ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ಭೀತಿ: ತಾಯಿ, ಇಬ್ಬರು ಮಕ್ಕಳು ಆತ್ಮಹತ್ಯೆ

Last Updated 20 ಏಪ್ರಿಲ್ 2013, 12:40 IST
ಅಕ್ಷರ ಗಾತ್ರ

ಶಿರಾ: ಎಚ್‌ಐವಿ ಶಂಕೆಯಿಂದ ತಾಯಿ ಹಾಗೂ ಇಬ್ಬರು ಮಕ್ಕಳು ತಂಪುಪಾನಿಯ ಜೊತೆ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ತಡಕಲೂರಿನಲ್ಲಿ ನಡೆದಿದೆ.

ತಾಯಿ ನೀಲಮ್ಮ (48) ಹಾಗೂ ಮಕ್ಕಳಾದ ಗಗನ (14), ನವೀನ್(10) ತಡಕಲೂರು ಗೇಟ್ ಪಕ್ಕದ ಜಮೀನಿನ ಹೊಂಗೆ ಮರದ ಕೆಳಗೆ ವಿಷ ಕುಡಿದು ಸಾವನಪ್ಪಿದ್ದಾರೆ. ತಡಕಲೂರಿನ ನೀಲಮ್ಮ ನೆರೆಯ ಆಂಧ್ರಪ್ರದೇಶದ ಚಾಲಕ ರಾಜಣ್ಣಗೆ ಮದುವೆ ಮಾಡಲಾಗಿತ್ತು. ಕಳೆದ 8 ವರ್ಷದ ಹಿಂದೆ ರಾಜಣ್ಣ ಮೃತ ಪಟ್ಟಿದ್ದ.

ಗಂಡನ ಸಾವಿನಿಂದ ಸಂಸಾರ ನಿರ್ವಹಣೆ ಕಷ್ಟವಾದ ಕಾರಣ ಮಕ್ಕಳನ್ನು ಕರೆದುಕೊಂಡು ಬೆಂಗಳೂರಿನ ಗಾರ್ಮೆಂಟ್ಸ್‌ನಲ್ಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ಆದರೆ ಕಳೆದ 3-4 ತಿಂಗಳ ಹಿಂದೆ ನೀಲಮ್ಮ ಮತ್ತು ಮಗ ಗಗನ ತೀವ್ರ ಜ್ವರ ಭಾದೆಯಿಂದ ನರಳುತ್ತಿದ್ದು, ರಕ್ತ ಪರೀಕ್ಷೆ ಮಾಡಿಸಿದಾಗ ಎಚ್‌ಐವಿ ಪಾಸಿಟಿವ್ ಪತ್ತೆಯಾಗಿ ನೀಲಮ್ಮ ಆತಂಕಕ್ಕೊಳಗಾಗಿದ್ದರು.

ಆಗ ಬೆಂಗಳೂರು ತೊರೆದ ನೀಲಮ್ಮ ಮಕ್ಕಳೊಂದಿಗೆ ಸ್ವಗ್ರಾಮ ತಡಕಲೂರಿಗೆ ಮರಳಿದ್ದರು. ಈ ವೇಳೆ ರೋಗದ ಬಗ್ಗೆ ಗೊತ್ತಾಗಿ ಅಕ್ಕಪಕ್ಕದವರು ತಾತ್ಸರದಿಂದ ಕಾಣುತ್ತಿದ್ದಾರೆ ಎಂಬ ಸಂಶಯ ಕೂಡ ಕಾಡುತಿತ್ತು. ಇದೆಲ್ಲದರಿಂದ ಬೇಸತ್ತ ನೀಲಮ್ಮ ತನ್ನ ಮಕ್ಕಳಿಗೆ ತಂಪು ಪಾನಿಯದಲ್ಲಿ ವಿಷ ಬೆರೆಸಿ ಕುಡಿಸಿ ನಂತರ ತಾನು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ತಿಳಿಸಿದರು.

ಕಿಟ್ಟಪ್ಪ ಸ್ವಾಮಿ ಆತ್ಮಹತ್ಯೆ
ನಗರದ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯಲ್ಲಿ `ಗುರುಸ್ವಾಮಿ'ಯಾಗಿದ್ದ ಕೃಷ್ಣಪ್ಪ (65) ಅಲಿಯಾಸ್ ಕಿಟ್ಟಪ್ಪಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುವಾರ ಬೆಳಿಗ್ಗೆ ಮದ್ಯದಲ್ಲಿ ವಿಷ ಬೆರೆಸಿ ಕುಡಿದಿದ್ದ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದ್ದಾರೆ.

ನಗರದ ಟೌನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಮನೆ ಆಧಾರ ಸಾಲ ಪಡೆದಿದ್ದರು. ಸಾಲದ ಕಂತು ಕಟ್ಟಲಾಗದೆ ಸುಸ್ತಿಯಾಗಿದ್ದ ಅವರ ಮನೆಯನ್ನು ವರ್ಷದ ಹಿಂದೆ ಹರಾಜು ಮಾಡಲಾಗಿತ್ತು.

ಹರಾಜಿನ ನಂತರವೂ ಮನೆ ಖಾಲಿ ಮಾಡಿರಲಿಲ್ಲ. ಈಚೆಗೆ ಹರಾಜಿನಲ್ಲಿ ಮನೆ ದಕ್ಕಿಸಿಕೊಂಡ ವ್ಯಕ್ತಿ ತನಗೆ ಮನೆ ಬಿಟ್ಟುಕೊಡಬೇಕೆಂದು ನ್ಯಾಯಾಲಯದಿಂದ ತೀರ್ಪು ತಂದಿದ್ದ. ಮನೆಯೊಂದಿಗಿನ ಬಾಂಧವ್ಯ ಕಡಿದು ಕೊಳ್ಳಲು ಮನಸ್ಸಿಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT