ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ.ಕೋಟೆ: ಕೊನೆಗೂ ಸೆರೆ ಸಿಕ್ಕ ಹೆಬ್ಬುಲಿ

Last Updated 17 ಜನವರಿ 2013, 19:59 IST
ಅಕ್ಷರ ಗಾತ್ರ

ಮಾಚನಾಯಕನಹಳ್ಳಿ (ಮೈಸೂರು ಜಿಲ್ಲೆ): ಹೆಗ್ಗಡದೇವನಕೋಟೆ ತಾಲ್ಲೂಕಿನ ಮೂರು ಗ್ರಾಮಗಳಲ್ಲಿ ಬುಧವಾರ ಸಂಜೆಯಿಂದ ಭೀತಿ ಮೂಡಿಸಿದ್ದ ಹುಲಿಯನ್ನು ಹಿಡಿಯುವಲ್ಲಿ ಗುರುವಾರ ಸಂಜೆ ಅರಣ್ಯ ಇಲಾಖೆ ಮತ್ತು ವಿಶೇಷ ಹುಲಿ ಯೋಜನೆ ಕಾರ್ಯಪಡೆಯ ಸಿಬ್ಬಂದಿ ಯಶಸ್ವಿಯಾಯಿತು.

ಅಂತರಸಂತೆ ಸಮೀಪದ ಮಾಚನಾಯಕನಹಳ್ಳಿ, ಅಂಕನಾಥೇಶ್ವರ ಮತ್ತು ಪಿಂಜಹಳ್ಳಿ ಹಾಡಿಯಲ್ಲಿ ಬುಧವಾರ ಸಂಜೆ ಎರಡು ಹಸುಗಳನ್ನು ಕೊಂದು, ಒಬ್ಬ ಗ್ರಾಮಸ್ಥನ ಮೇಲೆ ದಾಳಿ ನಡೆಸಿದ್ದ ಹುಲಿಯನ್ನು ಹಿಡಿಯಲು ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 4.45ರವರೆಗೂ ಕಾರ್ಯಾಚರಣೆ ನಡೆಯಿತು. ಎರಡು ಸುತ್ತು ಅರಿವಳಿಕೆ ಮದ್ದು ನೀಡಿದರೂ ಪ್ರತಿರೋಧ ತೋರಿದ ಬಲಶಾಲಿ ಹುಲಿ ಕೊನೆಗೂ ಶರಣಾಯಿತು. ತಾರಕ ನಾಲಾದ ದಂಡೆಯ ಮೇಲಿನ ಪೊದೆಯಲ್ಲಿ ಅಡಗಿಕೊಂಡಿದ್ದ ಅಂದಾಜು 8 ರಿಂದ10 ವರ್ಷ ವಯಸ್ಸಿನ ಗಂಡು ಹುಲಿ ಹಿಡಿಯಲು ಬಳ್ಳೆ ಹಾಡಿಯಿಂದ `ದಸರಾ ಅಂಬಾರಿ ಆನೆ' ಅರ್ಜುನನ ಸಹಾಯವನ್ನೂ ಪಡೆಯಲಾಯಿತು.

ಗುರುವಾರ ಮಧ್ಯಾಹ್ನ ಕಾರ್ಯಾಚರಣೆ ಸಂದರ್ಭದಲ್ಲಿ ಹುಲಿಯ ಛಾಯಾಚಿತ್ರ ತೆಗೆಯಲು ಹೋದ ಹವ್ಯಾಸಿ ಛಾಯಾಗ್ರಾಹಕ ರವಿಶಂಕರ್ ಕೂಡ ಹುಲಿಯ ದಾಳಿಗೆ ಒಳಗಾಗಿ ಗಾಯಗೊಂಡ ಘಟನೆಯೂ ನಡೆಯಿತು.

ವಲಯ ಅರಣ್ಯ ಅಧಿಕಾರಿ ಎ.ಟಿ. ಪೂವಯ್ಯ, ಎಸಿಎಫ್ ನಿಂಗರಾಜು, ವೃತ್ತ ಪೊಲೀಸ್ ನಿರೀಕ್ಷಕ ಗೋಂವಿದರಾಜು ಮತ್ತು ಸಿಬ್ಬಂದಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸುಮಾರು 500-600 ಗ್ರಾಮಸ್ಥರು ಸೇರಿದ್ದರು., ಅವರನ್ನು ನಿಯಂತ್ರಿಸುತ್ತ ಹುಲಿ ಕಾರ್ಯಾಚರಣೆ ನಡೆಸಲು ಹರಸಾಹಸಪಡಬೇಕಾಯಿತು.

ಹತ್ತೂವರೆ ಗಂಟೆಯ ಸಾಹಸ: ನೀರಿಲ್ಲದೆ ಒಣಗಿ ಹೋಗಿರುವ ತಾರಕ ನಾಲಾದ ದಂಡೆಯ ಮೇಲಿರುವ ಖಾಲಿ ಹೊಲದ ಪೊದೆಯಲ್ಲಿ ಅಡಗಿಕೊಂಡಿದ್ದ ಹುಲಿಯನ್ನು ಹಿಡಿಯಲು ಹತ್ತೂವರೆ ತಾಸುಗಳ ಕಾರ್ಯಾಚರಣೆ ನಡೆಸಬೇಕಾಯಿತು. ಬುಧವಾರ ಸಂಜೆ ಮಾಚನಾಯಕನಹಳ್ಳಿಯ ಮನೆಯ ಮುಂದೆ ಹಸುವೊಂದರ ಮೇಲೆ ದಾಳಿ ಮಾಡಿದ್ದ ಹುಲಿಯು ಜನರ ಗಲಾಟೆಯಿಂದ ಓಡಿ ಹೋಗಿತ್ತು. ಆದರೆ ತಾರಕ ನಾಲಾದ ಹೊಲದಲ್ಲಿ ಮೇಯುತ್ತಿದ್ದ ಇನ್ನೊಂದು ಹಸುವನ್ನು ಕೊಂದು ತಿಂದಿತ್ತು. ಇದನ್ನು ತಪ್ಪಿಸಲು ಹೋದ ಹಸುವಿನ ಮಾಲೀಕ ರಂಗಯ್ಯನ ಮೇಲೂ ದಾಳಿ ಮಾಡಿತ್ತು. ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ.

ಗುರುವಾರ ಬೆಳಿಗ್ಗೆ 6 ಗಂಟೆಯಿಂದಲೇ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಮಧ್ಯಾಹ್ನದವರೆಗೂ ತಾರಕ ನಾಲೆಯ ಎಡಬದಿಯ ಪೊದೆಯಲ್ಲಿ ಅಡಗಿಕೊಂಡಿದ್ದ ಹುಲಿಯು ಜನಜಂಗುಳಿ ಹೆಚ್ಚಿದಂತೆ ನಾಲಾ ದಾಟಿ ಓಡಿತು. ಇನ್ನೊಂದು ಬದಿಯ ಪೊದೆಯೊಳಗೆ ಇದ್ದ ಸಣ್ಣ ಗುಂಡಿಯಲ್ಲಿ ಕುಳಿತಿತು. ಇದರಿಂದ ಕೋವಿಯ ಮೂಲಕ ಅರಿವಳಿಕೆ ಮದ್ದು ಹೊಡೆಯಲು ಸಾಧ್ಯವಾಗಲಿಲ್ಲ. ಮಧ್ಯಾಹ್ನ ಮೂರು ಗಂಟೆಗೆ ಬಳ್ಳೆ ಆನೆ ಶಿಬಿರದಿಂದ ಅರ್ಜುನ ಬಂದ ಮೇಲೆ ಅಂತಿಮ ಪ್ರಯತ್ನ ಆರಂಭವಾಯಿತು.

ಮಾವುತ ತಿಮ್ಮ ನಿಯಂತ್ರಿಸುತ್ತಿದ್ದ ಆನೆಯು ಸಿಬ್ಬಂದಿಯನ್ನು ಹತ್ತಿಸಿಕೊಂಡು ಪೊದೆಯತ್ತ ಸಾಗಿತು. ಆಗ ನೆರೆದವರ ಎದೆ ನಡುಗುವಂತೆ ಘರ್ಜಿಸಿದ ಹುಲಿಯ ಆರ್ಭಟಕ್ಕೆ ಬೆದರಿದ ಆನೆ ಓಡಿತು. ಕೆಲವು ನಿಮಿಷಗಳ ನಂತರ ಆನೆಯ ಮೇಲಿದ್ದ ಡಾ. ಉಮಾಶಂಕರ್ ಅವರ ಸಹಾಯಕ ಕರುಂಬಯ್ಯ ಕೋವಿಯಿಂದ ಅರಿವಳಿಕೆ ಚುಚ್ಚುಮದ್ದು ಹೊಡೆದರು. ಅದು ಗುರಿ ಮುಟ್ಟಿತು.

ಇದರಿಂದ ಹುಲಿಯು ಮತ್ತಷ್ಟು ಕುಪಿತಗೊಂಡು ಘರ್ಜಿಸತೊಡಗಿತು. ಆದರೆ ತಗ್ಗಿನಿಂದ ಎದ್ದು ಮೇಲೆ ಬರಲು ಸಾಧ್ಯವಾಗಲಿಲ್ಲ.
ನಂತರ ಆನೆಯಿಂದ ಇಳಿದ ಸಿಬ್ಬಂದಿ ಪೊದೆಯ ಸಮೀಪ ಬಂದು ಮತ್ತೊಂದು ಸುತ್ತು ಅರಿವಳಿಕೆ ಮದ್ದು ಹೊಡೆದರು. ಆದರೂ ಹುಲಿಯ ಘರ್ಜನೆ ನಿಲ್ಲಲಿಲ್ಲ. ಸುಮರು 25 ನಿಮಿಷ ಆರ್ಭಟಿಸಿದ ವ್ಯಾಘ್ರನನ್ನು ಬಲೆ ಹಾಕಿ ಬಂಧಿಸಲಾಯಿತು. ನಂತರ ಬೋನಿನಲ್ಲಿ ಭದ್ರಪಡಿಸಿ, ಲಾರಿಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಸಾಗಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT