ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಗ್ಗಿಲ್ಲದೆ ಸಾಗಿರುವ ಅಕ್ರಮ ಮರಳು ಸಾಗಣೆ

Last Updated 18 ಫೆಬ್ರುವರಿ 2012, 10:05 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ಕಾರ ನದಿಪಾತ್ರಗಳಲ್ಲಿನ ಮರಳನ್ನು ಹರಾಜು ಮೂಲಕ ಇಂತಿಷ್ಟು ನಿಗದಿತ ದರದಂತೆ ವಿಲೇ ಮಾಡಲು ಲೋಕೋಪಯೋಗಿ ಇಲಾಖೆಗೆ ಜವಾಬ್ದಾರಿ ವಹಿಸಿದೆ. ಇದರ ಮೇಲು ಉಸ್ತುವಾರಿಗಾಗಿ ಜಿಲ್ಲಾಮಟ್ಟದಲ್ಲಿ ಮರಳು ಗಣಿಗಾರಿಕೆ ಸಮಿತಿಯನ್ನೂ ನೇಮಿಸಿದೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಜಿಲ್ಲಾ ಪಂಚಾಯ್ತಿ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ, ಸಂಬಂಧಪಟ್ಟ ತಹಶೀಲ್ದಾರ್ ಹಾಗೂ ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರು ಸಮಿತಿಯಲ್ಲಿದ್ದಾರೆ.

ವೇದಾವತಿ ನದಿಯಲ್ಲಿ ಹಲವು ವರ್ಷಗಳಿಂದಲೂ ಅಕ್ರಮವಾಗಿ ಮರಳನ್ನು ತುಂಬಿ ಬೇರೆಡೆಗೆ ಸಾಗಣೆ ಮಾಡುತ್ತಿರುವುದು ವ್ಯಾಪಕವಾಗಿ ನಡೆಯುತ್ತಿದೆ. ಇದೀಗ ಸರ್ಕಾರ ಕರಾವಳಿ ಪ್ರದೇಶ ಹೊರತುಪಡಿಸಿ ಸುಮಾರು 8,614 ಎಕರೆ ಪ್ರದೇಶದಲ್ಲಿ 1,610ರಷ್ಟು ಪ್ರದೇಶವನ್ನು ಮರಳು ಹರಾಜು ಮಾಡಲು ಗುರುತಿಸಿದೆ.

ಜಿಲ್ಲೆಯಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ ಮರಳು ಹರಾಜು ಮಾಡುವ ವ್ಯಾಪ್ತಿಗೆ ಬರುವ ನಾರಾಯಣಪುರ, ಕೋನಿಗರಹಳ್ಳಿ, ತೊರೆಬೀರನಹಳ್ಳಿ, ಕಲಮರಹಳ್ಳಿ, ಬೊಂಬೆರಹಳ್ಳಿ, ಗೋಸಿಕೆರೆ, ಸೂರನಹಳ್ಳಿ, ವಡೇರಹಳ್ಳಿ, ಮೈಲನಹಳ್ಳಿ, ಕಸವಿಗೊಂಡನಹಳ್ಳಿ, ರೇಣುಕಾಪುರ ಹೀಗೆ... ನದಿ ಹಾದು ಹೋಗುವ ಸಮೀಪದ ಹಳ್ಳಿಗಳಲ್ಲಿ ಹಗಲು ರಾತ್ರಿ ಎನ್ನದೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ.


ಕಳೆದ ಅಕ್ಟೋಬರ್‌ನಿಂದ ಲೋಕೋಪಯೋಗಿ ಇಲಾಖೆ ನದಿಪಾತ್ರದಲ್ಲಿನ ಮರಳನ್ನು ದಂಡೆಗೆ ತೆಗೆದುಹಾಕಲು ಹರಾಜು ಪ್ರಕ್ರಿಯೆ ಮಾಡಿದೆ. ದಂಡೆಯಲ್ಲಿ ಶೇಖರಿಸಿದ ಮರಳನ್ನು ಸರಬರಾಜುದಾರರು ಒಂದು ಘನ ಮೀಟರ್‌ಗೆ ್ಙ 475ರಂತೆ ಹಣ ಪಾವತಿಸಿದ ನಂತರ ಮರಳನ್ನು ಲಾರಿಗಳಿಗೆ ತುಂಬಿಸಲಾಗುತ್ತದೆ.
 

ಇಂತಹ ಲಾರಿಗಳು ಹಳದಿ ಬಣ್ಣ ಹೊಂದಿರಬೇಕು ಎಂದು 2011ರ ಮರಳು ನೀತಿಯಲ್ಲಿ ಸ್ಪಷ್ಟವಾಗಿ ಹೇಳಿದೆ.
ಲಾರಿಗಳು ಹಳದಿ ಬಣ್ಣ ಹೊಂದಿರಬೇಕು ಎಂಬ ನಿಯಮ ಮರಳು ನೀತಿಯಲ್ಲಿ ಪ್ರಕಟಪಡಿಸಿದ್ದರೂ ರಾತ್ರಿ ಸಮಯದಲ್ಲಿ ಹುಲಿಕುಂಟೆ, ಬೆಳಗೆರೆ, ಕಾಪರಹಳ್ಳಿ ಮಾರ್ಗವಾಗಿ ಹೆಗ್ಗೆರೆ ಗೇಟ್ ಮೂಲಕ ಬೆಂಗಳೂರು ತಲುಪುವ ಮರಳು ಲಾರಿಗಳು ಈ ಬಣ್ಣವನ್ನು ಹೊಂದಿರುವುದಿಲ್ಲ. ಇಲ್ಲಿ ಓಡಾಡುವ ಲಾರಿಗಳಿಂದಾಗಿ ಈ ಭಾಗದ ರಸ್ತೆಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಈ ಭಾಗದ ಪ್ರಯಾಣಿಕರು ದೂರುತ್ತಾರೆ.


ಇದಲ್ಲದೇ ತೋರೆಬೀರನಹಳ್ಳಿ ಮತ್ತು ದೊಡ್ಡ ಚೆಲ್ಲೂರು ಹತ್ತಿರ ಇರುವ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿಯೇ ಅಲ್ಲಲ್ಲಿ ದಾರಿಗಳನ್ನು ಮಾಡಿಕೊಂಡು ಕೆಲವರು ದಂದೆ ಮುಂದುವರಿಸಿದ್ದಾರೆ.


ಅಕ್ರಮ ಮರಳು ಸುರಕ್ಷಿತವಾಗಿ ಆಯಾಯ ವ್ಯಾಪ್ತಿಯನ್ನು ಸಾಗಿಸುವುದೇ ಪೊಲೀಸ್ ಇಲಾಖೆ. ಈಗಾಗಲೇ ಒಂದು ತಿಂಗಳಿಗೆ ಇಷ್ಟು ಲಾರಿಗಳಿಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿಕೊಂಡಿರುವ ಮಾಹಿತಿಯೂ ಸಾರ್ವಜನಿಕರಿಂದ ಬಹಿರಂಗವಾಗುತ್ತದೆ. ಅದ್ದರಿಂದ, ಇದಕ್ಕೆ ಪೊಲೀಸ್ ಇಲಾಖೆಯದೇ ತುಂಬು ಪ್ರೋತ್ಸಾಹ ಎಂಬ ಆರೋಪ ನದಿಪಾತ್ರದ ಜಮೀನು ಮಾಲೀಕರದು.

ನದಿಪಾತ್ರದಲ್ಲಿನ ಮರಳನ್ನು ಹರಾಜು ಮೂಲಕ ಲೋಕೋಪಯೋಗಿ ಇಲಾಖೆ ಹಣ ನೀಡಿದವರಿಗೆ ವಿಲೇ ಮಾಡುತ್ತಿದ್ದರೂ, ಈ ಅಧಿಕಾರಿಗಳ ಕಣ್ಣಿಗೆ ಕಾಣದೇ ಅಕ್ರಮವಾಗಿಯೂ ಮರಳು ಸಾಗಾಟ ನಡೆಯುತ್ತಿದೆ.
ಲೋಕೋಪಯೋಗಿ ಇಲಾಖೆಗೆ ಮರಳು ಗಣಿಗಾರಿಕೆ ವಹಿಸಿದ ಮೇಲೆ ಚಳ್ಳಕೆರೆ ತಾಲ್ಲೂಕು ಒಂದರಲ್ಲೆ ಕಳೆದ ಅಕ್ಟೋಬರ್‌ನಿಂದ ಅಂದಾಜು ್ಙ 1.25 ಕೋಟಿ ರಾಜಧನ ಸಂಗ್ರಹವಾಗಿದೆ. ಸರ್ಕಾರಕ್ಕೆ ರಾಜಧನವೇನೋ ಬರುತ್ತಿದೆ. ಆದರೆ, ಎಗ್ಗಿಲ್ಲದೆ ಅಕ್ರಮ ಮರಳು ಸಾಗಣೆ ನಡೆಯುತ್ತಲೇ ಇದೆ. ಇದು ನಿಲ್ಲುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆ.

ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಆದರೆ, ಕಳ್ಳ ಮಾರ್ಗಗಳನ್ನು ಕಂಡುಕೊಂಡಿರುವ ದಂದೆಕೋರರಿಗೆ ಇಲಾಖೆ ಪ್ರೋತ್ಸಾಹಿಸುತ್ತಿಲ್ಲ. ಅಕ್ರಮ ಮರಳು ಲಾರಿಗಳನ್ನು ಹಿಡಿದು ದಂಡ ಹಾಕಲಾಗಿದೆ. ಏನು ಮಾಡುವುದು? ಇನ್ನಾದರೂ ದಂದೆಯನ್ನು ಬಿಡುತ್ತಿಲ್ಲ ಎನ್ನುತ್ತಾರೆ ಲೋಕೋಪಯೋಗಿ  ಇಲಾಖೆ ಎಂಜಿನಿಯರ್ ಬಿ.ಬಿ. ರಾಮಚಂದ್ರಪ್ಪ.


ಮರಳು ಹರಾಜು ನೀತಿ ಜಾರಿಯಿಂದ ಯಾವುದೇ ಅಕ್ರಮ ಮರಳು ಗಣಿಗಾರಿಕೆ ನಿಂತಿಲ್ಲ. ಮೊದಲಾದರೆ ಎಲ್ಲಾ ಇಲಾಖೆಗಳಿಗೂ ದಂದೆಕೋರರು `ಕಪ್ಪ ಕಾಣಿಕೆ~ ಸಲ್ಲಿಸುತ್ತಿದ್ದರು. ಈಗಂತೂ ಯಾರ ಭಯವೂ ಇಲ್ಲ. ಹರಾಜಿನಲ್ಲಿ ತಂದಿದ್ದು ಎಂದು ಮರಳು ಸಾಗಿಸುತ್ತಿದ್ದಾರೆ. ಸರ್ಕಾರಕ್ಕೆ ರಾಜಧನದ ಗಂಟು ಹೋಗುತ್ತದೆ. ಸ್ಥಳೀಯರ ಬದುಕು ಕೆಲವೇ ವರ್ಷಗಳಲ್ಲಿ ಬೇರೆಡೆಗೆ ಗಂಟು ಮೂಟೆ ಕಟ್ಟುವಂತೆ ಮಾಡುತ್ತದೆ. `ಮಾಮೂಲಿ~ ಪಡೆಯುವ ಅಧಿಕಾರಿಗಳು ಎತ್ತಂಗಡಿ ಆಗುವವರೆಗೂ ಸರಿಯಾಗುವುದಿಲ್ಲ ಎಂಬುದು ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಅವರ ದೂರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT