ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಅಭ್ಯರ್ಥಿ ಗ್ರಾಮ ಸ್ವರಾಜ್ ಮಂತ್ರ ಪಠಣ

Last Updated 10 ಏಪ್ರಿಲ್ 2014, 10:26 IST
ಅಕ್ಷರ ಗಾತ್ರ

ಚಾಮರಾಜನಗರ: ದೇಶದಲ್ಲಿ ಅರವಿಂದ ಕ್ರೇಜಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಸಂಚಲನ ಸೃಷ್ಟಿಸಿದೆ. ಭ್ರಷ್ಟಾಚಾರವನ್ನು ಗುಡಿಸಿ ಹಾಕಲು ‘ಪೊರಕೆ’ ಕೈಗೆತ್ತಿಕೊಂಡಿದೆ. 16ನೇ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕ್ರೇಜಿವಾಲ್‌ ಮತದಾರರ ಗಮನ ಸೆಳೆದಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸಂಪತ್‌ಕುಮಾರ್‌ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎಂಜಿನಿಯರಿಂಗ್‌ ಪದವಿ ಪಡೆದಿರುವ ಅವರು ಕ್ಷೇತ್ರದ ವ್ಯಾಪ್ತಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಅವರು ಚುನಾವಣೆ, ಕ್ಷೇತ್ರದ ಸಮಸ್ಯೆ ಇತ್ಯಾದಿ ಬಗ್ಗೆ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದರು.

ಲೋಕಸಭಾ ಕ್ಷೇತ್ರದಲ್ಲಿ ‘ಆಪ್‌’ ಪ್ರಚಾರ ಹೇಗಿದೆ?
ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಾಗಿದೆ. ಜನರು ನಮ್ಮ ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ. ಆನ್‌ಲೈನ್‌ ಮೂಲಕ ಪಕ್ಷದ ಸದಸ್ಯತ್ವ ಪಡೆದವರು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ನಿಮ್ಮ ಪಕ್ಷದ ಬಗ್ಗೆ ಅರಿವು ಇದೆಯೇ?
ಪಕ್ಷದ ಸಂಸ್ಥಾಪಕ ಅರವಿಂದ ಕ್ರೇಜಿವಾಲ್‌ ಅವರ ಹೋರಾಟದ ಬಗ್ಗೆ ಗ್ರಾಮೀಣರಿಗೂ ಅರ್ಥವಾಗಿದೆ. ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳು, ಅಧಿಕಾರಿಗಳಿಂದ ಬೆಂಬಲ ಸಿಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನಮ್ಮನ್ನು ಬೆಂಬಲಿಸುತ್ತಿರುವವರ ಸಂಖ್ಯೆಯಲ್ಲಿ ವಿದ್ಯಾವಂತರು ಹೆಚ್ಚಿದ್ದಾರೆ.

ಕ್ಷೇತ್ರಕ್ಕೆ ಹೊಸಬರಾದ ನಿಮಗೆ ಇಲ್ಲಿನ ಸಮಸ್ಯೆ ಬಗ್ಗೆ ಅರಿವು ಇಲ್ಲ ಎಂದು ವಿರೋಧ ಪಕ್ಷದ ಮುಖಂಡರು ದೂರುತ್ತಾರಲ್ಲ?
ಅವರ ಹೇಳಿಕೆಯೇ ತಪ್ಪು. ನಾನು ಪ್ರಚಾರದ ವೇಳೆ ಕ್ಷೇತ್ರದಲ್ಲಿ ಸುತ್ತಿದ್ದೇನೆ. ಹಿಂದೆ ಗೆದ್ದಿರುವ ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂಬ ಅರಿವು ನನಗಿದೆ. ಇದು ಮತದಾರರಿಗೂ ಗೊತ್ತಿದೆ. ಅಭಿವೃದ್ಧಿ ವಿಷಯ ಬಂದಾಗ ಹೊಸಬರು ಅಥವಾ ಹಳೆಬರು ಎಂಬುದು ಮುಖ್ಯವಲ್ಲ. ಅಮೂಲ್ಯವಾದ ಮತ ನೀಡಿದ ಮತದಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದಷ್ಟೇ ನಮ್ಮ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಭ್ಯರ್ಥಿಗಳು, ಜನಪ್ರತಿನಿಧಿಗಳು ಚಿಂತಿಸುವುದು ಒಳಿತು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕರಿಕಲ್ಲು ಗಣಿಗಾರಿಕೆ ಬಗ್ಗೆ ನಿಮ್ಮ ನಿಲುವು ಏನು?
ಅಕ್ರಮ ಗಣಿಗಾರಿಕೆಗೆ ಮೊದಲು ಕಡಿವಾಣ ಹಾಕಬೇಕಿದೆ. ಗಣಿಗಾರಿಕೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡ ಸ್ಪಷ್ಟವಾದ ಗಣಿ ನೀತಿ ರೂಪಿಸಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕಿದೆ. ಸರ್ಕಾರ, ಸುಪ್ರೀಂ ಕೋರ್ಟ್‌ ರೂಪಿಸಿರುವ ಮಾರ್ಗಸೂಚಿ ಪಾಲಿಸುವವರಿಗೆ ಮಾತ್ರವೇ ಗಣಿಗಾರಿಕೆಗೆ ಅವಕಾಶ ನೀಡಬೇಕು. ಜತೆಗೆ, ಜಿಲ್ಲೆಯ ವನ್ಯಜೀವಿಧಾಮ, ಹುಲಿ ರಕ್ಷಿತಾರಣ್ಯದ ಅಕ್ಕಪಕ್ಕದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು. ಗಣಿಗಾರಿಕೆ ನಡೆಯುತ್ತಿದ್ದರೆ ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಅಂತಹ ಗಣಿ ಗುತ್ತಿಗೆಯನ್ನು ಕೂಡಲೇ ರದ್ದುಪಡಿಸಬೇಕು.

  ಪ್ರಚಾರದ ವೇಳೆ ನಿಮ್ಮನ್ನು ಸೆಳೆದ ಪ್ರಮುಖ ಸಮಸ್ಯೆಗಳು ಯಾವುವು?
ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯ ವ್ಯವಸ್ಥೆ ಎದ್ದು ಕಾಣುತ್ತದೆ. ನಿರ್ಮಲ ಭಾರತ ಅಭಿಯಾನದಂತಹ ಯೋಜನೆ ಜಾರಿಯಲ್ಲಿದ್ದರೂ ಕ್ಷೇತ್ರದ ವ್ಯಾಪ್ತಿಯ ಲಕ್ಷಾಂತರ ಕುಟುಂಬಗಳು ಇನ್ನೂ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಆಗಿದ್ದರೆ ಸಂಸದರಾಗಿ ಆಯ್ಕೆಯಾಗಿದ್ದವರು ಮಾಡಿದ ಕೆಲಸವಾದರು ಏನು? ಎಂಬ ಪ್ರಶ್ನೆ ನನ್ನನ್ನು ಬಲವಾಗಿ ಕಾಡುತ್ತಿದೆ.

ಜತೆಗೆ, ಜಿಲ್ಲೆಯ ನಿರುದ್ಯೋಗಿಗಳು, ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಸಿಗುತ್ತಿಲ್ಲ. ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ವರದಿಯಲ್ಲಿಯೇ ಈ ಅಂಶ ಬೆಳಕಿಗೆ ಬಂದಿದೆ. ಇದರಿಂದ ನಿರುದ್ಯೋಗದ ಸಮಸ್ಯೆ ಹೆಚ್ಚಿದೆ. ಅವರಿಗೆ ವಿವಿಧ ಕೌಶಲ ತರಬೇತಿ ನೀಡಬೇಕಿದೆ. ಜತೆಗೆ, ಗ್ರಾಮೀಣ ಪ್ರದೇಶದ ಯುವಜನರು ಬೃಹತ್‌ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಯುವಜನರ ಗುಳೆ ಸಮಸ್ಯೆಗೆ ಎಲ್ಲರೂ ಒಟ್ಟಾಗಿ ಪರಿಹಾರ ಹುಡುಕಬೇಕಿದೆ.

ಜಿಲ್ಲೆಗೆ ನಿಮ್ಮ ಆದ್ಯತೆಗಳು ಏನು?
ಚಾಮರಾಜನಗರ ಜಿಲ್ಲೆಯು ಮೂಲ ಸೌಕರ್ಯದಿಂದ ವಂಚಿತವಾಗಿದೆ. ಅಂತರ್ಜಲಮಟ್ಟ ಕುಸಿದಿದೆ. ನದಿ ಮೂಲದಿಂದ ಕುಡಿಯುವ ನೀರು ಪೂರೈಕೆ, ನೀರಾವರಿ ಸೌಲಭ್ಯ ಕಲ್ಪಿಸುವ ಕೆಲಸವಾಗಿಲ್ಲ. ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ ಎಂಬ ನೆಪವಿಟ್ಟುಕೊಂಡು ಜನರಿಗೆ ಕುಡಿಯಲು ನೀರು ಕೊಡದಿದ್ದರೆ ಹೇಗೆ? ಜಲ ಸಂವರ್ಧನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಿದೆ.

ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಇಷ್ಟು ವರ್ಷ ಆಡಳಿತ ನಡೆಸಿದ ಜನಪ್ರತಿನಿಧಿಗಳು ಯಾವುದೇ ಪ್ರಯತ್ನ ಮಾಡಿಲ್ಲ. ತಾವು ಚುನಾಯಿತರಾದರೆ ಮೊದಲು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತು ನೀಡುತ್ತೇನೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಕ್ರಮವಹಿಸುತ್ತೇನೆ. ಸಮುದಾಯ ಭವನಗಳನ್ನು ನಿರ್ಮಿಸಿ ಅವುಗಳನ್ನು ಪಾಳುಬೀಳುವಂತಹ ಕೆಲಸ ಮಾಡುವುದಿಲ್ಲ. ಈಗಿರುವ ಸಮುದಾಯ ಭವನಗಳ ನವೀಕರಣಕ್ಕೆ ಆದ್ಯತೆ ನೀಡುತ್ತೇನೆ.

ಆಪ್‌’ ಮಂತ್ರ ನಗರ, ಪಟ್ಟಣಗಳಿಗೆ ಸೀಮಿತ ಎಂಬ ಆರೋಪ ಇದೆಯಲ್ಲ?
ಅರವಿಂದ ಕ್ರೇಜಿವಾಲ್‌ ಅವರು ಭ್ರಷ್ಟಾಚಾರದ ನಿರ್ಮೂಲನೆಗೆ ಹೋರಾಟ ಮಾಡುತ್ತಿದ್ದಾರೆ. ಗ್ರಾಮೀಣರಿಗೂ ಈ ಬಗ್ಗೆ ಅರಿವು ಮೂಡಿದೆ. ಈ ಹಿನ್ನೆಲೆಯಲ್ಲಿಯೇ ಹಳ್ಳಿಗಳಲ್ಲೂ ನಮ್ಮ ನಿರೀಕ್ಷೆಗೆ ಮೀರಿ ಜನಬೆಂಬಲ ಸಿಕ್ಕಿದೆ. ಭ್ರಷ್ಟಾಚಾರದ ಕರಿನೆರಳು ಹಳ್ಳಿಗಳಲ್ಲೂ ಇದೆ. ಹೀಗಾಗಿ, ನಮ್ಮ ಪಕ್ಷದ ಧ್ಯೇಯೋದ್ದೇಶಗಳನ್ನು ಹಳ್ಳಿಗರು ಬೆಂಬಲಿಸುತ್ತಿದ್ದಾರೆ. ಗ್ರಾಮ ಸ್ವರಾಜ್ ಕಲ್ಪನೆಯೊಂದಿಗೆ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವುದು ಆಮ್‌ ಆದ್ಮಿ ಪಕ್ಷದ ಗುರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT