ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರಿಕೆಯ ಗಂಟೆ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾದ ಮಾನೇಸರ್ ಘಟಕದಲ್ಲಿನ ಕಾರ್ಮಿಕರ ಅಶಾಂತಿಯು ಒಬ್ಬ ಹಿರಿಯ ಅಧಿಕಾರಿಯ ಅಮಾನುಷ ಸಾವಿನಲ್ಲಿ ಪರ್ಯವಸಾನಗೊಂಡಿರುವುದು ಆಘಾತಕಾರಿಯಾಗಿದೆ.
 
ಈ ತಿಂಗಳ 18ರಂದು ಘಟಕದಲ್ಲಿ ಭುಗಿಲೆದ್ದ ಕಾರ್ಮಿಕರ ಆಕ್ರೋಶದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಧಾನ ವ್ಯವಸ್ಥಾಪಕ ಅವನೀಶ್ ಕುಮಾರ್ ಅವರನ್ನು ಸಜೀವವಾಗಿ ದಹಿಸಿ ದಾರುಣವಾಗಿ  ಕಗ್ಗೊಲೆ ಮಾಡಿದ್ದು  ಅಮಾನುಷ ಮತ್ತು ಖಂಡನಾರ್ಹ ಕೃತ್ಯ.

ಘಟನೆಯಲ್ಲಿ ಇನ್ನೂ ಕೆಲವು ಅಧಿಕಾರಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ತಯಾರಿಕಾ ಘಟಕದಲ್ಲಿ ಹೋದ ವರ್ಷವೂ  ಮುಷ್ಕರ  ನಡೆದಿತ್ತು. ಗುತ್ತಿಗೆ ಕಾರ್ಮಿಕರ ನೇಮಕ, ವೇತನ ಪರಿಷ್ಕರಣೆ, ಹೊಸ ಕಾರ್ಮಿಕ ಸಂಘಟನೆ ರಚನೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ಮುಷ್ಕರ  ನಡೆಸಿದ್ದರು.
 
ಸಂಧಾನ ಮಾತುಕತೆ ಮೂಲಕ ಬಿಕ್ಕಟ್ಟು ಕೊನೆಗೊಂಡಿದ್ದರೂ, ಕಾರ್ಮಿಕರಲ್ಲಿನ ಅಸಮಾಧಾನವು ಬೂದಿ ಮುಚ್ಚಿದ ಕೆಂಡದಂತಿತ್ತು ಎನ್ನುವುದಕ್ಕೆ ಈ ಅಮಾನವೀಯ ಘಟನೆ ಸಾಕ್ಷಿಯಾಗಿದೆ. ಕ್ಷುಲ್ಲಕ ಜಗಳವೊಂದು ಕಾರ್ಮಿಕರ ಅಮಾನತಿಗೆ ಕಾರಣವಾದದ್ದೇ ಈ ದೊಡ್ಡ ದುರಂತಕ್ಕೆ ಕಿಡಿ ಹೊತ್ತಿಸಿತು ಎನ್ನಲಾಗಿದ್ದು ಇದನ್ನು ತಡೆಯಬಹುದಾಗಿತ್ತು. 

ರೋಷತಪ್ತ ಕಾರ್ಮಿಕರು ಕಂಪೆನಿಯ ಮ್ಯಾನೇಜರ್‌ನನ್ನು ಜೀವಂತವಾಗಿ ದಹಿಸಲು ಬೇರೆ ಪ್ರಚೋದನೆಗಳೂ ಇರಬಹುದು. ಕಾರ್ಮಿಕರ  ದೊಂಬಿಯಲ್ಲಿ ನಕ್ಸಲಿಯರ ಕೈವಾಡ ಇರುವ ಬಗ್ಗೆಯೂ ಶಂಕೆಗಳು ಮೂಡಿರುವುದು ಇನ್ನೊಂದು ಆತಂಕಕಾರಿ ಬೆಳವಣಿಗೆ.

  ಇಂತಹ ಬೆಳವಣಿಗೆಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕಾಗಿದೆ.  ಗುಡ್‌ಗಾಂವ್ - ಮಾನೆಸರ್ ಕೈಗಾರಿಕಾ ವಲಯದಲ್ಲಿ ನಕ್ಸಲರು ಕಾರ್ಮಿಕ ಸಂಘಟನೆಯ ಮೇಲೆ ಹಿಡಿತ ಸಾಧಿಸುವುದು ಕೈಗಾರಿಕೆಗಳ ಬೆಳವಣಿಗೆಗೂ ಅಪಾಯಕಾರಿಯಾಗಿ ಪರಿಣಮಿಸಬಹುದು. 

ಕಾರ್ಮಿಕರ ಈ ಪರಿ ದೊಂಬಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ಗಂಟೆಯಾಗಿರುವುದರ ಜತೆಗೆ ಉದ್ಯಮಿಗಳಲ್ಲೂ ಆತಂಕ ಮೂಡಿಸಿದೆ. ಹರಿಯಾಣ ಸರ್ಕಾರ ಎಚ್ಚೆತ್ತುಕೊಂಡು ಕಾರ್ಮಿಕರ ಅಸಹನೆ ನಿವಾರಣೆಗೆ ಮುಂದಾಗಿದ್ದರೆ ಈ ದುರಂತ ತಪ್ಪಿಸಬಹುದಾಗಿತ್ತು.

ಇತ್ತೀಚಿನ ದಿನಗಳಲ್ಲಿ ಉದ್ಯಮಿಗಳು ಮತ್ತು ಕಾರ್ಮಿಕರ ಮಧ್ಯೆ ಸಂಘರ್ಷ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಕೆಲ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಕಾರ್ಮಿಕ ಸಂಘಟನೆಗಳ ಅಸ್ತಿತ್ವವೇ ಪಥ್ಯವಾಗುತ್ತಿಲ್ಲ. ಗುತ್ತಿಗೆ ಕಾರ್ಮಿಕರ ನೇಮಕಕ್ಕೆ ಆದ್ಯತೆ ನೀಡುತ್ತಿವೆ.
 
ಕೇಂದ್ರೋದ್ಯಮಗಳು ಮತ್ತು ಖಾಸಗಿ ಕೈಗಾರಿಕೆಗಳು ಹೆಚ್ಚಿರುವ ಕಡೆಗಳಲ್ಲಿ ಹೆಚ್ಚುತ್ತಿರುವ ಕಾರ್ಮಿಕರ ಅಶಾಂತಿಯು, ಸಮಾಜದ ಸ್ವಾಸ್ಥ್ಯ ಮತ್ತು ಆರ್ಥಿಕ ಬೆಳವಣಿಗೆಗೂ ಪೂರಕವಲ್ಲ.

ಸರ್ಕಾರ, ಉದ್ಯಮಿಗಳು ಮತ್ತು ಕಾರ್ಮಿಕ ಸಂಘಟನೆಗಳ ತ್ರಿಪಕ್ಷೀಯ ಸಂಧಾನ ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದರಲ್ಲಿಯೇ ಎಲ್ಲರ ಹಿತ ಅಡಗಿದೆ. ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸಬೇಕಾಗಿದೆ.

ಕಾರ್ಮಿಕರ ಹಿತಾಸಕ್ತಿ ರಕ್ಷಿಸುವಂತಹ ವಿವೇಕಯುತ  ಕಾರ್ಮಿಕ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದರಿಂದ ಮಾತ್ರ ಕೈಗಾರಿಕಾ ಬಾಂಧವ್ಯ ಸುಧಾರಿಸಬಹುದು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮುಂದಡಿ ಇಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT