ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರಿಕೆಯ ಗಂಟೆ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಒಂದು ಲೋಕಸಭೆ ಮತ್ತು ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳಲ್ಲಿ ಎಲ್ಲಿಯೂ ಗೆಲ್ಲುವ ವಿಶ್ವಾಸ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ. ಆದರೆ ಸೋಲು ಇಷ್ಟೊಂದು ಹೀನಾಯವಾಗಿರುತ್ತದೆ ಎನ್ನುವುದನ್ನು ಬಹುಶಃ ಅದು ನಿರೀಕ್ಷಿಸಿರಲಿಲ್ಲ.
ಅಣ್ಣಾಹಜಾರೆ ತಂಡದ ಪ್ರಚಾರದಿಂದಾಗಿ ದೇಶದ ಗಮನಸೆಳೆದ ಹಿಸ್ಸಾರ್ ಲೋಕಸಭಾಕ್ಷೇತ್ರದ ಉಪಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಕಾಂಗ್ರೆಸ್‌ಗೆ ಗೊತ್ತಿತ್ತು. ಅಲ್ಲಿ ಉಪಚುನಾವಣೆ ನಡೆದದ್ದು ಆ ರಾಜ್ಯದ ವಿವಾದಾತ್ಮಕ ಮತ್ತು ಅಷ್ಟೇ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಭಜನ್‌ಲಾಲ್ ಅವರ ಸಾವಿನಿಂದಾಗಿ ತೆರವಾದ ಸ್ಥಾನಕ್ಕೆ. ಅಲ್ಲಿ ಅವರ ಮಗನೇ ಸ್ಪರ್ಧಿಸಿದ್ದ ಕಾರಣ ಗೆಲುವಿನಲ್ಲಿ ಅನುಕಂಪದ ಅಲೆಯ ಪಾತ್ರ ಇತ್ತು. ಜಾಟ್ ರಾಜಕಾರಣಿಗಳ ಆಡುಂಬೊಲವಾಗಿರುವ ಹರಿಯಾಣ ರಾಜಕಾರಣದಲ್ಲಿ ಭಜನ್‌ಲಾಲ್ ಜಾಟೇತರ ಸಮುದಾಯದ ನಾಯಕರಾಗಿದ್ದರು.
 
ಈ ಹಿನ್ನೆಲೆಯಲ್ಲಿ ನಡೆದ ಜಾತಿ ಧ್ರುವೀಕರಣ ಕೂಡಾ ಕುಲದೀಪ್ ಬಿಷ್ಣೋಯಿ ಗೆಲುವಿಗೆ ನೆರವಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಠೇವಣಿಯನ್ನೂ ಕಳೆದುಕೊಂಡು ಅನುಭವಿಸಿದ ಹೀನಾಯ ಸೋಲಿನಲ್ಲಿ ಅಣ್ಣಾಹಜಾರೆ ಪ್ರಚಾರದ ಪಾತ್ರ ಖಂಡಿತ ಇದೆ. ಮುಂದಿನ ದಿನಗಳಲ್ಲಿ ಅಣ್ಣಾ ತಂಡವೇ ರಾಜಕೀಯ ಪಕ್ಷವೊಂದನ್ನು ಕಟ್ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ತಲೆಕೆಡಿಸಿಕೊಳ್ಳಬೇಕಾದ ಪ್ರಸಂಗ ಬರಲಾರದು.
 
ಆದರೆ ಸೋಲು-ಗೆಲುವುಗಳು ಅಲ್ಪಮತಗಳ ಅಂತರದಿಂದ ನಿರ್ಧಾರವಾಗುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವೊಂದನ್ನೇ ಗುರಿಯಾಗಿಟ್ಟುಕೊಂಡ ಅಣ್ಣಾ ತಂಡದ ರಾಜಕೀಯೇತರ ಪ್ರಚಾರ ಆ ಪಕ್ಷಕ್ಕೆ ಮಾರಕಆಗಬಹುದು.

ಆಂಧ್ರಪ್ರದೇಶದ ಬಾನ್ಸವಾಡ ವಿಧಾನಸಭಾ ಕ್ಷೇತ್ರದಲ್ಲಿನ ಉಪಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಅಭ್ಯರ್ಥಿ ಗೆಲುವು ನಿಶ್ಚಿತವಾಗಿತ್ತು. ತೆಲುಗುದೇಶಂಗೆ ಸೇರಿದ್ದ ಶಾಸಕರೇ ರಾಜೀನಾಮೆ ನೀಡಿ ಟಿಆರ್‌ಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈ ಕ್ಷೇತ್ರದಲ್ಲಿ ತೆಲಂಗಾಣ ರಾಜ್ಯ ರಚನೆಯ ಬೇಡಿಕೆಯೇ ಪ್ರಮುಖ ವಿಷಯವಾಗಿದ್ದದ್ದು ಇದಕ್ಕೆ ಕಾರಣ.
 
ಅದೇ ರೀತಿ ಬಿಹಾರ ದರೌಂಡ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವು ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ಈಗಿನ ಜನಪ್ರಿಯತೆಯ ಫಲ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಅಭ್ಯರ್ಥಿ ಸೋಲಿಗೆ ಬಿಜೆಪಿ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ನಡುವಿನ ಮೈತ್ರಿ ಕಾರಣ. ಆ ಸ್ಥಾನ ಎಂಎನ್‌ಎಸ್ ಶಾಸಕರ ಸಾವಿನಿಂದ ತೆರವಾಗಿದ್ದರೂ ಆ ಪಕ್ಷ ಸ್ಪರ್ಧಿಸದೆ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿತ್ತು.

ಉಪಚುನಾವಣೆಗಳ ಫಲಿತಾಂಶ ನಿರೀಕ್ಷಿತ ಎನ್ನುವುದನ್ನು ಹೇಳಲು ಕಾಂಗ್ರೆಸ್ ಪಕ್ಷಕ್ಕೆ ಹಲವು ಕಾರಣಗಳಿದ್ದರೂ ಸೋಲಿನ ಅಂತರ ಎಚ್ಚರಿಕೆಯ ಗಂಟೆಯಂತಿದೆ.  ಕಳೆದೆರಡು ವರ್ಷಗಳ ಅವಧಿಯಲ್ಲಿನ ಯುಪಿಎ ಸರ್ಕಾರದ ಭ್ರಷ್ಟಾಚಾರ ಹಗರಣಗಳು ಮತ್ತು  ಬೆಲೆ ಏರಿಕೆಯನ್ನು ನಿಯಂತ್ರಿಸಲಾಗದ ಆಡಳಿತ ವೈಫಲ್ಯಕ್ಕೆ ಮತದಾರ ನೀಡಿದ ಪ್ರತಿಕ್ರಿಯೆ ಕೂಡಾ ಆಗಿದೆ.  ಈ ಸಂದೇಶವನ್ನು ಯುಪಿಎ  ಗ್ರಹಿಸದೆ ಹೋದರೆ ಈ ಫಲಿತಾಂಶ ಮುಂದಿನ ಚುನಾವಣೆಗಳಲ್ಲಿ ಪುನರಾವರ್ತನೆಗೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT