ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಸ್‌ಎ ಆಲ್ಫಾ: ಫುಲ್ ಡಿಫರೆಂಟ್!

ಎಸ್‌ಯುವಿ ಕ್ಷೇತ್ರಕ್ಕೆ ಮಾರುತಿ
Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಾರುತಿ ಸುಜುಕಿ ಏನೇ ಮಾಡಿದರೂ ವಿಭಿನ್ನವೂ, ವಿಶಿಷ್ಟವೂ ಆಗಿರುತ್ತದೆ. ೨೦೦೮ ರಲ್ಲಿ ಮಾರುತಿ ಸುಜುಕಿ ಈಗಿನ ಎ ಸ್ಟಾರ್ ಕಾರ್ ಅನ್ನು ಕಾನ್ಸೆಪ್ಟ್ ಕಾರ್ ಆಗಿ ಬಿಡುಗಡೆ ಮಾಡಿತ್ತು. ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ ಕಾನ್ಸೆಪ್ಟ್ ಕಾರ್ ಅನ್ನು ನೋಡಿ ಜನ ದಂಗಾಗಿ ಹೋಗಿದ್ದರು. ಜತೆಗೆ ಕಿಸಾಶಿ ಕಾರ್‌ನ ಕಾನ್ಸೆಪ್ಟ್ ಸಹ ಅಲ್ಲೇ ಇತ್ತು. ಈ ಎರಡೂ ಕಾರ್‌ಗಳು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರನ್ನೇ ಮಾಡಿವೆ. ಮಾರುತಿಯ ಈಗಿನ ಎಲ್ಲ ಕಾರ್‌ಗಳ ಎಂಜಿನ್ ತಂತ್ರಜ್ಞಾನ (ಕೆ-೧೦ ಸರಣಿ) ಎ-ಸ್ಟಾರ್ ನಿಂದಲೇ ಆರಂಭವಾದದ್ದು ಎಂಬುದನ್ನು ಮರೆಯಬಾರದು.

ಈಗ ಮತ್ತೊಂದು ಹೊಸ ಹೆಜ್ಜೆಗೆ ಮಾರುತಿ ಸುಜುಕಿ ಅಣಿಯಾಗಿದೆ. ಅದು ಎಸ್‌ಯುವಿ ಕ್ಷೇತ್ರಕ್ಕೆ ಕಾಲಿಡುವುದು. ಹಾಗೆಂದು ಈ ಹಿಂದೆ ಎಸ್‌ಯುವಿ ಇರಲಿಲ್ಲ ಎಂದಲ್ಲ. ಆದರೆ ಭಾರತದಲ್ಲಿ ಮಾರುತಿ ಸುಜುಕಿ ಸ್ವತಂತ್ರವಾಗಿ ತಯಾರಿಸಿದ ಯಾವ ಎಸ್‌ಯುವಿಯೂ ಇರಲಿಲ್ಲ.

ಗ್ರಾಂಡ್ ವಿಟಾರ ಸಂಪೂರ್ಣ ಸುಜುಕಿ ನಿರ್ಮಿತ ಕಾರ್. ಅದು ಸೂಪರ್ ಎಸ್‌ಯುವಿ ಬೇರೆ. ಅಂದರೆ ಎಸ್‌ಯುವಿಗಿಂತಲೂ ಒಂದು ಹೆಜ್ಜೆ ಮೇಲೆ. ಜನ ಸಾಮಾನ್ಯರಿಗೆ ಎಟುಕದ ಕಾರ್. ೨೦೧೧-೧೨ ರಲ್ಲಿ ರೆನೊ ಕಂಪೆನಿ ಡಸ್ಟರ್ ಕಾರ್ ಅನ್ನು ಬಿಡುಗಡೆ ಮಾಡಿದ್ದೇ ತಡ.
ಕಾರ್ ಲೋಕದಲ್ಲಿ ಅಲ್ಲೋಲ ಕಲ್ಲೋಲವೇ ಆಗಿ ಹೋಯಿತು.

ಭಾರತೀಯರು ಎಸ್‌ಯುವಿಗಳನ್ನು ಕಂಡಿದ್ದರಾದರೂ ಪುಟಾಣಿ ಎಸ್‌ಯುವಿಗಳನ್ನು ನೋಡಿರಲೇ ಇಲ್ಲ. ಅವರಿಗೇನಿದ್ದರೂ, ಟಾಟಾ ಸಫಾರಿ, ಸುಮೊ, ಮಹಿಂದ್ರಾ ಸ್ಕಾರ್ಪಿಯೊಗಳೇ ಎಸ್‌ಯುವಿಗಳಾಗಿದ್ದವು. ಆದರೆ ಡಸ್ಟರ್ ಹೊರ ಬಂದಿದ್ದೇ ತಡ, ತಂತ್ರಜ್ಞಾನದಲ್ಲಿ ಉತ್ಕೃಷ್ಟವಾದ, ಪುಟಾಣಿಯೂ, ಶಕ್ತಿಶಾಲಿಯೂ ಆದ ಈ ಕಾರ್‌ಗೆ ಮನಸೋತು ಬಿಟ್ಟರು. ಇದರ ಯಶಸ್ಸಿನ ಸೂತ್ರವನ್ನೇ ಅನುಸರಿಸಿ ಫೋರ್ಡ್ ಎಕೊಸ್ಪೋರ್ಟ್ ಬಂದಿತಾದರೂ, ಡಸ್ಟರ್‌ಗೆ ಸಿಕ್ಕಷ್ಟು ಯಶಸ್ಸು ಸಿಗಲಿಲ್ಲ. ಅದಕ್ಕೆ ಕಾರಣ, ಡಸ್ಟರ್‌ನಷ್ಟು ವಿಶೇಷತೆ, ಮಿತವ್ಯಯ ಗುಣ ಇರಲೇ ಇಲ್ಲ.

ಈ ನ್ಯೂನತೆಯನ್ನು ಸೂಕ್ಷ್ಮ ಕಣ್ಣುಗಳಿಂದ ಗಮನಿಸುತ್ತಿದ್ದ ಮಾರುತಿ ಸುಜುಕಿ ತಾಳ್ಮೆಯಿಂದ ಹೊಸ ಹೆಜ್ಜೆ ಇಟ್ಟಿದೆ. ಡಸ್ಟರ್‌ಗೆ ಸ್ಪರ್ಧಿಯಾಗಿ ಹೊಸ ಪುಟಾಣಿ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನಡೆಸಿದೆ. ಈಗ ಹೊರಬಿಡಲಿರುವ ಹೊಸ ಎಸ್‌ಯುವಿ ಡಸ್ಟರ್‌ಗಿಂತಲೂ ಸುಂದರ, ಡಸ್ಟರ್‌ಗಿಂತಲೂ ಶಕ್ತಿಶಾಲಿ. ಆದರೆ ಡಸ್ಟರ್‌ಗಿಂತಲೂ ಕಡಿಮೆ ಬೆಲೆ. ಇದೇ ತನ್ನ ಯಶಸ್ಸಿನ ಸೂತ್ರವಾಗಲಿದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.

ಜನ ಸಾಮಾನ್ಯರ ಎಸ್‌ಯುವಿ ಎಂಬುದು ಈ ಕಾರ್‌ನ ಹೆಗ್ಗಳಿಕೆ. ಈ ಹೊಸ ಕಾರ್ ಕೇವಲ ೧೦ ಲಕ್ಷ ರೂಪಾಯಿಗಳ ಒಳಗೆ ಗ್ರಾಹಕನ ಕೈ ಸೇರಲಿರುವುದು ವಿಶೇಷ. ಈವರೆಗೂ ಮಾರುತಿಯಲ್ಲಿ ಸೋಲನ್ನು ಕಂಡಿರುವ ಕಾರ್ ಇಲ್ಲವೇ ಇಲ್ಲ. ಹಾಗಾಗಿ ಇತರೆ ಕಂಪೆನಿಗಳಿಗೆ ನಡುಕ ಈಗಾಗಲೇ ಶುರುವಾಗಿದೆ. ಎಸ್‌ಯುವಿಗಳನ್ನು ತಯಾರಿಸಿ ತಾವೂ ದಿಗ್ಗಜರಾಗಬೇಕು ಎಂಬ ಜಾಗತಿಕ ಕಂಪೆನಿಗಳ ಆಶಯಕ್ಕೆ ಕೊಂಚ ಹಿನ್ನಡೆಯಾಗಿದೆ.

ಶ್ರೇಷ್ಠ ಕಾರ್ಯಕ್ಷಮತೆಯ ಭರವಸೆ
ಈ ಕಾರ್‌ನ ಎಂಜಿನ್ ಶಕ್ತಿಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಯಿಲ್ಲ. ಅಂದಾಜಿನ ಪ್ರಕಾರ ಡಸ್ಟರ್‌ಗೂ ಹೆಚ್ಚು ಅಂದರೆ ೧೫೦೦ ಸಿಸಿ ಎಂಜಿನ್ ಅನ್ನು ಹೊಂದಿರಲಿದೆ. ಕನಿಷ್ಠ ೧೫೦ ಎನ್‌ಎಂ ಟಾರ್ಕ್ ಹಾಗೂ ೧೧೦ ಪಿಎಸ್ ಬಿಎಚ್‌ಪಿ ಹೊಂದಿರಲಿದೆ. ೪ ಸಿಲಿಂಡರ್ ಪೆಟ್ರೋಲ್ ಎಂಜಿನ್ ಇದ್ದರೆ, ೩ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರಲಿದೆ. ಆರಂಭದಲ್ಲಿ ಕೇವಲ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಹೊರಬರುವ ಈ ಕಾರ್, ನಂತರ ಡೀಸೆಲ್ ಎಂಜಿನ್ ಅನ್ನೂ ಹೊಂದಲಿದೆ.

ಕಾರ್ಯಕ್ಷಮತೆ ಮತ್ತು ಮೈಲೇಜ್
ಗರಿಷ್ಠ ೧೮೦ ಕಿಲೋಮೀಟರ್ ವೇಗವನ್ನು ಮುಟ್ಟುವ ಸಾಮರ್ಥ್ಯವನ್ನು ಈ ಹೊಸ ಕಾರ್ ಹೊಂದಿರಲಿದೆ. ಅಲ್ಲದೇ, ಪ್ರತಿ ಲೀಟರ್ ಪೆಟ್ರೋಲ್‌ಗೆ ೧೦-೧೨ ಕಿಲೋಮೀಟರ್ ಮೈಲೇಜ್ ನೀಡಲಿದೆ. ೨ ವ್ಹೀಲ್ ಡ್ರೈವ್ ಹಾಗೂ ೪ ವ್ಹೀಲ್ ಡ್ರೈವ್ ಅನ್ನು ಕಾರ್ ಹೊಂದಿರಲಿದ್ದು, ಅತಿ ವಿಶೇಷ ಎಂದಿನಿರುವ ಅತಿ ನಯವಾದ ಗಿಯರ್ ಬಾಕ್ಸ್ ಹೊಂದಿರಲಿದೆ. ಹಾಗಾಗಿ ಗಿಯರ್ ಬದಲಿಸುವುದು ಕೊಂಚವೂ ತ್ರಾಸ ಎಂದೆನಿಸುವುದೇ ಇಲ್ಲ. ಅತಿ ದಪ್ಪನಾದ ೧೬ ಇಂಚ್‌ಗಳ ೨೧೫/೬೫ ಆರ್೧೬ ಟಯರ್‌ಗಳನ್ನು ಹೊಂದಿರಲಿದ್ದು, ಅತ್ಯುತ್ತಮ ರಸ್ತೆ ಹಿಡಿತ ಸಿಗಲಿದೆ. ಉತ್ಕೃಷ್ಟ ಗುಣಮಟ್ಟದ ಸಸ್ಪೆನ್ಷನ್‌ನಿಂದಾಗಿ ಎಂತಹ ಕೆಟ್ಟ ರಸ್ತೆಗಳಲ್ಲೂ ಕುಲುಕಾಟ ರಹಿತ ಚಾಲನೆ ಕಾರ್‌ಗೆ ಸಿಗಲಿದೆ. ಹಾಗಾಗಿ ಇದು ಪಕ್ಕಾ ಆಲ್ ಟೆರೇನ್ ವಾಹನ. ಅಲಾಯ್ ಹಾಗೂ ಉಕ್ಕಿನ ಚಕ್ರಗಳ ಆಯ್ಕೆ ಗ್ರಾಹಕನಿಗೆ ಇದೆ.

ಹೊರಮೈ ಮತ್ತು ಒಳಾಂಗಣ
ಹೊರಮೈ ಮತ್ತು ಒಳಾಂಗಣ ವಿನ್ಯಾಸಗಳೇ ಈ ಕಾರ್‌ನ ವಿಶೇಷಗಳು. ಅತಿ ಚೂಪಾದ ಹೊರಮೈ ವಿನ್ಯಾಸವಿದೆ. ಹಾಗಾಗಿ ಪಕ್ಕಾ ಸ್ಫೋರ್ಟ್ಸ್ ಕಾರ್‌ನ ನೋಟ ಕಾರ್‌ಗಿದೆ. ಕೇವಲ ೪ ಮೀಟರ್ ಉದ್ದ ಇದ್ದು, ವಾಹನ ದಟ್ಟಣೆಯ ರಸ್ತೆಗಳಲ್ಲೂ ಚುರುಕಾಗಿ ಚಲಿಸುತ್ತದೆ. ಈ ಕಾರ್‌ನ ಅಗಲ ೧.೯ ಮೀಟರ್ ಇದ್ದರೆ ಎತ್ತರ ೧.೬ ಮೀಟರ್ ಇರುತ್ತದೆಯಂತೆ.

ಇದರ ಒಳಾಂಗಣ ವಿನ್ಯಾಸವೂ ಅಷ್ಟೇ. ಮಾರುತಿ ಸುಜುಕಿ ಪ್ರಸಿದ್ಧ ಸ್ವಿಫ್ಟ್ ಕಾರ್‌ನ ಒಳಾಂಗಣವನ್ನು ಆಧರಿಸಿ ತಯಾರಾಗಿದೆ. ಹಾಗಾಗಿ ಅತಿ ವಿಶಾಲ ಸೀಟ್‌ಗಳು, ಎತ್ತರದ ಹೆಡ್ ಸ್ಪೇಸ್, ಉದ್ದನೆಯ ಲೆಗ್ ಸ್ಪೇಸ್ ಇರಲಿದೆ. ಹಾಗಾಗಿ ಆರಾಮದಾಯಕ ಸವಾರಿ ಪ್ರಯಾಣಿಕರಿಗೆ ಸಿಗುತ್ತದೆ.

ಸುರಕ್ಷೆಗೆ ಒತ್ತು
ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಸೇರಿದಂತೆ ಅನೇಕ ಸುರಕ್ಷಾ ಸೌಲಭ್ಯಗಳೂ ಕಾರ್‌ನಲ್ಲಿವೆ. ಎಲ್ಲ ಪ್ರಯಾಣಿಕರಿಗೂ ಏರ್ ಬ್ಯಾಗ್ ಸೌಲಭ್ಯವಿದೆ. ಫಾಗ್ ಲ್ಯಾಂಪ್‌ಗಳಿವೆ. ಎಲ್ಲರಿಗೂ ಸೀಟ್ ಬೆಲ್ಟ್‌ಗಳಿವೆ. ಮಾನೋಕಾಕ್ ಫ್ರೇಂ ಇದ್ದು, ಕೆಟ್ಟ ಅಪಘಾತಗಳಲ್ಲೂ ಜಜ್ಜಿಹೋಗದಂತಹ ರಚನೆಯನ್ನು ಈ ಕಾರ್ ಹೊಂದಿದೆ. ಜತೆಗೆ ಎಸಿ ಕ್ಲೈಮೆಟ್ ಕಂಟ್ರೋಲ್, ಪವರ್ ವಿಂಡೋಸ್, ರಿಮೋಟ್ ಫ್ಯೂಯಲ್ ಕ್ಯಾಪ್, ಹಿಂದಿನ ಗಾಜಿಗೆ ಡೀಫಾಗರ್, ಪ್ರತಿಯೊಬ್ಬ ಪ್ರಯಾಣಿಕನಿಗೂ ಆರ್ಮ್ ರೆಸ್ಟ್, ಬಾಟೆಲ್ ಹೋಲ್ಡರ್, ಸನ್‌ರೂಫ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸಿಸ್ಟಂ ಮುಂತಾದ ಸೌಲಭ್ಯಗಳಿರುವುದು ಹೊಸ ಆಲ್ಫಾ ಅನ್ನು ವಿಭಿನ್ನ ವಾಹನವಾಗಿ ಮಾಡುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT