ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ಗೆ ಮತ್ತೊಂದು ಸೋಲು

Last Updated 6 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಹಿಂದುಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡಕ್ಕೆ ಐ-ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸತತ ಸೋಲುಗಳ ಸರಣಿಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಇದು ಭಾನುವಾರ ಮತ್ತೊಮ್ಮೆ ಸಾಬೀತಾಯಿತು.

ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಚ್‌ಎಎಲ್ ತಂಡ 0-1ಗೋಲುಗಳಿಂದ ಗೋವಾದ ಚರ್ಚಿಲ್ ಬ್ರದರ್ಸ್ ಫುಟ್‌ಬಾಲ್ ಕ್ಲಬ್ ಎದುರು ಸೋಲು ಕಂಡಿತು.

ಆಟಗಾರರ ಹಾಗೂ ಗೋಲ್ ಕೀಪರ್ ನಡುವಿನ ಹೊಂದಾಣಿಕೆ ಸೋಲಿಗೆ ಕಾರಣ ಎಂದು ಆತಿಥೇಯ ತಂಡದ ಕೋಚ್ ಅರ್. ತ್ಯಾಗರಾಜನ್  ಹೇಳಿದ್ದು, ಸೂಕ್ತವಾಗಿಯೇ ಇತ್ತು. ಹೆನ್ರಿ ಅರ್ನಾಲ್ಡ್ 47ನೇ ನಿಮಿಷದಲ್ಲಿ ಗೋಲು ಗಳಿಸಿ ಚರ್ಚಿಲ್ ತಂಡದ ಗೆಲುವಿನ ರೂವಾರಿ ಎನಿಸಿದರು. `ಪಂದ್ಯ ಶ್ರೇಷ್ಠ~ ಗೌರವ ಸಹ ಪಡೆದರು. ಆತಿಥೇಯ ತಂಡದ ಗೋಲ್ ಕೀಪರ್ ಪಿ. ಪ್ರಮೋದ್ ಚುರುಕಿನ ಪ್ರದರ್ಶನ ನೀಡಿದರು.

ಇದರಿಂದ ಎಚ್‌ಎಎಲ್‌ಗೆ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಯಿತು. ಆಡಿರುವ ಮೂರು ಪಂದ್ಯಗಳಿಂದ ಎರಡು ಪಂದ್ಯಗಳಲ್ಲಿ ಎಚ್‌ಎಎಲ್ ಸೋಲು ಕಂಡಿದೆ. ಇಂಡಿಯನ್ ಆ್ಯರೋಸ್ ವಿರುದ್ಧದ ಕೊನೆಯ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಷ್ಟೇ ಈ ತಂಡದ  ಸಾಧನೆ. 

ಕಡಿಮೆಯಾಗದ ಪ್ರೀತಿ: ಕಳೆದ ಸಲದ ಐ-ಲೀಗ್‌ನಲ್ಲಿ ಎಚ್‌ಎಎಲ್ ಪರ ಆಡಿದ್ದ ಕ್ಸೇವಿಯರ್ ವಿಜಯ್ ಕುಮಾರ್ ಈ ಸಲ ಚರ್ಚಿಲ್ ಬ್ರದರ್ಸ್ ತಂಡದಲ್ಲಿ ಆಡಿದರೂ, ತವರು ನೆಲದ ಅಭಿಮಾನಿಗಳ ಪ್ರೀತಿ ಕಡಿಮೆಯಾಗಲಿಲ್ಲ.

ಕ್ರೀಡಾಂಗಣದ ಸುತ್ತಲೂ ಹಾಕಿದ್ದ ಬ್ಯಾನರ್ಸ್‌ ಹಾಗೂ ಫ್ಲೆಕ್ಸ್‌ಗಳೇ ಅದಕ್ಕೆ ಸಾಕ್ಷಿ. ಪಂದ್ಯದ ಮೊದಲಾರ್ಧದಲ್ಲಿ ಆಡಲು ಕ್ರೀಡಾಂಗಣಕ್ಕೆ ವಿಜಯ್ ಇಳಿಯದಾಗ ಅಭಿಮಾನಿಗಳಲ್ಲಿ ನಿರಾಸೆ. ವಿರಾಮದ ನಂತರ ಕೆಂಪು ಬಣ್ಣದ 8 ನಂಬರಿನ ಜರ್ಸಿ ತೊಟ್ಟು ನಂತರ ಆಡಲು ಸಜ್ಜಾಗುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ `ಕಮಾನ್ ವಿಜಯ್ ಕಮಾನ್...~  ಎನ್ನುವ ಬೆಂಬಲಪೂರಿತ ಘೋಷಣೆ.

`ಎದುರಾಳಿ ತಂಡ ಯಾವುದೇ ಇರಲಿ. ಉತ್ತಮ ಪ್ರದರ್ಶನ ನೀಡಬೇಕು ಎನ್ನುವುದಷ್ಟೆ ನನ್ನ ಗುರಿ. ನಾನು ಎಚ್‌ಎಎಲ್ ತಂಡದಲ್ಲಿರದಿದ್ದರೂ, ಬೆಂಗಳೂರಿನ ಜನ ತೋರಿದ ಪ್ರೀತಿಗೆ ನಾನು ಎಂದಿಗೂ ಋಣಿ~ ಎಂದು ವಿಜಯ್ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

ಮುಂದಿನ ಪಂದ್ಯವು ನವೆಂಬರ್ 10ರಂದು ಎಚ್‌ಎಎಲ್ ಹಾಗೂ ಕೋಲ್ಕತ್ತದ ಪ್ರಯಾಗ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ನಡುವೆ ಬೆಂಗಳೂರಿನಲ್ಲಿ ಪಂದ್ಯ ನಡೆಯಲಿದೆ.
 

ಫಲಿತಾಂಶ
ಎಚ್‌ಎಎಲ್: 0  ಚರ್ಚಿಲ್ ಬ್ರದರ್ಸ್: 1

ಮುಂದಿನ ಪಂದ್ಯ: ಎಚ್‌ಎಎಲ್-ಪ್ರಯಾಗ್ ಯುನೈಟೆಡ್ (ನ.10ರಂದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT