ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ: 3 ಮಹಿಳೆಯರ ಗೆಲುವು

Last Updated 8 ಡಿಸೆಂಬರ್ 2013, 19:58 IST
ಅಕ್ಷರ ಗಾತ್ರ

ನವದೆಹಲಿ: 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಈ ಸಾರಿ ಕೇವಲ ಮೂವರು ಮಹಿಳೆಯರು ಚುನಾಯಿತರಾಗಿದ್ದಾರೆ. ಇವ­ರೆಲ್ಲರೂ ಎಎಪಿ ಸ್ಪರ್ಧಿಗಳು ಎಂಬುದು ಗಮನಾರ್ಹ. 2008ರ ವಿಧಾನಸಭೆಯಲ್ಲಿ ಕಾಂಗ್ರೆಸ್‌ನಿಂದ ಮೂವರು ಶಾಸಕಿಯರಿದ್ದರು.

ಕಾಂಗ್ರೆಸ್ ನಾಯಕಿಯಾದ ಸಚಿವೆ ಕಿರಣ್‌ ವಾಲಿಯಾ, ಹಿರಿಯ ಶಾಸಕಿ ಬರ್ಖಾ ಸಿಂಗ್‌, ಯುವ ನಾಯಕಿಯರಾದ ರಾಗಿಣಿ ನಾಯಕ್‌, ಅಮೃತಾ ಧವನ್‌ ಗೆಲುವು ಸಾಧಿಸಿಲ್ಲ. ಹಾಗೆಯೇ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಮೇಯರ್‌ ಆರತಿ ಮೆಹ್ರಾ, ರಜನಿ ಅಬ್ಬಿ ಅವರು ಎಎಪಿ ಎಬ್ಬಿಸಿದ ‘ಚುನಾವಣಾ ಸುನಾಮಿ’ಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ದೆಹಲಿಯಲ್ಲಿ ಲಿಂಗಾನುಪಾತದ ಪ್ರಮಾಣ ಒಂದು ಸಾವಿರ ಪುರುಷರಿಗೆ 804ರಷ್ಟು ಮಹಿಳೆಯರಿದ್ದಾರೆ. ಆದರೆ, 2008ರ ಚುನಾವಣೆಗೆ ಹೋಲಿಸಿದರೆ (81) ಈ ಸಾರಿ ಮಹಿಳಾ ಅಭ್ಯರ್ಥಿಗಳ (69) ಸಂಖ್ಯೆ ಕುಸಿದಿತ್ತು. ಈ ಸಾರಿ ಕಾಂಗ್ರೆಸ್‌ ಮತ್ತು ಎಎಪಿಯಿಂದ ತಲಾ ಆರು ಮಹಿಳೆಯರು, ಬಿಜೆಪಿಯಿಂದ ಐವರು ಮಹಿಳೆಯರು ಕಣದಲ್ಲಿದ್ದರು.

ಹಿನ್ನಡೆ: ನಾಲ್ಕು ರಾಜ್ಯಗಳ ಮತದಾನದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದ ಕಾರಣ ಮತದಾನದ ಪ್ರಮಾಣ ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿದೆ. ಆದರೆ, ಈ ರಾಜ್ಯಗಳ ವಿಧಾನಸಭೆಯಲ್ಲಿ ಚುನಾಯಿತ ಮಹಿಳೆಯರ ಪ್ರಮಾಣ ಉತ್ಸಾಹದಾಯಕವಾಗಿಲ್ಲ. ಕಳೆದ  ಚುನಾವಣೆಗೆ ಹೋಲಿಸಿದರೆ ಚುನಾಯಿತ ಮಹಿಳೆಯರ ಪ್ರಮಾಣ ಈ ಸಾರಿ ಕುಸಿದಿದೆ.

ದೆಹಲಿ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ರಾಜ್ಯಗಳ ಒಟ್ಟು 589 ಕ್ಷೇತ್ರಗಳಿಗೆ ನಡೆದ ಚುನಾ­ವಣೆಯಲ್ಲಿ 59 ಮಹಿಳೆಯರು ಮಾತ್ರ ಗೆಲುವು ಸಾಧಿಸಿದ್ದಾರೆ. ಆದರೆ, 2008ರಲ್ಲಿ ಈ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ 69 ಮಹಿಳೆಯರು ಜಯಗಳಿಸಿದ್ದರು.

ರಾಜಸ್ತಾನ ಮತ್ತು ಛತ್ತೀಸಗಡ­ಗಳಲ್ಲಿ ಚುನಾಯಿತ ಮಹಿಳೆಯರ ಪ್ರಮಾಣದಲ್ಲಿ ಕುಸಿತವಾಗಿದೆ. ಆದರೆ, ಮಧ್ಯಪ್ರದೇಶದಲ್ಲಿ ಕಳೆದ ಸಾರಿಗಿಂತ ಈ ಸಾರಿ ಮೂವರು ಮಹಿಳಾ ಉಮೇದು­ದಾರರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ದೆಹಲಿ ವಿಧಾನಸಭೆ­ಯಲ್ಲಿ 2008ರಲ್ಲಿ ಇದ್ದಷ್ಟೇ ಸಂಖ್ಯೆ ಮಹಿಳೆಯರು ಈ ಸಾರಿಯೂ ಇದ್ದಾರೆ.

ಈ ನಾಲ್ಕೂ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 6,500 ಅಭ್ಯರ್ಥಿಗಳು ಉಮೇದುವಾರಿಕೆ ಮಾಡಿದ್ದರು. ಆದರೆ, ಪ್ರಮುಖ ಪಕ್ಷಗಳಿಂದ ಕೇವಲ 300 ಮಹಿಳೆಯರು ಮಾತ್ರ ಸ್ಪರ್ಧಿಸಿದ್ದರು. ಅದೇ 2008ರ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ 564 ಮಹಿಳಾ ಸ್ಪರ್ಧಿಗಳು ಸೇರಿದಂತೆ ಒಟ್ಟಾರೆ 7,520 ಅಭ್ಯರ್ಥಿಗಳು ಕಣದಲ್ಲಿದ್ದರು.

ರಾಜಸ್ತಾನದಲ್ಲಿ ಕುಸಿತ: ರಾಜಸ್ತಾನ­ದಲ್ಲಿ ಲಿಂಗಾನುಪಾತವು 897ರಷ್ಟಿದೆ. 2008ರ ವಿಧಾನಸಭೆಯಲ್ಲಿ 29 ಶಾಸಕಿಯರಿದ್ದರು. ಆದರೆ, ಈ ಸಾರಿ 19 ಮಹಿಳೆಯರು ಮಾತ್ರ ಗೆಲುವು ಸಾಧಿಸಿದ್ದಾರೆ. 103 ಮಹಿಳೆಯರು ಸೇರಿದಂತೆ ಒಟ್ಟಾರೆ 2097 ಅಭ್ಯರ್ಥಿಗಳು ಕಣದಲ್ಲಿದ್ದರು.

162 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯಲ್ಲಿ 15 ಮಹಿಳೆಯರೂ ಸೇರಿದ್ದಾರೆ. ಬಿಜೆಪಿ 26 ಮಹಿಳೆಯರನ್ನು ಕಣಕ್ಕೆ ಇಳಿಸಿತ್ತು. 21 ಕ್ಷೇತ್ರಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್‌ನಿಂದ ಒಬ್ಬ ಮಹಿಳೆ ಮಾತ್ರ ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ 23 ಮಹಿಳೆಯರು ಉಮೇದುವಾರಿಕೆ ಮಾಡಿದ್ದರು.

ಛತ್ತೀಸಗಡ ಕಳಪೆ ಸಾಧನೆ: 964 ಲಿಂಗಾನುಪಾತವಿರುವ ಛತ್ತೀಸಗಡ­ದಲ್ಲಿ ಈ ಸಾರಿ ಮಹಿಳಾ ಸ್ಪರ್ಧಿಗಳ ಸಾಧನೆ ಕಳಪೆ. ಕಳೆದ ಸಾರಿಗೆ ಹೋಲಿಸಿದರೆ (12 ಶಾಸಕಿಯರಿದ್ದರು) 3 ಸ್ಥಾನಗಳು ಕಡಿಮೆಯೇ ಆಗಿದೆ. ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರ ಪತ್ನಿ ರೇಣು ಜೋಗಿ, ನಕ್ಸಲರ ದಾಳಿಯಲ್ಲಿ ಅಸುನೀಗಿದ ಕಾಂಗ್ರೆಸ್‌ನ ಬುಡಕಟ್ಟು ಜನಾಂಗದ ಮುಖಂಡ ಮಹೇಂದ್ರ ಕರ್ಮಾ ಅವರ ಪತ್ನಿ ದೇವತಿ ಕರ್ಮಾ ಅವರು ಗೆಲುವು ಸಾಧಿಸಿದ್ದಾರೆ.

90 ಸದಸ್ಯ ಬಲದ ಛತ್ತೀಸಗಡ ವಿಧಾನಸಭೆಗೆ 81 ಮಹಿಳೆಯರು ಸೇರಿದಂತೆ 986 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ 14 ಮತ್ತು ಬಿಜೆಪಿಯಿಂದ 11 ಮಹಿಳೆ­ಯರು ಕಣದಲ್ಲಿದ್ದರು.

ಮಧ್ಯಪ್ರದೇಶದಲ್ಲಿ ತುಸು ಪ್ರಗತಿ: ಮಧ್ಯ­ಪ್ರದೇಶದಲ್ಲಿ ಲಿಂಗಾನು­ಪಾ­ತವು 897ರಷ್ಟಿದೆ. ಈ ಸಾರಿ 28 ಮಹಿಳೆಯರು ಗೆಲುವು ಸಾಧಿಸಿದ್ದು, ಕಳೆದ ಸಾರಿಗೆ (25) ಹೋಲಿಸಿದರೆ ತುಸು ಪ್ರಗತಿ ಕಾಣಿಸಿದೆ. ಬಿಜೆಪಿಯಿಂದ 28, ಕಾಂಗ್ರೆಸ್‌ನ 23 ಮತ್ತು ಬಿಎಸ್‌ಪಿಯಿಂದ 22 ಮಹಿಳೆಯರು ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT