು ಎನ್ನುವ ಗುರಿ ಹೊಂದಿದ್ದೇನೆ. ಕಾರ್ಯಕ್ರಮದಲ್ಲಿ ಹಣ ಕಾಸು ಹಾಗೂ ಮಾನವ ಸಂಪನ್ಮೂಲ ವಿಭಾಗಕ್ಕೆ ಸಂಬಂಧಿಸಿದಂತೆ ಉಪನ್ಯಾಸಕರು ನೀಡಿದ ಮಾಹಿತಿಗಳು ಉಪಯುಕ್ತವಾಗಿದ್ದವು. ಮುಂದಿನ ಶಿಕ್ಷಣಕ್ಕೆ ಅಗತ್ಯವಾದ ಮಾಹಿತಿ ಲಭಿಸಿದೆ. ಮುಂದೆ ಮಾನವ ಸಂಪನ್ಮೂಲ ವಿಷಯದಲ್ಲಿ ಎಂಬಿಎ ಮಾಡಬೇಕು ಎಂದುಕೊಂಡಿದ್ದೇನೆ.
ಗೌತಮ್ ಬಿಳಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT