ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್1ಬಿ ವೀಸಾಗೆ ಲಾಟರಿ

ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭ
Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ ಎಚ್1ಬಿ ವೀಸಾ ವಿತರಣೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಸ್ಥಳೀಯ ಪೌರತ್ವ ಮತ್ತು ವಲಸೆ ವಿಭಾಗ ಆರಂಭಿಸಿದೆ. ಮೊದಲ ವಾರದಲ್ಲಿಯೇ ಅರ್ಜಿಗಳ ಮಹಾಪೂರ ಹರಿದು ಬರುವ ನಿರೀಕ್ಷೆ ಇದೆ.

ಅಮೆರಿಕ ಸಂಸತ್ತು ನಿಗದಿ ಪಡಿಸಿರುವ  65 ಸಾವಿರ ಎಚ್1ಬಿ ವೀಸಾ ಗರಿಷ್ಠ ಮಿತಿಯನ್ನು ಮೀರುವಷ್ಟು ಅರ್ಜಿಗಳು ಪ್ರಕ್ರಿಯೆ ಆರಂಭವಾದ ಮೊದಲ ವಾರದಲ್ಲಿಯೇ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ವರ್ಮಾಂಟ್ ಮತ್ತು ಕ್ಯಾಲಿಫೋರ್ನಿಯಾ ಅರ್ಜಿ ಸ್ವೀಕಾರ ಕೇಂದ್ರಗಳಲ್ಲಿ ಭಾರಿ ಜನದಟ್ಟಣೆ ಏನೂ ಕಂಡುಬಂದಿಲ್ಲ ಎಂದು ಅಲ್ಲಿಯ ವೀಸಾ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಪೌರತ್ವ ಮತ್ತು ವಲಸೆ ವಿಭಾಗ ಪ್ರತಿ ದಿನ ವೀಸಾ ಕೋರಿ ಬರುವ ಅರ್ಜಿಗಳ ಸಂಖ್ಯೆಯನ್ನು ಬಹಿರಂಗಪಡಿಸುವುದಿಲ್ಲ. ಬದಲಾಗಿ ಅರ್ಜಿಗಳ ಸಂಖ್ಯೆ 65 ಸಾವಿರ ಮಿತಿಯನ್ನು ತಲುಪಿದಾಗ ಆ ಬಗ್ಗೆ ಅಧಿಕೃತ ಘೋಷಣೆ ಮಾಡುವುದು ವಾಡಿಕೆ.

ಇದರ ಹೊರತಾಗಿ ಅಮೆರಿಕದ ಶಿಕ್ಷಣ ಸಂಸ್ಥೆಗಳಿಂದ ಸ್ನಾತಕೋತ್ತರ ಪದವಿ ಪಡೆದ ಅಥವಾ ಈ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ 20 ಸಾವಿರ ಹೆಚ್ಚುವರಿ ವೀಸಾ ವಿತರಿಸಲಾಗುವುದು. ಎರಡು ದಶಕಗಳಿಂದ ಎಚ್1ಬಿ ವೀಸಾ ವಿತರಣೆ ಸಂಖ್ಯೆಯ ಮೇಲೆ ಗರಿಷ್ಠ ಮಿತಿ ನಿಗದಿಪಡಿಸುವ ಪದ್ಧತಿ ಜಾರಿಯಲ್ಲಿದೆ.

ಮಿತಿ ಮೀರಿ ಅರ್ಜಿಗಳು ಬಂದ ಸಂದರ್ಭದಲ್ಲಿ ಲಾಟರಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪೌರತ್ವ ಮತ್ತು ವಲಸೆ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 2008ರಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾದಾಗ ಲಾಟರಿ ಮೂಲಕ ಆಯ್ಕೆ ಮಾಡಲಾಗಿತ್ತು. ಆಗ ಮೊದಲ ದಿನವೇ ನಿಗದಿತ ಮಿತಿಗಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. 

ಆದರೆ, ಕಳೆದ ಮೂರ‌್ನಾಲ್ಕು ವರ್ಷಗಳಲ್ಲಿ ಈ ಪ್ರಕ್ರಿಯೆ ತೀವ್ರ ಮಂದಗತಿಯಲ್ಲಿ ಸಾಗಿತ್ತು. ಕಳೆದ ವರ್ಷ 73 ದಿನಗಳಲ್ಲಿ ನಿಗದಿತ 65 ಸಾವಿರ ಅರ್ಜಿ ಸಲ್ಲಿಸಲಾಗಿತ್ತು. 2011ರಲ್ಲಿ 235 ದಿನ, 2010ರಲ್ಲಿ 300 ದಿನ ಮತ್ತು 2009ರಲ್ಲಿ 264 ದಿನಗಳಲ್ಲಿ ನಿಗದಿತ ಸಂಖ್ಯೆಯ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT