ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿಯಿಂದ 10 ದಿನಗಳ ಕಾಲಾವಕಾಶ ಕೋರಿಕೆ, ಬಿಜೆಪಿ, ಕಾಂಗ್ರೆಸ್ ಗೆ ಷರತ್ತು

Last Updated 14 ಡಿಸೆಂಬರ್ 2013, 10:12 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ ಎಸ್): ಸರ್ಕಾರ ರಚನೆ ಸಂಬಂಧವಾಗಿ ನಿರ್ಧರಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಬಳಿ ಶನಿವಾರ 10 ದಿನಗಳ ಕಾಲಾವಕಾಶ ಕೋರಿರುವ ಆಮ್ ಆದ್ಮಿ ಪಕ್ಷವು (ಎಎಪಿ) ಜನತೆಗೆ ಸಂಬಂಧಿಸಿದ 18 ವಿಷಯಗಳಿಗೆ ಸಂಬಂಧಿಸಿದಂತೆ ನಿಲುವು ಸ್ಪಷ್ಟ ಪಡಿಸುವಂತೆ ಕೋರಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪತ್ರಗಳನ್ನು ರವಾನಿಸಿದೆ.

ಆಮ್ ಆದ್ಮಿ ಪಕ್ಷದ ವರ್ತನೆಯನ್ನು 'ಸೊಕ್ಕಿನ ವರ್ತನೆ' ಎಂಬುದಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಣ್ಣಿಸಿದರೆ, ಒಂದು  ಅಥವಾ ಎರಡು ದಿನಗಳಲ್ಲಿ ಪತ್ರಕ್ಕೆ ಪ್ರತಿಕ್ರಿಯಿಸುವುದಾಗಿ ಕಾಂಗ್ರೆಸ್ ಹೇಳಿದೆ.

ಈ ಮಧ್ಯೆ ಲೆಫ್ಟಿನೆಂಟ್ ಗವರ್ನರ್  ಜಂಗ್ ಅವರು ಎಎಪಿ ಜೊತೆಗಿನ ತಮ್ಮ ಭೇಟಿ ಬಗ್ಗೆ 'ವಸ್ತುಸ್ಥಿತಿ' ವರದಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಸಲ್ಲಿಸುವುದಾಗಿ ಹೇಳಿದ್ದಾರೆ.

70 ಸದಸ್ಯ ಬಲದ ವಿಧಾನಸಭೆಯಲ್ಲಿ 31 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಉದಯಿಸಿದ್ದ ಬಿಜೆಪಿಯು ಸಂಖ್ಯಾಬಲವಿಲ್ಲ ಎಂದು ಹೇಳಿ ಸರ್ಕಾರ ರಚನೆಗೆ ಗುರುವಾರ ನಿರಾಕರಿಸಿದ ಬಳಿಕ 28 ಸ್ಥಾನಗಳನ್ನು ಗೆದ್ದ ಎಎಪಿಯ ಸ್ಥಾಪಕ ನಾಯಕ ಅರವಿಂದ ಕೇಜ್ರಿವಾಲ್ ಅವರು  ಶನಿವಾರ ಜಂಗ್ ಅವರನ್ನು ಭೇಟಿ ಮಾಡಿದ್ದರು.

ಕೇವಲ 8 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಶುಕ್ರವಾರ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರವೊಂದನ್ನು ಸಲ್ಲಿಸಿ ಎಎಪಿಗೆ ಭೇಷರತ್ ಬೆಂಬಲ ನೀಡಲು ಸಿದ್ಧ ಎಂದು ತಿಳಿಸಿತ್ತು.

ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಮುಖ್ಯಸ್ಥ ರಾಜನಾಥ್ ಸಿಂಗ್ ಅವರಿಗೆ ತಾವು ರವಾನಿಸಿದ ಪತ್ರಗಳಿಗೆ ಪ್ರತಿಕ್ರಿಯೆ ಬಂದ ಬಳಿಕವಷ್ಟೇ ಭೇಷರತ್ ಬೆಂಬಲ ವ್ಯಕ್ತ ಪಡಿಸಿದ ಕಾಂಗ್ರೆಸ್ ಮತ್ತು ಎಎಪಿ ಸರ್ಕಾರ ರಚನೆಗೆ ಬೆಂಬಲ ನೀಡುವ ಇಚ್ಛೆ ವ್ಯಕ್ತ ಪಡಿಸಿದ ಬಿಜೆಪಿಯ 'ನೈಜ ಉದ್ದೇಶಗಳು' ಏನು ಎಂಬುದು ತನಗೆ ಗೊತ್ತಾಗಲಿದೆ ಎಂದು ಎಎಪಿ ಹೇಳಿದೆ.

'ಅರವಿಂದ ಕೇಜ್ರಿವಾಲ್ ಪತ್ರವನ್ನು ಸೋನಿಯಾ ಗಾಂಧಿ ಅವರು ನನಗೆ ನೀಡಿದ್ದಾರೆ. ನಾವು ಉತ್ತರ ಸಿದ್ಧ ಪಡಿಸಿ ಎರಡು ದಿನಗಳ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹಮದ್ ಹೇಳಿದರು.

ಬಿಜೆಪಿ ನಾಯಕ ಬಲಬೀರ್ ಸಿಂಗ್ ಅವರು 'ದುರಹಂಕಾರದ ಉತ್ತುಂಗ ಇದು. ಪಕ್ಷವು (ಎಎಪಿ) ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದಿದೆ. ಸರ್ಕಾರ ರಚಿಸುವ ಬಗೆ ಹೇಗೆಂದು ಯೋಚಿಸುವ ಬದಲಿಗೆ ಪಕ್ಷದ ನಾಯಕರು ಇತರ ಪಕ್ಷಗಳ ವಿರುದ್ಧ ಬುಡರಹಿತ ಆರೋಪಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ' ನುಡಿದರು.

ಎಎಪಿಯು ಇತರ ರಾಜಕೀಯ ಪಕ್ಷಗಳ ಮೇಲೆ ತನ್ನ ಷರತ್ತುಗಳನ್ನು ಹೇರುತ್ತಿದೆ. ನಾವು ಇದಕ್ಕೆ ಬಾಗುವುದಿಲ್ಲ. ಹೀಗೆ ನಡೆಯುತ್ತಾ ಇದ್ದರೆ ಎಎಪಿಯು ತಾನು ಜನತೆಗೆ ಕೊಟ್ಟ ಭರವಸೆಗಳನ್ಜು ಹೇಗೆ ಈಡೇರಿಸುತ್ತದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಪೂಂಜ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT